ಸೋಮವಾರ, ಫೆಬ್ರವರಿ 17, 2020

ರಾಜಶೇಖರಗೌಡ ಪಾಟೀಲ್ ಅಧ್ಯಕ್ಷತೆಯಲ್ಲಿ ಜಿ.ಪಂ ಸಾಮಾನ್ಯ ಸಭೆ
ಸಮರ್ಪಕ ಅನುಪಾಲನಾ ವರದಿ ಸಲ್ಲಿಕೆಗೆ ಸೂಚನೆ
ಯಾದಗಿರಿ, ಫೆಬ್ರುವರಿ 17 (ಕರ್ನಾಟಕ ವಾರ್ತೆ): ಜಿಲ್ಲಾ ಪಂಚಾಯಿತಿಯ ಕೆ.ಡಿ.ಪಿ ಮತ್ತು ಸಾಮಾನ್ಯ ಸಭೆಗಳಲ್ಲಿ ಚರ್ಚೆ ನಡೆಸಿ ಕೈಗೊಳ್ಳುವ ನಿರ್ಣಯಗಳ ಅನುಸಾರವಾಗಿ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಂಡು ಸಮರ್ಪಕ ಅನುಪಾಲನಾ ವರದಿಯನ್ನು ಸಲ್ಲಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾದ ರಾಜಶೇಖರಗೌಡ ಪಾಟೀಲ್ ವಜ್ಜಲ್ ಅವರು ಸೂಚಿಸಿದರು.ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ನಡೆದ ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ, ಅವರು ಮಾತನಾಡಿದರು.
ಶಿಕ್ಷಣ ಇಲಾಖೆಗೆ ಸಂಬಂಧಿಸಿದಂತೆ ಹಿಂದಿನ ಸಭೆಯಲ್ಲಿ ಅಧ್ಯಕ್ಷರು ಸೇರಿದಂತೆ ಸದಸ್ಯರು ಗಮನ ಸೆಳೆದ ವಿಷಯಗಳಿಗೆ ಬಿಇಒ ರವರಿಗೆ ಪತ್ರ ಬರೆಯಲಾಗಿದೆ. ವರದಿ ಪಡೆದು ಸಲ್ಲಿಸಲಾಗುವುದು ಎಂದು ಅನುಪಾಲನಾ ವರದಿಯನ್ನು ನೀಡಲಾಗಿದೆ. ಸೆಪ್ಟೆಂಬರ್ 20ರಂದು ಕಳೆದ ಸಾಮಾನ್ಯ ಸಭೆ ನಡೆದಿದೆ. ಐದು ತಿಂಗಳು ಕಳೆದರೂ ಪತ್ರ ಬರೆಯಲಾಗಿದೆ. ವರದಿ ಪಡೆಯಲಾಗುವುದು ಎಂಬುದಾಗಿ ಅನುಪಾಲನಾ ವರದಿ ನೀಡಿದರೆ ಹೇಗೆ? ಎಂದು ಡಿಡಿಪಿಐ ಶ್ರೀನಿವಾಸರೆಡ್ಡಿ ಅವರನ್ನು ಪ್ರಶ್ನಿಸಿದರು.ಸಭೆಗಳಲ್ಲಿ ಗಮನ ಸೆಳೆಯುವ ವಿಷಯಗಳಿಗೆ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು. ಆದರೆ, ಪ್ರತಿ ಸಭೆಗಳಲ್ಲಿ ಕ್ರಮ ಕೈಗೊಳ್ಳಲಾಗುವುದು ಮತ್ತು ಕಾಮಗಾರಿಗಳನ್ನು ಶೀಘ್ರದಲ್ಲಿ ಪೂರ್ಣಗೊಳಿಸಲಾಗುವುದು ಎಂಬುದಾಗಿ ಅಧಿಕಾರಿಗಳು ಭರವಸೆ ನೀಡುತ್ತಾರೆ. ಇದರಲ್ಲೇ ಸಭೆ ಮುಕ್ತಾಯವಾಗುತ್ತದೆ. ಮತ್ತೆ ಮುಂದಿನ ಸಭೆಯಲ್ಲಿ ಇದೇ ಭರವಸೆ ಮಾತುಗಳು ಕೇಳಿಬರುತ್ತವೆ. ಹಾಗಾಗಿ, ಕೆಲಸದಲ್ಲಿ ನಿರ್ಲಕ್ಷ್ಯ ವಹಿಸುವ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಸದಸ್ಯರಾದ ಶಿವಲಿಂಗಪ್ಪ ಪುಟಗಿ, ಬಸರೆಡ್ಡಿಗೌಡ ಮಾಲಿಪಾಟೀಲ್, ಕಿಶನ್ ರಾಠೋಡ್, ಬಸನಗೌಡ ಪಾಟೀಲ್ ಯಡಿಯಾಪುರ, ಅಮರದೀಪ್, ಅನಿತಾಬಾಯಿ ಸುರೇಶ್ ರಾಠೋಡ್, ಶಶಿಕಲಾ ಕ್ಯಾತನಾಳ ಅವರು ಒತ್ತಾಯಿಸಿದರು.