ಮಂಗಳವಾರ, ಫೆಬ್ರವರಿ 18, 2020

ರಾಷ್ಟ್ರೀಯ ಗ್ರಾಹಕರ ದಿನಾಚರಣೆ
ಗ್ರಾಹಕರು ತಮ್ಮ ಹಕ್ಕು ತಿಳಿದುಕೊಳ್ಳಲು ಸಲಹೆ
ಯಾದಗಿರಿ, ಫೆಬ್ರುವರಿ 17 (ಕರ್ನಾಟಕ ವಾರ್ತೆ): ಗ್ರಾಹಕರು ತಾವು ಖರೀದಿಸಿದ ವಸ್ತುವಿನಲ್ಲಿ ಕಂಡುಬರುವ ಅಸಂಪೂರ್ಣತೆ, ಕಳಪೆ ಗುಣಮಟ್ಟ, ಕಡಿಮೆ ಪ್ರಮಾಣ, ಶುದ್ಧತೆಯಲ್ಲಿರುವ ಲೋಪ ಇದ್ದರೆ ಅದಕ್ಕೆ ಕಾರಣವಾಗಿರುವ ವ್ಯಕ್ತಿ ಮತ್ತು ಸಂಸ್ಥೆಯ ವಿರುದ್ಧ ಕಾನೂನಿನ ಮೂಲಕ ಸೂಕ್ತ ಪರಿಹಾರ ಪಡೆಯುವ ಹಕ್ಕು ಗ್ರಾಹಕರಿಗಿದೆ. ಗ್ರಾಹಕರು ತಮ್ಮ ಹಕ್ಕುಗಳನ್ನು ತಿಳಿದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳಾದ ಎಂ.ಕೂರ್ಮಾ ರಾವ್ ಅವರು ಸಲಹೆ ನೀಡಿದರು.ಜಿಲ್ಲಾಡಳಿತ ಭವನದ ಆಡಿಟೋರಿಯಂನಲ್ಲಿ ಸೋಮವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಆಹಾರ ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ, ಕಾನೂನು ಮಾಪನ ಶಾಸ್ತ್ರ ಇಲಾಖೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ ಮತ್ತು ವಿವಿಧ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಗ್ರಾಹಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ, ಅವರು ಮಾತನಾಡಿದರು.ಯಾವುದೇ ಗ್ರಾಹಕರು ತಾವು ಪಡೆಯುವ ಸರಕು ಸೇವೆಗಳಲ್ಲಿ ನ್ಯೂನತೆಗಳು ಕಂಡುಬಂದರೆ, ಬೆಲೆಯಲ್ಲಿ ಅಥವಾ ಮೋಸದ ವಹಿವಾಟು ಕಂಡುಬಂದಲ್ಲಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆಯಲ್ಲಿ ದೂರು ಸಲ್ಲಿಸುವ ಮೂಲಕ ಪರಿಹಾರ ಪಡೆಯಬೇಕು. ಇದಕ್ಕೂ ಮೊದಲು ಗ್ರಾಹಕರು ತಾವು ಖರೀದಿಸುವ ವಸ್ತುವಿನ ರಸೀದಿಯನ್ನು ಪಡೆದಿರಬೇಕು. ಅಂದಾಗ ಮಾತ್ರ ಗ್ರಾಹಕರ ವೇದಿಕೆಯಲ್ಲಿ ದೂರು ಸಲ್ಲಿಸಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು.ಪ್ರತಿಯೊಬ್ಬರೂ ಗ್ರಾಹಕರು ಹಾಗೂ ವಿತಕರಾಗಿರುತ್ತಾರೆ. ಮೋಸ ಹೋದಲ್ಲಿ ಎಲ್ಲಿ? ಯಾವ ರೀತಿ ಧ್ವನಿ ಎತ್ತಬೇಕು ಎಂಬುವುದರ ಬಗ್ಗೆ ಮಾಹಿತಿ ಇರುವುದಿಲ್ಲ. ಈ ನಿಟ್ಟಿನಲ್ಲಿ ಜಾಗೃತಿ ಮೂಡಿಸಲು ಗ್ರಾಹಕರ ದಿನಾಚರಣೆಯಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು. 
