ಹೋಳಿ ಹಬ್ಬದ ಪ್ರಯುಕ್ತ ಶಾಂತಿ ಪಾಲನೆ ಪೂರ್ವಭಾವಿ ಸಭೆ
‘ಶಾಂತಿಯುತವಾಗಿ ಹೋಳಿ ಹಬ್ಬ ಆಚರಣೆ ಮಾಡಿ’
-ಜಿಲ್ಲಾಧಿಕಾರಿಗಳು ಎಂ.ಕೂರ್ಮಾರಾವ್
ಯಾದಗಿರಿ, ಮಾರ್ಚ್ 04 (ಕರ್ನಾಟಕ ವಾರ್ತೆ): ಹೋಳಿ ಹಬ್ಬವನ್ನು ಕಳೆದ ವರ್ಷಕ್ಕಿಂತ ಈ ವರ್ಷ ತುಂಬಾ ಶಾಂತಿಯುತವಾಗಿ ಆಚರಿಸಬೇಕು ಎಂದು ಜಿಲ್ಲಾಧಿಕಾರಿಗಳಾದ ಎಂ ಕೂರ್ಮಾರಾವ್ ಹೇಳಿದರು.
ಜಿಲ್ಲಾಧಿಕಾರಿಗಳ ಕಚೇರಿಯ ಸಂಭಾಂಗಣದಲ್ಲಿ ಬುಧವಾರ ನಡೆದ ಹೋಳಿ ಹಬ್ಬ ಆಚರಣೆಯ ಪ್ರಯುಕ್ತ, ಶಾಂತಿ ಪಾಲನೆ ಪೂರ್ವಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಮಾರ್ಚ್ 9 ಹಾಗೂ 10ರಂದು ಹೋಳಿ ಹಬ್ಬ ಆಚರಿಸಲಾಗುತ್ತಿದ್ದು, ಹಬ್ಬದ ಪ್ರಯುಕ್ತ ಶಾಂತ ರೀತಿಯಿಂದ ಆಚರಿಸಬೇಕು, ಅಲ್ಲದೇ ರಾಸಾಯನಿಕ ಬಣ್ಣಗಳ ಬಳಸಬಾರದು ಜೊತೆಗೆ ಕರೋನಾ ವೈರಸ್ ಭೀತಿ ಇರುವುದರಿಂದ ಹಬ್ಬದ ಸಮಯದಲ್ಲಿ ವೈಯಕ್ತಿಕ ಸ್ವಚ್ಛತೆಗೆ ತುಂಬಾ ಆದ್ಯತೆ ನೀಡಬೇಕು ಎಂದರು. ಮಾರ್ಚ್ 9ರಂದು ಕಾಮದಹನ ಮಾಡಲಾಗುವುದು, 10ರಂದು ಬೇಳಗ್ಗೆ 7 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಮಾತ್ರ ಬಣ್ಣದ ಆಟ ಆಡಲು ಅವಕಾಶವಿರುತ್ತದೆ. ಅಲ್ಲದೇ ಪಿಯುಸಿ ಪರೀಕ್ಷೆ ನಡೆದಿರುವುದರಿಂದ ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆಯಾಗದಂತೆ ಎಚ್ಚರವಹಿಸಬೇಕು ಎಂದು ಅವರು ಸೂಚಿಸಿದರು. ಅಲ್ಲದೇ ಆರೋಗ್ಯಕರವಾದ ಬಣ್ಣವನ್ನು ಬಳಸಿ ಹಬ್ಬವನ್ನು ಆಚರಣೆ ಮಾಡಬೇಕು. ಒತ್ತಾಯವಾಗಿ ಮಹಿಳೆಯರಿಗೆ ಹಾಗೂ ಮಕ್ಕಳಿಗೆ ಬಣ್ಣವನ್ನು ಎರಚಬಾರದು. ಎಲ್ಲರೂ ಶಾಂತಿಯುತವಾಗಿ ಹಬ್ಬವನ್ನು ಆಚರಣೆ ಮಾಡಬೇಕು ಎಂದು ತಿಳಿಸಿದರು.
ಕಾಮದಹನ ಮಾಡುವ ವೇಳೆ ಯಾವುದೇ ಅಗ್ನಿ ದುರಂತ ನಡೆಯದಂತೆ ನೋಡಿಕೊಂಡು ಹೋಗಲು ಅಗ್ನಿ ಶಾಮಕ ಅಧಿಕಾರಿಗಳಿಗೆ ಸೂಚಿಸಿದರು. ಜೊತೆಗೆ ಸಾರ್ವಜನಿಕರಿಗೆ ಮರಳು ಮತ್ತು ನೀರಿನ ವ್ಯವಸ್ಥೆ ಮಾಡುವಂತೆ ಶಾಂತಿ ಪಾಲನಾ ಸಮಿತಿಯ ಸದಸ್ಯರು ಸಭೆಯ ಗಮನಕ್ಕೆ ತಂದರು.
