ಚೆಕ್‍ಪೋಸ್ಟ್‍ನಲ್ಲಿ 25,789 ಪ್ರಯಾಣಿಕರ ತಪಾಸಣೆ
ಹೋಮ್ ಐಸೊಲೇಷನ್‍ನಲ್ಲಿ 58 ಜನ
ಯಾದಗಿರಿ, ಮಾರ್ಚ್ 23 (ಕರ್ನಾಟಕ ವಾರ್ತೆ): ಯಾದಗಿರಿ ತಾಲ್ಲೂಕಿನಲ್ಲಿ 23, ಶಹಾಪೂರ ತಾಲ್ಲೂಕಿನಲ್ಲಿ 16 ಹಾಗೂ ಸುರಪುರ ತಾಲ್ಲೂಕಿನಲ್ಲಿ 19 ಸೇರಿದಂತೆ ಮಾರ್ಚ್ 23ರವರೆಗೆ ಜಿಲ್ಲೆಯಲ್ಲಿ ಒಟ್ಟು 58 ಜನ ದುಬೈ, ಕತಾರ, ಸೌದಿ, ಮದಿನಾ ಪ್ರವಾಸದಿಂದ ಜಿಲ್ಲೆಗೆ ಮರಳಿ ಬಂದಿರುವ ಹಿನ್ನೆಲೆಯಲ್ಲಿ ಇವರನ್ನು ವೈದ್ಯಕೀಯ ತಪಾಸಣೆಗೊಳಪಡಿಸಲಾಗಿದೆ. ಯಾವುದೇ ರೋಗಲಕ್ಷಣಗಳು ಕಂಡುಬಂದಿರುವುದಿಲ್ಲ. ಕಾರಣ ಇವರಿಗೆ ಹೋಮ್ ಐಸೊಲೇಷನ್ ವ್ಯವಸ್ಥೆ ಮಾಡಲಾಗಿದೆ ಎಂದು ಅಪರ ಜಿಲ್ಲಾಧಿಕಾರಿಗಳಾದ ಪ್ರಕಾಶ್ ಜಿ.ರಜಪೂತ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮುಂಜಾಗ್ರತಾ ಕ್ರಮವಾಗಿ ವಿದೇಶಗಳಿಂದ ಬಂದವರನ್ನು ದಿನಕ್ಕೆ 2 ಬಾರಿಯಂತೆ 14 ದಿನಗಳ ಕಾಲ ವೈದ್ಯಕೀಯ ತಂಡ ಭೇಟಿ ನೀಡಿ ತಪಾಸಣೆ ನಡೆಸುತ್ತಿದೆ. ಇವರ ಕುಟುಂಬದ ಸದಸ್ಯರ ಮೇಲೆಯೂ ನಿಗಾವಹಿಸಲಾಗಿದೆ. ಶಹಾಪುರ ಆಸ್ಪತ್ರೆಯಲ್ಲಿ ಒಬ್ಬರನ್ನು ಪ್ರತ್ಯೇಕವಾಗಿರಿಸಿ, ಐಸೊಲೇಷನ್ ವ್ಯವಸ್ಥೆ ಮಾಡಲಾಗಿದೆ. ಜಿಲ್ಲೆಯಲ್ಲಿ ಇದುವರೆಗೆ ಯಾವುದೇ ಶಂಕಿತ ಅಥವಾ ಖಚಿತ ಕೊರೋನಾ ವೈರಸ್ ಪ್ರಕರಣ ಪತ್ತೆಯಾಗಿರುವುದಿಲ್ಲ. ಜಿಲ್ಲಾಡಳಿತವು ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದು, ಸಾರ್ವಜನಿಕರು ಆತಂಕಪಡಬಾರದು ಅವರು ಮನವಿ ಮಾಡಿದ್ದಾರೆ.
ಮುಂಜಾಗ್ರತಾ ಕ್ರಮವಾಗಿ ಯಾದಗಿರಿ ಸಾರ್ವಜನಿಕ ಆಸ್ಪತ್ರೆಯಲ್ಲಿ 15, ಶಹಾಪುರ ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ 2 ಹಾಗೂ ಸುರಪುರ ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ 10 ಸೇರಿದಂತೆ ಒಟ್ಟು 27 ಐಸೊಲೇಷನ್ ಬೆಡ್‍ಗಳ ವ್ಯವಸ್ಥೆ ಮಾಡಲಾಗಿದೆ. ಅಲ್ಲದೇ, ಆರೋಗ್ಯ ಸಹಾಯವಾಣಿ-104 ಕ್ಕೆ ಬರುವ ಕರೆಗಳಿಗಾಗಿ 3 ಸಿಬ್ಬಂದಿಗಳನ್ನು ಮೀಸಲಿರಿಸಿದೆ. ಜಿಲ್ಲಾಡಳಿತದ ಕಂಟ್ರೋಲ್ ರೂಮ್ ಸಹಾಯವಾಣಿ ಸಂಖ್ಯೆ 08473-253950 ಗೆ 3 ಕರೆಗಳು ಸ್ವೀಕೃತವಾಗಿವೆ ಎಂದು ಅವರು ತಿಳಿಸಿದ್ದಾರೆ.