ಶಿಕ್ಷಕರ ನೇಮಕಾತಿಗೆ ನಿಯೋಗ: ಜಿಲ್ಲೆಯಾದ್ಯಂತ ಶಿಕ್ಷಕರ ಹುದ್ದೆಗಳು ಖಾಲಿ ಇರುವುದರಿಂದ ಶಿಕ್ಷಣದ ಗುಣಮಟ್ಟ ಕುಸಿಯುತ್ತಿದೆ. ಎಸ್‍ಎಸ್‍ಎಲ್‍ಸಿ ಫಲಿತಾಂಶದಲ್ಲಿ ಜಿಲ್ಲೆಯು ಪ್ರತಿ ಬಾರಿ ಕೊನೆಯ ಸ್ಥಾನ ಪಡೆಯುತ್ತಿದೆ. ಮಹತ್ವಾಕಾಂಕ್ಷೆ ಜಿಲ್ಲೆ ಆಗಿರುವುದರಿಂದ ಆದ್ಯತೆಯ ಮೇರೆಗೆ ಜಿಲ್ಲೆಯ ಎಲ್ಲಾ ಹುದ್ದೆಗಳ ಭರ್ತಿಗೆ ಒತ್ತಾಯಿಸಲು ಬೆಂಗಳೂರಿಗೆ ನಿಯೋಗ ತೆರಳಲು ನಿರ್ಣಯ ಕೈಗೊಳ್ಳುವಂತೆ ಸದಸ್ಯರಾದ ಬಸನಗೌಡ ಪಾಟೀಲ್ ಯಡಿಯಾಪುರ ಅವರು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಶಿಲ್ಪಾ ಶರ್ಮಾ ಅವರು ಮಾತನಾಡಿ, ಇತ್ತೀಚೆಗೆ ಜಿಲ್ಲೆಗೆ ಭೇಟಿ ನೀಡಿದ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ಶಿಕ್ಷಕರ ಕೊರತೆ ಕುರಿತಂತೆ ಗಮನಕ್ಕೆ ತರಲಾಗಿದೆ. ನಿಯೋಗ ಕೂಡ ಹೋದರೆ ಶಿಕ್ಷಕರ ಭರ್ತಿಗೆ ಅನುಕೂಲವಾಗಬಹುದು ಎಂದು ಅಭಿಪ್ರಾಯಪಟ್ಟರು.ಹೊಸ ತಾಲ್ಲೂಕುಗಳಿಗೆ ಅನುದಾನ ಹಂಚಿಕೆ ಮಾಡಬೇಕು. ಸೋರುವ ಶಾಲೆಗಳ ದುರಸ್ತಿಗೆ ಕ್ರಮ ಕೈಗೊಳ್ಳಬೇಕೆಂದು ಸದಸ್ಯರಾದ ಶಿವಲಿಂಗಪ್ಪ ಪುಟಗಿ ಅವರು ಒತ್ತಾಯಿಸಿದರೆ, ಹುಣಸಗಿಯಲ್ಲಿ ಬಿಇಒ ಕಚೇರಿಯನ್ನು ಕಾರ್ಯಗತಗೊಳಿಸುವಂತೆ ಸದಸ್ಯರಾದ ಬಸವರಾಜ ಸ್ಥಾವರಮಠ ಅವರು ಮನವಿ ಮಾಡಿದರು.ಅಧ್ಯಕ್ಷರಾದ ರಾಜಶೇಖರಗೌಡ ಪಾಟೀಲ್ ಅವರು ಮಾತನಾಡಿ, ಜಿಲ್ಲೆಯ ಅವಶ್ಯವಿರುವ ಎಲ್ಲಾ ಶಾಲೆಗಳಿಗೆ ಪ್ಲೇಟು ಮತ್ತು ಗ್ಲಾಸ್‍ಗಳನ್ನು ಖರೀದಿ ಮಾಡಬೇಕು. ಅಕ್ಷರ ದಾಸೋಹ ಮತ್ತು ಕ್ಷೀರಭಾಗ್ಯ ಯೋಜನೆಯಡಿ ಬಿಡುಗಡೆಯಾದ ಅನುದಾನವನ್ನು ನಿಯಮಾನುಸಾರ ಖರ್ಚು ಮಾಡಬೇಕು. ವಯಸ್ಕರ ಶಿಕ್ಷಣ ಇಲಾಖೆಗೆ ನಿಗದಿಪಡಿಸಿದ ಗುರಿಯನ್ನು ಅನುಷ್ಠಾನಗೊಳಿಸಬೇಕು. ಕಷ್ಟ ಪರಿಸ್ಥಿತಿಯಲ್ಲಿರುವ ಕ್ರೀಡಾಪಟುಗಳು ಮತ್ತು ಕುಸ್ತಿ ಪಟುಗಳಿಗೆ ಆರ್ಥಿಕ ನೆರವು ನೀಡಬೇಕು. ಅದರಂತೆ ಕ್ರೀಡಾ ಕಿಟ್ ವಿತರಣೆಗೆ ಕ್ರಮ ಕೈಗೊಳ್ಳಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.ಜಿಲ್ಲೆಯ ಆಸ್ಪತ್ರೆಗಳಲ್ಲಿ ಖಾಲಿ ಇರುವ ವೈದ್ಯರು ಮತ್ತು ಶುಶ್ರೂಷಕರ ನೇಮಕಾತಿಗಾಗಿ ಕ್ರಮ ಕೈಗೊಳ್ಳಬೇಕು. ಬಿಪಿಎಲ್ ಕುಟುಂಬಗಳು 5 ಲಕ್ಷ ರೂ. ಹಾಗೂ ಎಪಿಎಲ್ ಕುಟುಂಬಗಳು 1.5 ಲಕ್ಷ ರೂ.ವರೆಗೆ ಉಚಿತ ಚಿಕಿತ್ಸೆ ಸೌಲಭ್ಯ ಪಡೆಯಲು ಸಾರ್ವಜನಿಕರು ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ ಕಾರ್ಡ್ ಮಾಡಿಸಬೇಕು. ಇದಕ್ಕಾಗಿ ಹೆಚ್ಚಿನ ಜಾಗೃತಿ ಮೂಡಿಸಿ ಎಂದು ಅವರು ನಿರ್ದೇಶಿಸಿದರು.
