ಯಾದಗಿರಿ ನಗರದ ವಿವಿಧ ಅಂಗಡಿಗಳ ಮೇಲೆ ಅನಿರೀಕ್ಷಿತ ದಾಳಿ
ನಿಷೇಧಿತ ಪ್ಲಾಸ್ಟಿಕ್, ತಂಬಾಕು ಉತ್ಪನ್ನಗಳ ವಶ
ಯಾದಗಿರಿ, ಫೆಬ್ರುವರಿ 06 (ಕರ್ನಾಟಕ ವಾರ್ತೆ): ಯಾದಗಿರಿ ನಗರದ ಗಂಜ್ ಏರಿಯಾ, ಹೊಸಳ್ಳಿ ಕ್ರಾಸ್, ವರ್ಕನಹಳ್ಳಿ ರೋಡ್, ಗಣೇಶ ನಗರ, ಮಾಣಿಕೇಶ್ವರಿ ನಗರ ಹಾಗೂ ಸುತ್ತಮುತ್ತಲಿನ 25ಕ್ಕೂಹೆಚ್ಚು ಸ್ಟಾಲ್, ಮಳಿಗೆ, ಅಂಗಡಿಗಳ ಮೇಲೆ ಬುಧವಾರ ದಾಳಿ ನಡೆಸಿದ ಅಧಿಕಾರಿಗಳು ಪ್ಲಾಸ್ಟಿಕ್ ಮತ್ತು ತಂಬಾಕು ಉತ್ಪನ್ನಗಳನ್ನು ವಶಪಡಿಸಿಕೊಂಡು, 7000 ರೂ.ಗಿಂತ ಹೆಚ್ಚು ದಂಡ ವಿಧಿಸಿದ್ದಾರೆ. ಸೆಕ್ಷನ್ 5ರಲ್ಲಿ 6 ನೋಟಿಸ್ ಹಾಗೂ ಸೆಕ್ಷನ್ 7ರಲ್ಲಿ 3 ನೋಟಿಸ್ ನೀಡಿದ್ದಾರೆ.
6ರಿಂದ 18 ವರ್ಷದೊಳಗೆ ಬರುವ ಮಕ್ಕಳನ್ನು ಸರಕು ಸಾಗಾಣೆ ವಾಹನಗಳಲ್ಲಿ ಹೊಲಗದ್ದೆ, ಕೂಲಿ, ಕೃಷಿ ಆಧಾರಿತ ಹಾಗೂ ಅಂಗಡಿ, ಹೋಟೆಲ್, ರೆಸ್ಟೋರೆಂಟ್, ಗ್ಯಾರೇಜ್, ಬಾರ್ ಅಂಗಡಿ ಹಾಗೂ ಇನ್ನಿತರ ಉದ್ದಿಮೆಗಳಲ್ಲಿ ದುಡಿಸಿಕೊಳ್ಳುವುದು ಕಂಡುಬಂದಲ್ಲಿ ದಂಡದ ಜೊತೆಗೆ ಜೈಲು ಶಿಕ್ಷೆ ವಿಧಿಸಬಹುದಾಗಿದೆ ಎಂದು ದಾಳಿಯ ಸಂದರ್ಭದಲ್ಲಿ ಅಧಿಕಾರಿಗಳು ಎಚ್ಚರಿಕೆ ನೀಡಿದರು.ಜಿಲ್ಲಾ ಬಾಲಕಾರ್ಮಿಕ ಇಲಾಖೆಯ ಯೋಜನಾ ನಿರ್ದೇಶಕರಾದ ರಘುವೀರಸಿಂಗ್ ಠಾಕೂರ್ ಅವರು ಈ ಸಂದರ್ಭದಲ್ಲಿ ಮಾತನಾಡಿ, ಜಿಲ್ಲಾಧಿಕಾರಿಗಳ ಆದೇಶ ಮೇರೆಗೆ ದಾಳಿ ನಡೆಸಲಾಗಿದೆ. ನಿಷೇಧಿತ ಪ್ಲಾಸ್ಟಿಕ್ ವಸ್ತುಗಳನ್ನು ಬಳಸುವುದು ಕಾನೂನು ಪ್ರಕಾರ ಅಪರಾಧವಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಕಸ ಹಾಕುವುದು ನಿಷೇಧಿಸಲಾಗಿದ್ದು, ಉಲ್ಲಂಘಿಸಿದಲ್ಲಿ 25000 ರೂ.ಗಳವರೆಗೆ ದಂಡ ವಿಧಿಸುವುದರ ಜೊತೆಗೆ ಶಿಕ್ಷೆಗೆ ಒಳಪಡಬೇಕಾಗುತ್ತದೆ ಎಂದು ಹೇಳಿದರು.
