ಮಂಗಳವಾರ, ಮಾರ್ಚ್ 3, 2020

ಮಿಷನ್ ಇಂದ್ರಧನುಷ್ ಕಾರ್ಯಕ್ರಮ, ವೈದ್ಯಾಧಿಕರಿಗಳ ಪ್ರಗತಿ ಪರಿಶೀಲನೆ ಸಭೆ
ಜಿಲ್ಲೆಯಲ್ಲಿ ಇಂದ್ರಧನುಷ್ 2.0 ಅಭಿಯಾನ 
ಯಾದಗಿರಿ, ಮಾರ್ಚ್ 03 (ಕರ್ನಾಟಕ ವಾರ್ತೆ): ಜಿಲ್ಲೆಯಾದ್ಯಂತ ಮಾರ್ಚ್ 2ರಿಂದ 11ರವರೆಗೆ ನಡೆಯಲಿರುವ ತೀವ್ರತರದ ಮಿಷನ್ ಇಂದ್ರಧನುಷ್ 2.0 ಅಭಿಯಾನದಲ್ಲಿ ಲಸಿಕೆಯಿಂದ ವಂಚಿತರಾದ ಮಕ್ಕಳು, ಗರ್ಭಿಣಿಯರಿಗೆ ತಪ್ಪದೇ ಲಸಿಕೆ ಹಾಕಿಸಬೇಕು. ಲಸಿಕೆಯಿಂದ ಯಾರೂ ವಂಚಿತವಾಗಬಾರದು ಎಂದು ಜಿಲ್ಲಾಧಿಕಾರಿಗಳಾದ ಎಂ.ಕೂರ್ಮಾರಾವ್ ಸೂಚಿಸಿದರು. 
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳ ಸಭಾಂಗಣದಲ್ಲಿ ನಡೆದ ತೀವ್ರತರದ ಮಿಷನ್ ಇಂದ್ರಧನುಷ್ ಕಾರ್ಯಕ್ರಮ, ಹಾಗೂ ವೈದ್ಯಾಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಸರ್ವೆ ಮುಖಾಂತರ ಲಸಿಕೆಯಿಂದ ವಂಚಿತ 1.222 ಮಕ್ಕಳು ಮಕ್ಕಳು ಹಾಗೂ 121 ಗರ್ಭಿಣಿಯರನ್ನು ಗುರುತಿಸಿದ್ದು, ಅಭಿಯಾನದಲ್ಲಿ ಇವರೆಲ್ಲರಿಗೂ ಲಸಿಕೆ ನೀಡಬೇಕು. ಅಭಿಯಾನದ ಯಶಸ್ವಿಗೆ ಆರೋಗ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸಬೇಕು ಎಂದರು. ಇನ್ನು ಇಂದ್ರಧನುಷ್ 2.0 ಅಭಿಯಾನದ ಬಗ್ಗೆ ಲಸಿಕೆ ನೀಡುವುದರ ಜೊತೆಗೆ ಇನ್ನಿತರ ಡೆಂಗ್ಯೂ ಜ್ವರ ಸೇರಿದಂತೆ ವಿವಿಧ ರೋಗಗಳ ಬಗೆ ಪರಿಶೀಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಬೇಕು. ಅಲ್ಲದೇ ಅಂಗನವಾಡಿ ಆಶಾ ಕಾರ್ಯಕರ್ತೆಯರು, ನರ್ಸ್‍ಗಳು ನಿತ್ಯ ಇದರ ಬಗ್ಗೆ ಚರ್ಚಿಸಬೇಕು ಎಂದರು. ಅಲ್ಲದೇ ಪ್ರತಿಯೊಂದು ಹಳ್ಳಿ ಹಾಗೂ ತಾಂಡಾಗಳಿಗೆ ಭೇಟಿ ನೀಡಿ ಮಕ್ಕಳಿಗೆ ಲಸಿಕೆ ಹಾಕುವುದರ ಜೊತೆಗೆ ಇತ್ಯಾದಿ ರೋಗಗಳ ಹರುಡುವಿಕೆಯ ಬಗ್ಗೆ ತಪಾಸಣೆ ನಡೆಸಬೇಕು ಎಂದು ಹೇಳಿದರು. ಜಿಲ್ಲೆಯ ಸುರಪುರ ತಾಲೂಕಿನ ಕೊಡೇಕಲ್ ಸಮೀಪದ ಮಾರನಾಳ ತಾಂಡಾದಲ್ಲಿ ಡೆಂಗ್ಯೂ ಜ್ವರದಿಂದ ಓರ್ವ ವ್ಯಕ್ತಿ ಬಳಲುತ್ತಿದ್ದಾರೆ. ಅಲ್ಲದೇ ಜ್ವರ ಹಾಗೂ ವಾಂತಿ ಭೇದಿಯಿಂದ ಕೆಲ ಜನ್ರು ಬಳಲುತ್ತಿದ್ದು, ಅವರಿಗೆ ಸೂಕ್ತವಾದ ಚಿಕಿತ್ಸೆ ನೀಡಬೇಕು. ಈ ಬಗ್ಗೆ ಸ್ಥಳೀಯರೇ ಕರೆ ಮಾಡಿ ವಿಷಯ ತಿಳಿಸಿದ್ದು, ಕೂಡಲೇ ಈ ಸಮಸ್ಯೆ ಬಗೆಹರಿಸಬೇಕೆಂದು ಕೊಡೇಕಲ್ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಪವನ್ ಪಿ. ರಾವ್ ಅವರಿಗೆ ಸೂಚಿಸಿದರು. 
ಜಿಲ್ಲಾ ಪಂಚಾಯತ್ ಸಿಇಒ ಶಿಲ್ಪಾ ಶರ್ಮಾ ಅವರು ಮಾತನಾಡಿ, ಲಸಿಕೆಯಿಂದ ವಂಚಿತ ಆದ ಮಕ್ಕಳಿಗೆ ಲಸಿಕೆ ಹಾಕಬೇಕು ಹಾಗೂ ಗರ್ಭಿಣಿಯರ ಆರೋಗ್ಯವನ್ನು ತಪಾಸಣೆ ಮಾಡಬೇಕು ಎಂದರು. ಅಲ್ಲದೇ ಮುಖ್ಯವಾಗಿ ಮಾರನಾಳ ತಾಂಡದಂತಹ ಪ್ರಕರಣಗಳು ಬಂದರೆ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಾಥಮಿಕ ವೈದ್ಯಾಧಿಕಾರಿಗಳು ಹಾಗೂ ತಾಲೂಕು ವೈದ್ಯಾಧಿಕಾರಿಗಳಿಗೆ ಸೂಚಿಸಿದರು. ಕಲಬುರಗಿಯ ವಿಭಾಗಮಟ್ಟದ ವೈದ್ಯಕೀಯ ಸರ್ವೇಕ್ಷಣಾಧಿಕಾರಿ (ವಿಶ್ವ ಆರೋಗ್ಯ ಸಂಸ್ಥೆ) ಡಾ.ಅನಿಲ್‍ಕುಮಾರ್ ಎಸ್.ತಾಳಿಕೋಟಿ ಅವರು ಮಾತನಾಡಿ, ತೀವ್ರತರದ ಮಿಷನ್ ಇಂದ್ರಧನುಷ್ 2.0 ಲಸಿಕಾ ಕಾರ್ಯಕ್ರಮ ನಾಲ್ಕು ಸುತ್ತುಗಳಲ್ಲಿ ನಡೆದಿದ್ದು, ಈಗಾಗಲೇ ಮೊದಲನೇ ಸುತ್ತು ಡಿಸೆಂಬರ್ 02 2019 ರಿಂದ 10ರವೆರೆಗೆ, ಎರಡನೇ ಸುತ್ತು ಜನವರಿ 03 2020 ರಿಂದ 11ರವರೆಗೆ, ಮೂರನೇ ಸುತ್ತು ಫೆಬ್ರವರಿ 3ರಿಂದ 14ರವರೆಗೆ ನಡೆದಿದ್ದು, ಈಗ ನಾಲ್ಕನೇ ಸುತ್ತು ಮಾರ್ಚ್ 2ರಿಂದ 11ರವರೆಗೆ ನಡೆಯಲಿದೆ ಎಂದು ಹೇಳಿದರು. ಜಿಲ್ಲಾ ಆರ್‍ಸಿಎಚ್ ಅಧಿಕಾರಿಗಳಾದ ಡಾ.