ಶನಿವಾರ, ಮಾರ್ಚ್ 7, 2020

ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಎಚ್ಚರಿಕೆ
ಕುಡಿಯುವ ನೀರಿನ ಸಮಸ್ಯೆ ಕಂಡುಬಂದರೆ ಶಿಸ್ತು ಕ್ರಮ
ಯಾದಗಿರಿ, ಮಾರ್ಚ್ 07 (ಕರ್ನಾಟಕ ವಾರ್ತೆ): ಜಿಲ್ಲೆಯ 123 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ ಯಾವುದೇ ಹಳ್ಳಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಕಂಡುಬಂದರೆ ತಕ್ಷಣ ಕಾರ್ಯಪ್ರವೃತ್ತರಾಗಿ ಒಂದೆರಡು ದಿನಗಳಲ್ಲಿ ಪರಿಹರಿಸಬೇಕು. ಇಲ್ಲವಾದಲ್ಲಿ ಆಯಾ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ, ತಹಶೀಲ್ದಾರ್ ಮತ್ತು ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆಯ ಇಂಜಿನಿರ್‍ಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಪಶುಸಂಗೋಪನೆ, ಹಜ್ ಮತ್ತು ವಕ್ಫ್ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಭು ಬಿ.ಚವ್ಹಾಣ್ ಅವರು ಎಚ್ಚರಿಕೆ ನೀಡಿದರು.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ನಡೆದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮ(ಕೆಡಿಪಿ)ಗಳ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ, ಅವರು ಮಾತನಾಡಿದರು.
ಮಾರ್ಚ್, ಏಪ್ರಿಲ್, ಮೇ ಹಾಗೂ ಜೂನ್ ತಿಂಗಳುಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಬಹುದು. ಆದ್ದರಿಂದ ಸಮಸ್ಯೆ ಕಂಡುಬರುವ ಹಳ್ಳಿಗಳ ಪಟ್ಟಿ ಮಾಡಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ಸಾರ್ವಜನಿಕರು, ಜನಪ್ರತಿನಿಧಿಗಳು, ಪತ್ರಿಕೆ ಅಥವಾ ಯಾವುದೇ ಮೂಲಗಳಿಂದ ಕುಡಿಯುವ ನೀರಿನ ತೊಂದರೆ ಇರುವುದಾಗಿ ಕಂಡುಬಂದಲ್ಲಿ ತಕ್ಷಣ ಸ್ಪಂದಿಸಬೇಕು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರಬೇಕು. ಮೊಬೈಲ್ ಸ್ವಿಚ್ ಆಫ್ ಮಾಡಬಾರದು ಎಂದು ಅವರು ತಾಕೀತು ಮಾಡಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಗ್ರಾಮ ಪಂಚಾಯಿತಿಗಳಿಗೆ ಭೇಟಿ ನೀಡಬೇಕು. ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು ಬರುವ ಸೋಮವಾರ ಕುಡಿವ ನೀರು ಮತ್ತು ಸ್ವಚ್ಛ ಭಾರತ್ ಕುರಿತಂತೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಸಭೆ ನಡೆಸಿ, ವರದಿ ನೀಡುವಂತೆ ಅವರು ಸೂಚಿಸಿದರು.
ಶಾಸಕರಾದ ರಾಜುಗೌಡ ಅವರು ಮಾತನಾಡಿ, ಕುಡಿಯುವ ನೀರಿನ ಸಮಸ್ಯೆ ನಿವಾರಣೆಯಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ತಾಳುತ್ತಾರೆ. ಸಮಸ್ಯೆ ಉಂಟಾದಾಗ 15 ದಿನಗಳಾದರೂ ಸಮಸ್ಯೆ ಪಡಿಹ
ರಿಸುವುದಿಲ್ಲ. ಅಲ್ಲದೇ ಕಳೆದ ಬಾರಿಯ ಬೋರ್‍ವೆಲ್ ರಿಪೇರಿ ಹಾಗೂ ನೀರು ಸರಬರಾಜು ಮಾಡಿದ ಗುತ್ತಿಗೆದಾರರಿಗೆ ಹಣ ಪಾವತಿಸಿಲ್ಲ ಎಂದು ಆರೋಪಿಸಿದರು. ಇದಕ್ಕೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾದ ರಾಜಶೇಖರಗೌಡ ಪಾಟೀಲ್ ವಜ್ಜಲ್ ಅವರೂ ದನಿಗೂಡಿಸಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಿಲ್ಪಾ ಶರ್ಮಾ ಅವರು ಮಾತನಾಡಿ, ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಸಹಾಯವಾಣಿ ಆರಂಭಿಸಲಾಗಿದೆ. ಹಣ ಪಾವತಿ ಬಾಕಿ ಇದ್ದಲ್ಲಿ ಪರಿಶೀಲಿಸಿ, ಕ್ರಮ ಕೈಗೊಳ್ಳಲಾಗುವುದು ಎಂದು ಈ ಸಂದರ್ಭದಲ್ಲಿ ತಿಳಿಸಿದರು.
