ಶುಕ್ರವಾರ, ಫೆಬ್ರವರಿ 7, 2020

ಸಹಾಯಕ ಆಯುಕ್ತ ಶಂಕರಗೌಡ ಎಸ್.ಸೋಮನಾಳ ಅಧ್ಯಕ್ಷತೆಯಲ್ಲಿ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆ
ಮಾಹಿತಿ ನೀಡದ ಕೆಆರ್‍ಐಡಿಎಲ್ ಎಇಇ ವಿರುದ್ಧ ಕ್ರಮಕ್ಕೆ ನಿರ್ಣಯ
ಯಾದಗಿರಿ, ಫೆಬ್ರುವರಿ 07 (ಕರ್ನಾಟಕ ವಾರ್ತೆ): ಜಿಲ್ಲೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯಿಂದ ಮಂಜೂರಾದ ಭವನಗಳೆಷ್ಟು? ಇವುಗಳಲ್ಲಿ ನಿವೇಶನ ದೊರಕಿದ ಭವನಗಳೆಷ್ಟು? ಸಂಪೂರ್ಣ ಮುಕ್ತಾಯವಾದ ಭವನಗಳೆಷ್ಟು ಮತ್ತು ಅರ್ಧಕ್ಕೆ ನಿಂತ ಭವನಗಳೆಷ್ಟು? ಎಂಬುದರ ಕುರಿತು ಮಾಹಿತಿ ನೀಡದ ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಗಮ (ಕೆಆರ್‍ಐಡಿಎಲ್)ದ ಎಇಇ ವಿರುದ್ಧ ಕ್ರಮಕ್ಕೆ ಶಿಫಾರಸು ಮಾಡಲು ಉಪ ವಿಭಾಗ ಮಟ್ಟದ ಅನುಸೂಚಿತ ಜಾತಿ/ಅನುಸೂಚಿತ ಪಂಗಡ (ದೌರ್ಜನ್ಯ ನಿಯಂತ್ರಣ) ನಿಯಮಗಳು 1995ರ ನಿಯಮ 17ರ ರೀತ್ಯ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆ ತೀರ್ಮಾನಿಸಿತು.ಜಿಲ್ಲಾಡಳಿತ ಭವನದ ಸಹಾಯಕ ಆಯುಕ್ತರ ಕಾರ್ಯಾಲಯ ಸಭಾಂಗಣದಲ್ಲಿ ಶುಕ್ರವಾರ ಸಹಾಯಕ ಆಯುಕ್ತರಾದ ಶಂಕರಗೌಡ ಎಸ್.ಸೋಮನಾಳ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಿತಿ ಸಭೆಯಲ್ಲಿ ಸಮಿತಿಯ ಎಲ್ಲಾ ಸದಸ್ಯರು ಕೆಆರ್‍ಐಡಿಎಲ್ ಎಇಇ ವಿರುದ್ಧ ಶಿಸ್ತು ಕ್ರಮ ಜರುಗಿಸಲು ಜಿಲ್ಲಾ ಮಟ್ಟದ ಸಮಿತಿಗೆ ಶಿಫಾರಸು ಮಾಡುವ ಕುರಿತು ಒಮ್ಮತದ ನಿರ್ಣಯ ಕೈಗೊಂಡರು.ಸಹಾಯಕ ಆಯುಕ್ತರಾದ ಶಂಕರಗೌಡ ಎಸ್.ಸೋಮನಾಳ ಅವರು ಮಾತನಾಡಿ, ನೊಂದ ಜೀವಗಳಿಗೆ ನ್ಯಾಯ ಒದಗಿಸುವ ಕೆಲಸವನ್ನು ಜಾಗೃತಿ ಮತ್ತು ಉಸ್ತುವಾರಿ ಸಮಿತಿಯು ಮಾಡುತ್ತದೆ. ಕಾರಣ, ಸಮಿತಿಯ ಎಲ್ಲಾ ಸದಸ್ಯರು ಕಡ್ಡಾಯವಾಗಿ ಸಭೆಗೆ ಹಾಜರಾಗಿ ಇಲ್ಲಿ ನಡೆಯುವ ಚರ್ಚೆ, ತೀರ್ಮಾನಗಳ ಅನುಸಾರ ಕಾರ್ಯ ನಿರ್ವಹಿಸಬೇಕು. ಬೇಜವಾಬ್ದಾರಿಯಿಂದ ವರ್ತಿಸುವ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮಕ್ಕೆ ಮೇಲಧಿಕಾರಿಗಳಿಗೆ ಶಿಫಾರಸು ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು. ಸಭೆಗೆ ಗೈರಾದ ಅಧಿಕಾರಿಗಳಿಗೆ 24 ಗಂಟೆಗಳಲ್ಲಿ ಉತ್ತರಿಸುವಂತೆ ನೋಟಿಸ್ ಜಾರಿ ಮಾಡಲು ಈ ಸಂದರ್ಭದಲ್ಲಿ ತಿಳಿಸಿದರು.
