ಸೋಮವಾರ, ಮಾರ್ಚ್ 2, 2020

ಡೆಂಗ್ಯೂ, ಚಿಕನ್‍ಗೂನ್ಯಾ ಜ್ವರ ಮುಂಜಾಗ್ರತೆಗೆ ಸಲಹೆ
ಯಾದಗಿರಿ, ಮಾರ್ಚ್ 02 (ಕರ್ನಾಟಕ ವಾರ್ತೆ)  ಜಿಲ್ಲೆಯಲ್ಲಿ ಮಳೆಗಾಲ ಇರುವುದರಿಂದ ಸಾರ್ವಜನಿಕರು ಡೆಂಗ್ಯೂ, ಚಿಕನ್‍ಗುನ್ಯಾ ಜ್ವರ ಬರದಂತೆ ಮುಂಜಾಗ್ರತೆ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಸರ್ವೇಕ್ಷಣಾ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಡೆಂಗ್ಯೂ ರೋಗವು ಇಡೀಸ್ ಈಜೀಪ್ಟಿ ಎಂಬ ಸೊಳ್ಳೆಯಿಂದ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ. ಸ್ವಚ್ಛವಾದ ನೀರಿನಲ್ಲಿ ತನ್ನ ಸಂತಾನೋತ್ಪತ್ತಿಯನ್ನು ಬೆಳೆಸುವ ಈ ಸೊಳ್ಳೆಯು ದಿನದಲ್ಲಿ ಮಾತ್ರ ಕಚ್ಚುತ್ತದೆ. 7 ದಿನಗಳಲ್ಲಿ ಮೊಟ್ಟೆಯಿಂದ ಮರಿ ಸೊಳ್ಳೆಯಾಗಿ ಪರಿವರ್ತನೆಗೊಳ್ಳುತ್ತದೆ. ಕಾರಣ ನೀರು ಸಂಗ್ರಹಿಸುವ ತೊಟ್ಟಿ, ಬ್ಯಾರಲ್, ಪಾತ್ರೆಗಳನ್ನು ಪ್ರತಿ 3-4 ದಿನಗಳಿಗೊಮ್ಮೆ ಸ್ವಚ್ಛವಾಗಿ ತಿಕ್ಕಿ ತೊಳೆದು ಬಿಸಿಲಿನಲ್ಲಿ ಒಣಗಿಸಿದ ನಂತರ ನೀರನ್ನು ತುಂಬಬೇಕು. ಏರ್‍ಕೂಲರ್‍ನಲ್ಲಿ ಸಂಗ್ರಹವಾದ ನೀರು ಮತ್ತು ಹೂವಿನ ಕುಂಡಲಿಗಳಲ್ಲಿ ಸಂಗ್ರಹಿಸಿದ ನೀರನ್ನು ಕೂಡ ಪ್ರತಿ 3-4 ದಿನಗಳಿಗೊಮ್ಮೆ ಬದಲಾಯಿಸಬೇಕು ಎಂದು ಅವರು ಸಲಹೆ ನೀಡಿದ್ದಾರೆ. ಡೆಂಗ್ಯೂ ರೋಗದ ಲಕ್ಷಣಗಳು: ತೀವ್ರ ತಲೆನೋವು, ಕಣ್ಣು ನೋವು, ಕೀಲು ಮತ್ತು ಸ್ನಾಯು ನೋವು, ಹಸಿವಾಗದೇ ಇರುವುದು, ತುರಿಕೆ ಹಾಗೂ ತೀವ್ರ ಜ್ವರ ಡೆಂಗ್ಯೂ ರೋಗದ ಲಕ್ಷಣಗಳಾಗಿವೆ. ರೋಗದ ಲಕ್ಷಣ ಕಂಡುಬಂದಲ್ಲಿ ತಕ್ಷಣ ಆಸ್ಪತ್ರೆಗೆ ಭೇಟಿ ನೀಡಿ, ವೈದ್ಯರನ್ನು ಸಂಪರ್ಕಿಸಬೇಕು. 
