ಸೋಮವಾರ, ಫೆಬ್ರವರಿ 10, 2020


ತೊಗರಿ ಖರೀದಿಗೆ ರೈತರ ನೋಂದಣಿ ಅವಧಿ ವಿಸ್ತರಣೆ
ಯಾದಗಿರಿ, ಫೆಬ್ರುವರಿ ೧೦ (ಕರ್ನಾಟಕ ವಾರ್ತೆ): ೨೦೧೯-೨೦ನೇ ಸಾಲಿನ ಕೇಂದ್ರ ಸರ್ಕಾರದ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ತೊಗರಿ ಕಾಳನ್ನು ಖರೀದಿಸಲು ಜಿಲ್ಲೆಯಲ್ಲಿ ಒಟ್ಟು ೩೫ ಖರೀದಿ ಕೇಂದ್ರಗಳನ್ನು ತೆರೆಯಲಾಗಿದ್ದು, ರೈತರ ನೋಂದಣಿ ಅವಧಿಯನ್ನು ಫೆಬ್ರುವರಿ ೨೫ರ ವರೆಗೆ ವಿಸ್ತರಿಸಲಾಗಿದೆ ಎಂದು ಕೃಷಿ ಮಾರಾಟ ಇಲಾಖೆಯ ಸಹಾಯಕ ನಿರ್ದೇಶಕರಾದ ಭೀಮರಾಯ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನೋಂದಣಿ ಮಾಡಿದ ರೈತರ ತೊಗರಿಯನ್ನು ತಾಲ್ಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘ ನಿಯಮಿತ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಹಾಗೂ ಎಫ್.ಪಿ.ಓ.ಗಳ ಮುಖಾಂತರ ಮಾರ್ಚ್ ೧೫ರವರೆಗೆ ಖರೀದಿಸಲಾಗುವುದು. ಪ್ರತಿ ಕ್ವಿಂಟಲ್ ತೊಗರಿಗೆ ಸರ್ಕಾರದ ಬೆಂಬಲ ಬೆಲೆ ೬,೧೦೦ ರೂ. ಇದ್ದು, ಪ್ರತಿಯೊಬ್ಬ ರೈತರಿಂದ ಎಕೆರೆಗೆ ೫ ಕ್ವಿಂಟಲ್‌ನAತೆ ಗರಿಷ್ಠ ೧೦ ಕ್ವಿಂಟಲ್ ಖರೀದಿಸಲಾಗುವುದು. ಜಿಲ್ಲೆಯಲ್ಲಿ ಯಾದಗಿರಿ, ರಾಮಸಮುದ್ರ, ಸೈದಾಪೂರ, ಗುರುಮಠಕಲ್, ಕೊಂಕಲ್, ಚಪೇಟ್ಲಾ, ಗಣಪೂರ, ಹತ್ತಿಕುಣಿ, ಅಲ್ಲಿಪುರ, ಯಲ್ಹೇರಿ, ಅನಪೂರ, ಯರಗೋಳ, ಪುಟಪಾಕ್, ಶಹಾಪೂರ, ರಸ್ತಾಪುರ, ಬೆಂಡೆಬೆAಬಳಿ, ಗಂಗನಾಳ, ಚಾಮನಾಳ, ಹೈಯಾಳ್, ದೋರನಹಳ್ಳಿ, ಶಿರವಾಳ, ಟೊಕಾಪೂರ, ಹೊಸಕೇರಾ, ಮದ್ರಿಕಿ, ಸುರಪುರ, ಏವೂರು, ಯಾಳಗಿ, ಕಕ್ಕೇರಾ, ಕೊಡೇಕಲ್, ನಗನೂರು, ಮಾಲಗತ್ತಿ, ರಾಜನಕೋಳೂರು, ಹುಣಸಗಿ, ಕೆಂಭಾವಿ-೧ ಮತ್ತು ಕೆಂಭಾವಿ-೨ರಲ್ಲಿ ಖರೀದಿ ಕೇಂದ್ರಗಳನ್ನು ತೆರೆಯಲಾಗಿದೆ.
