ಗುರುವಾರ, ಮಾರ್ಚ್ 12, 2020

ಕಾರ್ಮಿಕ ಸಮ್ಮಾನ ದಿನಾಚರಣೆ, ಶ್ರಮ ಸಮ್ಮಾನ ಪ್ರಶಸ್ತಿ ಪ್ರದಾನ
ಕಾರ್ಮಿಕರಿಲ್ಲದೆ ಮಾಲೀಕರಾಗಲು ಸಾಧ್ಯವಿಲ್ಲ
-ರಾಜಶೇಖರಗೌಡ ಪಾಟೀಲ್ ವಜ್ಜಲ್
ಯಾದಗಿರಿ, ಮಾರ್ಚ್ 12 (ಕರ್ನಾಟಕ ವಾರ್ತೆ): ಪ್ರಸ್ತುತ ದಿನಗಳಲ್ಲಿ ನಾನು ಮಾಲೀಕ, ನಾನು ಗುತ್ತೇದಾರ ಅನ್ನುವ ಮನೋಭಾವನೆ ಹೆಚ್ಚಾಗುತ್ತಿದೆ. ಗುತ್ತಿಗೆದಾರ, ಕೈಗಾರಿಕೆಗಳ ಮಾಲೀಕ ಎನಿಸಿಕೊಳ್ಳಲು ಕಾರ್ಮಿಕರೇ ಕಾರಣ. ಭವ್ಯ ಕಟ್ಟಡಗಳಲ್ಲಿ ನಾವು ಕುಳಿತುಕೊಳ್ಳುತ್ತಿದ್ದೇವೆ ಎಂದರೆ ಅದು ಕಾರ್ಮಿಕರ ಪರಿಶ್ರಮದಿಂದ ಮಾತ್ರ. ಕಾರ್ಮಿಕರಿಲ್ಲದೆ ಮಾಲೀಕರಾಗಲು ಸಾಧ್ಯವಿಲ್ಲ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾದ ರಾಜಶೇಖರಗೌಡ ಪಾಟೀಲ್ ವಜ್ಜಲ್ ಅವರು ಹೇಳಿದರು.
ಜಿಲ್ಲಾಡಳಿತ ಭವನದ ಅಡಿಟೋರಿಯಂನಲ್ಲಿ ಗುರುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕಾರ್ಮಿಕ ಇಲಾಖೆ, ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ ಸಂಯುಕ್ತಾಶ್ರಯದಲ್ಲಿ ಕಾರ್ಮಿಕ ಸಮ್ಮಾನ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಅಸಂಘಟಿತ ಕಾರ್ಮಿಕರಿಗೆ ಶ್ರಮ ಸಮ್ಮಾನ ಪ್ರಶಸ್ತಿ ಮತ್ತು ವಿಶೇಷ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ, ಅವರು ಮಾತನಾಡಿದರು. ಕಾರ್ಮಿಕರನ್ನು ಸರ್ಕಾರ ಈಗಾಗಲೇ ಪ್ರೋತ್ಸಾಹ ನೀಡುತ್ತಿದೆ. ಆದರೆ, ಕಾರ್ಮಿಕರಿಗೆ ಅತೀ ಕಡಿಮೆ ಸೌಲಭ್ಯ ಸಿಗುತ್ತಿದೆ. ಹೀಗಾಗಿ ಕಾರ್ಮಿಕರ ಹೆಚ್ಚಿನ ಸೌಲಭ್ಯಗಳನ್ನು ತಲುಪಿಸುವ ನಿಟ್ಟಿನಲ್ಲಿ ಚಿಂತನೆ ನಡೆಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಕಾಯಕ ನಂಬಿ ಜೀವನ ನಡೆಸುವ ಜೀವಿಗಳ ಯೋಗಕ್ಷೇಮಕ್ಕೆ ಹೆಚ್ಚಿನ ಒತ್ತು ನೀಡಲಾಗುವುದು ಎಂದು ತಿಳಿಸಿದರು. ಜಿಲ್ಲಾಧಿಕಾರಿಗಳಾದ ಎಂ.ಕೂರ್ಮಾ ರಾವ್ ಅವರು ಮಾತನಾಡಿ, ಅಸಂಘಟಿತ ಕಾರ್ಮಿಕರ ಪ್ರತಿಭೆ ಗುರುತಿಸಿ ಅವರಿಗೆ ಶ್ರಮ ಸಮ್ಮಾನ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ. ತಮ್ಮ ತಲಾತಲಾಂತರಿಂದ ಕಲಿತುಕೊಂಡು ಬಂದ ಕೌಶಲ್ಯಕ್ಕೆ ಇಲಾಖೆ ವತಿಯಿಂದ ಪ್ರೋತ್ಸಾಹ ಮತ್ತು ತರಬೇತಿಯಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಹೇಳಿದರು.
