ಜಿಲ್ಲೆಯಾದ್ಯಂತ ಮದ್ಯ ಮಾರಾಟ ನಿಷೇಧ
ಯಾದಗಿರಿ, ಮಾರ್ಚ್ 23 (ಕರ್ನಾಟಕ ವಾರ್ತೆ): ಜಿಲ್ಲೆಯಲ್ಲಿ ಕೊರೊನಾ ವೈರಸ್ ಸೋಂಕು ಹರಡದಂತೆ ಸಾರ್ವಜನಿಕರ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಮಾರ್ಚ್ 23ರ ಮಧ್ಯರಾತ್ರಿಯಿಂದ ಮಾರ್ಚ್ 31ರ ಮಧ್ಯರಾತ್ರಿಯವರೆಗೆ ಮುಂದಿನ ಆದೇಶದವರೆಗೆ ಮದ್ಯಪಾನ ಹಾಗೂ ಮದ್ಯ ಮಾರಾಟವನ್ನು ನಿಷೇಧಿಸಿ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ದಂಡಾಧಿಕಾರಿಗಳಾದ ಎಂ.ಕೂರ್ಮಾ ರಾವ್ ಅವರು ಆದೇಶ ಹೊರಡಿಸಿದ್ದಾರೆ.
ಕಲಬುರಗಿ ಜಿಲ್ಲೆಯಲ್ಲಿ ಈಗಾಗಲೇ ಕೊರೊನಾ ವೈರಸ್ ಸೋಂಕಿಗೀಡಾಗಿದ್ದ ವೃದ್ಧರೊಬ್ಬರು ಮೃತಪಟ್ಟು ಮತ್ತೆ ಇನ್ನಿಬ್ಬರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿರುತ್ತದೆ. ಪ್ರಯುಕ್ತ ಕಲಬುರಗಿಯಿಂದ ಯಾದಗಿರಿ ಜಿಲ್ಲೆಗೆ ಸಾಕಷ್ಟು ಜನ ಬರುವುದು-ಹೋಗುವುದು ಮಾಡುತ್ತಿರುವ ಹಿನ್ನಲೆಯಲ್ಲಿ ಗುಂಪು-ಗುಂಪಾಗಿ ಜನರು ಸೇರುವ ಸ್ಥಳಗಳಲ್ಲಿ ಜಿಲ್ಲೆಯಲ್ಲಿ ಮುಂಜಾಗ್ರತಾ ಕ್ರಮ ಜರುಗಿಸುವ ಸಂಬಂಧ ಸರ್ಕಾರದ ಆದೇಶದಂತೆ ಹಲವು ಅನುಸರಣಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಈ ನಿಟ್ಟಿನಲ್ಲಿ ಮಾರ್ಚ್ 18ರಿಂದ ಮುಂದಿನ ಆದೇಶದ ವರೆಗೆ ಕ್ಲಬ್, ಬಾರ್ ಮತ್ತು ರೆಸ್ಟೋರೆಂಟ್ (ಸಿಎಲ್-7 ಮತ್ತು ಸಿಎಲ್-9) ಮದ್ಯದಂಗಡಿಗಳಲ್ಲಿ ಮದ್ಯ ಮಾರಾಟ ಮಾಡುವುದನ್ನು ಈಗಾಗಲೇ ನಿಷೇಧಿಸಿ ಆದೇಶಿಸಲಾಗಿತ್ತು. ಆದರೆ, ಇನ್ನೂ ಹೆಚ್ಚಿನ ಮುಂಜಾಗ್ರತಾ ಕ್ರಮ ಜರುಗಿಸುವ ನಿಟ್ಟಿನಲ್ಲಿ ಕರ್ನಾಟಕ ಅಬಕಾರಿ ಕಾಯ್ದೆ 1965ರ ಕಲಂ 21ರ ಅನ್ವಯ ಎಲ್ಲಾ ತರಹದ ಮದ್ಯಪಾನ ಹಾಗೂ ಮದ್ಯ ಮಾರಾಟ ನಿಷೇಧಿಸಲಾಗಿದೆ. ಜಿಲ್ಲೆಯ ಎಲ್ಲಾ ವೈನ್‍ಶಾಪ್, ಬಾರ್‍ಗಳು ಸಗಟು ಮತ್ತು ಚಿಲ್ಲರೆ ಮದ್ಯ ಮಾರಾಟ ಮಾಡುವಂತಿಲ್ಲ ಎಂದು ಅವರು ಆದೇಶದಲ್ಲಿ ತಿಳಿಸಿದ್ದಾರೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