ಶುಕ್ರವಾರ, ಮಾರ್ಚ್ 27, 2020

ಲಾಕ್‍ಡೌನ್‍ಗೆ ಸಹಕರಿಸಲು ಜಿಲ್ಲಾ ಉಸ್ತುವಾರಿ ಸಚಿವರ ಮನವಿ
ಯಾದಗಿರಿ, ಮಾರ್ಚ್ 27 (ಕರ್ನಾಟಕ ವಾರ್ತೆ): ಕೊರೊನಾ ವೈರಸ್ ಹರಡುವಿಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಅದನ್ನು ತಡೆಗಟ್ಟುವ ನಿಟ್ಟಿನಲ್ಲಿ ಕೇಂದ್ರ ಸರಕಾರ ವಿಧಿಸಿರುವ ಲಾಕ್‍ಡೌನ್ ಅನ್ನು ಯಾದಗಿರಿ ಮಹಾಜನತೆ ಪಾಲಿಸಬೇಕೆಂದು ಪಶು ಸಂಗೋಪನೆ, ಹಜ್ ಮತ್ತು ವಕ್ಫ್ ಹಾಗೂ ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಭು ಬಿ.ಚವ್ಹಾಣ ಅವರು ಮನವಿ ಮಾಡಿದ್ದಾರೆ.
ಈ ಕುರಿತಂತೆ ಪ್ರಕಟಣೆ ಹೊರಡಿಸಿರುವ ಅವರು, ಜನರು ಅನಗತ್ಯವಾಗಿ ರಸ್ತೆ ಮೇಲೆ ಓಡಾಡುತ್ತಿರುವ ಪ್ರಕರಣಗಳು ಅಲ್ಲಲ್ಲಿ ಕಂಡುಬರುತ್ತಿರುವುದು ಬೇಸರದ ಸಂಗತಿ. ಪ್ರತಿಯೊಬ್ಬರೂ ಮನೆಯಲ್ಲಿದ್ದು, ಪೊಲೀಸ್ ಇಲಾಖೆಗೆ ಸಹಕರಿಸಬೇಕು. ನಾನು ಸಹ ಮನೆಯಲ್ಲಿಯೇ ಇದ್ದು, ಪರಿಸ್ಥಿತಿಯ ಮೇಲೆ ನಿಗಾ ಇಟ್ಟಿದ್ದೇನೆ. ಎಲ್ಲ ಅಧಿಕಾರಿಗಳ ಜೊತೆ ನಿರಂತರ ಸಂಪರ್ಕದಲ್ಲಿದ್ದು, ಕಾಲಕಾಲಕ್ಕೆ ಸೂಕ್ತ ನಿರ್ದೇಶನಗಳನ್ನು ನೀಡುತ್ತಿದ್ದೇನೆ. ಯಾದಿಗಿರಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಆರೋಗ್ಯ ಇಲಾಖೆ ಮತ್ತು ಪೊಲೀಸ್ ಇಲಾಖೆಗಳು ರೋಗ ತಡೆಗಟ್ಟುವ ನಿಟ್ಟಿನಲ್ಲಿ ಮುತುವರ್ಜಿ ವಹಿಸಿ ಕೆಲಸ ಮಾಡುತ್ತಿವೆ. ಆದರೂ ಜನರ ಸಹಕಾರ ಅತ್ಯಗತ್ಯ. ನಿಷ್ಕಾಳಜಿಯೇ ನಮ್ಮ ಹಾಗೂ ನಮ್ಮ ಕುಟುಂಬದವರ ಜೀವಕ್ಕೆ ಅಪಾಯ ತರಲಿದೆ ಎಂದು ಎಚ್ಚರಿಸಿದ್ದಾರೆ.
ಜನರು ಪ್ರತಿನಿತ್ಯ ಐದಾರು ಬಾರಿ ಕೈ ಸ್ವಚ್ಛಗೊಳಿಸಿಕೊಳ್ಳಬೇಕು. ಅನಾರೋಗ್ಯ ಎನಿಸಿದರೆ ಕೂಡಲೇ ವೈದ್ಯರನ್ನು ಸಂಪರ್ಕಿಸಬೇಕು. ಬೇರೆಡೆಯಿಂದ ಬರುವ ವ್ಯಕ್ತಿಗಳು ಸ್ವಯಂ ವೈದ್ಯಕೀಯ ಪರೀಕ್ಷೆಗೆ ಒಳಪಡಬೇಕು. ಒಬ್ಬರಿಗೊಬ್ಬರು ಅಂತರ ಕಾಯ್ದುಕೊಳ್ಳಬೇಕು. ಹಸ್ತಲಾಘವ ಮಾಡಬಾರದು ಎಂದು ಅವರು ಸಲಹೆ ನೀಡಿದ್ದಾರೆ.
ಯಾದಗಿರಿ ಜಿಲ್ಲೆಯಲ್ಲಿ ಇದುವರೆಗೂ ಯಾವುದೇ ಕೊರೊನಾ ಪಾಸಿಟಿವ್ ಪ್ರಕರಣಗಳು ಕಂಡುಬಂದಿಲ್ಲ. ಆದರೆ ದೇಶದಲ್ಲಿ ಉಲ್ಬಣಿಸುತ್ತಿರುವ ಕೊರೊನಾ ಸೋಂಕುಗಳ ಸಂಖ್ಯೆ ಗಮನಿಸಿದರೆ ಯಾದಗಿರಿ ಜನತೆ ಎಚ್ಚರದಿಂದಿರುವ ಅವಶ್ಯಕತೆ ಇದೆ. ನಾವು ಮನೆಯಲ್ಲಿರುವುದೇ ಕೊರೊನಾ ವೈರಸ್‍ದಿಂದ ಪಾರಾಗುವ ಏಕೈಕ ಉಪಾಯವಾಗಿದೆ. ಯಾದಗಿರಿ ಜಿಲ್ಲೆಗೆ ಹೊರರಾಜ್ಯ ಮತ್ತು ಹೊರ ಜಿಲ್ಲೆಗಳಿಂದ ಯಾರನ್ನೂ ಜಿಲ್ಲೆಯ ಒಳಗಡೆ ಪ್ರವೇಶಿಸದಂತೆ ಗಡಿಗಳನ್ನು ಬಂದ್ ಮಾಡಲಾಗಿದೆ. ಜಿಲ್ಲೆಯ ಜನರಿಗೆ ದಿನನಿತ್ಯದ ದಿನಸಿ, ತರಕಾರಿ ಮತ್ತು ಔಷಧ ಅಂಗಡಿಗಳನ್ನು ತೆರೆದಿಡುವ ಮೂಲಕ ದಿನನಿತ್ಯದ ಜೀವನಕ್ಕೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗಿದೆ. ಇಡೀ ವಿಶ್ವದಲ್ಲೇ ಇಂತಹ ಕಠಿಣ ಪರಿಸ್ಥಿತಿ ತಲೆದೋರಿರುವುದರಿಂದ ಜನತೆ ಸಹಕರಿಸಬೇಕೆಂದು ಅವರು ಕೋರಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಶರಣಬಸಪ್ಪ ದರ್ಶನಾಪೂರ ಅವರ ಜಿಲ್ಲಾ ಪ್ರವಾಸ

                                                               ವಾ.ವಿ.ಸಂ.150 ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಶರಣಬಸಪ್ಪ ದರ್ಶನಾಪೂರ ಅವರ ಜಿಲ್ಲಾ ಪ್ರವಾಸ ...