ಮಂಗಳವಾರ, ಫೆಬ್ರವರಿ 18, 2020

ಅಜರ್‍ಬೈಜಾನ್, ಇರಾನ್, ಜಾರ್ಜಿಯಾ ಸೇರಿ ವಿಶ್ವದ ಹೆಸರಾಂತ ಕುಸ್ತಿಪಟುಗಳು ಭಾಗಿ
ಫೆ.22ರಿಂದ 25ರವರೆಗೆ ಧಾರವಾಡದಲ್ಲಿ ಕರ್ನಾಟಕ ಕುಸ್ತಿ ಹಬ್ಬ

ಯಾದಗಿರಿ, ಫೆಬ್ರುವರಿ 18 (ಕರ್ನಾಟಕ ವಾರ್ತೆ): ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ಕರ್ನಾಟಕ ರಾಜ್ಯ ಭಾರತೀಯ ಶೈಲಿಯ ಕುಸ್ತಿ ಸಂಘದ ಸಹಯೋಗದಲ್ಲಿ ಫೆಬ್ರುವರಿ
 22ರಿಂದ 25ರವರೆಗೆ 4 ದಿನಗಳ ಕಾಲ ಧಾರವಾಡದ ಕರ್ನಾಟಕ ಕಾಲೇಜು ಮೈದಾನದಲ್ಲಿ ಕರ್ನಾಟಕ ಕುಸ್ತಿ ಹಬ್ಬ ಆಯೋಜಿಸಿದೆ.
ದೇಶದ ಹೆಸರಾಂತ ಸುಮಾರು 1200ಕ್ಕೂ ಹೆಚ್ಚು ಕುಸ್ತಿಪಟುಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ. ವಿವಿಧ 3 ಅಖಾಡಗಳಲ್ಲಿ 30 ಪ್ರತ್ಯೇಕ ತೂಕಗಳ ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ. 80 ಲಕ್ಷ ರೂ. ಮೌಲ್ಯದ ನಗದು ಬಹುಮಾನ, ಪಾರಿತೋಷಕಗಳನ್ನು ನೀಡಲಾಗುವುದು. ಅಜರ್‍ಬೈಜಾನ್, ಜಾರ್ಜಿಯಾ, ಇರಾನ್ ದೇಶಗಳ ಕುಸ್ತಿಪಟುಗಳ ಜೊತೆಗೆ ಭಾರತದ ಪದ್ಮಶ್ರೀ, ರಾಜೀವ ಗಾಂಧಿ ಖೇಲ್ ರತ್ನ ಪ್ರಶಸ್ತಿ, ಒಲಂಪಿಕ್ ಪಂದ್ಯ ವಿಜೇತ್, ಯೋಗೇಶ್ವರ ದತ್, ಪದ್ಮಶ್ರೀ, ಅರ್ಜುನ್ ಪ್ರಶಸ್ತಿ ವಿಜೇತರು ಹಾಗೂ ನಿವೃತ್ತ ಐಜಿಪಿ ಕರ್ತಾರ ಸಿಂಗ್, ಪದ್ಮಶ್ರೀ, ರಾಜೀವ ಗಾಂಧಿ ಖೇಲ್ ರತ್ನ ಪ್ರಶಸ್ತಿ ಒಲಂಪಿಕ್ ಪದಕ ವಿಜೇತರಾದ ಸಾಕ್ಷಿ ಮಲಿಕ್, ಅಂತರಾಷ್ಟ್ರೀಯ ಕುಸ್ತಿಪಟು ಮಹ್ಮದ್ ಮುರಾಡಿ, ಭಾರತ ಕೇಸರಿ ಉಮೇಶ ಚೌಧರಿ, ಅಂತಾರಾಷ್ಟ್ರೀಯ ಮಹಿಳಾ ಕುಸ್ತಿಪಟುಗಳಾದ ಅಂಶು ಮಲ್ಲಿಕ್, ಜೈಲಾ ನಾಗೀಜಡೆ, ನೈನಾ, ಸಭೀರಾ ಅಲಿಯೆವಾ ಅಲಹವರ್ಡಿ ಮೊದಲಾದ ಹೆಸರಾಂತ ಕುಸ್ತಿ ಪಟುಗಳು ಈ ಕ್ರೀಡೆಯಲ್ಲಿ ಭಾಗವಹಿಸಲಿದ್ದಾರೆ.