ಮುಂದಿನ ಸಭೆಯ ಹೊತ್ತಿಗೆ ವಿವಿಧ ಇಲಾಖೆಗಳಿಂದ ಕೈಗೊಂಡಿರುವ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕು. ರೈತರ ಆತ್ಮಹತ್ಯೆ ಪ್ರಕರಣಗಳಿಗೆ ಪರಿಹಾರ ನೀಡುವಲ್ಲಿ ವಿಳಂಬ ಮಾಡಬಾರದು. ಫಲಾನುಭವಿಗಳಿಗೆ ಸೌಲಭ್ಯ ಒದಗಿಸುವಲ್ಲಿ ಅಕ್ರಮ ಎಸಗಿದರೆ ತಕ್ಷಣ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಎಚ್ಚರಿಕೆ ನೀಡಿದರು. ಸಭೆಗೆ ಗೈರಾದ ಡಿಡಿಪಿಐ ಹಾಗೂ ಇತರೆ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮಕ್ಕೆ ಅವರು ಶಿಫಾರಸು ಮಾಡಿದರು.
ಶಾಸಕರಾದ ರಾಜುಗೌಡ ಅವರು ಮಾತನಾಡಿ, ಬಿಸಿಯೂಟ ಯೋಜನೆಯ ಆಹಾರ ಸರಬರಾಜು ನಿಲ್ಲಿಸಲಾಗಿದೆ. ಮೊದಲು ನೀಡಿದ ಟೆಂಡರ್‍ದಾರರಿಗೆ ಪುನಃ ನೀಡಲಾಗಿದೆ. ಈ ಬಗ್ಗೆ ಅಕ್ಷರ ದಾಸೋಹ ಯೋಜನೆಯ ಶಿಕ್ಷಣಾಧಿಕಾರಿ ದೊಡ್ಡಪ್ಪ ಹೊಸಮನಿ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಸಭೆ ಆರಂಭದಲ್ಲಿ ಪಟ್ಟು ಹಿಡಿದರು. ಇದಕ್ಕೆ ಸಾಥ್ ನೀಡಿದ ಶಾಸಕರಾದ ವೆಂಕಟರೆಡ್ಡಿಗೌಡ ಮುದ್ನಾಳ, ಶರಣಬಸಪ್ಪಗೌಡ ದರ್ಶನಾಪೂರ ಅವರು ಮಾತನಾಡಿ, ಸಚಿವರು, ಶಾಸಕರು ಮತ್ತು ಜನಪ್ರತಿನಿಧಿಗಳ ಮಾತಿಗೆ ಅಧಿಕಾರಿಗಳು ಬೆಲೆ ಕೊಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಮಾತನಾಡಿ, ಅಕ್ಷರ ದಾಸೋಹ ಯೋಜನೆಯ ಟೆಂಡರ್ ಪ್ರಕ್ರಿಯೆ ಬಗ್ಗೆ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರನ್ನು ಅಮಾನತುಗೊಳಿಸುವಂತೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗೆ ಸೂಚಿಸಿದರು.