ಖಾಸಗಿ ಅಂಗಡಿ, ಸರಕಾರಿ ನ್ಯಾಯಬೆಲೆ ಅಂಗಡಿಗಳಲ್ಲಿ ವಿತರಿಸುವ ವಸ್ತುಗಳ ತೂಕದಲ್ಲಿ ವ್ಯತ್ಯಾಸವಾಗುವ ಸಾಧ್ಯತೆ ಇರುತ್ತದೆ. ಹೀಗಾಗಿ ಎಲ್ಲ ಅಂಗಡಿಗಳಲ್ಲಿ ಡಿಜಿಟಲ್ ತೂಕದ ಯಂತ್ರವನ್ನು ಅಳಡಿಸಿಕೊಳ್ಳಬೇಕು. ಯಾವುದೇ ಒಂದು ವಸ್ತುವನ್ನು ಖರೀದಿಸುವ ಮುನ್ನ ಆ ವಸ್ತುವಿನ ಉತ್ಪದನಾ ದಿನಾಂಕ, ಅದರ ಮುಕ್ತಾಯ ದಿನಾಂಕವನ್ನು ಅರಿತುಕೊಳ್ಳಬೇಕು. ಇದರಿಂದ ವಸ್ತುವಿನ ಬಳಕೆಯಿಂದಾಗುವ ಅನಾಹುತವನ್ನು ತಪ್ಪಿಸಲು ಸಾಧ್ಯವಾಗುತ್ತದೆ. ಅಲ್ಲದೆ ವಸ್ತು ಖರೀದಿಸಿದ ರಸೀದಿ ಇದ್ದರೆ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಳ್ಳಲಾಗುತ್ತದೆ. ಇತ್ತೀಚಿಗೆ ಜಿಲ್ಲೆಯಲ್ಲಿ ನಕಲಿ ಬಿತ್ತನೆ ಬೀಜಗಳ ಮಾರಾಟದ ಬಗ್ಗೆ ದೂರುಗಳು ಬರುತ್ತಿದ್ದು, ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಪ್ರಕಾಶ ಅರ್ಜುನ ಬನಸೊಡೆ ಅವರು “ಭಾರತೀಯ ಗ್ರಾಹಕರಿಗೆ ಮಹತ್ವದ ತಿರುವು: ಗ್ರಾಹಕ ರಕ್ಷಣಾ ಕಾಯ್ದೆ-2019” ಕರಪತ್ರ ಬಿಡುಗಡೆ ಮಾಡಿ ಮಾತನಾಡಿ, 1986ರ ಗ್ರಾಹಕರ ಸಂರಕ್ಷಣಾ ಕಾಯ್ದೆಯಂತೆ ಗ್ರಾಹಕರು ತಾವು ಖರೀದಿಸಿದ ವಸ್ತುವಿನಿಂದ ನಷ್ಟ ಉಂಟಾದರೆ ವ್ಯಾಜ್ಯ ಉಂಟಾದ ದಿನದಿಂದ ಎರಡು ವರ್ಷಗಳ ಒಳಗಾಗಿ ದೂರನ್ನು ಸಲ್ಲಿಸಬಹುದು. ಒಂದು ವೇಳೆ ವಿಳಂಬವಾದರೆ, ವಿಳಂಬಕ್ಕೆ ಕಾರಣ ಸಹಿತವಾಗಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆಯಲ್ಲಿ ದೂರನ್ನು ಸಲ್ಲಿಸುವ ಮೂಲಕ ಪರಿಹಾರವನ್ನು ಪಡೆಯಬಹುದು ಎಂದು ತಿಳಿಸಿದರು.
ಎಲ್ಲಿ ದೂರು ಸಲ್ಲಿಸಬೇಕು?: ಸರಕು ಅಥವಾ ಸೇವೆಗಳ ಮೌಲ್ಯ ಮತ್ತು ಕೇಳಲಾದ ಪರಿಹಾರದ ಮೊತ್ತವು 20 ಲಕ್ಷ ರೂ.ಗಳಿಗಿಂತ ಕಡಿಮೆ ಇದ್ದರೆ ಪ್ರತಿವಾದಿಯು ವಾಸಿಸುವ ಅಥವಾ ಘಟನೆ ನಡೆದ ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ಜಿಲ್ಲಾ ಗ್ರಾಹಕರ ವೇದಿಕೆಗೆ ದೂರನ್ನು ಸಲ್ಲಿಸಬಹುದು. ಕೇಳಲಾದ ಸರಕು-ಸೇವೆಯ ಮೌಲ್ಯ ಮತ್ತು ಕೇಳಲಾದ ಪರಿಹಾರದ ಮೊತ್ತವು 1 ಕೋಟಿ ರೂ. ಹೆಚ್ಚಿದ್ದರೆ ರಾಷ್ಟ್ರೀಯ ಗ್ರಾಹಕರ ರಕ್ಷಣಾ ಆಯೋಗಕ್ಕೆ ದೂರನ್ನು ಸಲ್ಲಿಸಬಹುದು ಎಂದು ಮಾಹಿತಿ ನೀಡಿದರು.