ವಿಜಯನಗರ ಸಾಮ್ರಾಜ್ಯದ ಅರಸರು ನವರಾತ್ರಿ ಸಂದರ್ಭದಲ್ಲಿ ಕುಸ್ತಿ ಕ್ರೀಡೆಯನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸುತ್ತಿದ್ದರು. ಮುಂದೆ ಮೈಸೂರು ಒಡೆಯರು ದಸರಾ ಉತ್ಸವಗಳಲ್ಲಿ ಇದನ್ನು ಸೇರಿಸುವ ಮೂಲಕ ದೊಡ್ಡ ಕ್ರೀಡೆಯನ್ನಾಗಿ ಮಾಡಿದರು. ಈ ಪರಂಪರೆಯನ್ನು ಕರ್ನಾಟಕದ ಎಲ್ಲಾ ರಾಜ ಮನೆತನದವರು ಮುಂದುವರೆಸಿಕೊಂಡು ಬಂದಿದ್ದು ಮೈಸೂರು ಒಡೆಯರ ಕಾಲದಲ್ಲಿ ಕುಸ್ತಿಗೆ ರಾಷ್ಟ್ರೀಯ ಮಟ್ಟದಲ್ಲಿ ಪ್ರಖ್ಯಾತಿ ದೊರೆಯಿತು. ಕುಸ್ತಿ ಒಲಂಪಿಕ್ ಕ್ರೀಡೆಯಾಗಿದ್ದು, ಯುವ ಪ್ರತಿಭೆಗಳನ್ನು ಉತ್ತೇಜಿಸಿ ಪ್ರೋತ್ಸಾಹಿಸುವ ದೃಷ್ಟಿಯಿಂದ ಕರ್ನಾಟಕ ಸರ್ಕಾರವು ಪ್ರತಿ ವರ್ಷ ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ಈ ಕುಸ್ತಿ ಹಬ್ಬವನ್ನು ಆಚರಿಸುತ್ತಿದೆ. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು 2018-19ನೇ ಸಾಲಿನಿಂದ “ಕರ್ನಾಟಕ ಕುಸ್ತಿ ಹಬ್ಬ”ವನ್ನು ರಾಜ್ಯ ಮಟ್ಟದಲ್ಲಿ ಆಯೋಜಿಸಿಕೊಂಡು ಬರುತ್ತಿದೆ. 2019-20ನೇ ಸಾಲಿನ ಈ ವರ್ಷದ ಎರಡನೇ ಕರ್ನಾಟಕ ಕುಸ್ತಿ ಹಬ್ಬವು ಸಾಂಸ್ಕøತಿಕ ನಗರಿ ಧಾರವಾಡದಲ್ಲಿ ಜರುಗುತ್ತಿದೆ.
