ಸೋಮವಾರ, ಮಾರ್ಚ್ 23, 2020

ಕೊರೊನಾ ತಡೆಗೆ ಜಿಲ್ಲಾ ಮಟ್ಟದ ಟಾಸ್ಕ್ ಫೋರ್ಸ್ ಸಭೆ
ಹೆಚ್ಚಿನ ದರಕ್ಕೆ ಮಾಸ್ಕ್ ಮಾರಾಟ ಮಾಡಿದರೆ ಕ್ರಮ
-ಜಿಲ್ಲಾಧಿಕಾರಿ ಎಂ.ಕೂರ್ಮಾ ರಾವ್
ಯಾದಗಿರಿ, ಮಾರ್ಚ್ 23 (ಕರ್ನಾಟಕ ವಾರ್ತೆ): ಜಿಲ್ಲೆಯಲ್ಲಿ ಸರ್ಜಿಕಲ್ 3 ಲೇಯರ್ ಮಾಸ್ಕ್‍ಗಳನ್ನು 10 ರೂ.ಗಿಂತ ಮತ್ತು 2 ಲೇಯರ್ ಮಾಸ್ಕ್‍ಗಳನ್ನು 8 ರೂ.ಗಿಂತ ಹೆಚ್ಚಿನ ದರಕ್ಕೆ ಮಾರಾಟ ಮಾಡುವುದು ಕಂಡುಬಂದರೆ ಕಾನೂನು ರೀತಿಯಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿಗಳಾದ ಎಂ.ಕೂರ್ಮಾ ರಾವ್ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದರು.ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟುವ ಕುರಿತು ನಡೆದ ಜಿಲ್ಲಾ ಮಟ್ಟದ ಟಾಸ್ಕ್ ಫೋರ್ಸ್ ಸಭೆಯ ಅಧ್ಯಕ್ಷತೆ ವಹಿಸಿ, ಅವರು ಮಾತನಾಡಿದರು.200 ಎಂ.ಎಲ್ ಸ್ಯಾನಿಟೈಸರ್ ಅನ್ನು 100 ರೂ.ಗೆ ಮಾರಾಟ ಮಾಡಬೇಕು. ಅಗತ್ಯ ವಸ್ತುಗಳ ಹೊರತುಪಡಿಸಿ ಇತರೆ ಅಂಗಡಿಗಳನ್ನು ಬಂದ್ ಮಾಡಿಸುವಂತೆ ಆದೇಶಿಸಲಾಗಿದೆ. ಅದೇ ರೀತಿ ಜ್ಯೂಸ್ ಅಂಗಡಿ, ಐಸ್‍ಕ್ರೀಮ್ ಅಂಗಡಿ ಮತ್ತು ಚಹಾ ಅಂಗಡಿಗಳನ್ನು ಕೂಡ ಬಂದ್ ಮಾಡಿಸುವಂತೆ ಸೂಚಿಸಿದ ಅವರು, ಕೊರೊನಾ ವೈರಸ್ ಪರಿಣಾಮಕಾರಿಯಾಗಿ ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳು ತಮಗೆ ವಹಿಸಿದ ಜವಾಬ್ದಾರಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ನಿರ್ದೇಶಿಸಿದರು.ವಿವಿಧ ರೀತಿಯ ವ್ಯಾಪಾರ ವಾಣಿಜ್ಯ ಮಳಿಗೆಗಳಿಗೆ ಸಂಘಟನೆಗಳಿರುತ್ತವೆ. ಅಂತಹ ಸಂಘಟನೆಗಳ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳ ಮೂಲಕ ಅತಿ ಅವಶ್ಯಕವಲ್ಲದ ಮಳಿಗೆಗಳನ್ನು ಬಂದ್ ಮಾಡಿಸಬೇಕು. ಈ ಸಂದರ್ಭದಲ್ಲಿ ಸಾರ್ವಜನಿಕ ಜೀವನಕ್ಕೆ ಬೇಕಾಗುವ ಅಗತ್ಯ ವಸ್ತುಗಳ ಖರೀದಿಗೆ ತೊಂದರೆಯಾಗಬಾರದು. ಆದರೆ, ಅಂಗಡಿಗಳ ಮಾಲೀಕರಿಗೆ ಮನವರಿಕೆ ಮಾಡಿ ಮುಂಜಾಗ್ರತಾ ಕ್ರಮಗಳೊಂದಿಗೆ ವಹಿವಾಟು ನಡೆಸುವಂತೆ ಸೂಚನೆ ನೀಡಿ. ಅಲ್ಲದೇ, ಇಂತಹ ಪರಿಸ್ಥಿತಿಯ ದುರುಪಯೋಗ ಪಡಿಸಿಕೊಳ್ಳುವ ನಿಟ್ಟಿನಲ್ಲಿ ಅಗತ್ಯ ವಸ್ತುಗಳನ್ನು ಎಂಆರ್‍ಪಿ ದರಕ್ಕಿಂತ ಹೆಚ್ಚಿನ ದರಕ್ಕೆ ಮಾರಾಟ ಮಾಡುವಂತಿಲ್ಲ ಎಂದು ಅವರು ತಿಳಿಸಿದರು.