ಕೆರೆಗಳ ಒತ್ತುವರಿ ತೆರವಿಗೆ ಸೂಚನೆ: ಶಾಸಕರಾದ ರಾಜುಗೌಡ ಅವರು ಮಾತನಾಡಿ, ಜಿಲ್ಲೆಯಲ್ಲಿನ ಸಾಕಷ್ಟು ಕೆರೆಗಳು ಒತ್ತುವರಿ ಆಗಿವೆ. ಕೆರೆಗಳ ಅತಿಕ್ರಮಣ ಮಾಡಿಕೊಂಡವರ ವಿರುದ್ಧ ಕ್ರಮ ಕೈಗೊಳ್ಳಲು ವಿಶೇಷ ಕೋರ್ಟ್ ಇದ್ದು, ಕೆರೆಗಳನ್ನು ಸರ್ವೆ ಮಾಡಲು ಸೂಚಿಸುವಂತೆ ಸಚಿವರಿಗೆ ಮನವಿ ಮಾಡಿದರು. ಆಗ ಸಚಿವರು ಮಾತನಾಡಿ, ಜಿಲ್ಲೆಯಲ್ಲಿನ ಎಲ್ಲಾ ಕೆರೆಗಳನ್ನು ಸರ್ವೆ ಮಾಡಿ ಗಡಿ ಗುರುತಿಸಬೇಕು. ಅತಿಕ್ರಮಣ ಮಾಡಿಕೊಂಡಿದ್ದರೆ ತೆರವಿಗೆ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಭು ಬಿ.ಚವ್ಹಾಣ್ ಅವರು ಸೂಚಿಸಿದರು.
ಮಹತ್ವಾಕಾಂಕ್ಷೆ ಯಾದಗಿರಿ ಜಿಲ್ಲೆಯಲ್ಲಿ ಕಳೆದ ಬಾರಿ ಭಾರತೀಯ ಜೈನ ಸಂಘಟನೆಯಿಂದ ಕೈಗೊಂಡ ಕೆರೆ ಹೂಳೆತ್ತುವ ಯೋಜನೆಯು ಯಶಸ್ವಿಯಾಗಿದೆ. ಮಷಿನ್‍ನಿಂದ ಹೂಳು ತೆಗೆದುಕೊಡುವ ಕಾರ್ಯಕ್ಕೆ ರಾಜ್ಯ ಸರ್ಕಾರ ಸಂಘಟನೆಗೆ ಡೀಸೆಲ್ ನೆರವು ಮಾತ್ರ ನೀಡುತ್ತದೆ. ಮಷಿನ್‍ನಿಂದ ತೆಗೆದುಕೊಟ್ಟ ಕೆರೆಯ ಹೂಳನ್ನು ರೈತರು ತಮ್ಮ ಸ್ವಂತ ಖರ್ಚಿನಲ್ಲಿ ಹೊಲಗಳಿಗೆ ತೆಗೆದುಕೊಂಡು ಹೋಗುತ್ತಾರೆ. ಈ ಬಾರಿಯೂ ಹೆಚ್ಚಿನ ಕೆರೆಗಳನ್ನು ಆಯ್ಕೆ ಮಾಡಿ ಹೂಳೆತ್ತಲಾಗುವುದು. ಜಲಾಮೃತ ಯೋಜನೆಯ ಹಣವನ್ನು ಕೂಡ ಈ ಯೋಜನೆಗೆ ಬಳಸುವ ಬಗ್ಗೆ ಪರಿಶೀಲನೆ ನಡೆಸುವಂತೆ ಜಿಲ್ಲಾ ಪಂಚಾಯಿತಿ ಸಿಇಒ ಅವರಿಗೆ ನಿರ್ದೇಶಿಸಿದರು.
ಲೋಕಸಭಾ ಸದಸ್ಯರಾದ ರಾಜಾ ಅಮರೇಶ್ವರ ನಾಯಕ ಅವರು ಮಾತನಾಡಿ, ಕೊರೋನಾ ವೈರಸ್ ಜಾಗೃತಿ ಬಗ್ಗೆ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸಭೆ ನಡೆಸಬೇಕು. ಗ್ರಾಮಗಳಲ್ಲಿ ಡಂಗೂರ ಸಾರಬೇಕು. ಬಿಸಿಲು ಹೆಚ್ಚಾಗಿರುವ ಕಾರಣ ಈ ವೈರಸ್ ಹರಡುವುದಿಲ್ಲ. ಜನರಲ್ಲಿ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಬೇಕು. ಜನ ಔಷಧಿ ಕೇಂದ್ರಗಳಲ್ಲಿ ಶೇ.50ರಿಂದ 80ರಷ್ಟು ಕಡಿಮೆ ಬೆಲೆಯಲ್ಲಿ ಔಷಧಿ ಲಭ್ಯವಿರುವುದರಿಂದ ಸಾರ್ವಜನಿಕರಿಗೆ ತಿಳಿವಳಿಕೆ ನೀಡಬೇಕು ಎಂದು ಅವರು ಸೂಚಿಸಿದರು.
