ಭಾನುವಾರ, ಫೆಬ್ರವರಿ 23, 2020

ಜಿಲ್ಲಾಡಳಿತ ವತಿಯಿಂದ ದಲಿತ ವಚನಕಾರರ ಜಯಂತ್ಯೋತ್ಸವ
ಶರಣರು ಜನ್ಮ ತಾಳಿದ ನಾಡಲ್ಲಿ ಹುಟ್ಟಿದ ನಾವು ಪುಣ್ಯವಂತರು
-ಅಪರ ಜಿಲ್ಲಾಧಿಕಾರಿ ಪ್ರಕಾಶ್ ಜಿ.ರಜಪೂತ
ಯಾದಗಿರಿ, ಫೆಬ್ರುವರಿ 21 (ಕರ್ನಾಟಕ ವಾರ್ತೆ): ಅನೇಕ ಶರಣರು ಜನ್ಮವೆತ್ತಿದ ಈ ಕರುನಾಡಿನಲ್ಲಿ ಹುಟ್ಟಿದ ನಾವು ಪುಣ್ಯವಂತರು. ದಲಿತ ವಚನಕಾರರಾದ ಢೋಹರ ಕಕ್ಕಯ್ಯ, ಸಮಗಾರ ಹರಳಯ್ಯ, ಮಾದಾರ ಚನ್ನಯ್ಯ, ಉರಿಲಿಂಗಪೆದ್ದಿ, ಮಾದಾರ ಧೂಳಯ್ಯ ಅವರ ವಚನಗಳ ಸಾರದಂತೆ ನಡೆದಾಗ ನಮ್ಮ ಜೀವನಕ್ಕೆ ಅರ್ಥ ಬರುತ್ತದೆ ಎಂದು ಅಪರ ಜಿಲ್ಲಾಧಿಕಾರಿಗಳಾದ ಪ್ರಕಾಶ್ ಜಿ.ರಜಪೂತ ಅವರು ಹೇಳಿದರು. ಜಿಲ್ಲಾಡಳಿತ ಭವನದ ಆಡಿಟೋರಿಯಂನಲ್ಲಿ ಶುಕ್ರವಾರ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ನಗರಸಭೆ, ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಶ್ರೀ ದಲಿತ ವಚನಕಾರರ ಜಯಂತ್ಯೋತ್ಸವ ಸಮಿತಿ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಶ್ರೀ ದಲಿತ ವಚನಕಾರರ ಜಯಂತ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ, ಅವರು ಮಾತನಾಡಿದರು. 12ನೇ ಶತಮಾನದಲ್ಲಿ ಎಲ್ಲಾ ಶರಣರು ಸರಳವಾದ ವಚನಗಳ ಮೂಲಕ ಸಮಾಜವನ್ನು ತಿದ್ದುವ ಕಾರ್ಯ ಮಾಡಿದರು. ಸಮಾಜದಲ್ಲಿನ ಅನಿಷ್ಠ ಪದ್ಧತಿಗಳನ್ನು ತೊಲಗಿಸಿ ಉತ್ತಮ ಸಮಾಜ ನಿರ್ಮಾಣಕ್ಕಾಗಿ ಶ್ರಮಿಸಿದರು. ಎಲ್ಲರೂ ಸಮಾನರೆಂದು ಕೇವಲ ಮಾತಿನಲ್ಲಿ ಹೇಳದೆ ಆಚರಣೆಗೆ ತರುವ ಮೂಲಕ ತೋರಿಸಿಕೊಟ್ಟರು. ಅವರ ಸಂದೇಶಗಳು ಇಂದಿಗೂ ಪ್ರಸ್ತುತವಾಗಿದ್ದು, ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಡಾ.ಬಿ.ಆರ್.ಅಂಬೇಡ್ಕರ್ ಅವರು ಸಂವಿಧಾನ ರಚನೆ ಸಂದರ್ಭದಲ್ಲಿ ಶರಣರ ಸಮಾನತೆಯ ತತ್ವ- ಸಿದ್ಧಾಂತಗಳನ್ನು ಅಳವಡಿಸಿದ್ದಾರೆ ಎಂಬುದನ್ನು ನಾವು ಅರಿತುಕೊಳ್ಳಬೇಕು. ಸಮಾನತೆಯ ಸಂವಿಧಾನ ರಚನೆಗೆ ಇಂತಹ ಶರಣರ ವಚನಗಳು ಕೂಡ ಪ್ರೇರಣೆಯಾಗಿವೆ ಎಂದು ಅವರು ಹೇಳಿದರು. ಸುಬಮ ಪದವಿ ಮಹಾವಿದ್ಯಾಲಯದ ಉಪನ್ಯಾಸಕರಾದ ಗುರುಪ್ರಸಾದ ವೈದ್ಯ ಅವರು ಉಪನ್ಯಾಸ ನೀಡಿ, ಬಸವಣ್ಣನವರು ಇಷ್ಟಲಿಂಗ ಅನುಗ್ರಹಿಸಿದ್ದರಿಂದ ಕೆಳವರ್ಗದಲ್ಲಿ ಹುಟ್ಟಿದ ಕರ್ಮ ದೂರಾಯಿತು ಎಂದು ಹೇಳಿಕೊಳ್ಳುವ ಢೋಹರ ಕಕ್ಕಯ್ಯನವರ “ಅಭಿನವ ಮಲ್ಲಿಕಾರ್ಜುನ” ಎಂಬ ಅಂಕಿತನಾಮದ 6 ವಚನಗಳು ಲಭ್ಯವಾಗಿವೆ. ಅಧ್ಯಾತ್ಮ ಮತ್ತು ವೈಜ್ಞಾನಿಕ ವಿಚಾರವನ್ನು ಮೇಳೈಸುವ ಅಂಶಗಳು ಇವರ ವಚನಗಳಲ್ಲಿ ಕಂಡುಬರುತ್ತವೆ ಎಂದು ತಿಳಿಸಿದರು. ಸಮಾಜದಲ್ಲಿ ಸಮಾನತೆಯನ್ನು ಸಾಧಿಸ ಹೊರಟ ಬಸವಣ್ಣನವರಿಗೆ ಸಮಗಾರ ಹರಳಯ್ಯನವರು ಬೆಂಬಲವಾಗಿ ನಿಂತವರು. ಅಂತರ್ಜಾತಿ ವಿವಾಹದಿಂದ ಜಾತೀಯತೆ ತೊಡೆದು ಹಾಕಲು ಸಾಧ್ಯ ಎಂಬುದಾಗಿ ಸಾರಿದರು. ಇನ್ನು ಮಾದಾರ ಚನ್ನಯ್ಯನವರ ವಚನಗಳಲ್ಲಿ ದಲಿತ ಸಂವೇದನೆ, ಸಾಮಾಜಿಕ ಕಳಕಳಿಯನ್ನು ಕಾಣಬಹುದು ಎಂದರು.
