ಕುಡಿಯುವ ನೀರಿನ ಸಹಾಯವಾಣಿ ನಿರ್ವಹಣೆಗೆ ಸಿಬ್ಬಂದಿ ನೇಮಕ
ಯಾದಗಿರಿ, ಮಾರ್ಚ್ 09 (ಕರ್ನಾಟಕ ವಾರ್ತೆ): ಜಿಲ್ಲೆಯಲ್ಲಿನ ಕುಡಿಯುವ ನೀರಿನ ಸಮಸ್ಯೆಯನ್ನು ಆಲಿಸಿ, ಪರಿಹಾರ ಕ್ರಮ ಕೈಗೊಳ್ಳಲು ಜಿಲ್ಲಾ ಪಂಚಾಯಿತಿ ಕಾರ್ಯಾಲಯದಲ್ಲಿ ಸಹಾಯವಾಣಿ ಸಂಖ್ಯೆ: 08473- 253758 ಅನ್ನು ಪ್ರಾರಂಭಿಸಿದ್ದು, ಮಾರ್ಚ್ 7ರಿಂದ ಮೇ 31ರವರೆಗೆ ಬೆಳಿಗ್ಗೆ 7.30ರಿಂದ ಸಂಜೆ 5.30 ಗಂಟೆಯವರೆಗೆ ನಿರ್ವಹಣೆಗಾಗಿ ಸಿಬ್ಬಂದಿಯನ್ನು ನೇಮಕ ಮಾಡಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶಿಲ್ಪಾ ಶರ್ಮಾ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಬೇಸಿಗೆ ಕಾಲ ಪರಿಸ್ಥಿತಿ ನಿಭಾಯಿಸಲು ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯು ಸಕಾಲದಲ್ಲಿ ಪರಿಹರಿಸಬೇಕಾಗುತ್ತದೆ. ಗ್ರಾಮೀಣ ಕುಡಿಯುವ ನೀರಿನ ಸಮಸ್ಯೆ ಕುರಿತು ಸಾರ್ವಜನಿಕರಿಂದ ಸರ್ಕಾರದ ಮಟ್ಟದಲ್ಲಿ, ಜಿಲ್ಲಾ ಮಟ್ಟದಲ್ಲಿ, ತಾಲ್ಲೂಕು ಮಟ್ಟದಲ್ಲಿ ಹಾಗೂ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ದಾಖಲಾಗುವ ದೂರುಗಳಿಗೆ ಪರಿಹಾರ ಕಲ್ಪಿಸಬೇಕಾಗುತ್ತದೆ. ಅದರಂತೆ ಯಾದಗಿರಿ ಜಿಲ್ಲಾ ಪಂಚಾಯಿತಿ ಕಾರ್ಯಾಲಯದಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನು ಆಲಿಸಿ, ಪರಿಹಾರ ಕ್ರಮ ಕೈಗೊಳ್ಳಲು ಸಹಾಯವಾಣಿ ಕೇಂದ್ರ ಪ್ರಾರಂಭಿಸಲಾಗಿದೆ. ಇದಕ್ಕಾಗಿ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿಗಳನ್ನು ನೋಡಲ್ ಅಧಿಕಾರಿಯನ್ನಾಗಿ ನೇಮಿಸಿದ್ದು, ಪ್ರತಿ ಮೂರು ದಿನಗಳಿಗೊಮ್ಮೆ ದಾಖಲಾದ ದೂರುಗಳ ವರದಿ ನೀಡಲು ಕ್ರಮ ವಹಿಸುವಂತೆ ಸೂಚಿಸಿ, ಪ್ರಾರಂಭಿಸಲಾದ ಸಹಾಯವಾಣಿ ಕೇಂದ್ರಕ್ಕೆ ಸಿಬ್ಬಂದಿಗಳನ್ನು ನೇಮಿಸಲಾಗಿದೆ. ಸಹಾಯವಾಣಿ ಕೇಂದ್ರದಲ್ಲಿ ನಿಯುಕ್ತಿಗೊಳಿಸಿದ ನೌಕರ/ ಹೊರಗುತ್ತಿಗೆ ಸಿಬ್ಬಂದಿಗಳು ಕೆಲಸ ಹಂಚಿಕೆ ಮಾಡಿದಂತೆ ಹಾಜರಿದ್ದು, ಕುಡಿಯುವ ನೀರಿನ ಸಮಸ್ಯೆಯ ಕುರಿತು ದಾಖಲಾಗುವ ದೂರುಗಳನ್ನು ರಿಜಿಸ್ಟರ್‍ನಲ್ಲಿ ನಮೂದಿಸಬೇಕು ಹಾಗೂ ದಾಖಲಾದ ದೂರುಗಳ ಮಾಹಿತಿಯನ್ನು ತಕ್ಷಣ ಕ್ರಮಕ್ಕಾಗಿ ಸಂಬಂಧಪಟ್ಟ ಅಧಿಕಾರಿಗಳಿಗೆ ಸಲ್ಲಿಸತಕ್ಕದ್ದು. ತಪ್ಪಿದಲ್ಲಿ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ಮಾ.14ರಂದು ಆರೋಗ್ಯ ಮತ್ತು ಉದ್ಯೋಗ ಮೇಳ