ಜಿಲ್ಲಾ ಪಂಚಾಯಿತಿ ಸಿಇಒ ಶಿಲ್ಪಾ ಶರ್ಮಾ ಅವರು ಮಾತನಾಡಿ, ಸೊಳ್ಳೆ ಕಾಟ ತಡೆಗಾಗಿ ಫಾಗಿಂಗ್ ಮಷೀನ್‍ಗಳನ್ನು ಖರೀದಿಸಲಾಗಿದ್ದು, ಗ್ರಾಮ ಪಂಚಾಯಿತಿಗಳಿಗೆ ವಿತರಿಸಲಾಗುವುದು ಎಂದು ತಿಳಿಸಿದರು. ಆಯುಷ್ಮಾನ್ ಭಾರತ-ಆರೋಗ್ಯ ಕರ್ನಾಟಕ ನೋಂದಣಿಯಲ್ಲಿ ಜಿಲ್ಲೆಯು ಪ್ರಥಮ ಸ್ಥಾನದಲ್ಲಿರುವುದಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಮಲ್ಲನಗೌಡ ಎಸ್.ಪಾಟೀಲ್ ಅವರು ತಿಳಿಸಿದರು.

ಲೋಕೋಪಯೋಗಿ ಇಲಾಖೆಯ ದೇವಿದಾಸ್ ಚವ್ಹಾಣ್ ಅವರು ಮಾತನಾಡಿ, ಪ್ರವಾಹದಲ್ಲಿ ಹಾಳಾಗಿದ್ದ 11 ರಸ್ತೆ ಹಾಗೂ 6 ಸೇತುವೆಗಳ ದುರಸ್ತಿ ಕಾಮಗಾರಿಗಳಲ್ಲಿ ಈಗಾಗಲೇ 6 ಪೂರ್ಣಗೊಂಡಿದ್ದು, ಬಾಕಿ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸಲಾಗುವುದು. 2019-20ನೇ ಸಾಲಿನ ಕೆಕೆಆರ್‍ಡಿಬಿ ಯೋಜನೆ ಅಡಿಯ ಒಟ್ಟು 159 ಕಾಮಗಾರಿಗಳಲ್ಲಿ 135 ಆರಂಭಿಸಲಾಗಿದೆ. ಇವುಗಳಲ್ಲಿ 30 ಪೂರ್ಣಗೊಂಡಿದ್ದು, 105 ಪ್ರಗತಿ ಹಂತದಲ್ಲಿವೆ ಎಂದು ಮಾಹಿತಿ ನೀಡಿದರು.
ಆಯುಷ್ ಇಲಾಖೆಯ ವಿವಿಧ ಆಯುಷ್ ಪದ್ಧತಿಗಳ ಪರಿಚಯ ಹಾಗೂ ಆರೋಗ್ಯ ಸಲಹಾ ಕೈಪಿಡಿಯನ್ನು ಈ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ್ ಭಗವಾನ್ ಸೋನವಣೆ, ಅಪರ ಜಿಲ್ಲಾಧಿಕಾರಿಗಳಾದ ಪ್ರಕಾಶ್ ಜಿ.ರಜಪೂತ, ಸಹಾಯಕ ಆಯುಕ್ತರಾದ ಶಂಕರಗೌಡ ಸೋಮನಾಳ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಮುಕ್ಕಣ್ಣ ಕರಿಗಾರ ಸೇರಿದಂತೆ ಜಿಲ್ಲಾ ಪಂಚಾಯಿತಿಯ ಸದಸ್ಯರು ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

                                                             ವಾ.ವಿ.ಸ.45 ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಶರಣಬಸಪ್ಪ ದರ್ಶನಾಪೂರ ಅವರ ಜಿಲ್ಲಾ ಪ್ರವಾಸ ಯಾದಗ...