ವರ್ಕನಳ್ಳಿ ಗ್ರಾಮಕ್ಕೆ ಡಿಎಚ್‍ಒ ಭೇಟಿ
ಯಾದಗಿರಿ, ಫೆಬ್ರುವರಿ 13 (ಕರ್ನಾಟಕ ವಾರ್ತೆ): ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಾದ ಡಾ.ಎಂ.ಎಸ್. ಪಾಟೀಲ್ ಅವರು ವರ್ಕನಳ್ಳಿ ಗ್ರಾಮಕ್ಕೆ ಇತ್ತೀಚೆಗೆ ಭೇಟಿ ನೀಡಿ, ಗ್ರಾಮದ ಪ್ರಮುಖ ಬೀದಿಗಳಲ್ಲಿ ಸ್ವಚ್ಛತೆ ಕುರಿತಂತೆ ಪರಿಶೀಲನೆ ಮಾಡಿದರು. ಗ್ರಾಮದಲ್ಲಿ ಕರುಳುಬೇನೆ ಕಾಯಿಲೆ ಬಗ್ಗೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ಮುಖ್ಯವಾಗಿ ಕುಡಿಯುವ ನೀರಿನ ಎಲ್ಲಾ ತಾಣಗಳಲ್ಲಿ ಕ್ಲೋರಿನೇಷನ್ ಮಾಡಿಸಿ. ಚರಂಡಿಗಳಲ್ಲಿ ನೀರು ನಿಲ್ಲದಂತೆ ಸ್ವಚ್ಛತೆ ಕಾಪಾಡಬೇಕು. ಊರಿನ ಪ್ರಮುಖ ಬೀದಿಗಳಲ್ಲಿ ಪರಿಶೀಲನೆ ಮಾಡಿದ ಅವರು, ಗ್ರಾಮದಲ್ಲಿ ಆರೋಗ್ಯದ ಜಾಗೃತಿ ಕುರಿತು ಡಂಗೂರ ಸಾರಬೇಕು ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿಜಯಲಕ್ಷ್ಮೀ ಅವರಿಗೆ ತಿಳಿಸಿದರು. ಆರೋಗ್ಯ ಇಲಾಖೆಯ ಕಿರಿಯ ಆರೋಗ್ಯ ಸಹಾಯಕರು, ಆಶಾ ಕಾರ್ಯಕರ್ತೆಯರು ಹಾಗೂ ಸಿಬ್ಬಂದಿಗಳು ಮನೆ ಮನೆ ಭೇಟಿ ನೀಡಿ, ಹಲೋಜನ್ ಮಾತ್ರೆ ಮತ್ತು ಓ.ಆರ್.ಎಸ್ ಪಾಕೀಟ್ ಕೊಡಲು ಸೂಚಿಸಿದರು. ಸಾರ್ವಜನಿಕರು ನೀರನ್ನು ಕಾಯಿಸಿ, ಆರಿಸಿ ಕುಡಿಯಬೇಕು. ಆರ್.ಓ ಪ್ಲಾಂಟ್‍ನ ಶುದ್ಧ ನೀರು ಕುಡಿಯಬೇಕು ಎಂದು ಅವರು ಈ ಸಂದರ್ಭದಲ್ಲಿ ಮನವಿ ಮಾಡಿದರು. ತಾಲ್ಲೂಕು ಆರೋಗ್ಯ ಅಧಿಕಾರಿ ಡಾ.ಹಣಮಂತರೆಡ್ಡಿ, ಡಾ.ಪಲ್ಲವಿ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಬಿರಾದಾರ ಶಂಕರ, ಪಂಚಾಯಿತಿ ಸದಸ್ಯ ಹಣಮಂತ ಹಾಗೂ ಹಿರಿಯ / ಕಿರಿಯ ಆರೋಗ್ಯ ಸಹಾಯಕರು, ಗ್ರಾಮದ ಮುಖಂಡರು ಉಪಸ್ಥಿತರಿದ್ದರು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