ಶುಕ್ರವಾರ, ಮಾರ್ಚ್ 13, 2020

ಜನಗಣತಿಯ ಕ್ಷೇತ್ರ ತರಬೇತಿದಾರರಿಗೆ ಮಾಸ್ಟರ್ ಟ್ರೇನರ್‍ಗಳಿಂದ ತರಬೇತಿ
ನಿಖರ ಜನಗಣತಿಯಿಂದ ಬಲಿಷ್ಠ ರಾಷ್ಟ್ರ ನಿರ್ಮಾಣ
-ಜಿಲ್ಲಾಧಿಕಾರಿ ಎಂ.ಕೂರ್ಮಾ ರಾವ್

ಯಾದಗಿರಿ, ಮಾರ್ಚ್ 13 (ಕರ್ನಾಟಕ ವಾರ್ತೆ): ಸಾಮಾನ್ಯ ವ್ಯಕ್ತಿಯ ಅನುಕೂಲತೆಗಾಗಿ ವಿವಿಧ ಕಲ್ಯಾಣ ಯೋಜನೆಗಳನ್ನು ರಚಿಸಲು ಮತ್ತು ಅನುದಾನ ಬಿಡುಗಡೆಗೆ ಜನಗಣತಿಯು ಮೂಲಾಧಾರವಾಗುತ್ತದೆ. ನಿಖರ ಜನಗಣತಿಯಿಂದ ಬಲಿಷ್ಠ ರಾಷ್ಟ್ರ ಕಟ್ಟಲು ಸಾಧ್ಯ. ಈ ನಿಟ್ಟಿನಲ್ಲಿ ಜನಗಣತಿಯಲ್ಲಿ ಪಾಲ್ಗೊಳ್ಳುವ ಪ್ರತಿಯೊಬ್ಬ ಅಧಿಕಾರಿ ಮತ್ತು ಸಿಬ್ಬಂದಿಗಳು ಜವಾಬ್ದಾರಿ ಅರಿತು ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿಗಳಾದ ಎಂ.ಕೂರ್ಮಾ ರಾವ್ ಅವರು ಸೂಚಿಸಿದರು. ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ಮನೆಪಟ್ಟಿ ಮತ್ತು ಮನೆಗಣತಿ ಹಾಗೂ ರಾಷ್ಟ್ರೀಯ ಜನಸಂಖ್ಯಾ ಪಟ್ಟಿ ಪರಿಷ್ಕರಣೆ ಕಾರ್ಯದ ಅಂಗವಾಗಿ ಕ್ಷೇತ್ರ ತರಬೇತುದಾರರಿಗೆ ಮಾಸ್ಟರ್ ಟ್ರೇನರ್‍ಗಳಿಂದ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು. ಜನಗಣತಿಯಲ್ಲಿ ಸಂಗ್ರಹಿಸಿದ ಮಾಹಿತಿಯ ಆಧಾರದ ಮೇಲೆ ಲೋಕಸಭೆ, ವಿಧಾನಸಭೆ ಮತ್ತು ಇತರೆ ಸ್ಥಳೀಯ ಸಂಸ್ಥೆಗಳ ಸ್ಥಾನಗಳು ನಿರ್ಧಾರವಾಗುತ್ತವೆ. 2021ರ ಜನಗಣತಿಯ ಅಂಕಿ-ಅಂಶಗಳು ಮುಂದಿನ 10 ವರ್ಷಗಳವರೆಗೆ ಪ್ರತಿಯೊಂದು ಅಭಿವೃದ್ಧಿ ಕಾರ್ಯಗಳಿಗೆ ಉಪಯೋಗವಾಗುತ್ತವೆ ಎಂದು ಅವರು ತಿಳಿಸಿದರು. ಕ್ಷೇತ್ರ ತರಬೇತಿದಾರರು ಜನಗಣತಿಗೆ ಸಂಬಂಧಪಟ್ಟ ಆ್ಯಪ್‍ಗಳನ್ನು ಇನ್‍ಸ್ಟಾಲ್ ಮಾಡಿಕೊಳ್ಳಬೇಕು. ಯಾವುದೇ ಸಂಶಯಗಳನ್ನು ಇಟ್ಟುಕೊಂಡು ಜನಗಣತಿಗೆ ಹೋದರೆ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಕಾರಣ ತರಬೇತಿಯಲ್ಲಿ ನೀಡುವ ಪ್ರತಿಯೊಂದು ಅಂಶಗಳನ್ನು ಗಮನವಿಟ್ಟು ಆಲಿಸಬೇಕು. ಸಂಶಯಗಳಿದ್ದಲ್ಲಿ ಪರಿಹರಿಸಿಕೊಳ್ಳಬೇಕು. ಜನಗಣತಿಯ ಬಗ್ಗೆ ಪೂರ್ವಾಭ್ಯಾಸ ಮಾಡಿ, ಸ್ವತಃ ಅನುಭವ ಪಡೆದುಕೊಳ್ಳುವಂತೆ ಅವರು ಸಲಹೆ ನೀಡಿದರು.

