ಮಂಗಳವಾರ, ಫೆಬ್ರವರಿ 25, 2020

ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಪೂರ್ವಸಿದ್ಧತಾ ಸಭೆ
ಪರೀಕ್ಷಾ ಕೇಂದ್ರಗಳಲ್ಲಿ ಮೊಬೈಲ್ ನಿಷೇಧ
-ಜಿಲ್ಲಾಧಿಕಾರಿ ಎಂ.ಕೂರ್ಮಾ ರಾವ್ 
ಯಾದಗಿರಿ, ಫೆಬ್ರುವರಿ 25 (ಕರ್ನಾಟಕ ವಾರ್ತೆ): ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗಳು ಮಾರ್ಚ್ 4ರಿಂದ 23ರ ವರೆಗೆ ಜಿಲ್ಲೆಯ ಒಟ್ಟು 13 ಕೇಂದ್ರಗಳಲ್ಲಿ ನಡೆಯಲಿದ್ದು, ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳು, ಅಧೀಕ್ಷಕರು ಹಾಗೂ ಸಿಬ್ಬಂದಿಗಳು ಮೊಬೈಲ್ ಫೋನ್ ಸೇರಿದಂತೆ ಇತರೆ ಯಾವುದೇ ವಿದ್ಯುನ್ಮಾನ ಸಾಧನಗಳನ್ನು ಬಳಸುವಂತಿಲ್ಲ ಎಂದು ಜಿಲ್ಲಾಧಿಕಾರಿಗಳಾದ ಎಂ.ಕೂರ್ಮಾ ರಾವ್ ಅವರು ಕಟ್ಟುನಿಟ್ಟಾಗಿ ಸೂಚಿಸಿದರು. ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ದ್ವಿತೀಯ ಪಿಯುಸಿ ಪರೀಕ್ಷೆ-2020ರ ಪೂರ್ವ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ, ಅವರು ಮಾತನಾಡಿದರು. 
ಪರೀಕ್ಷೆಗಳು ಮಕ್ಕಳ ಭವಿಷ್ಯ ನಿರ್ಧರಿಸುತ್ತವೆ. ಕೆಲವರ ತಪ್ಪಿನಿಂದ ಮುಗ್ದ ವಿದ್ಯಾರ್ಥಿಗಳು ತೊಂದರೆ ಅನುಭವಿಸಬೇಕಾಗುತ್ತದೆ. ಆದ್ದರಿಂದ ಮೊಬೈಲ್ ಫೋನ್‍ಗಳನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಪರೀಕ್ಷಾ ಕೇಂದ್ರಗಳಲ್ಲಿಯ ಮಾಹಿತಿ, ದಾಖಲೆಗಳನ್ನು ಚಿತ್ರೀಕರಿಸುವುದು, ಚಿತ್ರೀಕರಿಸಲು ಪ್ರಯತ್ನಿಸುವುದು ಮತ್ತು ಸಮೂಹ ಮಾಧ್ಯಮ ಅಥವಾ ಜಾಲತಾಣಗಳಲ್ಲಿ ಹರಿದಾಡುವಂತೆ ಮಾಡುವುದು ಅಪರಾಧವಾಗಿರುತ್ತದೆ. ಒಂದು ವೇಳೆ ಕಂಡುಬಂದಲ್ಲಿ ಇಲಾಖಾ ಕ್ರಮದಂತೆ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಿಸಿ, ಶಿಸ್ತಿನ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.
ಮಾಧ್ಯಮದವರಿಗೂ ಕೂಡ ಪರೀಕ್ಷಾ ಕೇಂದ್ರದೊಳಗೆ ಪ್ರವೇಶವಿಲ್ಲ. ಯಾವುದೇ ಪ್ರಕರಣಗಳು ಕಂಡುಬಂದಾಗ ಸಿ.ಸಿ ಟಿವಿ ಕ್ಯಾಮೆರಾಗಳು ಸಾಕ್ಷ್ಯ ಒದಗಿಸುತ್ತವೆ. ಆದ್ದರಿಂದ ಪರೀಕ್ಷಾ ಕೇಂದ್ರಗಳಲ್ಲಿ ಇವುಗಳು ಕಾರ್ಯನಿರ್ವಹಿಸುತ್ತಿರುವ ಕುರಿತಂತೆ ಪರಿಶೀಲಿಸಬೇಕು. ಇನ್ನು ವಿದ್ಯಾರ್ಥಿಗಳ ಪ್ರವೇಶ ಪತ್ರಗಳನ್ನು ತ್ವರಿತಗತಿಯಲ್ಲಿ ವಿತರಿಸಬೇಕು ಎಂದು ಅವರು ನಿರ್ದೇಶಿಸಿದರು.