ಬಾಣಂತಿಯರಿಗೆ ಆಹಾರ ವಿತರಿಸಿ: ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಬಾಣಂತಿ ಮತ್ತು ಅವರ ಜೊತೆಗಿರುವ ಒಬ್ಬರಿಗೆ ಬಿಸಿಯೂಟ ನೀಡಬೇಕು. ಆದರೆ, ಜಿಲ್ಲೆಯ ಯಾವ ಆಸ್ಪತ್ರೆಗಳಲ್ಲೂ ಇದನ್ನು ಪಾಲಿಸುತ್ತಿಲ್ಲ. ಇದಕ್ಕೆ ಮೀಸಲಿರುವ ಅನುದಾನ ವಾಪಸ್ ಹೋಗದಂತೆ ಕ್ರಮ ಕೈಗೊಳ್ಳಲು ಸದಸ್ಯರಾದ ಶಿವಲಿಂಗಪ್ಪ ಪುಟಗಿ ಅವರು ಒತ್ತಾಯಿಸಿದರು.
ಡಿಎಚ್‍ಒ ಡಾ.ಎಂ.ಎಸ್.ಪಾಟೀಲ್ ಅವರು ಮಾತನಾಡಿ, ಜಿಲ್ಲೆಯಲ್ಲಿ ವರ್ಷಕ್ಕೆ ಸುಮಾರು 34 ಸಾವಿರ ಹೆರಿಗೆ ಆಗುತ್ತವೆ. ಬಾಣಂತಿ ಮತ್ತು ಇವರ ಜೊತೆಗಿರುವ ಒಬ್ಬ ಸಹಾಯಕರಿಗೆ ಎರಡು ದಿನ ಊಟ ಕೊಡಬೇಕಿದೆ. ಇದಕ್ಕಾಗಿ ಒಂದು ದಿನಕ್ಕೆ ಒಬ್ಬ ಬಾಣಂತಿಗೆ 100 ರೂ. ಅನುದಾನ ಇರುತ್ತದೆ. ಆದರೆ, ಸ್ಥಳೀಯ ಖಾನಾವಳಿ ಅಥವಾ ಹೋಟೆಲ್‍ನವರು ಊಟ ನೀಡಲು ಮುಂದೆ ಬರುತ್ತಿಲ್ಲ ಎಂಬುದಾಗಿ ತಿಳಿಸಿದರು.ಸದಸ್ಯರಾದ ಬಸನಗೌಡ ಪಾಟೀಲ್ ಯಡಿಯಾಪುರ ಅವರು ಮಾತನಾಡಿ, ಜಿಲ್ಲೆಯಲ್ಲಿ ಐದು ವರ್ಷಗಳಲ್ಲಿ ಶಿಶುಗಳ ಸಾವಿನ ಸಂಖ್ಯೆ ವರದಿ ನೀಡಬೇಕು ಮತ್ತು ಕಿರದಳ್ಳಿಯಲ್ಲಿ ಅರ್ಸೇನಿಕ್ ನೀರಿನ ಬಳಕೆಯಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಇದಕ್ಕೆ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷರಾದ ಗಿರಿಜಮ್ಮ ಸದಾಶಿವಪ್ಪಗೌಡ ರೊಟ್ನಡಗಿ, ಜಿಲ್ಲಾ ಪಂಚಾಯಿತಿಯ ವಿವಿಧ ಸ್ಥಾಯಿ ಸಮಿತಿ ಅಧ್ಯಕ್ಷರು, ಸದಸ್ಯರು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಶರಣಬಸಪ್ಪ ದರ್ಶನಾಪೂರ ಅವರ ಜಿಲ್ಲಾ ಪ್ರವಾಸ

                                                               ವಾ.ವಿ.ಸಂ.150 ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಶರಣಬಸಪ್ಪ ದರ್ಶನಾಪೂರ ಅವರ ಜಿಲ್ಲಾ ಪ್ರವಾಸ ...