ಶುಕ್ರವಾರ, ಫೆಬ್ರವರಿ 7, 2020

3.79 ಲಕ್ಷ ಮಕ್ಕಳಿಗೆ ಅಲ್ಬೆಂಡ್‍ಝೋಲ್ ಮಾತ್ರೆ ನೀಡುವ ಗುರಿ
ಫೆ.10ರಂದು ರಾಷ್ಟ್ರೀಯ ಜಂತುಹುಳು ನಿವಾರಣಾ ದಿನ
ಯಾದಗಿರಿ, ಫೆಬ್ರುವರಿ 07 (ಕರ್ನಾಟಕ ವಾರ್ತೆ): ರಾಷ್ಟ್ರೀಯ ಜಂತುಹುಳು ನಿವಾರಣಾ ಕಾರ್ಯಕ್ರಮದಡಿಯಲ್ಲಿ ಜಿಲ್ಲೆಯಾದ್ಯಂತ ಫೆಬ್ರುವರಿ 10ರಂದು 1 ವರ್ಷದಿಂದ 19 ವರ್ಷದ ಎಲ್ಲಾ ಮಕ್ಕಳಿಗೆ ಜಂತುಹುಳು ನಾಶಕ ಅಲ್ಬೆಂಡ್‍ಝೋಲ್ ಮಾತ್ರೆಯನ್ನು ಎಲ್ಲಾ ಸರ್ಕಾರಿ ಮತ್ತು ಖಾಸಗಿ ಶಾಲೆ- ಕಾಲೇಜುಗಳಲ್ಲಿ, ಅಂಗನವಾಡಿ, ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಉಪ ಕೇಂದ್ರಗಳಲ್ಲಿ ಉಚಿತವಾಗಿ ನೀಡಲಾಗುವುದು. ಬಾಕಿ ಉಳಿದ ಮಕ್ಕಳಿಗೆ ಫೆಬ್ರುವರಿ 17ರ ಮಾಪ್‍ಅಪ್ ದಿನದಂದು ಮಾತ್ರೆ ನೀಡಲಾಗುತ್ತದೆ.ನಮ್ಮ ಜಿಲ್ಲೆಯಲ್ಲಿ 3,79,682 ಮಕ್ಕಳಿಗೆ ಅಲ್ಬೆಂಡ್‍ಝೋಲ್ ಮಾತ್ರೆ ನೀಡುವ ಗುರಿ ಇದೆ. ಜಂತುಹುಳು ನಾಶಕ ಮಾತ್ರೆಯು ಎಲ್ಲಾ ಮಕ್ಕಳಿಗೂ ಸುರಕ್ಷಿತ ಮತ್ತು ಪರಿಣಾಮಕಾರಿಯಾಗಿದೆ. ವಿಶ್ವ ಆರೋಗ್ಯ ಸಂಸ್ಥೆ ಮತ್ತು ಭಾರತ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯಗಳು ರಾಷ್ಟ್ರೀಯ ಜಂತುಹುಳು ನಿವಾರಣಾ ದಿನದಂದು ಈ ಔಷಧಿ ತೆಗೆದುಕೊಳ್ಳಲು ಶಿಫಾರಸು ಮಾಡಿವೆ. 1-2 ವರ್ಷ ಮಕ್ಕಳಿಗೆ 400 ಎಂ.ಜಿ.ಯ ಅರ್ಧ ಮಾತ್ರೆ, 2-19 ವರ್ಷದ ಮಕ್ಕಳಿಗೆ 400 ಎಂ.ಜಿ.ಯ 1 ಮಾತ್ರೆ ನೀಡಿ ಚೀಪಲು ತಿಳಿಸಬೇಕು. ನುಂಗಬಾರದು.
ಪ್ರಯೋಜನಗಳು: ಜಂತುಹುಳು ಸೋಂಕಿನಿಂದಾಗಿ ಮಕ್ಕಳು ರಕ್ತ ಹೀನತೆ, ಪೌಷ್ಟಿಕಾಂಶ ಕೊರತೆ, ಹಸಿವಾಗದಿರುವುದು, ನಿಶಕ್ತ ಮತ್ತು ಆತಂಕ, ಹೊಟ್ಟೆ ನೋವು, ವಾಕರಿಕೆ, ವಾಂತಿ, ಅತಿಸಾರ, ತೂಕ ಕಡಿಮೆಯಾಗುವುದು ಸೇರಿದಂತೆ ಅವರ ದೈಹಿಕ ಮತ್ತು ಮಾನಸಿಕ ಬೆಳವಣಿಗೆ ಕುಂಠಿತವಾಗಬಹುದು. ಅಲ್ಬೆಂಡ್‍ಝೋಲ್ ಮಾತ್ರೆ ಚೀಪುವುದರಿಂದ ಮಕ್ಕಳಲ್ಲಿ ರಕ್ತ ಹೀನತೆ ನಿಯಂತ್ರಣ ಮತ್ತು ಪೋಷಕಾಂಶ ಹೀರಿಕೆಯನ್ನು ಸುಧಾರಿಸುತ್ತದೆ. ಮಾತ್ರೆಯನ್ನು ನೀಡುವುದರಿಂದ ದುಂಡು ಹುಳು, ಟೇಪ್ ಹುಳು ಮತ್ತು ಕೊಕ್ಕೆ ಹುಳುಗಳನ್ನು ಹೋಗಲಾಡಿಸುವುದಲ್ಲದೆ ಅನೀಮಿಯಾ ಖಾಯಿಲೆಯನ್ನು ತಡೆಗಟ್ಟಬಹುದಾಗಿದೆ.
ಈ ಮಾತ್ರೆಯನ್ನು ತೆಗೆದುಕೊಂಡ ನಂತರ ಕೆಲವೊಮ್ಮೆ ಮಕ್ಕಳಲ್ಲಿ ವಾಕರಿಕೆ, ಸೌಮ್ಯ ಹೊಟ್ಟೆ ನೋವು, ವಾಂತಿಯಾಗುವುದು, ಅತಿಸಾರ ಹಾಗೂ ಬಳಲಿಕೆಯನ್ನು ಅನುಭವಿಸಬಹುದು. ಅವರು ಜಂತುಹುಳುಗಳನ್ನು ಹೊಂದಿದ್ದಲ್ಲಿ ಇವುಗಳನ್ನು ನಿರೀಕ್ಷಿಸಬಹುದು. ಆದರೆ, ಭಯ ಪಡುವ ಅಗತ್ಯ ಇಲ್ಲ. ಯಾವುದೇ ವೈದ್ಯಕೀಯ ನೆರವಿಗಾಗಿ ಉಚಿತ ಆರೋಗ್ಯ ಸಹಾಯವಾಣಿಗೆ ಕರೆ ಮಾಡಿ ಮತ್ತು ಹೆಚ್ಚಿನ ಮಾಹಿತಿಗಾಗಿ ಕಿರಿಯ ಆರೋಗ್ಯ ಸಹಾಯಕರು, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರ ಸಂಪರ್ಕಿಸಲು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಂ.ಎಸ್. ಪಾಟೀಲ್ ಮತ್ತು ಜಿಲ್ಲಾ ಆರ್‍ಸಿಎಚ್ ಅಧಿಕಾರಿ ಡಾ.ಲಕ್ಷ್ಮೀಕಾಂತ ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

                                                             ವಾ.ವಿ.ಸ.45 ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಶರಣಬಸಪ್ಪ ದರ್ಶನಾಪೂರ ಅವರ ಜಿಲ್ಲಾ ಪ್ರವಾಸ ಯಾದಗ...