ಶುಕ್ರವಾರ, ಫೆಬ್ರವರಿ 14, 2020

ಸುರಪುರ ಮೀಸಲು ಕ್ಷೇತ್ರದಲ್ಲಿ ಆರೋಗ್ಯ ಕಾರ್ಯಕ್ರಮಗಳ ಪ್ರಚಾರಕ್ಕೆ 6.30 ಲಕ್ಷ ರೂ. ನಿಗದಿ
ದೇವರಗೋನಾಲದಲ್ಲಿ ಆರೋಗ್ಯ ಮೇಳ ಆಯೋಜನೆಗೆ ನಿರ್ಣಯ
ಯಾದಗಿರಿ, ಫೆಬ್ರುವರಿ 15 (ಕರ್ನಾಟಕ ವಾರ್ತೆ): ಪರಿಶಿಷ್ಟ ಪಂಗಡದ ಜನರು ಅತಿ ಹೆಚ್ಚಾಗಿರುವ ಸುರಪುರ ಮೀಸಲು ವಿಧಾಸಭಾ ಕ್ಷೇತ್ರದ ದೇವರಗೋನಾಲ ಗ್ರಾಮದಲ್ಲಿ ಆರೋಗ್ಯ ಮೇಳ ಆಯೋಜಿಸಲು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶಿಲ್ಪಾ ಶರ್ಮಾ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ಸಂಜೆ ನಡೆದ ಜಿಲ್ಲಾ ಮಟ್ಟದ ಸಮಿತಿ ಸಭೆ ನಿರ್ಣಯಿಸಿತು. ಜಿಲ್ಲಾ ಪಂಚಾಯಿತಿಯ ತಮ್ಮ ಕಾರ್ಯಾಲಯದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಸಿಇಒ ಶಿಲ್ಪಾ ಶರ್ಮಾ ಅವರು, 2019-20ನೇ ಸಾಲಿನಲ್ಲಿ ಅನುಸೂಚಿತ ಜಾತಿ, ಅನುಸೂಚಿತ ಪಂಗಡ ಮತ್ತು ಬುಡಕಟ್ಟು ಜನಸಂಖ್ಯೆ ಜಾಸ್ತಿ ಇರುವ 51 ಮೀಸಲು ವಿಧಾನಸಭಾ ಕ್ಷೇತ್ರಗಳಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಾರ್ಯಕ್ರಮ/ ಯೋಜನೆಗಳ ಅರಿವು ಮೂಡಿಸಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶನಾಲಯವು ಸೂಚಿಸಿದೆ. ನಮ್ಮ ಜಿಲ್ಲೆಯ ಸುರಪುರ ಮೀಸಲು ವಿಧಾಸಭಾ ಕ್ಷೇತ್ರವನ್ನು ಆಯ್ಕೆ ಮಾಡಲಾಗಿದ್ದು, ಈ ಸಂಬಂಧ ಜಿಲ್ಲೆಗೆ 6.30 ಲಕ್ಷ ರೂ. ಅನುದಾನ ನಿಗದಿಪಡಿಸಲಾಗಿದೆ ಎಂದು ತಿಳಿಸಿದರು. ಒಟ್ಟು 6.30 ಲಕ್ಷ ರೂ. ಅನುದಾನ ಪೈಕಿ 2.50 ಲಕ್ಷ ರೂ.ಗಳಲ್ಲಿ ಆರೋಗ್ಯ ಮೇಳವನ್ನು ಮಾರ್ಚ್ 15ರೊಳಗೆ ಆಯೋಜಿಸಬೇಕಿದೆ. ಈ ಅನುದಾನವನ್ನು ಟಿಎಸ್‍ಪಿ ಅಡಿಯಲ್ಲಿ ಖರ್ಚು ಮಾಡಬೇಕಿದ್ದು, ಪರಿಶಿಷ್ಟ ಪಂಗಡದ ಜನರು ಅತಿ ಹೆಚ್ಚಾಗಿರುವ ದೇವರಗೋನಾಲದಲ್ಲಿ ಆರೋಗ್ಯ ಮೇಳ ನಡೆಸುವುದು ಸೂಕ್ತ. ಮೇಳದಲ್ಲಿ ತಜ್ಞ ವೈದ್ಯರಿಂದ ತಪಾಸಣೆ ಮತ್ತು ಚಿಕಿತ್ಸೆ ನೀಡುವ ವ್ಯವಸ್ಥೆ ಮಾಡಬೇಕು. ಅಲ್ಲದೆ, ಆರೋಗ್ಯ ಮೇಳದಲ್ಲಿ ಆರೋಗ್ಯ ಇಲಾಖೆಯ ಯೋಜನೆಗಳ ಕುರಿತು ವಸ್ತು ಪ್ರದರ್ಶನ ಏರ್ಪಾಡು ಹಾಗೂ ಸಂಬಂಧಪಟ್ಟ ತಾಲ್ಲೂಕು ಮಟ್ಟದ ಅಧಿಕಾರಿಗಳು ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಅವರು ಸೂಚಿಸಿದರು.
