ಬುಧವಾರ, ಫೆಬ್ರವರಿ 19, 2020

ಛತ್ರಪತಿ ಶಿವಾಜಿ ಮಹಾರಾಜರ ಜಯಂತ್ಯೋತ್ಸವ
ಛತ್ರಪತಿ ಶಿವಾಜಿ ಮಹಾರಾಜರ ದೇಶಪ್ರೇಮ ಅಳವಡಿಸಿಕೊಳ್ಳಿ
                                                                              -ಶಂಕರಗೌಡ ಎಸ್.ಸೋಮನಾಳ

ಯಾದಗಿರಿ, ಫೆಬ್ರುವರಿ 19 (ಕರ್ನಾಟಕ ವಾರ್ತೆ): ಗೆರಿಲ್ಲಾ ಯುದ್ಧತಂತ್ರದ ಪರಿಕಲ್ಪನೆಯ ಮೂಲಕ ದೇಶದ ಸಂರಕ್ಷಣೆಗೆ ಹೋರಾಡಿದ ಛತ್ರಪತಿ ಶಿವಾಜಿ ಮಹಾರಾಜರವರ ದೇಶಪ್ರೇಮ, ಜೀವನದ ತತ್ವಾದರ್ಶಗಳನ್ನು ಯುವ ಸಮುದಾಯ ಅಳವಡಿಸಿಕೊಂಡಾಗ ಸುಭದ್ರವಾದ ರಾಷ್ಟ್ರ ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ ಎಂದು ಸಹಾಯಕ ಆಯುಕ್ತರಾದ ಶಂಕರಗೌಡ ಎಸ್.ಸೋಮನಾಳ ಅವರು ಹೇಳಿದರು.
ಜಿಲ್ಲಾಡಳಿತ ಭವನದ ಆಡಿಟೋರಿಯಂನಲ್ಲಿ ಬುಧವಾರ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ನಗರಸಭೆ, ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಶ್ರೀ ಛತ್ರಪತಿ ಶಿವಾಜಿ ಮಹಾರಾಜ ಜಯಂತ್ಯೋತ್ಸವ ಸಮಿತಿ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಶ್ರೀ ಛತ್ರಪತಿ ಶಿವಾಜಿ ಮಹಾರಾಜ ರವರ ಜಯಂತಿ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಅವರು ಮಾತನಾಡಿದರು.
ಶಕ್ತಿ ಮತ್ತು ಯುಕ್ತಿಯ ಸಂಗಮವಾಗಿದ್ದ ಶಿವಾಜಿ ಮಹಾರಾಜರು ದೇಶಭಕ್ತಿಯ ಪ್ರತೀಕವಾಗಿದ್ದರು. ಸ್ವರಾಜ್ಯದ ಕಲ್ಪನೆಯನ್ನು ಮೊದಲು ಪ್ರತಿಪಾದಿಸಿದ್ದರು. ಪ್ರತಿದಿನವೂ ಶಿವಾಜಿ ಮಹಾರಾಜರ ಆಡಳಿತವನ್ನು ಮೆಲುಕು ಹಾಕಿದಾಗ ಮಾತ್ರ ನಾವು ರಾಷ್ಟ್ರ ರಕ್ಷಣೆಗೆ ಸಿದ್ಧರಾಗಲು ಸಾಧ್ಯವಾಗುತ್ತದೆ. ಅವರು ಯಾವುದೇ ಒಂದು ಸಮಾಜಕ್ಕೆ ಸೀಮಿತವಾದ ವ್ಯಕ್ತಿಯಲ್ಲ. ಇಡೀ ದೇಶಕ್ಕೆ ಒಂದು ಶಕ್ತಿ ಇದ್ದಂತೆ ಎಂದು ಅವರು ಅಭಿಪ್ರಾಯಪಟ್ಟರು.
ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕರಾದ ಡಾ.ಸರ್ವೋದಯ ಶಿವಪುತ್ರ ಅವರು ಉಪನ್ಯಾಸ ನೀಡಿ, ಶಿವಾಜಿ  ಮಹಾರಾಜರು 1627ರಲ್ಲಿ ಮಹಾರಾಷ್ಟ್ರದ ಪುಣೆ ಜಿಲ್ಲೆಯ ಶಿವನೇರಿಯಲ್ಲಿ ಜನಿಸಿದರು. ತಾಯಿ ಜೀಜಾಬಾಯಿಯು ದೇವಗಿರಿಯ ಯಾದವ ರಾಜಮನೆತನ, ತಂದೆ ಶಹಾಜಿ ಬೋಸ್ಲೆಯು ಶಿಸೋಡಿಯ ರಾಜಮನೆತನದವರಾಗಿದ್ದರು. ಹೀಗಾಗಿ ಶಿವಾಜಿಗೆ ರಕ್ತಗತವಾಗಿ ಧೈರ್ಯ, ಶಕ್ತಿ ಹಾಗೂ ಕ್ಷತ್ರೀಯ ಗುಣಗಳಿದ್ದವು ಎಂದರು.
ರಾಷ್ಟ್ರದ ಸಂರಕ್ಷಣೆ, ಹಿಂದೂ ಸಂಸ್ಕøತಿ, ಹಿಂದೂ ಧರ್ಮದ ಉಳಿವಿಗೆ ಗುಡ್ಡಗಾಡಿನ ಮಾವಳಿ ಜನಾಂಗದವರೊಂದಿಗೆ ಸಂಪರ್ಕ ಹೊಂದಿ ಗೆರಿಲ್ಲಾ ಯುದ್ಧ ತಂತ್ರದಿಂದ ಮೋಘಲರು, ದೆಹಲಿಯ ಸುಲ್ತಾನ್, ವಿಜಯಪುರದ ಆದಿಲ್‍ಶಾಹಿ ಸುಲ್ತಾನರು ಹಾಗೂ ಪೋರ್ಚ್‍ಗೀಸರೊಂದಿಗೆ ಅನೇಕ ಯುದ್ಧಗಳನ್ನು ಮಾಡಿದರು ಎಂದು ತಿಳಿಸಿದರು.
