ಶುಕ್ರವಾರ, ಫೆಬ್ರವರಿ 7, 2020

ವಿವಿಧ ಅಂಗಡಿಗಳಲ್ಲಿ ಬಾಲಕಾರ್ಮಿಕ ಮಕ್ಕಳ ಅನಿರೀಕ್ಷಿತ ತಪಾಸಣೆ
ಮಕ್ಕಳ ರಕ್ಷಣೆಗಾಗಿ ಸಹಾಯವಾಣಿ-1098ಗೆ ಕರೆ ಮಾಡಿ
-ರಘುವೀರ ಸಿಂಗ್ ಠಾಕೂರ್
ಯಾದಗಿರಿ, ಫೆಬ್ರುವರಿ 07 (ಕರ್ನಾಟಕ ವಾರ್ತೆ): ಜಿಲ್ಲೆಯಲ್ಲಿ ಸಂಕಷ್ಟದಲ್ಲಿರುವ 6ರಿಂದ 18 ವರ್ಷದೊಳಗಿನ ಮಕ್ಕಳು ಕಂಡುಬಂದರೆ ಸಾರ್ವಜನಿಕರು ಉಚಿತ ಸಹಾಯವಾಣಿ- 1098 ಸಂಖ್ಯೆಗೆ ಕರೆ ಮಾಡಿ ಮಕ್ಕಳ ಉಜ್ವಲ ಭವಿಷ್ಯಕ್ಕೆ ನೆರವಾಗಬೇಕು ಎಂದು ಜಿಲ್ಲಾ ಬಾಲಕಾರ್ಮಿಕ ಇಲಾಖೆಯ ಯೋಜನಾ ನಿರ್ದೇಶಕರಾದ ರಘುವೀರ ಸಿಂಗ್ ಠಾಕೂರ್ ಅವರು ಮನವಿ ಮಾಡಿದರು.
ನಗರದ ರಾಜೀವಗಾಂಧಿ ನಗರ, ಶುಭಂ ಪೆಟ್ರೋಲ್ ಪಂಪ್ ಹತ್ತಿರ, ಜೈನ್ ಮಂದಿರ ಹತ್ತಿರ, ಹೊಸಳ್ಳಿ ಕ್ರಾಸ್, ಫಿಲ್ಟರ್ ಬೆಡ್ ಏರಿಯಾ ಹಾಗೂ ಸುತ್ತ ಮುತ್ತಲಿನ 25ಕ್ಕೂ ಹೆಚ್ಚು ಸ್ಟಾಲ್, ಮಳಿಗೆ, ಅಂಗಡಿಗಳ ಮೇಲೆ ಗುರುವಾರ ದಾಳಿ ನಡೆಸಿದ ಅಧಿಕಾರಿಗಳು ಬಾಲಕಾರ್ಮಿಕ ಮಕ್ಕಳ ತಪಾಸಣೆ ಜೊತೆಗೆ ಪ್ಲಾಸ್ಟಿಕ್ ಮತ್ತು ತಂಬಾಕು ಉತ್ಪನ್ನಗಳನ್ನು ವಶಪಡಿಸಿಕೊಂಡು, 5000 ರೂ.ಗಿಂತ ಹೆಚ್ಚು ದಂಡ ವಿಧಿಸಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ರಘುವೀರ ಸಿಂಗ್ ಠಾಕೂರ್ ಅವರು, 14ರಿಂದ 18 ವರ್ಷದೊಳಗಿನ ಕಿಶೋರಾವಸ್ಥೆಯ ಕಾರ್ಮಿಕರುಗಳನ್ನು ಅಪಾಯಕಾರಿ ಉದ್ದಿಮೆಗಳಲ್ಲಿ ಕೆಲಸಕ್ಕೆ ನೇಮಿಸಿಕೊಳ್ಳುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿರುತ್ತದೆ. ಬಾಲ್ಯಾವಸ್ಥೆಯ ಮತ್ತು ಕಿಶೋರ ಮಕ್ಕಳನ್ನು ಕೆಲಸಕ್ಕೆ ಸೇರಿಸಲು ಹಾಗೂ ನೆರವು ನೀಡಿದ ಪಾಲಕರ ಮೇಲೆಯೂ ಸಹ ಮೊಕದ್ದಮೆ ದಾಖಲಿಸಲಾಗುವುದು. ಬಾಲಕಾರ್ಮಿಕ ಪದ್ಧತಿ, ಮಕ್ಕಳ ಸಾಗಾಣಿಕೆ, ಬಾಲ್ಯ ವಿವಾಹ ಹಾಗೂ ಮಕ್ಕಳ ಮಾರಾಟ ಮಾಡುವುದು ಕಾನೂನು ಬಾಹಿರವಾಗಿದೆ ಎಂದು ಅವರು ತಿಳಿಸಿದರು.
ಕಳೆದು ಹೋದ ಮಕ್ಕಳು, ದೌರ್ಜನ್ಯಕ್ಕೆ ಒಳಗಾದ ಮಕ್ಕಳು, ಓಡಿ ಹೋದ ಮಕ್ಕಳು, ವೈದ್ಯಕೀಯ ನೆರವಿಗಾಗಿ ಅಗತ್ಯವಿರುವ ಮಕ್ಕಳು, ಪೋಷಣೆ ಮತ್ತು ರಕ್ಷಣೆಯ ಅಗತ್ಯವಿರುವ ಮಕ್ಕಳು, ಚಿಂದಿ ಆಯುವ ಮಕ್ಕಳು, ಭಿಕ್ಷೆ ಬೇಡುವ ಮಕ್ಕಳು ಹಾಗೂ ಸಂಕಷ್ಟದಲ್ಲಿರುವ ಮಕ್ಕಳ ಮಾರಾಟ ಮಾಡುವುದು ಕಾನೂನು ಬಾಹಿರವಾಗಿದ್ದು, ಉಲ್ಲಂಘಿಸಿದಲ್ಲಿ ಸಂಬಂಧಿಸಿದವರ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.
ಬಾಲಕಾರ್ಮಿಕ ಪದ್ಧತಿ 1986ರ ಕಾಯ್ದೆಯಡಿಯಲ್ಲಿ 6 ರಿಂದ 18 ವರ್ಷದೊಳಗಿನ ಮಕ್ಕಳನ್ನು ಯಾವುದೇ ಅಪಾಯಕಾರಿ ಉದ್ದಿಮೆಗಳಲ್ಲಿ ದುಡಿಸಿಕೊಳ್ಳುವುದು ಶಿಕ್ಷಾರ್ಹ ಅಪರಾಧ. ಅನಿರೀಕ್ಷಿತ ತಪಾಸಣೆ ವೇಳೆ ಪತ್ತೆಯಾದ ಮಕ್ಕಳ ದಾಖಲೆಗಳನ್ನು ವೀಕ್ಷಿಸಿ, ಮಕ್ಕಳನ್ನು ಕಡ್ಡಾಯವಾಗಿ ಶಾಲೆಗೆ ಸೇರಿಸಲು ಸೂಚಿಸಲಾಗಿದೆ. ಒಂದು ವೇಳೆ ಕಾನೂನು ಉಲ್ಲಂಘನೆ ಮಾಡಿದಲ್ಲಿ ಮಾಲೀಕರಿಗೆ 50,000 ರೂ. ಗಳ ದಂಡ ವಿಧಿಸಲಾಗುತ್ತದೆ. ಜೊತೆಗೆ ಜೈಲು ವಾಸ ಕೂಡ ವಿಧಿಸಬಹುದು. ಇನ್ನು ನಿಷೇಧಿತ ಪ್ಲಾಸ್ಟಿಕ್ ವಸ್ತುಗಳನ್ನು ಬಳಸುವುದು ಕಾನೂನು ಪ್ರಕಾರ ಅಪರಾಧವಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಕಸ ಹಾಕುವುದು ನಿಷೇಧಿಸಲಾಗಿದ್ದು, ಉಲ್ಲಂಘಿಸಿದಲ್ಲಿ 25,000 ರೂ.ಗಳವರೆಗೆ ದಂಡ ವಿಧಿಸುವುದರ ಜೊತೆಗೆ ಶಿಕ್ಷೆಗೆ ಒಳಪಡಬೇಕಾಗುತ್ತದೆ ಎಂದು ಹೇಳಿದರು.
ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಸಲಹೆಗಾರರಾದ ಮಹಾಲಕ್ಷ್ಮೀ ಸಜ್ಜನ್ ಅವರು ಮಾತನಾಡಿ, ಕೋಟ್ಪಾ-2003 ಕಾಯ್ದೆಯಡಿಯಲ್ಲಿ ಸೆಕ್ಷನ್ 4, 5, 6, 6ಎ, 6ಬಿ ಮತ್ತು 7ರ ಪ್ರಕಾರ ಸಂಬಂಧಿಸಿದ ಕಾಯ್ದೆಗಳನುಸಾರ ಹೋಟೆಲ್, ರೆಸ್ಟೊರೆಂಟ್, ಬಾರ್, ಧಾಬಾ, ಅಂಗಡಿಗಳಲ್ಲಿ ಮತ್ತು ಶಾಲಾ-ಕಾಲೇಜು ಪ್ರದೇಶದ 100 ಮೀಟರ್ ಅಂತರದಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕಿಗೆ ಸಂಬಂಧಿಸಿದ ಉತ್ಪನ್ನಗಳನ್ನು ಬಹಿರಂಗವಾಗಿ ಮಕ್ಕಳಿಂದ ಮಾರುವುದಕ್ಕೆ ಪ್ರಚೋದನೆ ನೀಡುವುದು, ದುಡಿಸಿಕೊಳ್ಳುವುದು ಮತ್ತು ಸೇದುವುದು ಕಾನೂನಿನ ಪ್ರಕಾರ ನಿಷೇಧಿಸಲಾಗಿರುತ್ತದೆ. ನಿಯಮಗಳನ್ನು ಉಲ್ಲಂಘಿಸಿದಲ್ಲಿ ದಂಡ ವಿಧಿಸುವುದರ ಜೊತೆಗೆ ಶಿಕ್ಷೆಗೆ ಒಳಪಡಬೇಕಾಗುತ್ತದೆ ಎಂದು ತಿಳಿವಳಿಕೆ ನೀಡಿದರು.ತಂಬಾಕು ಸೇವನೆಯಿಂದ ಪ್ರತಿದಿನ 2,500 ಭಾರತೀಯರು ಮರಣ ಹೊಂದುತ್ತಿದ್ದಾರೆ. ತಂಬಾಕು ಪದಾರ್ಥಗಳು 3-4 ಸಾವಿರದವರೆಗೆ ಅಪಾಯಕಾರಿ ರಾಸಾಯನಿಕಗಳನ್ನು ಹೊಂದಿರುತ್ತದೆ. ತಂಬಾಕು ಸೇವೆನೆಯಿಂದ ಕ್ಯಾನ್ಸರ್, ಹೃದಯ ಸಂಬಂಧಿ ಕಾಯಿಲೆಗಳು, ಶ್ವಾಸಕೋಶದ ಕಾಯಿಲೆ, ಲಕ್ವಾ ಮತ್ತು ಇತರೆ ಕಾಯಿಲೆಗಳು ಬರಬಹುದಾಗಿದೆ. ತಂಬಾಕು ಸೇವನೆ ತ್ಯಜಿಸಿ ಆರೋಗ್ಯಯುತ ಜೀವನ ನಡೆಸಲು ತಿಳಿಸಿದರು.ಕಾರ್ಮಿಕ ಇಲಾಖೆಯ ಚಂದ್ರಶೇಖರ ಬಂದಳ್ಳಿ, ಅಮೃತರಾವ್ ಕೊತ್ವಾಲ್ ಅವರು ದಾಳಿಯಲ್ಲಿ ಪಾಲ್ಗೊಂಡಿದ್ದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

                                                             ವಾ.ವಿ.ಸ.45 ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಶರಣಬಸಪ್ಪ ದರ್ಶನಾಪೂರ ಅವರ ಜಿಲ್ಲಾ ಪ್ರವಾಸ ಯಾದಗ...