ವಯೋಮಿತಿ: ಕರ್ನಾಟಕ ಕುಸ್ತಿ ಹಬ್ಬದಲ್ಲಿ 14, 17 ವರ್ಷದೊಳಗಿನ ಹಾಗೂ 18 ವರ್ಷ ಮೇಲ್ಪಟ್ಟವರ ವಿಭಾಗಗಳಲ್ಲಿ ವಿವಿಧ ತೂಕದ ವಿಭಾಗಗಳಲ್ಲಿ ಕುಸ್ತಿಗಳನ್ನು ಆಯೋಜಿಸಲಾಗಿದೆ. ಕರ್ನಾಟಕ ಕುಸ್ತಿ ಹಬ್ಬದ ಕುಸ್ತಿಯಲ್ಲಿ ಭಾಗವಹಿಸಲು ಮುಕ್ತ ಅವಕಾಶವಿದ್ದು ಆಸಕ್ತ ಕುಸ್ತಿಪಟುಗಳು ತಮ್ಮ ಜಿಲ್ಲೆಗಳಿಂದ ನೇರವಾಗಿ ಬಂದು ಭಾಗವಹಿಸಬಹುದು. ಕರ್ನಾಟಕದ ಎಲ್ಲ ಜಿಲ್ಲೆಗಳ ಕುಸ್ತಿಪಟುಗಳು ಈ ಕುಸ್ತಿ ಪಂದ್ಯಾವಳಿಯಲ್ಲಿ ಭಾಗವಹಿಸಬಹುದು. ಕರ್ನಾಟಕ ಕುಸ್ತಿ ಹಬ್ಬವನ್ನು ಭಾರತೀಯ ಶೈಲಿಯ ಕುಸ್ತಿ ಸಂಘದ ನಿಯಮದ ಪ್ರಕಾರ ಅಂಕಗಳ ಆಧಾರದಲ್ಲಿ ಮಣ್ಣಿನ ಮೇಲೆ ಕುಸ್ತಿಯನ್ನು ನಡೆಸಲಾಗುವುದು. 14 ವರ್ಷದೊಳಗಿನ ಬಾಲಕ ಮತ್ತು ಬಾಲಕಿಯರ ವಿಭಾಗದಲ್ಲಿ 2006, 2007 ಮತ್ತು 2008ನೇ ಇಸವಿಯಲ್ಲಿ ಜನಿಸಿದವರು ಮಾತ್ರ ಭಾಗವಹಿಸಬಹುದು. 17 ವರ್ಷದೊಳಗಿನ ಬಾಲಕ ಮತ್ತು ಬಾಲಕಿಯರ ವಿಭಾಗದಲ್ಲಿ 2003, 2004 ಮತ್ತು 2005ನೇ ಇಸವಿಯಲ್ಲಿ ಜನಿಸಿದವರು ಹಾಗೂ ಹಿರಿಯರ ವಿಭಾಗದಲ್ಲಿ 18 ವರ್ಷ ಮೇಲ್ಪಟ್ಟ ಅಂದರೆ 2002ರ ಇಸವಿ ಹಾಗೂ ಅದಕ್ಕೂ ಮೊದಲು ಜನಿಸಿದ ಪುರುಷ ಮತ್ತು ಮಹಿಳೆಯರು ಮಾತ್ರ ಭಾಗವಹಿಸಬಹುದು.
ಪ್ರಶಸ್ತಿಗಳು: 14 ವರ್ಷದೊಳಗಿನ ಬಾಲಕರ 52 ಕೆ.ಜಿ ಮತ್ತು ಬಾಲಕಿಯರ 46 ಕೆ.ಜಿ ವಿಭಾಗದಲ್ಲಿ ಅಂತಿಮವಾಗಿ ವಿಜೇತರಾಗುವ ಕುಸ್ತಿಪಟುಗಳಿಗೆ “ಕರ್ನಾಟಕ ಬಾಲ ಕೇಸರಿ” ಪ್ರಶಸ್ತಿ ನೀಡಲಾಗುವುದು.