ಲಕ್ಷ್ಮೀಕಾಂತ ಅವರು ಮಾತನಾಡಿ, ಈಗಾಗಲೇ ಧನುರ್ವಾಯು, ನಾಯಿಕೆಮ್ಮು ಮತ್ತು ಗಂಟಲುಮಾರಿ ರೋಗಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ 5-6 ವರ್ಷದೊಳಗಿನ ಮಕ್ಕಳಿಗೆ ಅಂಗನವಾಡಿಗಳಲ್ಲಿ ಚುಚ್ಚುಮದ್ದು ನೀಡಲಾಗಿದೆ. ಜಿಲ್ಲೆಯಲ್ಲಿ 10 ಗಂಟಲುಮಾರಿ ಪ್ರಕರಣಗಳಿದ್ದು, ಈ ರೋಗ ತ್ವರಿತವಾಗಿ ಹರಡುವುದರಿಂದ ಪ್ರತಿಯೊಬ್ಬ ಪೋಷಕರು ಮಕ್ಕಳಿಗೆ ತಪ್ಪದೇ ಲಸಿಕೆ ಕೊಡಿಸಬೇಕು ಎಂದು ಕೋರಿದರು. ಅಲ್ಲದೇ ಇಂದ್ರಧನುಷ್ 2.0 ಲಸಿಕೆ ವಂಚಿತರಾದ ಮಕ್ಕಳು ಹಾಗೂ ಗರ್ಭಿಯರು ತಪ್ಪದೇ ಲಸಿಕಿ ಹಾಕಿಸಿಕೊಳ್ಳಬೇಕೆಂದು ಕೋರಿದರು.  ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಂ.ಎಸ್.ಪಾಟೀಲ್, ಆರೋಗ್ಯ ಇಲಾಖೆ ಕಲಬುರಗಿ, ಕಲ್ಯಾಣ ಕರ್ನಾಟಕದ ಸಹ ನಿರ್ದೇಶಕರಾದ ಡಾ.ಶಿವಾನಂದ ಶಿವಗಾಳಿ, ವಿಶ್ವ ಆರೋಗ್ಯ ಸಂಸ್ಥೆ ಯಾದಗಿರಿ ವಿಭಾಗದ ಡಾ.ಅನಿಲ್ ಕುಮಾರ್ ತಾಳಿಕೋಟಿ, ಜಿಲ್ಲಾ ಕುಷ್ಠರೋಗ ನಿರ್ಮೂಲನಾ ಕಾರ್ಯಕ್ರಮ ಅಧಿಕಾರಿ ಡಾ.ಭಗವಂತ ಅನವಾರ ಹಾಗೂ ತಾಲ್ಲೂಕು ಆರೋಗ್ಯ ಅಧಿಕಾರಿಗಳು, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಭಾಗಿಯಾಗಿದ್ದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

                                                             ವಾ.ವಿ.ಸ.45 ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಶರಣಬಸಪ್ಪ ದರ್ಶನಾಪೂರ ಅವರ ಜಿಲ್ಲಾ ಪ್ರವಾಸ ಯಾದಗ...