ಡೆಂಗ್ಯೂ ಜ್ವರ ಹರಡದಂತೆ ತಡೆಗಟ್ಟಲು ಕ್ರಮ: ಹೆಚ್ಚಿನ ವಿಶ್ರಾಂತಿ ಪಡೆಯಬೇಕು. ನೀರಿನ ಜೊತೆಗೆ ಸಾಕಷ್ಟು ಪ್ರಮಾಣದಲ್ಲಿ ದ್ರವ ಪದಾರ್ಥಗಳನ್ನು ಸೇವಿಸಬೇಕು. ಸೊಳ್ಳೆಯು ಕಚ್ಚದಂತೆ ಉದ್ದನೆಯ ತೋಳಿನ ಅಂಗಿ ಮತ್ತು ಪ್ಯಾಂಟ್‍ಗಳನ್ನು ಧರಿಸಬೇಕು ಹಾಗೂ ಸೊಳ್ಳೆ ಬತ್ತಿ, ಸೊಳ್ಳೆ ಪರದೆಯನ್ನು ಬಳಸಬೇಕು. ಕುಡಿಯುವ ನೀರಿನ ಮೂಲಗಳಾದ ಬಾವಿ, ಬೋರ್‍ವೆಲ್ ಹಾಗೂ ಕೈ ಪಂಪ್‍ಗಳ ಕನಿಷ್ಠ 100 ಅಡಿ ಸುತ್ತಮುತ್ತಲು ತಿಪ್ಪೆಗುಂಡಿ, ಕಸ-ಕಡ್ಡಿ ಹಾಗೂ ಮಲ ವಿಸರ್ಜನೆ ಮಾಡದಂತೆ ನೋಡಿಕೊಳ್ಳಬೇಕು. ಕುಡಿಯುವ ನೀರಿನ ಮೂಲಗಳಿಗೆ ಮೇಲ್ಮಟ್ಟದ ಸಂಗ್ರಹಗಾರಗಳಲ್ಲಿ ಪ್ರತಿದಿನ ಹಾಗೂ ತೆರೆದ ಬಾವಿಗಳಲ್ಲಿ ವಾರಕ್ಕೊಮ್ಮೆ ಕ್ಲೋರಿನೇಷನ್ ಮಾಡಬೇಕು. ಕ್ಲೋರಿನೇಷನ್ ಮಾಡಿದ ನೀರನ್ನೆ ಬಳಸಬೇಕು ಎಂದು ಅವರು ತಿಳಿಸಿದ್ದಾರೆ.    
                
ಹೆಚ್1ಎನ್1 ಜ್ವರ ಮುಂಜಾಗ್ರತೆಗೆ ಮನವಿ
ಯಾದಗಿರಿ, ಮಾರ್ಚ್ 02 (ಕರ್ನಾಟಕ ವಾರ್ತೆ): ತೀವ್ರ ಸ್ವರೂಪದ ಜ್ವರ, ಅತೀ ಭೇದಿ/ವಾಂತಿ, ಅತಿಯಾದ ಮೈ-ಕೈ ಮತ್ತು ತಲೆ ನೋವು, ಕೆಮ್ಮು ಮತ್ತು ಹಳದಿ ಕಫ, ನೆಗಡಿ ಮತ್ತು ಗಂಟಲು ಕೆರೆತ, ಉಸಿರಾಟದ ತೊಂದರೆ ಹೆಚ್1ಎನ್1 ರೋಗದ ಲಕ್ಷಣಗಳಾಗಿವೆ. ಹೆಚ್1ಎನ್1 ರೋಗದ ಬಗ್ಗೆ ಜಿಲ್ಲೆಯ ಸಾರ್ವಜನಿಕರು ಮುಂಜಾಗ್ರತೆ ವಹಿಸಬೇಕು ಎಂದು ಜಿಲ್ಲಾ ಸರ್ವೇಕ್ಷಣಾ ಅಧಿಕಾರಿಗಳು ಪ್ರಕಟಣೆಯಲ್ಲಿ ಕೋರಿದ್ದಾರೆ.