ರೈತಬಾಂಧವರು ಕೊನೆಯ ದಿನಾಂಕದವರೆಗೆ ಕಾಯದೆ ಹತ್ತಿರದ ಖರೀದಿ ಕೇಂದ್ರಗಳಲ್ಲಿ ಹೆಸರು ನೋಂದಣಿ ಮಾಡಿಕೊಳ್ಳಬೇಕು. ಒಬ್ಬ ರೈತ ಒಂದೇ ಅರ್ಜಿಯನ್ನು ಖರೀದಿ ಕೇಂದ್ರಕ್ಕೆ ತರಬೇಕು ಮತ್ತು ಸರತಿ ಸಾಲಿನಲ್ಲಿ ಬಂದು ತಮ್ಮ ಹೆಸರು ನೋಂದಾಯಿಸಿಕೊಳ್ಳಲು ಅವರು ಕೋರಿದ್ದಾರೆ.

ಕಾರ್ಮಿಕ ಸಮ್ಮಾನ ಪ್ರಶಸ್ತಿಗಾಗಿ ಅರ್ಜಿ ಆಹ್ವಾನ
ಯಾದಗಿರಿ, ಫೆಬ್ರುವರಿ ೧೦ (ಕರ್ನಾಟಕ ವಾರ್ತೆ): ಅಸಂಘಟಿತ ವಲಯದ ಕಾರ್ಮಿಕರುಗಳಿಗೆ ಜಿಲ್ಲಾ ಮಟ್ಟದಲ್ಲಿ ಮಾರ್ಚ್ ೧ರಂದು ಕಾರ್ಮಿಕರ ಸಮ್ಮಾನ ದಿನಾಚರಣೆಯಲ್ಲಿ ವಿಶೇಷ ಸಾಧನೆ ಮಾಡಿದ ಕಾರ್ಮಿಕರಿಗೆ ಕಾರ್ಮಿಕ ಸಮ್ಮಾನ ಪ್ರಶಸ್ತಿ, ವಿಶೇಷ ಪುರಸ್ಕಾರ ನೀಡಲಾಗುತ್ತಿದ್ದು, ಅರ್ಹ ಕಾರ್ಮಿಕರಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಜಿಲ್ಲಾ ಕಾರ್ಮಿಕ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಅಸಂಘಟಿತ ವಲಯದಲ್ಲಿ ಕೆಲಸ ನಿರ್ವಹಿಸುತ್ತಿರುವ ೧೨ ಅಸಂಘಟಿತ ವಲಯಗಳಾದ ಗೃಹ ಕಾರ್ಮಿಕರು, ಹಮಾಲರು, ದರ್ಜಿಗಳು, ಮೆಕ್ಯಾನಿಕ್‌ಗಳು, ಚಿಂದಿ ಆಯುವವರು, ಖಾಸಗಿ ವಾಣಿಜ್ಯ ವಾಹನ ಚಾಲಕರು, ಅಗಸರು, ಅಕ್ಕಸಾಲಿಗರು, ಕ್ಷೌರಿಕರು, ಕಮ್ಮಾರರು, ಕುಂಬಾರರಿಗೆ ಕಾರ್ಮಿಕ ಸಮ್ಮಾನ ಪ್ರಶಸ್ತಿ ಹಾಗೂ ವಿಶೇಷ ಪುರಸ್ಕಾರ ನೀಡಲಾಗುವುದು. ವಿದ್ಯಾಭ್ಯಾಸದ ಬಗ್ಗೆ ಪ್ರಮಾಣ ಪತ್ರ, ಕಾರ್ಮಿಕರ ಬಳಿ ಇರುವ ಸ್ಮಾರ್ಟ್ ಕಾರ್ಡ್, ಸರ್ವೀಸ್ ಸರ್ಟಿಫಿಕೆಟ್, ಪೊಲೀಸ್ ಇಲಾಖೆಯಿಂದ ಯಾವುದೇ ಪ್ರಕರಣ ಇರುವುದಿಲ್ಲ ಎಂಬ ಸರ್ಟಿಫಿಕೆಟ್, ಜಾತಿ ಪ್ರಮಾಣ ಪತ್ರ, ವಿಷಯದ ಬಗ್ಗೆ ತರಬೇತಿ ಪಡೆದ ಪ್ರಮಾಣ ಪತ್ರಗಳಿದ್ದಲ್ಲಿ ಲಗತ್ತಿಸಿ ಅಗತ್ಯ ದಾಖಲಾತಿಗಳೊಂದಿಗೆ ನಮೂನೆ ೫ ರಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿಗಳನ್ನು ಆಯಾ ತಾಲ್ಲೂಕು ಮಟ್ಟದಲ್ಲಿರುವ ಕಾರ್ಮಿಕ ನಿರೀಕ್ಷಕರ ಕಚೇರಿಗಳಿಂದ ಪಡೆದು ಮಾಹಿತಿಯೊಂದಿಗೆ ಫೆಬ್ರುವರಿ ೧೭ರೊಳಗಾಗಿ ತಾಲ್ಲೂಕು ಅಥವಾ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾ ಕಾರ್ಮಿಕ ಇಲಾಖೆ ಕಚೇರಿಗೆ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಕಾರ್ಮಿಕ ಇಲಾಖೆ ಕಚೇರಿಯನ್ನು ಸಂಪರ್ಕಿಸಬಹುದು ಎಂದು ಅವರು ತಿಳಿಸಿದ್ದಾರೆ.
