ಗುರುವಾರ, ಫೆಬ್ರವರಿ 13, 2020


ರೈತರ ಆಶಾಕಿರಣ ಮೇಘದೂತ ಆ್ಯಪ್

ಸ್ಥಳೀಯ ಹವಾಮಾನ ಮುನ್ಸೂಚನೆ ಮತ್ತು ಕೃಷಿ ಆಧಾರಿತ ಸಲಹೆಗಳನ್ನು ಪ್ರಾದೇಶಿಕ ಭಾಷೆಯಲ್ಲಿ ರೈತರಿಗೆ ಮುಟ್ಟಿಸುವ ಪ್ರಯತ್ನವನ್ನು ಭಾರತ ಹವಾಮಾನ ಇಲಾಖೆ (India Meteorological Department), ಭಾರತೀಯ ಕೃಷಿ ಸಂಶೊಧನಾ ಮಂಡಳಿ (Indian Council of Agricultural Research) ಮತ್ತು ಭಾರತೀಯ ಉಷ್ಣವಲಯದ ಹವಾಮಾನ ಸಂಸ್ಥೆ (Indian Institute Tropical Meteorology) ಜಂಟಿಯಾಗಿ “ಮೇಘದೂತ” ಮೊಬೈಲ್ ಅಪ್ಲಿಕೇಷನ್ ಅನ್ನು ಹೊರತಂದಿದೆ.
ಈ ಆ್ಯಪ್ ರೈತರಿಗೆ ಮತ್ತು ಆಸಕ್ತ ಬಳಕೆದಾರರಿಗೆ ಹವಾಮಾನ ಆಧಾರಿತ ಕೃಷಿ ಸಲಹೆಗಳನ್ನು ತಿಳಿದುಕೊಳ್ಳಲು ಬಳಕೆದಾರ ಸ್ನೇಹಿ ರೂಪದಲ್ಲಿ ಅನುವು ಮಾಡಿಕೊಟ್ಟಿದೆ. ಈ ಮೊಬೈಲ್ ಅಪ್ಲಿಕೇಷನ ಅನ್ನು ಡಿಜಿಟಲ್ ಅಗ್ರಿಕಲ್ಚರಲ್ ರಿಸರ್ಚ್ ತಂಡವು ಐಐಟಿಎಂ ಪುಣೆ ಮತ್ತು ಭಾರತ ಹವಾಮಾನ ಇಲಾಖೆ ಸಹಯೋಗದಲ್ಲಿ ಇಂಟರ್‍ನ್ಯಾಶನಲ್ ಕ್ರಾಪ್ಸ್ ರಿಸರ್ಚ್ ಇನ್‍ಸ್ಟಿಟ್ಯೂಟ್ ಫಾರ್ ದಿ ಸೆಮಿ ಎರಿಡ್ ಟ್ರಾಫಿಕ್ಸ್ (ICRISAT), ಹೈದರಾಬಾದನಲ್ಲಿ ಅಭಿವೃದ್ದಿಪಡಿಸಲಾಗಿದೆ.
ಇದು ರೈತರಿಗೆ ಸ್ಥಳೀಯ ಪ್ರಮುಖ ಬೆಳೆಗಳ ಮತ್ತು ಜಾನುವಾರುಗಳಿಗೆ ಹವಾಮಾನ ಆಧಾರಿತ ಕೃಷಿ ಸಲಹೆಗಳನ್ನು ಕನ್ನಡ, ತೆಲುಗು, ಮರಾಠಿ, ತಮಿಳು, ಹಿಂದಿ ಮತ್ತು ಇಂಗ್ಲಿಷ್ ಸೇರಿ ಒಟ್ಟು 10 ಭಾಷೆಗಳಲ್ಲಿ ಜಿಲ್ಲಾವಾರು ಮಾಹಿತಿಯನ್ನು ಒದಗಿಸುತ್ತದೆ. ಈ ಬಳಗವು (ಆ್ಯಪ್) ರೈತರಿಗೆ ಮುಂದಿನ 5 ದಿನಗಳ ಹವಾಮಾನ ಆಧಾರಿತ ನಿಯತಾಂಕಗಳಾದ ಮಳೆ, ಉಷ್ಣಾಂಶ, ಆಧ್ರತೆ, ಗಾಳಿಯ ವೇಗ ಮತ್ತು ಗಾಳಿಯ ದಿಕ್ಕಿನ ಮುನ್ಸೂಚನೆಯನ್ನು ನೀಡುತ್ತದೆ. ಈ ನಿಯತಾಂಕಗಳ ಮುನ್ಸೂಚನೆಯು ರೈತರ ಕೃಷಿ ಚಟುವಟಿಕೆಗಳಲ್ಲಿ ಮತ್ತು ಜಾನುವಾರಗಳ ನಿರ್ವಹಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ. ಈ ಮಾಹಿತಿಯನ್ನು ವಾರಕ್ಕೆ ಎರಡು ಬಾರಿ (ಪ್ರತಿ ಮಂಗಳವಾರ ಮತ್ತು ಶುಕ್ರವಾರ) ಜಿಲ್ಲಾ ಕೃಷಿ ಹವಾಮಾನ ಘಟಕದಿಂದ ನವೀಕರಿಸಲಾಗುತ್ತದೆ. ಈ ಮೇಘದೂತ ಆ್ಯಪ್‍ನಲ್ಲಿ ಮಾಹಿತಿ ಕೇವಲ ಕೃಷಿ ಮತ್ತು ತೋಟಗಾರಿಕೆಗಷ್ಟೇ ಸೀಮಿತವಾಗದೆ ಹೈನುಗಾರಿಕೆಯ ಮಾಹಿತಿಯನ್ನೂ ಒಳಗೊಂಡಿರುತ್ತದೆ. ಋತುವಿಗನುಸರವಾಗಿ ಕುರಿ, ಕೋಳಿ ಮತ್ತು ಇತರ ಜಾನುವಾರುಗಳಿಗೆ ತಗಲುವ ಕಾಯಿಲೆ, ಅವುಗಳ ಹತೋಟಿ ಕ್ರಮಗಳ ಬಗ್ಗೆಯೂ ಮಾಹಿತಿ ನೀಡಲಾಗುತ್ತದೆ. ಮೊದಲನೇಯ ಹಂತದಲ್ಲಿ ದೇಶದ ವಿವಿಧ ಭಾಗಗಳಲ್ಲಿ 150 ಜಿಲ್ಲೆಗಳಿಗೆ ಈ ಸೇವೆ ಆರಂಭವಾಗಿದ್ದು, ಮುಂದಿನ ಒಂದು ವರ್ಷದಲ್ಲಿ ಇದನ್ನು ಹಂತ ಹಂತವಾಗಿ ದೇಶದ ಉಳಿದ ಜಿಲ್ಲೆಗಳಿಗೆ ವಿಸ್ತರಿಸಲಾಗುವುದು.
ಆ್ಯಂಡ್ರಾಯ್ಡ್ ಮೊಬೈಲ್ (ಸ್ಮಾರ್ಟ್ ಫೋನ್) ಉಪಯೋಗಿಸುವ ಎಲ್ಲ ರೈತರು ಪ್ಲೆಸ್ಟೋರ್‍ನಲ್ಲಿ “ಮೇಘದೂತ” (MEGHDOOT) ಎಂದು ಟೈಪ್ ಮಾಡಿ ಈ ಆ್ಯಪ್ ಡೌನಲೋಡ್ ಮಾಡಿಕೊಂಡು, ರೈತರು ತಮ್ಮ ಹೆಸರು, ದೂರವಾಣಿ ಸಂಖ್ಯೆ, ರಾಜ್ಯ ಮತ್ತು ಜಿಲ್ಲೆಯನ್ನು ನಮೂದು ಮಾಡಿ ನೋಂದಾಯಿಸಬೇಕು. ನಂತರ ನೋಂದಾಯಿತ ಬಳಕೆದಾರರು ಆಯಾ ಜಿಲ್ಲೆಯ ನಿರ್ದಿಷ್ಟ ಹವಾಮಾನ ಮುನ್ಸೂಚನೆ ಮತ್ತು ಕೃಷಿ ಆಧಾರಿತ ಸಲಹೆಗಳ ಮಾಹಿತಿಯನ್ನು ಪಡೆಯಬಹುದು. ಈ ಆ್ಯಪ್‍ನಲ್ಲಿ ಹಿಂದಿನ ದಿನಗಳ ಆಯಾ ಜಿಲ್ಲೆಗಳ ಹವಾಮಾನ ಮಾಹಿತಿ ಮತ್ತು ಮುಂದಿನ 5 ದಿನಗಳ ಹವಾಮಾನ ಮುನ್ಸೂಚನೆಯನ್ನು ತಿಳಿಯಬಹುದು ಮತ್ತು ಈ ಹವಾಮಾನ ಮುನ್ಸೂಚನೆ ಆಧರಿಸಿ ಜಿಲ್ಲಾವಾರು ಪ್ರಮುಖ ಬೆಳೆಗಳಿಗೆ ವಿವಿಧ ಹಂತಗಳಲ್ಲಿ ಪ್ರಚಲಿತ ಹವಾಮಾನ ಅಂಶಗಳಿಂದ ಬೆಳೆಗಳ ಮೇಲಾಗುವ ಪರಿಣಾಮಗಳ ಬಗ್ಗೆ ಹಾಗೂ ಅದಕ್ಕನುಗುಣವಾಗಿ ಅವುಗಳಿಗೆ ಪರಿಹಾರ ಕ್ರಮಗಳ ಬಗ್ಗೆ ಮಾಹಿತಿ ಲಭ್ಯವಿರುತ್ತದೆ. ಇದಲ್ಲದೆ ಪ್ರಚಲಿತ ಹವಾಮಾನವನ್ನಾಧರಿಸಿ ರೈತರು ತುರ್ತಾಗಿ ಕೈಗೊಳ್ಳಬೇಕಾದ ಕೃಷಿ ಚಟುವಟಿಕೆಗಳ ಬಗ್ಗೆ ಚುಟುಕು ಸಂದೇಶಗಳನ್ನು ಈ ಆ್ಯಪ್‍ನಲ್ಲಿ ಕಾಣಬಹುದು. ಇದಲ್ಲದೆ ರೈತರಿಗೆ ಈ ಆ್ಯಪ್‍ನ ಸುಲಭ ಬಳಕೆಗಾಗಿ ನಕ್ಷೆ ಮತ್ತು ಚಿತ್ರಗಳ ರೂಪದಲ್ಲಿ ಮಾಹಿತಿಯನ್ನು ಒದಗಿಸಲಾಗುತ್ತದೆ ಎಂದು ಕೃಷಿ ವಿಜ್ಞಾನ ಕೇಂದ್ರದ ಕೃಷಿ ಹವಾಮಾನಶಾಸ್ತ್ರ ವಿಷಯ ತಜ್ಞರಾದ ಡಾ.ಶಾಂತವೀರಯ್ಯ ಅಭಿಪ್ರಾಯಪಡುತ್ತಾರೆ.
ಬದಲಾಗುತ್ತಿರುವ ಹವಾಮಾನ ಮತ್ತು ವೈಪರಿತ್ಯದಿಂದ ರೈತರು ಸಾಕಷ್ಟು ತೊಂದರೆ ಮತ್ತು ನಷ್ಟವನ್ನು ಅನುಭವಿಸುತ್ತಿದ್ದು, ಮೇಲಿಂದ ಮೇಲೆ ಅನಾವೃಷ್ಟಿ ಇಲ್ಲವೆ ಅತಿವೃಷ್ಟಿ ಸಂಭವಿಸುತ್ತಿರುವುದರಿಂದ ಇವತ್ತಿನ ರೈತರು ಹವಾಮಾನ ಮುನ್ಸೂಚನೆಯನ್ನು ಆಧರಿಸಿ ಕೃಷಿ ಚಟುವಟಿಕೆಗಳನ್ನು ಮಾಡುವುದು ಅತ್ಯವಶ್ಯಕವಾಗಿದೆ. ರೈತರು ಈ ಮೊಬೈಲ್ ಸೇವೆಯನ್ನು ಸದುಪಯೋಗಪಡಿಸಿಕೊಂಡು ಹವಾಮಾನದಿಂದ ಆಗುವ ಬೆಳೆ ನಷ್ಟವನ್ನು ಕಡಿಮೆ ಮಾಡಿಕೊಂಡು ಆದಾಯವನ್ನು ಹೆಚ್ಚಿಸಿಕೊಳ್ಳಬೇಕೆಂದು ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥರಾದ ಡಾ.ಅಮರೇಶ ವೈ.ಎಸ್. ವಿನಂತಿಸಿಕೊಳ್ಳುತ್ತಾರೆ.
ಕೃಷಿ ವಿಶ್ವವಿದ್ಯಾಲಯ ರಾಯಚೂರು, ಭಾರತ ಹವಾಮಾನ ಇಲಾಖೆಯ ಸಹಭಾಗಿತ್ವದಲ್ಲಿ ಯಾದಗಿರಿ ಜಿಲ್ಲೆಯ ಕೃಷಿ ವಿಜ್ಞಾನ ಕೇಂದ್ರ ಕವಡಿಮಟ್ಟಿಯಲ್ಲಿ ಕೇಂದ್ರ ಸರಕಾರದ ಭೂ ವಿಜ್ಞಾನ ಸಚಿವಾಲಯದ ಮಹತ್ವಾಕಾಂಕ್ಷಿ ಯೋಜನೆಯಾದ ಗ್ರಾಮೀಣ ಕೃಷಿ ಮೌಸಮ್ ಸೇವಾ ಯೋಜನೆಯ ಅಡಿಯಲ್ಲಿ ಜಿಲ್ಲಾ ಕೃಷಿ ಹವಾಮಾನ ಘಟಕವನ್ನು ಸ್ಥಾಪಿಸಲಾಗಿದ್ದು, ರೈತರು ಹೆಚ್ಚಿನ ಮಾಹಿತಿಗಾಗಿ ಕೃಷಿ ವಿಜ್ಞಾನ ಕೇಂದ್ರ ಕವಡಿಮಟ್ಟಿಗೆ ಬಂದು ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಶರಣಬಸಪ್ಪ ದರ್ಶನಾಪೂರ ಅವರ ಜಿಲ್ಲಾ ಪ್ರವಾಸ

                                                               ವಾ.ವಿ.ಸಂ.150 ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಶರಣಬಸಪ್ಪ ದರ್ಶನಾಪೂರ ಅವರ ಜಿಲ್ಲಾ ಪ್ರವಾಸ ...