ಬಾಲಕಾರ್ಮಿಕ ಪದ್ಧತಿ 1986ರ ಕಾಯ್ದೆಯಡಿಯಲ್ಲಿ 6 ರಿಂದ 18 ವರ್ಷದೊಳಗಿನ ಮಕ್ಕಳನ್ನು ಯಾವುದೇ ಅಪಾಯಕಾರಿ ಉದ್ದಿಮೆಗಳಲ್ಲಿ ದುಡಿಸಿಕೊಳ್ಳುವುದು ಶಿಕ್ಷಾರ್ಹ ಅಪರಾಧ. ಅನಿರೀಕ್ಷಿತ ತಪಾಸಣೆ ವೇಳೆ ಪತ್ತೆಯಾದ ಮಕ್ಕಳ ದಾಖಲೆಗಳನ್ನು ವೀಕ್ಷಿಸಿ, ಮಕ್ಕಳನ್ನು ಕಡ್ಡಾಯವಾಗಿ ಶಾಲೆಗೆ ಸೇರಿಸಲು ಸೂಚಿಸಲಾಗಿದೆ. ಒಂದು ವೇಳೆ ಕಾನೂನು ಉಲ್ಲಂಘನೆ ಮಾಡಿದಲ್ಲಿ ಮಾಲೀಕರಿಗೆ 50,000 ರೂ. ಗಳ ದಂಡ ವಿಧಿಸಲಾಗುತ್ತದೆ. ಜೊತೆಗೆ ಜೈಲು ವಾಸ ಕೂಡ ವಿಧಿಸಬಹುದು ತಿಳಿಸಿದರು.
ಕಾರ್ಮಿಕ ನಿರೀಕ್ಷಕರಾದ ಶಿವಶಂಕರ ಬಿ.ತಳವಾರ ಅವರು ಮಾತನಾಡಿ, ಸಾಕಷ್ಟು ಬಾರಿ ಜಾಥಾ ಮೂಲಕ, ಆಟೊ ಪ್ರಚಾರ, ಕರಪತ್ರಗಳ ವಿತರಣೆ, ಕಾನೂನು ಅರಿವು- ನೆರವು ಕಾರ್ಯಕ್ರಮಗಳು ಮತ್ತು ಹಲವಾರು ಬಾರಿ ಅನಿರೀಕ್ಷಿತ ತಪಾಸಣೆ, ದಾಳಿ ಮಾಡಿ ಸಾರ್ವಜನಿಕರಿಗೆ ಹಾಗೂ ಸಬಂಧಿಸಿದ ಅಂಗಡಿ ಮಾಲೀಕರುಗಳಿಗೆ ಮಾಹಿತಿ ನೀಡಿದರೂ ಸಹ ಹಲವಾರು ಅಂಗಡಿ ಮಾಲೀಕರು ನಿಯಮಗಳನ್ನು ಉಲ್ಲಂಘಿಸಿ, ನಿಷೇಧಿತ ಪ್ಲಾಸ್ಟಿಕ್ ವಸ್ತುಗಳನ್ನು ಬಳಸುತ್ತಿರುವುದು, ಬಹಿರಂಗವಾಗಿ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವುದು ಹಾಗೂ ಬಾಲಕಾರ್ಮಿಕರನ್ನು ದುಡಿಸಿಕೊಳ್ಳುವುದು ಕಂಡುಬರುತ್ತಿದೆ. ಈ ಹಿನ್ನೆಲೆಯಲ್ಲಿ ದಾಳಿ ನಡೆಸಿ, ಪ್ರಕರಣಗಳನ್ನು ದಾಖಲಿಸಲಾಗುತ್ತಿದೆ ಎಂದರು.
ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಸಲಹೆಗಾರರಾದ ಮಹಾಲಕ್ಷ್ಮೀ ಸಜ್ಜನ್ ಅವರು ಮಾತನಾಡಿ, ಕೋಟ್ಪಾ-2003 ಕಾಯ್ದೆಯಡಿಯಲ್ಲಿ ಸೆಕ್ಷನ್ 4, 5, 6, 6ಎ, 6ಬಿ ಮತ್ತು 7ರ ಪ್ರಕಾರ ಸಂಬಂಧಿಸಿದ ಕಾಯ್ದೆಗಳನುಸಾರ ಹೋಟೆಲ್, ರೆಸ್ಟೊರೆಂಟ್, ಬಾರ್, ಧಾಬಾ, ಅಂಗಡಿಗಳಲ್ಲಿ ಮತ್ತು ಶಾಲಾ-ಕಾಲೇಜು ಪ್ರದೇಶದ 100 ಮೀಟರ್ ಅಂತರದಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕಿಗೆ ಸಂಬಂಧಿಸಿದ ಉತ್ಪನ್ನಗಳನ್ನು ಬಹಿರಂಗವಾಗಿ ಮಕ್ಕಳಿಂದ ಮಾರುವುದಕ್ಕೆ ಪ್ರಚೋದನೆ ನೀಡುವುದು, ದುಡಿಸಿಕೊಳ್ಳುವುದು ಮತ್ತು ಸೇದುವುದು ಕಾನೂನಿನ ಪ್ರಕಾರ ನಿಷೇಧಿಸಲಾಗಿರುತ್ತದೆ. ನಿಯಮಗಳನ್ನು ಉಲ್ಲಂಘಿಸಿದಲ್ಲಿ ದಂಡ ವಿಧಿಸುವುದರ ಜೊತೆಗೆ ಶಿಕ್ಷೆಗೆ ಒಳಪಡಬೇಕಾಗುತ್ತದೆ ಎಂದು ತಿಳಿವಳಿಕೆ ನೀಡಿದರು.
ಕಾರ್ಮಿಕ ಇಲಾಖೆಯ ಚಂದ್ರಶೇಖರ ಬಂದಳ್ಳಿ, ಅಮೃತರಾವ್ ಕೊತ್ವಾಲ್ ಅವರು ದಾಳಿಯಲ್ಲಿ ಪಾಲ್ಗೊಂಡಿದ್ದರು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