ಅಪರ ಜಿಲ್ಲಾಧಿಕಾರಿಗಳಾದ ಪ್ರಕಾಶ್ ಜಿ.ರಜಪೂತ್ ಅವರು ಮಾತನಾಡಿ, ಜನಗಣತಿ ರಾಷ್ಟ್ರೀಯ ಕಾರ್ಯವಾಗಿದೆ. ಜನಗಣತಿ ಕಾರ್ಯಕ್ಕೆ ನೇಮಕವಾದ ಪ್ರತಿಯೊಬ್ಬ ಅಧಿಕಾರಿಗಳು ನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ಕರ್ತವ್ಯ ನಿರ್ವಹಿಸಬೇಕು. ಕಡ್ಡಾಯವಾಗಿ ತರಬೇತಿಗೆ ಹಾಜರಾಗಬೇಕು. ಗೈರಾದವರಿಗೆ ನೋಟಿಸ್ ನೀಡಿ, ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಜನಗಣತಿಯ ಜಿಲ್ಲಾ ನೋಡಲ್ ಅಧಿಕಾರಿ ಗೆಜ್ಜೆ ಗೋಪಾಲಕೃಷ್ಣ ಅವರು ಮಾತನಾಡಿ, 2020ರ ಏಪ್ರಿಲ್ 15ರಿಂದ ಮೇ 29ರವರೆಗೆ ಮನೆಪಟ್ಟಿ ಮತ್ತು ಮನೆಗಣತಿ ಹಾಗೂ ರಾಷ್ಟ್ರೀಯ ಜನಸಂಖ್ಯಾ ಪಟ್ಟಿಯ ಪರಿಷ್ಕರಣೆ ನಡೆಯಲಿದೆ. 2021ರ ಫೆಬ್ರುವರಿ 9ರಿಂದ ಫೆ.28ರವರೆಗೆ ಜನಗಣತಿ ನಡೆಯಲಿದೆ ಎಂದು ಮಾಹಿತಿ ನೀಡಿದರು. ಮಾಸ್ಟರ್ ಟ್ರೇನರ್‍ಗಳಾದ ಪ್ರಹ್ಲಾದ್ ಜೋಷಿ ಮತ್ತು ಸಿದ್ಧಣ್ಣ ಡಿಗ್ಗಿ ಅವರು ತರಬೇತಿ ನೀಡುತ್ತಾ, ಭಾರತದಲ್ಲಿ ಮೊದಲ ಜನಗಣತಿಯನ್ನು 1872ರಲ್ಲಿ ಬೇರೆ ಬೇರೆ ಸಮಯಗಳಲ್ಲಿ ಕೈಗೊಳ್ಳಲಾಯಿತು. 1881ರಲ್ಲಿ ಇಡೀ ದೇಶದಲ್ಲಿ ಏಕಕಾಲಕ್ಕೆ ಜನಗಣತಿ ನಡೆಸಲಾಯಿತು. ಆಗಿನಿಂದ ಪ್ರತಿ ಹತ್ತು ವರ್ಷಗಳಿಗೊಮ್ಮೆ ನಡೆಸಲಾಗುತ್ತಿದೆ. ಸ್ವಾತಂತ್ರ್ಯದ ನಂತರ 2021ರ ಜನಗಣತಿ 8ನೇಯದಾಗಿದೆ ಎಂದು ವಿವರಿಸಿದರು. ಕ್ಷೇತ್ರ ತರಬೇತುದಾರರಿಗೆ ನೀಡಿರುವ ಕೈಪಿಡಿಗಳಲ್ಲಿ ಮನೆಪಟ್ಟಿ ಮತ್ತು ಮನೆಗಣತಿ ಹಾಗೂ ಜನಗಣತಿಯ ಬಗ್ಗೆ ವಿವರವಾದ ಮಾಹಿತಿಗಳನ್ನು ನೀಡಲಾಗಿದೆ. ಅವುಗಳನ್ನು ಓದಿ ಸರಿಯಾಗಿ ಅರ್ಥೈಸಿಕೊಳ್ಳಬೇಕು. ಯಾವುದೇ ಅನುಮಾನಗಳಿದ್ದಲ್ಲಿ ಸ್ಪಷ್ಟೀಕರಣ ಪಡೆಯಲು ಹಿಂಜರಿಯಬಾರದು ಎಂದು ಸಲಹೆ ನೀಡಿದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಶರಣಬಸಪ್ಪ ದರ್ಶನಾಪೂರ ಅವರ ಜಿಲ್ಲಾ ಪ್ರವಾಸ

                                                               ವಾ.ವಿ.ಸಂ.150 ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಶರಣಬಸಪ್ಪ ದರ್ಶನಾಪೂರ ಅವರ ಜಿಲ್ಲಾ ಪ್ರವಾಸ ...