ನಾಳೆ ರಾಷ್ಟ್ರೀಯ ಗ್ರಾಹಕರ ದಿನಾಚರಣೆ
ಯಾದಗಿರಿ, ಫೆಬ್ರುವರಿ 15 (ಕರ್ನಾಟಕ ವಾರ್ತೆ): ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಆಹಾರ ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ, ಕಾನೂನು ಮಾಪನ ಶಾಸ್ತ್ರ ಇಲಾಖೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ ಮತ್ತು ವಿವಿಧ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ರಾಷ್ಟ್ರೀಯ ಗ್ರಾಹಕರ ದಿನಾಚರಣೆಯನ್ನು ಫೆಬ್ರುವರಿ 17ರಂದು ಮಧ್ಯಾಹ್ನ 3 ಗಂಟೆಗೆ ಜಿಲ್ಲಾಡಳಿತ ಭವನದ ಆಡಿಟೋರಿಯಂನಲ್ಲಿ ಹಮ್ಮಿಕೊಳ್ಳಲಾಗಿದೆ.
ಜಿಲ್ಲಾಧಿಕಾರಿಗಳಾದ ಎಂ.ಕೂರ್ಮಾ ರಾವ್ ಅವರು ಕಾರ್ಯಕ್ರಮ ಉದ್ಘಾಟಿಸುವರು. ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಪ್ರಕಾಶ ಅರ್ಜುನ ಬನಸೊಡೆ ಅವರು ಕರಪತ್ರ ಬಿಡುಗಡೆ ಮಾಡುವರು. ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ ಅಧ್ಯಕ್ಷರಾದ ನೆಲ್ಹಾಳ್ ಶರಣಪ್ಪ ಅವರು ಅಧ್ಯಕ್ಷತೆ ವಹಿಸುವರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಿಲ್ಪಾ ಶರ್ಮಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ್ ಭಗವಾನ್ ಸೋನವಣೆ, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ ಸದಸ್ಯರಾದ ಅಶೋಕ ಕುಮಾರ, ನಂದಾ ಈಶ್ವರಚಂದ್ರ ಕೊಲುರ್ ಅವರು ಮುಖ್ಯ ಅತಿಥಿಗಳಾಗಿ ಆಗಮಿಸುವರು. ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ ಸಹಾಯಕ ರಿಜಿಸ್ಟ್ರಾರ್ ಮತ್ತು ಸಹಾಯಕ ಆಡಳಿತಾಧಿಕಾರಿ ಪಿ.ಎಸ್.ಅಮರದೀಪ್ ಅವರು ವಿಶೇಷ ಉಪನ್ಯಾಸ ನೀಡುವರು.
ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ
ಯಾದಗಿರಿ, ಫೆಬ್ರುವರಿ 15 (ಕರ್ನಾಟಕ ವಾರ್ತೆ): ಐಸಿಐಸಿಐ ಅಕಾಡೆಮಿ ಫಾರ್ ಸ್ಕಿಲ್ಸ್, ಐಸಿಐಸಿಐ ಫೌಂಡೇಶನ್ ಬೆಂಗಳೂರು ಸಂಸ್ಥೆ ವತಿಯಿಂದ ಬ್ಯಾಂಕಿಂಗ್ ಸಾಫ್ಟ್‍ವೇರ್‍ಗೆ ಸಂಬಂಧಿಸಿದಂತೆ ಆಫೀಸ್ ಅಡ್ಮಿನಿಸ್ಟ್ರೇಶನ್ ಮತ್ತು ರಿಟೈಲ್ ಸೇಲ್ಸ್ ಕೋರ್ಸ್‍ಗಳಿಗೆ ಬೆಂಗಳೂರು ಹಾಗೂ ಮೈಸೂರಿನಲ್ಲಿ 3 ತಿಂಗಳ ಉಚಿತ ತರಬೇತಿ ನೀಡಲು ಪರಿಶಿಷ್ಟ ಪಂಗಡದ ನಿರುದ್ಯೋಗಿ ಯುವಕ, ಯುವತಿಯರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ತರಬೇತಿ ವೇಳೆ ಎರಡು ಜೊತೆ ಸಮವಸ್ತ್ರ, ಒಂದು ಹೊತ್ತಿನ ಊಟವನ್ನು ಸಂಸ್ಥೆಯಿಂದ ನೀಡಲಾಗುತ್ತಿದ್ದು, ತರಬೇತಿಗೆ ಹಾಜರಾಗುವ ಅಭ್ಯರ್ಥಿಗಳಿಗೆ ಪ್ರತಿ ಮಾಹೆ ವಸತಿ ವೆಚ್ಚವಾಗಿ 5000 ರೂ.ಗಳನ್ನು ಅಭ್ಯರ್ಥಿಗಳ ಖಾತೆಗೆ ನೇರವಾಗಿ ಜಮಾ ಮಾಡಲಾಗುವುದು. 10ನೇ ತರಗತಿಯಿಂದ ಪದವಿ ವಿದ್ಯಾರ್ಹತೆ ಹೊಂದಿರುವ 18ರಿಂದ 30 ವಯೋಮಿತಿಯವರು ಅರ್ಜಿ ಸಲ್ಲಿಸಬಹುದು. ಸ್ಪೋಕನ್ ಇಂಗ್ಲಿಷ್, ಕಂಪ್ಯೂಟರ್, ಬೇಸಿಕ್ ಜಿಎಸ್‍ಟಿ, ಟ್ಯಾಲಿ ಮತ್ತು ಅಕೌಂಟ್ಸ್, ಬ್ಯಾಂಕಿಂಗ್, ಸಂವಹನ ಮತ್ತು ವ್ಯಕ್ತಿತ್ವ ವಿಕಸನ ಕೌಶಲ, ಜೀವನ ಕೌಶಲ, ಸಂದರ್ಶನ ಕೌಶಲ, ಗ್ರಾಹಕರ ಸೇವೆ, ರಿಟೇಲ್ ಸೇಲ್ಸ್ ಇತಿಕ್ವಿಟಿ ಮತ್ತು ಗ್ರೂಮಿಂಗ್ ಸ್ಟ್ಯಾಂಡಡ್ರ್ಸ್ ವಿಷಯಗಳಡಿ ತರಬೇತಿ ನೀಡಿ ಉದ್ಯೋಗಾವಕಾಶವನ್ನು ಸಹ ಒದಗಿಸಲು ಕ್ರಮವಹಿಸಲಾಗುವುದು.
ಅರ್ಹ ಅಭ್ಯರ್ಥಿಗಳು ಯಾದಗಿರಿ ಜಿಲ್ಲಾಡಳಿತ ಭವನದ ಎರಡನೇ ಮಹಡಿಯಲ್ಲಿರುವ ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ದಿ ನಿಗಮದ ಜಿಲ್ಲಾ ವ್ಯವಸ್ಥಾಪಕರ ಕಚೇರಿಯಿಂದ ಅರ್ಜಿ ಪಡೆದು ಫೆಬ್ರುವರಿ 20ರೊಳಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ದೂ:08473 253271, ಬೆಂಗಳೂರಿನ ದೊಮ್ಮನಹಳ್ಳಿಯ ಮಧು ಮೊ:9611075559 ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