ಪರೀಕ್ಷೆ ಬರೆಯಲಿರುವ 7,467 ವಿದ್ಯಾರ್ಥಿಗಳು: ಜಿಲ್ಲೆಯ 13 ಪರೀಕ್ಷಾ ಕೇಂದ್ರಗಳಿಗೆ ಒಟ್ಟು 92 ಪದವಿ ಪೂರ್ವ ಕಾಲೇಜುಗಳ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳನ್ನು ಜೋಡಿಸಲಾಗಿದೆ. 4360 ಬಾಲಕರು, 3107 ಬಾಲಕಿಯರು ಸೇರಿದಂತೆ ಒಟ್ಟು 7,467 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗುತ್ತಿದ್ದಾರೆ. ಅರ್ಹ ಎಲ್ಲಾ ವಿದ್ಯಾರ್ಥಿಗಳ ಪ್ರವೇಶ ಪತ್ರಗಳನ್ನು ಈಗಾಗಲೇ ಆನ್‍ಲೈನ್ ಮೂಲಕ ಕಾಲೇಜುಗಳಿಗೆ ವಿತರಿಸಲಾಗಿದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಚಂದ್ರಕಾಂತ ಜಿ.ಹಿಳ್ಳಿ ಅವರು ಮಾಹಿತಿ ನೀಡಿದರು.
ಸೂಕ್ಷ್ಮ ಪರೀಕ್ಷಾ ಕೇಂದ್ರಗಳಾದ ಸುರಪುರದ ಸರ್ಕಾರಿ ಪದವಿ ಪೂರ್ವ ಕಾಲೇಜು, ಪ್ರಭು ಪದವಿ ಪೂರ್ವ ಕಾಲೇಜು ಮತ್ತು ರಂಗಂಪೇಟನ ಡಾ.ಬಾಬಾ ಸಾಹೇಬ ಅಂಬೇಡ್ಕರ್ ಕಾಲೇಜುಗಳಿಗೆ ಹೆಚ್ಚಿನ ಪೊಲೀಸ್ ಭದ್ರತೆಯನ್ನು ಒದಗಿಸಲು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳು ತಿಳಿಸಿದರು.
ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಕುಡಿಯುವ ನೀರು, ವಿದ್ಯುತ್ ಸೌಕರ್ಯ, ಶೌಚಾಲಯ ಸೇರಿದಂತೆ ಮೂಲಭೂತ ಸೌಕರ್ಯಗಳ ಕುರಿತು ಪರಿಶೀಲನೆ ಮಾಡಬೇಕು. ಪರೀಕ್ಷೆಗಳು ಅತೀ ಸೂಕ್ಷ್ಮವಾದ ಪ್ರಕ್ರಿಯೆಯಾಗಿದ್ದು, ಈ ನಿಟ್ಟಿನಲ್ಲಿ ಪ್ರಶ್ನೆ ಪತ್ರಿಕೆಗಳನ್ನು ಪರೀಕ್ಷಾ ಕೇಂದ್ರಗಳಿಗೆ ನಿಗದಿತ ಸಮಯದೊಳಗೆ ತಲುಪಬೇಕು. ಪ್ರಶ್ನೆಪತ್ರಿಕೆಗಳನ್ನು ತೆಗೆದುಕೊಂಡು ಹೋಗುವ ವಾಹನಗಳಿಗೆ ಜಿಪಿಎಸ್ ಅಳವಡಿಸುತ್ತಿದ್ದು, ನಿಗದಿಪಡಿಸಿದ ಮಾರ್ಗದಲ್ಲೆ ಚಲಿಸಬೇಕು ಎಂದು ಅವರು ಸೂಚಿಸಿದರು.