ಮುನ್ನೆಚ್ಚರಿಕೆ ಕ್ರಮಗಳು: ಕೆಮ್ಮುವಾಗ ಅಥವಾ ಸೀನುವಾಗ ಬಾಯಿ ಮತ್ತು ಮೂಗನ್ನು ಕರವಸ್ತ್ರ ಅಥವಾ ಟಿಶ್ಯೂ ಕಾಗದದಿಂದ ಮುಚ್ಚಿಕೊಳ್ಳಬೇಕು. ಮೂಗು, ಕಣ್ಣು ಅಥವಾ ಬಾಯಿಯನ್ನು ಮುಟ್ಟುವ ಮೊದಲು ಮತ್ತು ನಂತರ ಕೈಗಳನ್ನು ಸಾಬೂನು ಮತ್ತು ನೀರಿನಿಂದ ಚೆನ್ನಾಗಿ ತೊಳೆದುಕೊಳ್ಳಬೇಕು. ಚೆನ್ನಾಗಿ ನಿದ್ದೆ ಮಾಡಬೇಕು. ದೈಹಿಕವಾಗಿ ಚಟುವಟಿಕೆಯಿಂದಿರಬೇಕು ಮತ್ತು ಒತ್ತಡವನ್ನು ಪರಿಣಾಮಕಾರಿಯಾಗಿ ನಿಭಾಯಿಸಬೇಕು. ಧಾರಾಳವಾಗಿ ನೀರು/ದ್ರವ ಪದಾರ್ಥಗಳನ್ನು ಕುಡಿಯುವ ಜೊತೆಗೆ ಪೌಷ್ಟಿಕಾಂಶವಿರುವ ಆಹಾರ ಸೇವಿಸಬೇಕು. ಇದರಿಂದ ರೋಗ ನಿರೋಧಕ ಶಕ್ತಿ ವೃದ್ಧಿಸುತ್ತದೆ. ಜನಸಂದಣಿಯಿರುವ ಸ್ಥಳಗಳಿಗೆ ಹೋದಾಗ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ವಹಿಸಬೇಕು. ಉದಾಹರಣೆಗೆ ರೋಗ ಲಕ್ಷಣವಿರುವ ವ್ಯಕ್ತಿಗಳಿಂದ ದೂರವಿರಬೇಕು ಎಂದು ಅವರು ಸಲಹೆ ನೀಡಿದ್ದಾರೆ.
ಏನು ಮಾಡಬಾರದು: ಹಸ್ತಲಾಘವ, ಆಲಿಂಗನ ಮಾಡಬಾರದು. ವೈದ್ಯರ ಸಲಹೆ ಇಲ್ಲದೆ ಔಷಧಿಯನ್ನು ತೆಗೆದುಕೊಳ್ಳಬಾರದು. ರಸ್ತೆ ಅಥವಾ ಎಲ್ಲೆಂದರಲ್ಲಿ ಉಗಳಬಾರದು. ಅನಾವಶ್ಯಕವಾಗಿ ಜನಸಂದಣಿ ಪ್ರದೇಶಗಳಿಗೆ ಭೇಟಿ ನೀಡಬಾರದು ಹಾಗೂ ಪ್ರಯಾಣಿಸಬಾರದು. ಫ್ಲೂ ತರಹದ ಚಿಹ್ನೆಗಳಿರುವ ಮಕ್ಕಳನ್ನು ಶಾಲೆಗೆ ಕಳುಹಿಸಬಾರದು ಎಂದು ಅವರು ತಿಳಿಸಿದ್ದಾರೆ.  