ಪ್ರಧಾನಮಂತ್ರಿ ಶ್ರಮಯೋಗಿ ಮಾನ್-ಧನ್ (ಪಿಎಂಎಸ್‍ವೈಎಂ) ಯೋಜನೆಡಿಯಲ್ಲಿ ಅಸಂಘಟಿತ ಕಾರ್ಮಿಕರು ಸಂಧ್ಯಾಕಾಲದಲ್ಲಿ ದುಡಿದು ಜೀವನ ನಡೆಸುವುದು ಕಷ್ಟಸಾಧ್ಯ. ಇಂತಹ ಅಸಂಘಟಿತ ವಲಯದ ಕಾರ್ಮಿಕರಿಗೆ ವಯೋವೃದ್ಧ ವೇಳೆಯಲ್ಲಿ ಸಾಮಾಜಿಕ ಭದ್ರತೆ ಕಲ್ಪಿಸಲು ಈ ಪಿಂಚಣಿ ಯೋಜನೆ ನೆರವಾಗಲಿದೆ. ಪ್ರತಿಯೊಬ್ಬ ಕಾರ್ಮಿಕರು ಈ ಯೋಜನೆಯಡಿ ನೋಂದಾಯಿಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.
ಅಸಂಘಟಿತ ಕಾರ್ಮಿಕರ ಕೆಲಸಕ್ಕೆ ಬ್ಯಾಂಕ್‍ಗಳು, ಸಂಘ- ಸಂಸ್ಥೆಗಳಿಂದ ಹಾಗೂ ಕಾರ್ಮಿಕ ಇಲಾಖೆಯಿಂದ ಸಹಕಾರ ಪಡೆದುಕೊಂಡು ಪ್ರಗತಿ ಹೊಂದಬೇಕು. ಪ್ರಸ್ತುತ ದಿನಮಾನಗಳಲ್ಲಿ ತಂತ್ರಜ್ಞಾನ ಮುಂದುವರೆದಿದ್ದು, ಕಾರ್ಮಿಕರು ಕೆಲಸದಲ್ಲಿನ ವಿವಿಧ ಕೌಶಲಗಳ ಬಗ್ಗೆ ತರಬೇತಿ ಪಡೆದು ಕಾರ್ಯನಿರ್ವಹಿಸಿದರೆ ಒಳಿತು ಎಂದು ತಿಳಿಸಿದರು. ಕೊರೊನಾ ವೈರಸ್ ಬಗ್ಗೆ ಯಾರೂ ಭಯಪಡುವ ಅಗತ್ಯವಿಲ್ಲ. ನಮ್ಮ ಜಿಲ್ಲೆಯಲ್ಲಿ ಕೊರೊನಾ ಬಗ್ಗೆ ಯಾವುದೇ ವರದಿ ಕಂಡುಬಂದಿಲ್ಲ. ಎಲ್ಲಾ ರೀತಿಯಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಜನರು ಎಚ್ಚರವಹಿಸಿ ವೈಯಕ್ತಿಕ ಸ್ವಚ್ಛತೆ ಕಾಪಾಡಿಕೊಳ್ಳಬೇಕು ಎಂದರು.
ಜಿಲ್ಲಾ ಬಾಲ ಕಾರ್ಮಿಕ ಯೋಜನಾ ನಿರ್ದೇಶಕರಾದ ರಘುವೀರ್‍ಸಿಂಗ್ ಠಾಕೂರ್ ಅವರು ಮಾತನಾಡಿ, ರಾಜ್ಯ ಸರ್ಕಾರ 43 ವಲಯಗಳ ಅಸಂಘಟಿತ ಕಾರ್ಮಿಕರನ್ನು ಗುರುತಿಸಿದ್ದು, 2017-18ನೇ ಸಾಲಿನಲ್ಲಿ ಅಂಬೇಡ್ಕರ್ ಕಾರ್ಮಿಕ ಸಹಾಯ ಹಸ್ತ ಯೋಜನೆಯನ್ನು ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ ಮೂಲಕ ಅನುಷ್ಠಾನಗೊಳಿಸಿದೆ. ಅಸಂಘಟಿತ ವಲಯಗಳಾದ ಹಮಾಲರು, ಚಿಂದಿ ಆಯುವವರು, ಗೃಹ ಕಾರ್ಮಿಕರು, ಟೈಲರ್ಸ್ ಹಾಗೂ ಮೆಕ್ಯಾನಿಕ್ ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ನೀಡಲಾಗುತ್ತಿದೆ ಎಂದು ಹೇಳಿದರು.