17 ವರ್ಷದೊಳಗಿನ ಬಾಲಕರ 60 ಕೆ.ಜಿ. ಮತ್ತು ಬಾಲಕಿಯರ 53 ಕೆ.ಜಿ ವಿಭಾಗದಲ್ಲಿ ಅಂತಿಮವಾಗಿ ವಿಜೇತರಾಗುವ ಕುಸ್ತಿಪಟುಗಳಿಗೆ “ಕರ್ನಾಟಕ ಕಿಶೋರ ಮತ್ತು ಕಿಶೋರಿ” ಪ್ರಶಸ್ತಿ ನೀಡಲಾಗುವುದು. ಹಿರಿಯರ ವಿಭಾಗದಲ್ಲಿ “ಕರ್ನಾಟಕ ಕೇಸರಿ ಪ್ರಶಸ್ತಿಗಾಗಿ 86 ಕೆ.ಜಿಯಿಂದ 125 ಕೆ.ಜಿ ವರೆಗಿನ ಪುರುಷ ಕುಸ್ತಿಪಟುಗಳು ಭಾಗವಹಿಸಬಹುದು. ಮಹಿಳಾ ಕರ್ನಾಟಕ ಕೇಸರಿ ಪ್ರಶಸ್ತಿಗಾಗಿ 59 ಕೆಜಿ ಯಿಂದ 76 ಕೆಜಿ ತೂಕದ ವರೆಗಿನ ಮಹಿಳೆಯರು ಭಾಗವಹಿಸಬಹುದು. ಕರ್ನಾಟಕ ಕೇಸರಿ ವಿಭಾಗದಲ್ಲಿ ಭಾಗವಹಿಸುವ ಪುರುಷ ಮತ್ತು ಮಹಿಳಾ ಕುಸ್ತಿಪಟುಗಳು ಇತರೆ ತೂಕದ ವಿಭಾಗಗಳಲ್ಲಿ ಭಾಗವಹಿಸುವಂತಿಲ್ಲ. ಭಾಗವಹಿಸುವ ಕುಸ್ತಿಪಟುಗಳಿಗೆ ಪ್ರಯಾಣ ಭತ್ಯೆ ಹಾಗೂ ವಸತಿ ಊಟೋಪಹಾರ ವ್ಯವಸ್ಥೆಯನ್ನು ಮಾಡಲಾಗಿದೆ. ಕುಸ್ತಿ ಪಂದ್ಯದ ಸಮಯದಲ್ಲಿ ಗೈರುಹಾಜರಾಗುವ ಕುಸ್ತಿಪಟುಗಳಿಗೆ ಕರ್ನಾಟಕ ಕುಸ್ತಿ ಹಬ್ಬದ ಯಾವುದೇ ಸವಲತ್ತುಗಳನ್ನು ನೀಡಲಾಗುವುದಿಲ್ಲ. ಭಾಗವಹಿಸುವ ಕುಸ್ತಿಪಟುಗಳ ಉದ್ದೀಪನಾ ಮದ್ದು ಪರೀಕ್ಷೆಯನ್ನು ಓಂಆಂ NADA (National Anti Doping Agency ಪರೀಕ್ಷಾ ತಂಡದಿಂದ ನಡೆಸಲಾಗುವುದು. ಪರೀಕ್ಷೆಯಲ್ಲಿ ಉದ್ದೀಪನಾ ಮದ್ದು ಸೇವನೆ ರುಜುವಾತಾದಲ್ಲಿ 4 ವರ್ಷಗಳ ಅವಧಿಗೆ ಸ್ಪರ್ಧೆ/ಆಯ್ಕೆಗಳಲ್ಲಿ ಭಾಗವಹಿಸುವುದನ್ನು ನಿಷೇಧಿಸಲಾಗುವುದು. ಕುಸ್ತಿ ಪ್ರಾರಂಭದ ಪ್ರಥಮ ಸುತ್ತಿನಿಂದಲೇ ನಾಡಾದವರು ಉದ್ದಿಪನ ಮದ್ದು ಪರೀಕ್ಷೆಯನ್ನು ನಡೆಸುವರು. ಆರು ಪ್ರಶಸ್ತಿಗಳ (ಟೈಟಲನ್) ವಿಜೇತ ಪೈಲ್ವಾನರ ನಗದು ಬಹುಮಾನ ಮತ್ತು ಬೆಳ್ಳಿ ಗಧೆಯನ್ನು ನಾಡಾದಿಂದ (NADA) ಉದ್ದೀಪನಾ ಮದ್ದು ಪರೀಕ್ಷೆಯ ವರದಿ ಬಂದ ಮೇಲೆ ಕುಸ್ತಿಪಟುಗಳ ಖಾತೆಗೆ ಜಮಾ ಮಾಡಲಾಗುವುದು.