ಉರಿಲಿಂಗ ಪೆದ್ದಿಯವರು ಉರಿಲಿಂಗ ದೇವನ ಶಿಷ್ಯ. ಉರಿಲಿಂಗ ದೇವನ ತರುವಾಯ ಇವರು ಗುರುಪೀಠವನ್ನು ಅಲಂಕರಿಸುತ್ತಾರೆ. ಜಾತಿಯಿಂದ ಅಸ್ಪøಶ್ಯನಾದ್ದರಿಂದ ಇವರ ಪೀಠಾರೋಹಣದ ಘಟನೆ ವಿಶೇಷವಾಗಿದೆ. ಪ್ರಸ್ತುತ ಹರಿಜನ ಶಿವಭಕ್ತರ ಅನೇಕ ಮಠಗಳು ಕರ್ನಾಟಕದಲ್ಲಿದ್ದು, ಅವರ 366 ವಚನಗಳು ದೊರೆತಿವೆ. ಮಾದಾರ ಧೂಳಯ್ಯನವರು ಕಲ್ಯಾಣದಲ್ಲಿ ಚರ್ಮವನ್ನು ಹದ ಮಾಡಿ ಪಾದರಕ್ಷೆ ಹೊಲೆಯುವ ಕಾಯಕ ಮಾಡುತ್ತಿದ್ದರು. “ಕಾಮಧೂಮ ಧೂಳೇಶ್ವರ” ಅಂಕಿತನಾಮದಿಂದ 106 ವಚನಗಳನ್ನು ರಚಿಸಿದ್ದಾರೆ. ಇವರ ಬಹುಪಾಲು ವಚನಗಳು ಕಾಯಕದ ಮಹತ್ವ ಹಾಗೂ ಭಕ್ತಿಯ ಸ್ವರೂಪಗಳನ್ನು ಸಾರುತ್ತವೆ ಎಂದು ಅವರು ವಿವರಿಸಿದರು. ಸಮಾಜದ ಮುಖಂಡರಾದ ಖಂಡಪ್ಪ ದಾಸನ್ ಅವರು ಮಾತನಾಡಿ, 12ನೇ ಶತಮಾನದಲ್ಲಿ ಮಹಾತ್ಮ ಬಸವೇಶ್ವರರಿಂದ ದಲಿತ ವಚನಕಾರರಿಗೆ ಶಿಕ್ಷಣ ಪ್ರಾಪ್ತವಾಯಿತು. ಇದರಿಂದ ಅಸಮಾನತೆಯ ವಿರುದ್ಧ ಧ್ವನಿ ಎತ್ತಲು ಸಾಧ್ಯವಾಯಿತು. ಅದೇ ರೀತಿ ಆಧುನಿಕ ಯುಗದಲ್ಲಿ ಸಂವಿಧಾನವನ್ನು ನೀಡುವ ಮೂಲಕ ಡಾ.ಬಿ.ಆರ್.ಅಂಬೇಡ್ಕರರು ಎಲ್ಲರಿಗೂ ಸಮಾನತೆಯನ್ನು ಕಲ್ಪಿಸಿದ್ದಾರೆ. ಪ್ರತಿಯೊಬ್ಬರೂ ಸಂವಿಧಾನದ ಆಶಯದಂತೆ ನಡೆಯುತ್ತಾ ಮಕ್ಕಳಿಗೆ ಶಿಕ್ಷಣ ಕೊಡಿಸಬೇಕು. ಶರಣರ ಪುಸ್ತಕ, ವಚನಗಳನ್ನು ಓದಲು ತಿಳಿಸಬೇಕು ಎಂದು ಹೇಳಿದರು. ನಗರಸಭೆ ಪೌರಾಯುಕ್ತರಾದ ರಮೇಶ ಸುಣಗಾರ, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕರಾದ ಎಸ್.ಎಸ್.ಚನ್ನಬಸಪ್ಪ, ಸಮಾಜದ ಮುಖಂಡರಾದ ಮರೆಪ್ಪ ಚಟ್ಟರಕರ್, ವಕೀಲರಾದ ಶಾಂತಪ್ಪ ಖಾನಳ್ಳಿ ಅವರು ಉಪಸ್ಥಿತರಿದ್ದರು. ಲಿಂಗೇರಿ ಸ್ಟೇಷನ್ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಸಂಗೀತ ಶಿಕ್ಷಕರಾದ ಚಂದ್ರಶೇಖರ ಗೋಗಿ ಹಾಗೂ ತಂಡದವರು  ನಾಡಗೀತೆ  ಹಾಡಿದರು. ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರಾದ ದತ್ತಪ್ಪ ಸಾಗನೂರ ಅವರು ಸ್ವಾಗತಿಸಿದರು. ಸೈದಾಪುರ ಡಿ.ಇಡಿ ಕಾಲೇಜಿನ ಪ್ರಾಂಶುಪಾಲರಾದ ಕರಬಸಯ್ಯ ದಂಡಗಿಮಠ ಅವರು ನಿರೂಪಿಸಿದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

                                                             ವಾ.ವಿ.ಸ.45 ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಶರಣಬಸಪ್ಪ ದರ್ಶನಾಪೂರ ಅವರ ಜಿಲ್ಲಾ ಪ್ರವಾಸ ಯಾದಗ...