ಜಿಲ್ಲೆಯ ಗ್ರಾಮೀಣ ಪ್ರದೇಶಗಳಿಂದ ನಗರ ಅಥವಾ ಪಟ್ಟಣಗಳಿಗೆ ಅನವಶ್ಯಕವಾಗಿ ಬರುವುದನ್ನು ತಡೆಗಟ್ಟಬೇಕು. ಭಾರತ ದಂಡ ಪ್ರಕ್ರಿಯೆ ಸಂಹಿತೆ 1973ರ ಕಲಂ 133, 144 (3)ರ ಪ್ರಕಾರ ಹಾಗೂThe Karnataka Epidemic Disease, COVID-19 Regulations, 2020 2020 ರ ನಿಯಮ 12ರ ಮೇರೆಗೆ ಜಿಲ್ಲೆಯಾದ್ಯಂತ ಕೊರೊನಾ ವೈರಸ್ ಸೋಂಕಿನಿಂದಾಗಿ ಸಂಭವಿಸಬಹುದಾದ ಅನಾಹುತಗಳನ್ನು ಪರಿಣಾಮಕಾರಿಯಾಗಿ ತಡೆಗಟ್ಟಲು ಮತ್ತು ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಮಾರ್ಚ್ 31ರವರೆಗೆ ಸಾರ್ವಜನಿಕರು ಅನುಸರಣ ಕ್ರಮಗಳನ್ನು ಕೈಗೊಳ್ಳಲು ಪರಿಷ್ಕøತ ಆದೇಶ ಹೊರಡಿಸಲಾಗಿದೆ. ಅದರಂತೆ ಸಾರ್ವಜನಿಕರು ನಡೆದುಕೊಳ್ಳಬೇಕು ಎಂದು ಅವರು ಹೇಳಿದರು.ಇನ್ನು ವಿದೇಶಗಳಿಂದ ಬಂದು ಹೋಮ್ ಐಸೊಲೇಷನ್‍ನಲ್ಲಿರುವ ವ್ಯಕ್ತಿಗಳು ಯಾವುದೇ ಕಾರಣಕ್ಕೂ ಮನೆಬಿಟ್ಟು ಹೊರಬರುವಂತಿಲ್ಲ. ಸಾರ್ವಜನಿಕರು ಕೂಡ ಅನವಶ್ಯಕವಾಗಿ ಮನೆಯಿಂದ ಹೊರಬರುವುದು ಅಥವಾ ಗುಂಪುಗುಂಪಾಗಿ ಸೇರುವುದು ಮಾಡಬಾರದು. ಅಗತ್ಯ ವಸ್ತುಗಳ ಖರೀದಿಗಷ್ಟೇ ಯಾರಾದರು ಒಬ್ಬರು ಹೊರಬಂದರೆ ಸಾಕು. ಈ ಕುರಿತು ಡಂಗೂರ ಸಾರಬೇಕು ಎಂದು ಅವರು ನಿರ್ದೇಶನ ನೀಡಿದರು.ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶಿಲ್ಪಾ ಶರ್ಮಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಋಷಿಕೇಷ್ ಭಗವಾನ್ ಸೋನವಣೆ, ಅಪರ ಜಿಲ್ಲಾಧಿಕಾರಿಗಳಾದ ಪ್ರಕಾಶ್ ಜಿ.ರಜಪೂತ, ಸಹಾಯಕ ಆಯುಕ್ತರಾದ ಶಂಕರಗೌಡ ಎಸ್.ಸೋಮನಾಳ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಮಲ್ಲನಗೌಡ ಎಸ್.ಪಾಟೀಲ್ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

                                                             ವಾ.ವಿ.ಸ.45 ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಶರಣಬಸಪ್ಪ ದರ್ಶನಾಪೂರ ಅವರ ಜಿಲ್ಲಾ ಪ್ರವಾಸ ಯಾದಗ...