ಸರ್ಕಾರಿ ಸೇವೆಯಲ್ಲಿರುವ ಕರ್ನಾಟಕ ರಾಜ್ಯದ ಕುಸ್ತಿಪಟುಗಳು ಒಂದು ತೂಕದ ವಿಭಾಗದಲ್ಲಿ ಒಬ್ಬರು ಭಾಗವಹಿಸಬಹುದು. ಕುಸ್ತಿಪಟುಗಳು ಸೇವೆ ಸಲ್ಲಿಸುತ್ತಿರುವ ಇಲಾಖೆಯ ಕ್ರೀಡಾಧಿಕಾರಿಯವರಿಂದ ಅಥವಾ ಇಲಾಖೆಯ ಮುಖ್ಯಸ್ಥರಿಂದ ಸ್ಪರ್ಧೆಯಲ್ಲಿ ಭಾಗವಹಿಸಲು ಒಪ್ಪಿಗೆ ಪತ್ರ ಕಡ್ಡಾಯವಾಗಿ ತರಬೇಕು. ಭಾಗವಹಿಸುವ ಕುಸ್ತಿಪಟುಗಳು ಕರ್ನಾಟಕ ಕುಸ್ತಿ ಹಬ್ಬದ ಕುಸ್ತಿ ಸಮಿತಿಯ ಎಲ್ಲ ನಿಯಮ ಮತ್ತು ನಿರ್ಣಯ, ತೀರ್ಪುಗಳಿಗೆ ಬದ್ಧರಾಗಬೇಕು.ನೋಂದಣಿ: ಫೆ.22ರಂದು ಬೆಳಿಗ್ಗೆ 8 ರಿಂದ ಮಧ್ಯಾಹ್ನ 12 ಗಂಟೆವರೆಗೆ ಕರ್ನಾಟಕ ಕಾಲೇಜು ಮೈದಾನದಲ್ಲಿ ಕುಸ್ತಿಪಟುಗಳ ದೇಹ ತೂಕವನ್ನು ತೆಗೆದುಕೊಳ್ಳಲಾಗುವುದು. ವಯೋಮಿತಿಯಲ್ಲಿ ಭಾಗವಹಿಸುವ ಕುಸ್ತಿಪಟುಗಳು ಜನನ ನೋಂದಣಿ ಅಧಿಕಾರಿಗಳಿಂದ ಜನನ ಪ್ರಮಾಣ ಪತ್ರ, ಆಧಾರ್ ಕಾರ್ಡ್, 4 ಪಾಸ್‍ಪೋರ್ಟ್ ಅಳತೆಯ ಭಾವಚಿತ್ರಗಳನ್ನು ಹಾಗೂ ಬ್ಯಾಂಕ್ ಖಾತೆಯ ಪ್ರತಿಯನ್ನು ತರಬೇಕು.ಸಾರಿಗೆ ವ್ಯವಸ್ಥೆ: ಫೆ.22 ಬೆಳಿಗ್ಗೆ 7ರಿಂದ ಮಧ್ಯಾಹ್ನ 12 ಗಂಟೆಯ ವರೆಗೆ ಧಾರವಾಡದ ಕೇಂದ್ರಿಯ ಬಸ್ ನಿಲ್ದಾಣ ಮತ್ತು ರೈಲ್ವೆ ನಿಲ್ದಾಣ ಕರ್ನಾಟಕ ಕಾಲೇಜು ಮೈದಾನದವರೆಗೆ ಕುಸ್ತಿಪಟುಗಳ ಸಾರಿಗೆ ವ್ಯವಸ್ಥೆ ಮಾಡಲಾಗಿದೆ. ಹೆಚ್ಚಿನ ವಿವರಗಳಿಗೆ 94485 90935, 9964245769, 7892042714, 9481966245 ಮೊಬೈಲ್ ಸಂಖ್ಯೆಗಳನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ಕೋರಲಾಗಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

                                                             ವಾ.ವಿ.ಸ.45 ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಶರಣಬಸಪ್ಪ ದರ್ಶನಾಪೂರ ಅವರ ಜಿಲ್ಲಾ ಪ್ರವಾಸ ಯಾದಗ...