ಭಾನುವಾರ, ಫೆಬ್ರವರಿ 2, 2020

ಜಿಲ್ಲಾಡಳಿತದಿಂದ ಶ್ರೀ ಮಡಿವಾಳ ಮಾಚಿದೇವರ ಜಯಂತ್ಯೋತ್ಸವ 
ಮಡಿವಾಳ ಮಾಚಿದೇವರ ಆದರ್ಶ ಮೈಗೂಡಿಸಿಕೊಳ್ಳಿ
-ಶಾಸಕರಾದ ವೆಂಕಟರೆಡ್ಡಿಗೌಡ ಮುದ್ನಾಳ 

ಯಾದಗಿರಿ, ಫೆಬ್ರುವರಿ ೦೧ (ಕರ್ನಾಟಕ ವಾರ್ತೆ): ೧೨ನೇ ಶತಮಾನದ ಸಮಾಜಿಕ ವ್ಯವಸ್ಥೆಯಲ್ಲಿ ಮೂಡನಂಭಿಕೆ, ತಾರತಮ್ಯ ಹಾಗೂ ಧಾರ್ಮಿಕ ಅಂಧ ಆಚರಣೆಗಳನ್ನು ಖಂಡಿಸಿ, ತಮ್ಮದೆ ದಾಟಿಯ ವಚನಗಳಲ್ಲಿ ಸಮಾಜವನ್ನು ತಿದ್ದುವ ಮೂಲಕ ಸನ್ಮಾರ್ಗ ತೋರಿದ ಶರಣರಲ್ಲಿ ಶ್ರೀ ಮಡಿವಾಳ ಮಾಚಿದೇವರು ಪ್ರಮುಖರಾಗಿದ್ದಾರೆ ಎಂದು ಶಾಸಕರಾದ ವೆಂಕಟರಡ್ಡಿಗೌಡ ಮುದ್ನಾಳ ಅವರು ಹೇಳಿದರು. ನಗರದ ಜಿಲ್ಲಾಡಳಿತ ಭವನದ ಆಡಿಟೋರಿಯಂನಲ್ಲಿ ಶನಿವಾರ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ನಗರಸಭೆ, ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಶ್ರೀ ಮಡಿವಾಳ ಮಾಚಿದೇವರ ಜಯಂತ್ಯೋತ್ಸವ ಸಮಿತಿ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಶ್ರೀ ಮಡಿವಾಳ ಮಾಚಿದೇವರ ಜಯಂತ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ, ಅವರು ಮಾತನಾಡಿದರು. ಮಹಾರಾಜರ ಆಸ್ಥಾನದಲ್ಲಿ ಸೈನಿಕರಾಗಿದ್ದ ಮಡಿವಾಳ ಮಾಚಿದೇವರು ಬಸವಣ್ಣನವರ ತತ್ವ- ಸಿದ್ಧಾಂತದಿAದ ಪ್ರಭಾವಿತರಾಗಿ ಕಲ್ಯಾಣಕ್ಕೆ ಬಂದು ನೆಲೆಸಿದರು. ಎಲ್ಲಾ ಜಾತಿ, ಮತಗಳು ಒಂದೇ. ನಾವೆಲ್ಲರೂ ಒಂದಾಗಿರಬೇಕು ಎಂದು ಸಾರಿದರು. ಮಡಿವಾಳ ಮಾಚಿದೇವರ ತತ್ವ, ಸಿದ್ಧಾಂತಗಳನ್ನು ಆಲಿಸಿದರೆ ಸಾಲದು, ಮೈಗೂಡಿಸಿಕೊಂಡು ಪಾಲಿಸಬೇಕು ಎಂದು ಅವರು ಹೇಳಿದರು. ಅಪರ ಜಿಲ್ಲಾಧಿಕಾರಿಗಳಾದ ಪ್ರಕಾಶ್ ಜಿ.