ಜಿಲ್ಲೆಯಾದ್ಯಂತ ಕಾನೂನು ಸುವವ್ಯಸ್ಥೆ ಕಾಪಾಡುವ ನಿಟ್ಟಿನಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಸಾರ್ವಜನಿಕ ಹಿತದೃಷ್ಟಿಯಿಂದ ಮಾರ್ಚ್ 9ರ ಸಂಜೆ 6ಗಂಟೆಯಿಂದ ಮಾರ್ಚ್ 10ರ ಬೆಳಗ್ಗೆ 6 ಗಂಟೆಯವರೆಗೆ ಮದ್ಯ ಮಾರಾಟ ನಿಷೇಧಿಸಲಾಗಿಸುವುದು ಎಂದು ಅವರು ಹೇಳಿದರು.
ಇನ್ನು ಬಣ್ಣದ ಹಬ್ಬದಂದು ಮಹಿಳೆಯರಿಗೆ ಮತ್ತು ಮಕ್ಕಳಿಗೆ ಬಲವಂತವಾಗಿ ಬಣ್ಣ ಹಚ್ಚಬಾರದು, ಮೊಟ್ಟೆ, ಟೊಮ್ಯಾಟೋ, ಕಪ್ಪು ಮಸಿಯನ್ನು ಜನರ ಮೇಲೆ ಎರಚಬಾರದು. ಒಂದು ವೇಳೆ ಇಂತಹ ಘಟನೆ ಕಂಡು ಬಂದಲ್ಲಿ ಕಾನೂನು ರೀತಿ ಕ್ರಮಕೈಗೊಳ್ಳಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಋಷಿಕೇಶ್ ಭಗವಾನ್ ಸೋನವಣೆ ಅವರಿಗೆ ಹೇಳಿದರು. ಇನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಾಳಾದ ಋಷಿಕೇಶ್ ಭಗವಾನ್ ಸೋನವಣೆ ಮಾತನಾಡಿ, ಜಿಲ್ಲೆಯಲ್ಲಿ ಕೆಮಿಕಲ್ ಮಿಶ್ರಿತ ಇರದ ಬಣ್ಣ ಮಾರಾಟ ಮಾಡುವ ಮಳಿಗೆಗಳನ್ನು ಸ್ಥಾಪಿಸಬೇಕು. ಜೊತೆಗೆ ಬಣ್ಣ ಆಡುವ ಸಮಯದಲ್ಲಿ ಆಯಿಲ್ ಪೇಂಟ್, ವಾರ್ನಿಸ್ ಹಾಗೂ ಇನ್ನಿತರ ಬಣ್ಣಗಳನ್ನು ಬಳಸಬಾರದು. ಒಂದು ವೇಳೆ ಇಂಥ ಯಾವುದೇ ದೂರುಗಳು ಬಂದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.ಹೋಳಿ ಹಬ್ಬದ ಪ್ರಯುಕ್ತ, ಶಾಂತಿ ಪಾಲನೆ ಪೂರ್ವಭಾವಿ ಸಭೆಯ ನಡಾವಳಿಗಳನ್ನು ಜಿಲ್ಲಾ ಬಾಲಕಾರ್ಮಿಕ ಯೋಜನಾಧಿಕಾರಿ ರಘುವೀರ್ ಸಿಂಗ್ ಠಾಕೂರ್ ಅವರು ನಡಾವಳಿಗಳು ಓದಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿಗಳಾದ ಪ್ರಕಾಶ ಜಿ. ರಜಪೂತ, ಶಾಂತಿ ಪಾಲನೆ ಸಮಿತಿಯ ಪದಾಧಿಕಾರಿಗಳಾದ ವೀರಶೈವ ಲಿಂಗಾಯತ ಸಮುದಾಯದ ಜಿಲ್ಲಾ ಘಟಕದ ಅಧ್ಯಕ್ಷರಾದ ಅಯ್ಯಣ್ಣ ಹುಂಡೇಕಾರ್, ಮುಸ್ಲಿಂ ಸಮುದಾಯದ ಲಾಯಕ್ ಹುಸೇನ್ ಬಾದಲ್, ಗುಲಾಮ್ ಸಮುದಾನಿ, ವೈಹೀದ್‍ಮೀಯಾ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಸಿದ್ದಪ್ಪ ಹೊಟ್ಟಿ, ವಿಶ್ವನಾಥ ಸಿರವಾರ, ಜೈನ್ ಸಮುದಾಯದ ಮುಖಂಡರಾದ ಬಾಬು ದೋಖಾ ಹಾಗೂ ದಲಿತ ಮುಖಂಡರಾದ ಮರೆಪ್ಪ ಚಟ್ಟರ್‍ಕರ್ ಉಪಸ್ಥಿತರಿದ್ದರು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