                            
ಕೊರೋನಾ ವೈರಸ್ ಬಗ್ಗೆ ಭಯ ಬೇಡ
ಯಾದಗಿರಿ, ಮಾರ್ಚ್ 02 (ಕರ್ನಾಟಕ ವಾರ್ತೆ) ತೀವ್ರ ಜ್ವರದ ಪ್ರಾರಂಭ, ನೆಗಡಿ, ಕೆಮ್ಮು, ಉಸಿರಾಟದ ತೊಂದರೆ ಹಾಗೂ ಭೇದಿ ಇವೆರಲ್ಲಾ ಕೊರೋನಾ ವೈರಸ್‍ನ ಲಕ್ಷಣಗಳಾಗಿದ್ದು, ಜಿಲ್ಲೆಯ ಜನರು ಮುಂಜಾಗ್ರತೆಯಿಂದ ಇರಬೇಕು ಎಂದು ಜಿಲ್ಲಾ ಸರ್ವೇಕ್ಷಣಾ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.  ಇನ್ನು ಸಾಮಾನ್ಯ ಫ್ಲೂ ಹರಡುವ ರೀತಿಯಲ್ಲಿ ಕೊರೋನಾ ಹರಡುತ್ತದೆ. ಸಾಮಾನ್ಯವಾಗಿ ಸೋಂಕಿತರು ಕೆಮ್ಮಿದಾಗ, ಸೀನಿದಾಗ ಈ ವೈರಸ್‍ಗಳು ಹರಡುತ್ತವೆ. ವೈಯಕ್ತಿಕ ಸ್ವಚ್ಛತೆಯಿಲ್ಲದೇ ಮೂಗು, ಬಾಯಿ ಹೇಗೆಂದರೆ ಹಾಗೆ ಮುಟ್ಟುವುದರಿಂದಲೂ ಸೋಂಕು ಹರಡಬಹುದು. ಅಲ್ಲದೇ ಇಂಥ ಲಕ್ಷಣಗಳು ಕಂಡು ಬಂದ ವ್ಯಕ್ತಿಯ ಮೂಗು, ಗಂಟಲಿನ ಸ್ರಾವದ ಲೇಪನ ಹಾಗೂ ರಕ್ತದ ಮಾದರಿಯನ್ನು ಪ್ರಯೋಗ ಶಾಲೆಯಲ್ಲಿ ಪರೀಕ್ಷೆಗೆ ಒಳಪಡಿಸಿ ಸೋಕನ್ನುದೃಢಪಡಿಸಲಾಗುತ್ತದೆ ಎಂದು ತಿಳಿಸಿದ್ದಾರೆ. ಮುಂಜಾಗ್ರತಾ ಕ್ರಮಗಳು: ಕೆಮ್ಮುವಾಗ, ಸೀನುವಾಗ ಬಾಯಿಗೆ ಕರವಸ್ತ್ರ ಅಡ್ಡ ಹಿಡಿಯುವ ಮೂಲಕ ಹಾಗೂ ನಿಮ್ಮ ಕೈಯನ್ನು ಚೆನ್ನಾಗಿ ಆಗಾಗ ತೊಳೆದುಕೊಳ್ಳುವ ಮೂಲಕ ಸರಳ ನೈರ್ಮಲ್ಯ ಅಭ್ಯಾಸ ಮಾಡಿಕೊಳ್ಳಬೇಕು, ಅನಾರೋಗ್ಯದಿಂದಿರುವ ಅಥವಾ ಕೆಮ್ಮು, ನೆಗಡಿ ಮತ್ತು ಇತ್ಯಾತಿ ಅನಾರೋಗ್ಯದ ಲಕ್ಷಣಗಳನ್ನು ಹೊಂದಿರುವ ಜನರೊಂದಿಗೆ ನಿಕಟ ಸಂಪರ್ಕ ಹೊಂದಬಾರದು, ಪ್ರಾಣಿಗಳ ನೇರ ಸಂಪರ್ಕವನ್ನು ಹಾಗೂ ಬೇಯಿಸಿದ/ಕಚ್ಚಾ ಮಾಂಸ ಸೇವನೆ ಮಾಡಬಾರದು ಎಂದು ಅವರು ಹೇಳಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

                                                             ವಾ.ವಿ.ಸ.45 ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಶರಣಬಸಪ್ಪ ದರ್ಶನಾಪೂರ ಅವರ ಜಿಲ್ಲಾ ಪ್ರವಾಸ ಯಾದಗ...