ಯಾದಗಿರಿ ಉಪ ವಿಭಾಗದಲ್ಲಿ 2019-20ನೇ ಸಾಲಿನಲ್ಲಿ ಇಲ್ಲಿಯವರೆಗೆ ಎಸ್‍ಸಿ, ಎಸ್‍ಟಿ ಕಾಯ್ದೆಯಡಿ 29 ಪ್ರಕರಣಗಳು ದಾಖಲಾಗಿವೆ. ಇವುಗಳಲ್ಲಿ ಜಾತಿ ನಿಂದನೆ ಮತ್ತು ಇನ್ನಿತರ 21 ಪ್ರಕರಣಗಳಿಗೆ ವರ್ಷ ಕಳೆದರೂ ಪರಿಹಾರ ಧನ ಮಂಜೂರು ಮಾಡಿಲ್ಲ. ಖಜಾನೆ-2 ತೊಂದರೆ ಇದ್ದರೆ ಪರಿಹಾರಕ್ಕೆ ವರ್ಷ ಬೇಕಿಲ್ಲ. ತಕ್ಷಣ ಪರಿಹಾರ ಧನ ವಿತರಣೆಗೆ ಮತ್ತು ಬಾಕಿ ಇರುವ ಪ್ರಕರಣಗಳ ಇತ್ಯರ್ಥಕ್ಕೆ ಕ್ರಮ ಕೈಗೊಳ್ಳಬೇಕೆಂದು ಅವರು ನಿರ್ದೇಶಿಸಿದರು.
ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದು ಸರ್ಕಾರಿ ನೌಕರಿ ಪಡೆದ ಪ್ರಕರಣವನ್ನು ಡಿ.ಸಿ.ಆರ್.ಇ ಕಲಬುರಗಿಗೆ ವರ್ಗಾವಣೆ ಮಾಡಲಾಗಿದೆ. ಇವರಿಂದ ಶೀಘ್ರ ಉತ್ತರ ಪಡೆಯಬೇಕು ಮತ್ತು ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರ ಕಚೇರಿಗೆ ಸಲ್ಲಿಸಲಾದ ಪ್ರಕರಣಗಳ ಬಗ್ಗೆ ಕೈಗೊಂಡ ಕ್ರಮದ ವರದಿಯನ್ನು ಸಮಿತಿಗೆ ಸಲ್ಲಿಸಬೇಕು ಎಂದು ಅವರು ಸೂಚಿಸಿದರು.
ಜಾಗೃತಿ ಮೂಡಿಸಿ: ಸಂವಿಧಾನದ ಅಡಿಯಲ್ಲಿ ಎಲ್ಲರೂ ಸಮಾನರು. ಸಮಾಜದಲ್ಲಿ ಗೌರವದಿಂದ ಬಾಳ್ವೆ ನಡೆಸಲು ಪ್ರತಿಯೊಬ್ಬರಿಗೂ ಹಕ್ಕಿದೆ. ಅಪರಾಧ ಮಾಡಿದಾಗ ಮಾತ್ರ ಸಂವಿಧಾನದ ಕಲಂಗಳು ನೆನಪಾಗಬಾರದು. ಈ ನಿಟ್ಟಿನಲ್ಲಿ ಯಾವ ಅಪರಾಧಗಳಿಗೆ ಯಾವ ಶಿಕ್ಷೆ ಎಂಬುದರ ಕುರಿತು ಸಮಾಜ ಕಲ್ಯಾಣ ಇಲಾಖೆಯು ವಿವಿಧ ಇಲಾಖೆಗಳ ಸಹಕಾರದೊಂದಿಗೆ ಜಾಗೃತಿ ಮೂಡಿಸಬೇಕು. ಜಾತಿ ನಿಂದನೆ ಪ್ರಕರಣಗಳು ಹೆಚ್ಚಾಗಿ ಕಂಡುಬರುತ್ತಿರುವ ವಡಗೇರಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಹೆಚ್ಚಿನ ಕಾರ್ಯಕ್ರಮಗಳನ್ನು ಆಯೋಜಿಸುವಂತೆ ಅವರು ಸಲಹೆ ನೀಡಿದರು.