ಟೆಂಡರ್ ಅರ್ಜಿ ಅವಧಿ ವಿಸ್ತರಣೆ
ಯಾದಗಿರಿ, ಫೆಬ್ರುವರಿ ೧೦ (ಕರ್ನಾಟಕ ವಾರ್ತೆ): ಜಿಲ್ಲಾ ಆಯುಷ್ ಕಚೇರಿ ಯಾದಗಿರಿ ಅಧೀನದಲ್ಲಿ ಕಾರ್ಯನಿರ್ವಹಿಸುವ ಆಸ್ಪತ್ರೆ, ಚಿಕಿತ್ಸಾಲಯಗಳಿಗೆ ಅವಶ್ಯಕ ಆಯುರ್ವೇದ ಮತ್ತು ಯುನಾನಿ ಔಷಧಿಗಳನ್ನು ಖರೀದಿಸಲು ಅಲ್ಪಾವಧಿ ಟೆಂಡರ್ ಆಹ್ವಾನಿಸಲಾಗಿತ್ತು. ಆದರೆ, ನಿಗದಿತ ಕಾಲಾವಧಿಯಲ್ಲಿ ಔಷಧಿ ಸರಬರಾಜುದಾರರು ಟೆಂಡರ್‌ಗೆ ಅರ್ಜಿ ಸಲ್ಲಿಸದಿರುವುದರಿಂದ ಟೆಂಡರ್ ಅವಧಿಯನ್ನು ಫೆಬ್ರುವರಿ ೧೧ರಿಂದ ೧೯ರ ವಿಸ್ತರಿಸಲಾಗಿದೆ.
ಟೆಂಡರ್ ಅರ್ಜಿಯನ್ನು ಫೆಬ್ರುವರಿ ೧೮ರವರೆಗೆ ೫೦೦ ರೂ. ನಗದು ಪಾವತಿಸಿ ಪಡೆಯಬಹುದು. ಭರ್ತಿ ಮಾಡಿದ ಟೆಂಡರ್ ಅರ್ಜಿಯನ್ನು ಫೆಬ್ರುವರಿ ೧೯ರ ಸಂಜೆ ೫ ಗಂಟೆಯ ಒಳಗಾಗಿ ೧೫,೬೦೦ ರೂ. ಇ.ಎಂ.ಡಿ ಮೊತ್ತವನ್ನು ಜಿಲ್ಲಾ ಆಯುಷ್ ಅಧಿಕಾರಿಗಳು ಯಾದಗಿರಿ ಇವರ ಹೆಸರಿಗೆ ಡಿ.ಡಿ ರೂಪದಲ್ಲಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಆಯುಷ್ ಕಚೇರಿ ದೂ:೦೮೪೭೩-೨೫೩೮೭೦ ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಶರಣಬಸಪ್ಪ ದರ್ಶನಾಪೂರ ಅವರ ಜಿಲ್ಲಾ ಪ್ರವಾಸ

                                                               ವಾ.ವಿ.ಸಂ.150 ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಶರಣಬಸಪ್ಪ ದರ್ಶನಾಪೂರ ಅವರ ಜಿಲ್ಲಾ ಪ್ರವಾಸ ...