ಜೀಜಾಬಾಯಿ ಅವರು ಶಿವಾಜಿ ಮಹಾರಾಜರಿಗೆ ಚಿಕ್ಕಂದಿನಲ್ಲೆ ರಾಮಾಯಣ, ಮಹಾಭಾರತದ ಕಥೆಗಳು, ದೇಶಕಟ್ಟುವಲ್ಲಿ ಹೋರಾಡಿದ ಮಹಾಪುರುಷರ ಜೀವನ ಸಾಧನೆಗಳನ್ನು ಹೇಳಿ ಶಿವಾಜಿಯಲ್ಲಿ ಧೈರ್ಯ ತುಂಬುತ್ತಿದ್ದರು. ಮರಾಠ ಸಮುದಾಯವನ್ನು ಸಂಘಟಿಸಿದ ಶಿವಾಜಿ ಮಹಾರಾಜರು ಸ್ತ್ರೀಯರಿಗೆ ಪ್ರಾಮುಖ್ಯತೆ ನೀಡಿದರು. ಸಾಮಾಜಿಕ, ರಾಜಕೀಯ, ಧಾರ್ಮಿಕ ಹಾಗೂ ಶೈಕ್ಷಣಿಕವಾಗಿ ರಕ್ಷಣೆ ಪಡೆಯಲು ಎಲ್ಲರೂ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದು ಅಗತ್ಯವಿದೆ. ಜೀಜಾಬಾಯಿಯವರಂತೆ ತಮ್ಮ ಮಕ್ಕಳಿಗೆ ಉತ್ತಮ ಜೀವನ ಮೌಲ್ಯಗಳನ್ನು ಹೇಳಿಕೊಡಬೇಕು ಎಂದು ಅವರು ಸಲಹೆ ನೀಡಿದರು.ತ್ರಪತಿ ಎಂದರೆ ರಾಜರ ರಾಜ, ಅರಸರ ಅರಸ ಎಂದು ಅರ್ಥವಾಗುತ್ತದೆ. ಛತ್ರಪತಿ ಶಿವಾಜಿ ಮಹಾರಾಜರು ಶಕ್ತಿಯಿಂದ ಮಾಡಲು ಆಗದ ಕೆಲಸವನ್ನು ಯುಕ್ತಿಯಿಂದ ಮಾಡುತ್ತಿದ್ದರು. ಕಲ್ಯಾಣ ಕರ್ನಾಟಕಕ್ಕೆ ಕೂಡ ಛತ್ರಪತಿ ಶಿವಾಜಿ ಮಹಾರಾಜರ ಕೊಡುಗೆ ಅಪಾರವಾಗಿದೆ. ಮುಂದಾಲೋಚನೆ, ತೀಕ್ಷಣಮತಿಯುಳ್ಳವರಾಗಿದ್ದ ಶಿವಾಜಿ ಮಹಾರಾಜರು ಆಡಳಿತದ ಸುಧಾರಣೆಗೆ ಅಷ್ಟ ಪ್ರಧಾನರೆಂಬ ಮಂತ್ರಿಮಂಡಲ ರಚಿಸಿ ಆಡಳಿತಾತ್ಮಕವಾಗಿ ಅಪಾರ ಕೊಡುಗೆ ನೀಡಿದರು.
ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ.ಸುಭಾಶ್ಚಂದ್ರ ಕೌಲಗಿ, ಸಮಾಜದ ಜಿಲ್ಲಾ ಅಧ್ಯಕ್ಷರಾದ ವಿಜಯಕುಮಾರ ಚವ್ಹಾಣ, ನಗರಸಭೆ ಮಾಜಿ ಸದಸ್ಯರಾದ ನಾರಾಯಣರಾವ್ ಚವ್ಹಾಣ ಅವರು ಸೇರಿದಂತೆ ಸಮಾಜದ ಮುಖಂಡರು, ಮಹಿಳೆಯರು, ಮಕ್ಕಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.ಲಿಂಗೇರಿ ಸ್ಟೇಷನ್ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಸಂಗೀತ ಶಿಕ್ಷಕರಾದ ಚಂದ್ರಶೇಖರ ಗೋಗಿ ಹಾಗೂ ತಂಡದವರು  ನಾಡಗೀತೆ  ಹಾಡಿದರು. ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರಾದ ದತ್ತಪ್ಪ ಸಾಗನೂರ ಸ್ವಾಗತಿಸಿದರು. ಸುಬಮ ಪದವಿ ಮಹಾವಿದ್ಯಾಲಯದ ಉಪನ್ಯಾಸಕರಾದ ಗುರುಪ್ರಸಾದ ವೈದ್ಯ ಅವರು ನಿರೂಪಿಸಿದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

                                                             ವಾ.ವಿ.ಸ.45 ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಶರಣಬಸಪ್ಪ ದರ್ಶನಾಪೂರ ಅವರ ಜಿಲ್ಲಾ ಪ್ರವಾಸ ಯಾದಗ...