ಆರೋಗ್ಯ ಮೇಳದಲ್ಲಿ ಆಯುಷ್ಮಾನ್ ಭಾರತ- ಆರೋಗ್ಯ ಕರ್ನಾಟಕ ಯೋಜನೆಯಡಿಯಲ್ಲಿ ಆರೋಗ್ಯ ಕಾರ್ಡ್‍ಗಳ ವಿತರಣೆಗೆ ಕೌಂಟರ್ ತೆರೆಯಬೇಕು. ಅನೀಮಿಯಾ ಮುಕ್ತ ಭಾರತ, ಪೋಷಣ್ ಅಭಿಯಾನದ ಪ್ರಚಾರಕ್ಕೆ ಹೆಚ್ಚಿನ ಒತ್ತು ನೀಡಬೇಕು. ಮೇಳ ಆಯೋಜನೆ ಬಗ್ಗೆ ಗ್ರಾಮದಲ್ಲಿ ಡಂಗೂರ ಸಾರಬೇಕು. ಇನ್ನು ಪರಿಶಿಷ್ಟ ಪಂಗಡದ ಜನರು ಅತಿ ಹೆಚ್ಚಾಗಿರುವ 25 ಗ್ರಾಮಗಳಲ್ಲಿ ಗೋಡೆ ಬರಹಗಳನ್ನು ಬರೆಸಬೇಕು. ಪ್ರತಿ ಗೋಡೆ ಬರಹಕ್ಕೆ 2 ಸಾವಿರ ರೂ. ನಿಗದಿಪಡಿಸಲಾಗಿದೆ ಎಂದು ಅವರು ತಿಳಿಸಿದರು. ಎಸ್‍ಸಿಪಿ ಅಡಿಯಲ್ಲಿ 10 ತಾತ್ಕಾಲಿಕ ಹೋರ್ಡಿಂಗ್ಸ್‍ಗಳ ಸ್ಥಾಪನೆ ಹಾಗೂ ಫ್ಲೆಕ್ಸ್ ಮುದ್ರಿಸಿ ಅಳವಡಿಸುವುದು, 30 ಜನಪದ ಕಲಾ ಪ್ರದರ್ಶನ, 20 ತಾಯಂದಿರ ಸಭೆ ಹಾಗೂ ಪೌಷ್ಟಿಕ ಆಹಾರದ ಪ್ರಾತ್ಯಕ್ಷಿತೆ ಶಬಿರಗಳನ್ನು ಆಯೋಜಿಸಲು ಸೂಚಿಸಲಾಗಿದೆ. ಪ್ರತಿ ಹೋರ್ಡಿಂಗ್ಸ್/ ಫ್ಲೆಕ್ಸ್‍ಗೆ 12,000 ರೂ., ಪ್ರತಿ ಜನಪದ ಕಲಾ ಪ್ರದರ್ಶನಕ್ಕೆ 5,000 ರೂ., ಪ್ರತಿ ತಾಯಂದಿರ ಸಭೆಗೆ 3,000 ರೂ.ಗಳಂತೆ ಅನುದಾನ ನಿಗದಿಯಾಗಿದೆ. ಅನುದಾನಕ್ಕೆ ಅನುಗುಣವಾಗಿ ಪರಿಶಿಷ್ಟ ಜಾತಿ ಜನಾಂಗದವರು ಹೆಚ್ಚಾಗಿರುವ ಗ್ರಾಮಗಳನ್ನು ಆಯ್ಕೆ ಮಾಡಿ ಈ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಬೇಕು ಎಂದು ಅವರು ತಿಳಿಸಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಂ.ಎಸ್.ಪಾಟೀಲ್, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಾದ ಪ್ರಭು ದೊರೆ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಬಿರಾದಾರ ಶಂಕರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಿದ್ದನಗೌಡ ಬಿರಾದಾರ ಅವರು ಸಭೆಯಲ್ಲಿ ಹಾಜರಿದ್ದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

                                                             ವಾ.ವಿ.ಸ.45 ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಶರಣಬಸಪ್ಪ ದರ್ಶನಾಪೂರ ಅವರ ಜಿಲ್ಲಾ ಪ್ರವಾಸ ಯಾದಗ...