ರಜಪೂತ ಅವರು ಮಾತನಾಡಿ, ೧೨ನೇ ಶತಮಾನದಲ್ಲಿ ಶರಣರು ನಡೆಸಿದ ವಚನ ಚಳವಳಿಯು ಇಡೀ ದೇಶವೇ ಕರ್ನಾಟಕದತ್ತ ನೋಡುವಂತೆ ಮಾಡಿತು. ಮಡಿವಾಳ ಮಾಚಿದೇವರು ಶರಣರ ಬಟ್ಟೆಗಳನ್ನು ಮಡಿ ಮಾಡುವ ಕಾರ್ಯ ಬಹಳ ನಿಷ್ಠೆಯಿಂದ ಮಾಡುತ್ತಿದ್ದರು. ಕಾರ್ಯ ಯಾವುದಾದರೇನು ಮನಸ್ಸು ಶುದ್ಧವಾಗಿಟ್ಟುಕೊಂಡು ಎಲ್ಲರೂ ತಮ್ಮ ಕಾಯಕ ಮಾಡುತ್ತಿರಬೇಕು ಎಂದು ಹೇಳಿದ ಮಾಚಿದೇವರ ಕಾಯಕ ನಿಷ್ಠೆಯನ್ನು ಪ್ರತಿಯೊಬ್ಬರು ಅಳವಡಿಸಿಕೊಳ್ಳಬೇಕು. ಅಂದಾಗ ಸಾಮಾಜಿಕವಾಗಿ ಅಭಿವೃದ್ಧಿ ಹೊಂದಲು ಸಾಧ್ಯವಿದೆ ಎಂದು ತಿಳಿಸಿದರು. ಮಾಚಿದೇವರು ಅದ್ಭುತ ವಚನಕಾರರಾಗಿದ್ದರು. ಇವರನ್ನು ವಚನಕಾರರ ರಕ್ಷಕರು ಎಂದು ಗುರುತಿಸಲಾಗುತ್ತದೆ. ಇಂತಹ ಮಾಹಾತ್ಮರ ಜಯಂತಿ ಆಚರಣೆ ಜೊತೆಗೆ ಅವರ ಸಂದೇಶಗಳನ್ನು ಅರಿತುಕೊಳ್ಳಬೇಕು. ಎಲ್ಲರೂ ತಮ್ಮ ಮಕ್ಕಳಿಗೆ ಪ್ರಥಮವಾಗಿ ಉತ್ತಮ ಸಂಸ್ಕಾರ ನೀಡಿ, ಸತ್ಪçಜೆಗಳನ್ನಾಗಿ ರೂಪಿಸಬೇಕು ಎಂದು ಅವರು ಹೇಳಿದರು.


ಯಾಮರೆಡ್ಡಿ ಪದವಿ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ.ಭೀಮರಾಯ ಲಿಂಗೇರಿ ಅವರು ಉಪನ್ಯಾಸ ನೀಡಿ, ಮಡಿವಾಳ ಮಾಚಿದೇವರು ತುಳಿತಕ್ಕೆ ಒಳಗಾದ ಸಮಾಜವನ್ನು ತಮ್ಮ ವಚನಗಳ ಮೂಲಕ ತಿದ್ದಿದರು. ೧೨ನೇ ಶತಮಾನದ ಕ್ರಾಂತಿಕಾರಿ ಶರಣರಾದ ಇವರು ವಿಜಯಪುರ ಜಿಲ್ಲೆ ಸಿಂದಗಿ ತಾಲ್ಲೂಕಿನ ದೇವರಹಿಪ್ಪರಗಿಯ ಪರ್ವತಯ್ಯ ಮತ್ತು ಸುಜ್ಞಾನಮ್ಮ ದಂಪತಿಗೆ ೧೧೨೦-೩೦ರ ಸುಮಾರಿನಲ್ಲಿ ಜನಿಸಿದರು ಎಂಬುದಾಗಿ ಇತಿಹಾಸದಿಂದ ತಿಳಿದುಬರುತ್ತದೆ ಎಂದು ಹೇಳಿದರು. ವಚನಗಳ ರಕ್ಷಕರಾದ ಮಡಿವಾಳ ಮಾಚಿದೇವರು ಅನುಭವ ಮಂಟಪಕ್ಕೆ ಬರುವ ಶರಣರನ್ನು ಬರಮಾಡಿಕೊಳ್ಳುವ ಕಾಯಕವು ಇಂದಿನ ವಿದೇಶಾಂಗ, ರಕ್ಷಣಾ ಸಚಿವರ ಕಾಯಕದಂತೆ ಇತ್ತು. ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಎನ್ನುವ ತತ್ವವನ್ನು ವಚನ ಚಳವಳಿಯ ಮೂಲಕ ತಿಳಿಸಿದರು. ಅಂತಹ ಶರಣರ ತತ್ವಗಳು ಇಂದಿಗೂ ಪ್ರಸ್ತುತವಾಗಿವೆ ಎಂದರು. ದೇವರಿಗೆ ಬಲಿಕೊಡುವ ಕಂದಾಚಾರದ ಆಚರಣೆಗಳನ್ನು ಖಂಡಿಸಿದರು. ಸತ್ಯ ನಿತ್ಯ ಅಳವಡಿಸಿಕೊಂಡಾಗ ಸಮಾಜ ಸುಧಾರಣೆ ಸಾಧ್ಯ ಎಂದ ಅವರು ಅರಸುತನ ಮೇಲಲ್ಲ; ಅಗಸತನ ಕೀಳಲ್ಲ ಎಂದು ಸಮಾಜದಲ್ಲಿನ ಗೊಂದಲಗಳಿಗೆ ಕಿವಿಗೊಡದೆ, ವೈಚಾರಿಕತೆಯ ಹಿನ್ನೆಲೆಯಲ್ಲಿ ಸಮಾಜವನ್ನು ಶುಚಿಮಾಡುವ ಕಾಯಕದ ಜೊತೆಗೆ ಅನುಭವ ಮಂಟಪದ ಶರಣರ ಬಟ್ಟೆಗಳನ್ನು ಮಡಿ ಮಾಡಿ ಕೊಡುತ್ತಿದ್ದರು. ನೇರ ನುಡಿಯ ವ್ಯಕ್ತಿತ್ವದ ಮಡಿವಾಳ ಮಾಚಿದೇವರು ಬಸವಣ್ಣನವರನ್ನೆ ಪ್ರಶ್ನೆ ಮಾಡುತ್ತಿದ್ದರು. ಪ್ರಶ್ನೆ ಮಾಡುವುದರ ಮೂಲಕ ಸಮಸ್ಯೆಗೆ ಪರಿಹಾರ ಸಿಗುತ್ತದೆಂದು ನಂಬಿದ್ದ ಅವರು “ಕಲಿದೇವರ ದೇವಾ” ಎಂಬ ಅಂಕಿತನಾಮದಿAದ ೩೫೩ ವಚನಗಳನ್ನು ರಚಿಸಿದ್ದಾರೆ. ಅವುಗಳಲ್ಲಿ ಅರ್ಧದಷ್ಟು ವಚನಗಳು ಬಸವಣ್ಣನವರನ್ನು ಕುರಿತಾಗಿವೆ ಎಂದು ವಿವರಿಸಿದರು. ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾದ ರಾಜಶೇಖರಗೌಡ ಪಾಟೀಲ್ ವಜ್ಜಲ್, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಬಸರೆಡ್ಡಿಗೌಡ ಪಾಟೀಲ್ ಅನಪೂರ, ಶ್ರೀ ಮಡಿವಾಳ ಮಾಚಿದೇವರ ಜಯಂತ್ಯೋತ್ಸವ ಸಮಿತಿಯ ಅಧ್ಯಕ್ಷರಾದ ಮಡಿವಾಳಪ್ಪ ಬಿಜಾಸ್ಪೂರ, ಮಹಾದೇವಪ್ಪ ಯಲಸತ್ತಿ, ನಗರಸಭೆಯ ಸದಸ್ಯರಾದ ಸ್ವಾಮಿದೇವ ದಾಸನಕೇರಿ ಸೇರಿದಂತೆ ಸಮಾಜದ ಮುಖಂಡರು, ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಸಂಗೀತ ಶಿಕ್ಷಕರಾದ ಚಂದ್ರಶೇಖರ ಗೋಗಿ ಮತ್ತು ತಂಡದವರು ನಾಡಗೀತೆ ಹಾಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ದತ್ತಪ್ಪ ಸಾಗನೂರ ಅವರು ಸ್ವಾಗತಿಸಿದರು. ಉಪನ್ಯಾಸಕರಾದ ಗುರುಪ್ರಸಾದ ವೈದ್ಯ ನಿರೂಪಿಸಿದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

                                                             ವಾ.ವಿ.ಸ.45 ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಶರಣಬಸಪ್ಪ ದರ್ಶನಾಪೂರ ಅವರ ಜಿಲ್ಲಾ ಪ್ರವಾಸ ಯಾದಗ...