ಅಸಂಘಟಿತ ಕಾರ್ಮಿಕರ ವೃತ್ತಿ ಹಾಗೂ ಪ್ರತಿಭೆ ಗುರುತಿಸಿ ಈ ಪ್ರಶಸ್ತಿ ಪುರಸ್ಕಾರ ನೀಡುವುದರ ಜೊತೆಗೆ ಅವರ ಸೌಲತ್ತುಗಳಿಗಾಗಿ ಕಾರ್ಮಿಕ ಇಲಾಖೆ ಶ್ರಮಿಸುತ್ತಿದೆ. ಅಲ್ಲದೇ ಕಾರ್ಮಿಕರು ತಮ್ಮ ಮಕ್ಕಳನ್ನು ಕೆಲಸಕ್ಕೆ ಕಳಿಸುವ ಬದಲು ಅವರಿಗೆ ಉತ್ತಮ ಶಿಕ್ಷಣ ಕೊಡಿಸಬೇಕು ಎಂದು ತಿಳಿಸಿದರು. ಇದೇ ವೇಳೆ ಗೃಹ ಕಾರ್ಮಿಕರು, ಟೈಲರಿಂಗ್, ಕ್ಷೌರಿಕರು, ಕುಂಬಾರರು, ಅಗಸರು (ದೋಬಿ), ಮಂಡಕ್ಕಿ ಭಟ್ಟಿ ಹಾಗೂ ಹಮಾಲಿಗಳು ಸೇರಿದಂತೆ ವಿವಿಧ ಅಸಂಘಟಿತ ಕಾರ್ಮಿಕರಿಗೆ ಪ್ರಥಮ ಪ್ರಶಸ್ತಿ 15 ಸಾವಿರ ರೂ. ಮೌಲ್ಯದ ಚಿನ್ನದ ಪದಕ ಜೊತೆಗೆ ಪ್ರಶಂಸಾ ಪತ್ರ, ದ್ವಿತೀಯ ಪ್ರಶಸ್ತಿ 10 ಸಾವಿರ ರೂ. ಮೌಲ್ಯದ ಬೆಳ್ಳಿ ಪದಕ, ಪ್ರಶಂಸಾ ಪತ್ರ ಹಾಗೂ ತೃತೀಯ ಪ್ರಶಸ್ತಿ 8 ಸಾವಿರ ರೂ. ಮೌಲ್ಯದ ಬೆಳ್ಳಿ ಪದಕ, ಪ್ರಶಂಸಾ ಪತ್ರ ನೀಡಿ ಗೌರವಿಸಲಾಯಿತು. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಿಲ್ಪಾ ಶರ್ಮಾ, ಕಾರ್ಮಿ ಇಲಾಖೆ ಅಧಿಕಾರಿ ಶ್ರೀಹರಿ, ಯಾದಗಿರಿ ಕಾರ್ಮಿಕ ನಿರೀಕ್ಷಕರಾದ ಶಿವಶಂಕರ್ ತಳವಾರ ಸೇರಿದಂತೆ ಕಾರ್ಮಿಕ ಇಲಾಖೆ ಸಿಬ್ಬಂದಿ ಉಪಸ್ಥಿತರಿದ್ದರು. ಲಿಂಗೇರಿ ಸ್ಟೇಷನ್ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಸಂಗೀತ ಶಿಕ್ಷಕರಾದ ಚಂದ್ರಶೇಖರ ಗೋಗಿ ಹಾಗೂ ತಂಡದವರು ನಾಡಗೀತೆ ಹಾಡಿದರು. ಉಪನ್ಯಾಸಕಿ ಡಾ.ಜ್ಯೋತಿಲತಾ ತಡಿಬಿಡಿಮಠ ನಿರೂಪಿಸಿದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

                                                             ವಾ.ವಿ.ಸ.45 ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಶರಣಬಸಪ್ಪ ದರ್ಶನಾಪೂರ ಅವರ ಜಿಲ್ಲಾ ಪ್ರವಾಸ ಯಾದಗ...