ಅಭ್ಯರ್ಥಿಗಳಿಗೆ ಆಸನ ವ್ಯವಸ್ಥೆಯನ್ನು ಕೊಠಡಿಯಿಂದ ಹೊರಗೆ, ಕಾರಿಡಾರ್ ಅಥವಾ ನೆಲದ ಮೇಲೆ ಕುಳಿತು ಪರೀಕ್ಷೆಗಳನ್ನು ಬರೆಸುವಂತಿಲ್ಲ. ಪರೀಕ್ಷಾ ಕೇಂದ್ರಗಳ ಸುತ್ತಲೂ 200 ಮೀಟರ್ ಪ್ರದೇಶವನ್ನು ನಿಷೇಧಿತ ಪ್ರದೇಶವೆಂದು ಘೋಷಿಸಲಾಗುವುದು. ಪರೀಕ್ಷಾ ಕೇಂದ್ರದ ಸಂಪೂರ್ಣ ಜವಾಬ್ದಾರಿಯು ಮುಖ್ಯ ಅಧೀಕ್ಷಕರಾಗಿ ನೇಮಕಗೊಂಡ ಅಧಿಕಾರಿಯದ್ದಾಗಿರುತ್ತದೆ. ಪರೀಕ್ಷಾ ಕಾರ್ಯಗಳಿಗಾಗಿ ನೇಮಕಗೊಂಡ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಮಾತ್ರ ಕೇಂದ್ರದಲ್ಲಿ ಉಪಸ್ಥಿತರಿರಬೇಕು. ಅನ್ಯ ವ್ಯಕ್ತಿಗಳು ಕೇಂದ್ರದೊಳಗೆ ಕಂಡುಬಂದಲ್ಲಿ ಮುಖ್ಯ ಅಧೀಕ್ಷಕರನ್ನು ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಅವರು ತಿಳಿಸಿದರು.
ಪರೀಕ್ಷಾ ಕೇಂದ್ರಗಳಲ್ಲಿ ವಾಟರ್ ಬಾಯ್‍ಗಳ ನೇಮಕವನ್ನು ರದ್ದುಪಡಿಸಲಾಗಿರುತ್ತದೆ. ಕುಡಿಯುವ ನೀರಿನ ವ್ಯವಸ್ಥೆಯನ್ನು 2, 3 ಕೊಠಡಿಗಳ ಅಂತರದಲ್ಲಿ ಕೊಠಡಿಯ ಹೊರಗೆ ವ್ಯವಸ್ಥೆ ಮಾಡಬೇಕು. ಆಯಾ ದಿನದ ವಿಷಯ ಪರೀಕ್ಷೆಗಳು ಮುಗಿದ ತಕ್ಷಣವೇ ಉತ್ತರ ಪತ್ರಿಕೆಗಳನ್ನು ಕ್ರೂಢೀಕರಿಸಿ ಬಂಡಲುಗಳನ್ನು ಸೀಲು ಮಾಡಿ ರವಾನಿಸಬೇಕು ಎಂದು ಅವರು ಸೂಚಿಸಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶಿಲ್ಪಾ ಶರ್ಮಾ, ಅಪರ ಜಿಲ್ಲಾಧಿಕಾರಿಗಳಾದ ಪ್ರಕಾಶ್ ಜಿ.ರಜಪೂತ, ಸಹಾಯಕ ಆಯುಕ್ತರಾದ ಶಂಕರಗೌಡ ಎಸ್.ಸೋಮನಾಳ, ಪ್ರಾದೇಶಿಕ ಸಾರಿಗೆ ಅಧಿಕಾರಿಗಳಾದ ವಸಂತ ಚವ್ಹಾಣ, ತಹಶೀಲ್ದಾರರು, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಪರೀಕ್ಷಾ ಕೇಂದ್ರಗಳ ಮುಖ್ಯ ಅಧೀಕ್ಷಕರು ಸಭೆಯಲ್ಲಿ ಉಪಸ್ಥಿತರಿದ್ದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

                                                             ವಾ.ವಿ.ಸ.45 ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಶರಣಬಸಪ್ಪ ದರ್ಶನಾಪೂರ ಅವರ ಜಿಲ್ಲಾ ಪ್ರವಾಸ ಯಾದಗ...