ಮೇಲ್ಮನವಿ ಯಾರಿಗೆ ಮಾಡಬೇಕು?: ಜಿಲ್ಲಾ ಗ್ರಾಹಕರ ವೇದಿಕೆಯ ವಿರುದ್ಧ ತೀರ್ಪು ತಲುಪಿದ 30 ದಿನದೊಳಗಾಗಿ ರಾಜ್ಯ ಆಯೋಗಕ್ಕೆ ಮನವಿ ಮಾಡಬಹುದು. ರಾಜ್ಯ ಆಯೋಗದ ನಿರ್ಣಯದ ವಿರುದ್ಧ ತೀರ್ಪು ತಲುಪಿದ 30 ದಿನದೊಳಗಾಗಿ ರಾಷ್ಟ್ರೀಯ ಆಯೋಗಕ್ಕೆ ಮನವಿ ಮಾಡಬಹುದು. ರಾಷ್ಟ್ರೀಯ ಆಯೋಗದ ತೀರ್ಪಿನ ಮೇಲ್ಮನವಿ ಸರ್ವೋಚ್ಛ ನ್ಯಾಯಾಲಯಕ್ಕೆ ಸಲ್ಲಿಸಬಹುದು ಎಂದು ಅವರು ವಿವರಿಸಿದರು.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ್ ಭಗವಾನ್ ಸೋನವಣೆ ಅವರು ಮಾತನಾಡಿ, ಪ್ರತಿಯೊಬ್ಬ ಗ್ರಾಹಕ ಯಾವುದೇ ವಸ್ತುವನ್ನು ಖರೀದಿಸುವಾಗ ಸರಕಾರಕ್ಕೆ ತೆರಿಗೆ ಕಟ್ಟುತ್ತಾನೆ. ಗ್ರಾಹಕರು ವಸ್ತುವಿನ ಗುಣಮಟ್ಟವನ್ನು ಅರಿತುಕೊಳ್ಳುವುದು ಅಗತ್ಯವಿದೆ. ಬಹಳಷ್ಟು ಗ್ರಾಹಕರು ತಾವು ಖರೀದಿಸಿದ ವಸ್ತುವಿನ ದೋಷದ ಕುರಿತು ಪೊಲೀಸ್ ಇಲಾಖೆಗೆ ದೂರು ಸಲ್ಲಿಸಲು ಬರುತ್ತಾರೆ. ನಮ್ಮಲಿ ದೂರು ಸಲ್ಲಿಸುವುದರಿಂದ ಯಾವುದೇ ಪರಿಹಾರ ಸಿಗುವುದಿಲ್ಲ. ಕೇವಲ ಕ್ರಿಮಿನಲ್ ಪ್ರಕರಣ ದಾಖಲಿಸುತ್ತೇವೆ. ಆದರೆ ದೂರನ್ನು ಜಿಲ್ಲಾ ಗ್ರಾಹಕರ ರಕ್ಷಣಾ ವೇದಿಕೆಯಲ್ಲಿ ಸಲ್ಲಿಸಿದರೆ ಪರಿಹಾರ ಪಡೆಯುವ ಜೊತೆಗೆ ವಸ್ತುವಿನ ಮಾರಾಟಗಾರನಿಗೆ ಶಿಕ್ಷೆ ಮತ್ತು ದಂಡವನ್ನು ಕೊಡಿಸಬಹುದು ಎಂದು ಹೇಳಿದರು.ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ ಸಹಾಯಕ ರಿಜಿಸ್ಟ್ರಾರ್ ಮತ್ತು ಸಹಾಯಕ ಆಡಳಿತಾಧಿಕಾರಿ ಪಿ.ಎಸ್.ಅಮರದೀಪ್ ಅವರು ವಿಶೇಷ ಉಪನ್ಯಾಸ ನೀಡಿದರು.ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆಯ ಅಧ್ಯಕ್ಷರಾದ ನೆಲ್ದಾಳ ಶರಣಪ್ಪ, ಜಿಲ್ಲಾ ಗ್ರಾಹಕರ ಪರಿಹಾರ ವೇದಿಕೆಯ ಸದಸ್ಯರಾದ ಅಶೋಕಕುಮಾರ, ನಂದಾ ಈಶ್ವರಚಂದ್ರ ಕೊಲ್ಲುರ್ ಅವರು ಉಪಸ್ಥಿತರಿದ್ದರು.
ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಉಪ ನಿರ್ದೇಶಕರಾದ ದತ್ತಪ್ಪ ಕಲ್ಲೂರ್ ಅವರು ಸ್ವಾಗತಿಸಿದರು. ಸುಬಮ ಪದವಿ ಕಾಲೇಜಿನ ಉಪನ್ಯಾಸಕರಾದ ಗುರುಪ್ರಸಾದ ವೈದ್ಯ ನಿರೂಪಿಸಿದರು. ಆಹಾರ ಇಲಾಖೆಯ ಸಹಾಯಕ ನಿರ್ದೇಶಕರಾದ ಮಲ್ಲಿಕಾರ್ಜುನ ವಂದಿಸಿದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಶರಣಬಸಪ್ಪ ದರ್ಶನಾಪೂರ ಅವರ ಜಿಲ್ಲಾ ಪ್ರವಾಸ

                                                               ವಾ.ವಿ.ಸಂ.150 ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಶರಣಬಸಪ್ಪ ದರ್ಶನಾಪೂರ ಅವರ ಜಿಲ್ಲಾ ಪ್ರವಾಸ ...