25,789 ಪ್ರಯಾಣಿಕರ ತಪಾಸಣೆ: ಜಿಲ್ಲಾಡಳಿತದ ವತಿಯಿಂದ ನೋವೆಲ್ ಕೊರೊನಾ ವೈರಸ್ ತಡೆಗೆ ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯಲ್ಲಿ ಸ್ಥಾಪಿಸಿರುವ 6 ಚೆಕ್‍ಪೋಸ್ಟ್/ ಸ್ಕ್ರೀನಿಂಗ್ ಸೆಂಟರ್/ ಮಾಹಿತಿ ಡೆಸ್ಕ್‍ಗಳಲ್ಲಿ ಇಲ್ಲಿಯವರೆಗೆ 25,789 ಜನರನ್ನು ತಪಾಸಣೆ ಮಾಡಲಾಗಿದೆ. ಯಾದಗಿರಿ ನಗರದ ರೈಲ್ವೆ ನಿಲ್ದಾಣ, ಜಿಲ್ಲಾ ನ್ಯಾಯಾಲಯ, ಹೊಸ ಬಸ್ ನಿಲ್ದಾಣ ಹಾಗೂ ಯರಗೋಳ, ಗುರುಮಠಕಲ್ ಸಮೀಪದ ಇಟಗಾಲ್ ಕ್ರಾಸ್, ಮುಡಬೂಳ ಗ್ರಾಮಗಳಲ್ಲಿ ಚೆಕ್‍ಪೋಸ್ಟ್‍ಗಳನ್ನು ಸ್ಥಾಪಿಸಲಾಗಿದ್ದು, ಜನರನ್ನು ತಪಾಸಣೆ ಮಾಡಲಾಗುತ್ತಿದೆ.
ಸಾರ್ವಜನಿಕರಿಗೆ ಮನವಿ: ಕೋವಿಡ್-19 ಪೀಡಿತ ದೇಶಗಳಿಂದ ಹಿಂತಿರುಗಿರುವ ಅಥವಾ ಸೋಂಕಿತ ವ್ಯಕ್ತಿಯ ಸಂಪರ್ಕದಲ್ಲಿರುವ ಯಾರಾದರು ಭಾರತಕ್ಕೆ ಹಿಂತಿರುಗಿದ ದಿನದಿಂದ 14 ದಿನಗಳವರೆಗೆ ರೋಗ ಲಕ್ಷಣಗಳು ಇರಲಿ ಅಥವಾ ಇಲ್ಲದಿರಲಿ ಮನೆಯಲ್ಲಿ ಪ್ರತ್ಯೇಕವಾಗಿರಬೇಕು ಹಾಗೂ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ವರದಿ ಮಾಡಿಕೊಳ್ಳಬೇಕು. ಜಿಲ್ಲಾಡಳಿತದ ಕಂಟ್ರೋಲ್ ರೂಮ್ ಸಹಾಯವಾಣಿ ಸಂಖ್ಯೆ 08473-253950 ಅಥವಾ 24*7 ಉಚಿತ ಆರೋಗ್ಯ ಸಹಾಯವಾಣಿ 104ಕ್ಕೆ ಕರೆ ಮಾಡಬಹುದು ಎಂದು ಅವರು ತಿಳಿಸಿದ್ದಾರೆ.
ಸಾರ್ವಜನಿಕರು ವೈಯಕ್ತಿಕ ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು. ಕೆಮ್ಮುವಾಗ ಅಥವಾ ಸೀನುವಾಗ ಕರವಸ್ತ್ರ/ಟಿಶ್ಯೂ ಪೇಪರನ್ನು ಬಳಸಿ. ಕೈ ಸ್ವಚ್ಛಗೊಳಿಸುವ ದ್ರಾವಣ ಅಥವಾ ನೀರು ಮತ್ತು ಸೋಪು ಬಳಸಿ ಆಗಾಗ ಕೈಗಳನ್ನು ತೊಳೆದುಕೊಳ್ಳಿ ಮತ್ತು ಸಾಮಾಜಿಕ ಸಮೂಹ ಗುಂಪು ಸೇರುವುದನ್ನು ಮಾಡಬಾರದು ಎಂದು ಅವರು ಸಲಹೆ ನೀಡಿದ್ದಾರೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