ಯಾದಗಿರಿ, ಮಾರ್ಚ್ 09 (ಕರ್ನಾಟಕ ವಾರ್ತೆ): ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಾರ್ಯಕ್ರಮಗಳು ಮತ್ತು ಯೋಜನೆಗಳ ಬಗ್ಗೆ ಜಾಗೃತಿ ಮೂಡಿಸಲು ಜಿಲ್ಲೆಯ ಸುರಪುರ ತಾಲ್ಲೂಕಿನ ದೇವರಗೋನಾಲ್ ಪ್ರಾಥಮಿಕ ಆರೋಗ್ಯ ಕೇಂದ್ರದ ಮುಂದುಗಡೆ ಇರುವ ಮೈದಾನದಲ್ಲಿ ಮಾರ್ಚ್ 14ರಂದು ಜಿಲ್ಲಾ ಮಟ್ಟದ ಆರೋಗ್ಯ ಮೇಳ ಹಾಗೂ ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ. ಆರೋಗ್ಯ ಮೇಳದಲ್ಲಿ ತಜ್ಞ ವೈದ್ಯರ ತಂಡ ವೈದ್ಯಕೀಯ ತಪಾಸಣೆ ನಡೆಸಿ, ಚಿಕಿತ್ಸೆ ನೀಡಲಿದೆ. ಸಾರ್ವಜನಿಕರು ಆರೋಗ್ಯ ಮೇಳದ ಪ್ರಯೋಜನೆ ಪಡೆದುಕೊಳ್ಳಬೇಕು. ಉದ್ಯೋಗ ಮೇಳದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ 18-35 ವಯೋಮಿತಿಯ ಅಭ್ಯರ್ಥಿಗಳು ಸಂಬಂಧಿಸಿದ ದಾಖಲಾತಿಗಳೊಂದಿಗೆ ಖುದ್ದಾಗಿ ಹಾಜರಾಗಿ ಪ್ರಯೋಜನೆ ಪಡೆದುಕೊಳ್ಳಬೇಕು. ಮಹಿಳಾ ಅಭ್ಯರ್ಥಿಗಳಿಗೆ ಮೊದಲ ಆದ್ಯತೆ ಇರುತ್ತದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಂ.ಎಸ್.ಪಾಟೀಲ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಾ.15ರಂದು ಆದರ್ಶ ವಿದ್ಯಾಲಯ ಪ್ರವೇಶ ಪರೀಕ್ಷೆ
ಯಾದಗಿರಿ, ಮಾರ್ಚ್ 09 (ಕರ್ನಾಟಕ ವಾರ್ತೆ): ಕೆ.ಎಸ್.ಕ್ಯೂ.ಎ.ಎ.ಸಿ ಬೆಂಗಳೂರು ವತಿಯಿಂದ 2020-21ನೇ ಸಾಲಿನ ಆದರ್ಶ ವಿದ್ಯಾಲಯದ 6ನೇ ತರಗತಿ ಪ್ರವೇಶ ಪರೀಕ್ಷೆಯು ಮಾರ್ಚ್ 15ರಂದು ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಜಿಲ್ಲೆಯ 10 ಕೇಂದ್ರಗಳಲ್ಲಿ ನಡೆಯಲಿವೆ ಎಂದು ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (ಡಯಟ್) ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಶಹಾಪುರದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜು (ಪ್ರೌಢಶಾಲಾ ವಿಭಾಗ), ಚರಬಸವೇಶ್ವರ ಪ್ರೌಢಶಾಲೆ, ಆದರ್ಶ ವಿದ್ಯಾಲಯ, ಬಾಲಕಿಯರ ಸರ್ಕಾರಿ ಪ್ರೌಢಶಾಲೆ, ಸುರಪುರ ತಾಲ್ಲೂಕಿನ ಹಸನಾಪುರ ಕ್ಯಾಂಪ್‍ನ ವೀರಪ್ಪ ನಿಷ್ಠಿ ಇಂಜಿನೀಯರಿಂಗ್ ಕಾಲೇಜು ಕೇಂದ್ರ-01, ವೀರಪ್ಪ ನಿಷ್ಠಿ ಇಂಜಿನೀಯರಿಂಗ್ ಕಾಲೇಜು ಕೇಂದ್ರ-02, ರಂಗಂಪೇಠ ಸರ್ಕಾರಿ ಪದವಿ ಪೂರ್ವ ಕಾಲೇಜು, ಸುರಪುರದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜು, ಯಾದಗಿರಿಯ ಖಂಡೇಲವಾಲಾ ಹಿರಿಯ ಪ್ರಾಥಮಿಕ ಶಾಲೆ, ಸಭಾ ಪ್ರೌಢ ಶಾಲೆ ಮತ್ತು ಪದವಿ ಪೂರ್ವ ಕಾಲೇಜು ಪರೀಕ್ಷಾ ಕೇಂದ್ರಗಳಾಗಿವೆ. ಪರೀಕ್ಷೆಗಳನ್ನು ಸುಸೂತ್ರವಾಗಿ ನಡೆಯಲು ಪೊಲೀಸ್ ಬಂದೋಬಸ್ತ್ ಹಾಗೂ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಏ.1ರಿಂದ ಬಿಎಸ್-4 ವಾಹನಗಳ ಮಾರಾಟ, ನೋಂದಣಿ ರದ್ದು
ಯಾದಗಿರಿ, ಮಾರ್ಚ್ 09 (ಕರ್ನಾಟಕ ವಾರ್ತೆ): ಮಾನ್ಯ ಸರ್ವೋಚ್ಛ ನ್ಯಾಯಾಲಯವು ಡಬ್ಲ್ಯೂ.ಪಿ (ಸಿವಿಲ್) ನಂ.13029/1985 ರಲ್ಲಿ ನೀಡಿರುವ ಆದೇಶದನ್ವಯ ಬೆಂಗಳೂರು ಸಾರಿಗೆ ಆಯುಕ್ತರು ಬರುವ ಏಪ್ರಿಲ್ 1ರಿಂದ ದೇಶದಲ್ಲಿ ಭಾರತ್ ಸ್ಟೇಜ್-4 ಮಾಪನದ ವಾಹನಗಳನ್ನು ಮಾರಾಟ ಅಥವಾ ನೋಂದಣಿ ಮಾಡುವಂತಿಲ್ಲ. ಅದರಂತೆ, ಆದೇಶವನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಲು ಸೂಚಿಸಿರುತ್ತಾರೆ ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿಗಳಾದ ವಸಂತ ಚವ್ಹಾಣ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಯಾದಗಿರಿ ವ್ಯಾಪ್ತಿಯಲ್ಲಿ ಬರುವ ಹೊಸ ವಾಹನಗಳನ್ನು ಖರೀದಿಸಿ ಇದುವರೆಗೂ ನೋಂದಣಿ ಮಾಡಿಸದೆ ವಾಹನ ಚಾಲನೆ ಮಾಡುತ್ತಿರುವ ವಾಹನ ಮಾಲೀಕರು ಬಿ.ಎಸ್-4 ನಾಮ್ರ್ಸ್ ಹೊಂದಿರುವ ವಾಹನಗಳನ್ನು ಮಾರ್ಚ್ 31ರೊಳಗಾಗಿ ಅವಶ್ಯಕ ಶುಲ್ಕ, ತೆರಿಗೆ ಪಾವತಿ ಮಾಡಿ ಸಂಬಂಧಿಸಿದ ದಾಖಲಾತಿಗಳೊಂದಿಗೆ ತಮ್ಮ ವಾಹನವನ್ನು ಹಾಜರುಪಡಿಸಿ ನೋಂದಾಯಿಸಿಕೊಳ್ಳುವ ಮೂಲಕ ಸಹಕರಿಸಬೇಕು. ಬಿ.ಎಸ್-6 ನಾಮ್ರ್ಸ್ ಹೊಂದಿರುವ ವಾಹನಗಳನ್ನು ಏಪ್ರಿಲ್ 1ರಿಂದ ನೋಂದಣಿ ಮಾಡುವುದನ್ನು ಕಡ್ಡಾಯಗೊಳಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