ಮಲ ಹೊರುವ ಪದ್ಧತಿ ಕಂಡುಬಂದರೆ ಕ್ರಮ: ಉಪ ವಿಭಾಗಮಟ್ಟದಲ್ಲಿ ಮಲ ಎತ್ತುವ ಮತ್ತು ಮಲದ ಗುಂಡಿಯಲ್ಲಿ ಮನುಷ್ಯರನ್ನು ಇಳಿಸಿ ಸ್ವಚ್ಛಗೊಳಿಸುವ ಪದ್ಧತಿ ಯಾವುದೇ ಕಾರಣಕ್ಕೂ ಇರಬಾರದು. ಇಂತಹ ಪ್ರಕರಣಗಳು ಕಂಡುಬಂದರೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು. ಪೌರಕಾರ್ಮಿಕರಿಗೆ ಈ ಬಗ್ಗೆ ತಿಳಿವಳಿಕೆ ಮೂಡಿಸಬೇಕು. ಇನ್ನು ಜಿಲ್ಲೆಯ ಎಲ್ಲಾ ನಗರಸಭೆ, ಪುರಸಭೆಗಳಲ್ಲಿ ಪೌರಕಾರ್ಮಿಕರಿಗೆ ಆರೋಗ್ಯ ಪರೀಕ್ಷೆ ಮಾಡಿಸುವಂತೆ ಸಹಾಯಕ ಆಯುಕ್ತರು ಸೂಚಿಸಿದರು.ಜಿಲ್ಲಾ ಪಂಚಾಯಿತಿ ಸದಸ್ಯರಾದ ಶಿವಲಿಂಗಪ್ಪ ಪುಟಗಿ ಅವರು ಮಾತನಾಡಿ, ಪರಿಶಿಷ್ಟ ಜಾತಿ ಮತ್ತು ಪಂಗಡ ಜನಾಂಗದ ಕಾಲೊನಿಗಳಿಗೆ ಸರ್ಕಾರದಿಂದ ಮಂಜೂರಾದ ಸಿ.ಸಿ ರಸ್ತೆ ಮತ್ತು ಚರಂಡಿಗಳನ್ನು ಸವರ್ಣಿಯರ ಕಾಲೊನಿಗಳಲ್ಲಿ ಮಾಡಲಾಗುತ್ತಿದೆ. ಹತ್ತಿಕುಣಿ ಗ್ರಾಮದ ಪರಿಶಿಷ್ಟ ಜಾತಿಯವರ ಕಾಲೊನಿಯಲ್ಲಿ ಚರಂಡಿ ನೀರು ತುಂಬಿ ಸಿ.ಸಿ ರಸ್ತೆಯ ಮೇಲೆ ಹರಿಯುತ್ತಿದೆ. ಈ ಬಗ್ಗೆ ಕಳೆದ ಸಭೆಯಲ್ಲಿ ಗಮನ ಸೆಳೆದರೂ ಸ್ವಚ್ಛಗೊಳಿಸಿಲ್ಲ. ಇನ್ನು ಸಾಕ್ಷರತಾ ಕಾರ್ಯಕ್ರಮಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುತ್ತಿಲ್ಲ. ಇವುಗಳ ಬಗ್ಗೆ ಅಧಿಕಾರಿಗಳನ್ನು ಕೇಳಿದರೆ ಸಬೂಬು ಹೇಳುತ್ತಿದ್ದಾರೆ. ಅಧಿಕಾರಿಗಳು ಕ್ರಮ ವಹಿಸಿರುವ ಬಗ್ಗೆ ಲಿಖಿತ ವರದಿಯನ್ನು ಸಮಿತಿಗೆ ನೀಡುವಂತೆ ಒತ್ತಾಯಿಸಿದರು.ಜಾಗೃತಿ ಮತ್ತು ಉಸ್ತುವಾರಿ ಸಮಿತಿಯ ಸದಸ್ಯರಾದ ಸಾಯಬಣ್ಣ ತಳಕ್, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರಾದ ಚನ್ನಬಸವ, ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆಯ ಕಚೇರಿ ಅಧೀಕ್ಷಕರಾದ ವೆಂಕಟೇಶ್ ಮುಂಡರಗಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಶರಣಬಸಪ್ಪ ದರ್ಶನಾಪೂರ ಅವರ ಜಿಲ್ಲಾ ಪ್ರವಾಸ

                                                               ವಾ.ವಿ.ಸಂ.150 ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಶರಣಬಸಪ್ಪ ದರ್ಶನಾಪೂರ ಅವರ ಜಿಲ್ಲಾ ಪ್ರವಾಸ ...