ಭಾನುವಾರ, ಮಾರ್ಚ್ 15, 2020

ವಿದೇಶದಿಂದ ಬಂದವರನ್ನು ದಿನಕ್ಕೆ 2 ಬಾರಿ ವೈದ್ಯಕೀಯ ತಂಡ ತಪಾಸಣೆ
ವದಂತಿಗಳಿಗೆ ಕಿವಿಗೊಡದಿರಲು ಜಿಲ್ಲಾಡಳಿತ ಮನವಿ
ಯಾದಗಿರಿ, ಮಾರ್ಚ್ 15 (ಕರ್ನಾಟಕ ವಾರ್ತೆ): ಜಿಲ್ಲೆಯಲ್ಲಿ ಇಲ್ಲಿಯವರೆಗೆ ಯಾವುದೇ ಶಂಕಿತ ಅಥವಾ ಖಚಿತ ಕೊರೋನಾ ವೈರಸ್ ಪ್ರಕರಣ ದಾಖಲಾಗಿರುವುದಿಲ್ಲ. ಕೊರೋನಾ ವೈರಸ್ ಸೋಂಕು ಬಾರದಂತೆ ಜಿಲ್ಲಾಡಳಿತವು ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದು, ಆತಂಕಪಡುವ ಅಗತ್ಯವಿಲ್ಲ. ಸಾರ್ವಜನಿಕರು ವದಂತಿಗಳಿಗೆ ಕಿವಿಗೊಡಬಾರದು ಎಂದು ಜಿಲ್ಲಾಡಳಿತ ಮನವಿ ಮಾಡಿದೆ.
ಈ ಕುರಿತು ಅಪರ ಜಿಲ್ಲಾಧಿಕಾರಿಗಳಾದ ಪ್ರಕಾಶ್ ಜಿ.ರಜಪೂತ್ ಅವರು ಭಾನುವಾರ ಪ್ರಕಟಣೆ ನೀಡಿದ್ದು, ಯಾದಗಿರಿ ಜಿಲ್ಲೆಯ ವಡಗೇರಾ ಪಟ್ಟಣದಲ್ಲಿ 1, ಸುರಪುರ ಪಟ್ಟಣದಲ್ಲಿ 2 ಹಾಗೂ ಯಾಳಗಿ ಗ್ರಾಮದಲ್ಲಿ 4 ಸೇರಿದಂತೆ ಒಟ್ಟು 7 ಜನ ದುಬೈ ಪ್ರವಾಸದಿಂದ ಜಿಲ್ಲೆಗೆ ಮರಳಿ ಬಂದಿರುವ ಹಿನ್ನೆಲೆಯಲ್ಲಿ ಇವರಿಗೆ ವೈದ್ಯಕೀಯ ತಪಾಸಣೆ ಮಾಡಲಾಗಿದೆ. ಇವರಲ್ಲಿ ಯಾವುದೇ ರೋಗ ಲಕ್ಷಣಗಳು ಕಂಡುಬಂದಿರುವುದಿಲ್ಲ. ಮುಂಜಾಗ್ರತಾ ಕ್ರಮವಾಗಿ ಇವರನ್ನು 14 ದಿನಗಳ ಕಾಲ ಅವರ ಮನೆಯಲ್ಲಿ ಪ್ರತ್ಯೇಕವಾಗಿರಲು ತಿಳಿಸಿದ್ದು, ದಿನಕ್ಕೆ 2 ಬಾರಿ ಇವರನ್ನು ವೈದ್ಯಕೀಯ ತಂಡ ಭೇಟಿ ನೀಡಿ ತಪಾಸಣೆ ನಡೆಸಲಿದೆ ಎಂದು ಮಾಹಿತಿ ನೀಡಿದ್ದಾರೆ.
ಕೊರೋನಾ ಭಯ ಬೇಡ; ಎಚ್ಚರವಿರಲಿ: ಜಿಲ್ಲೆಯಲ್ಲಿ ಕೊರೋನಾ ವೈರಸ್ ಸೋಂಕು ಹರಡದಂತೆ ಹಾಗೂ ಸಾರ್ವಜನಿಕರು ತಮ್ಮ ಆರೋಗ್ಯ ಕಾಪಾಡಿಕೊಳ್ಳುವ ದೃಷ್ಟಿಯಿಂದ ಸುರಕ್ಷತೆಗಾಗಿ ಈ ಕೆಳಕಂಡ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಬೇಕು. ವೈರಸ್ ಬಗ್ಗೆ ಭಯಪಡಬಾರದು. ಆದರೆ, ಅಗತ್ಯ ಮುನ್ನೆಚ್ಚರಿಕೆ ವಹಿಸುವಂತೆ ಅವರು ಮನವಿ ಮಾಡಿದ್ದಾರೆ.
ಯಾದಗಿರಿ ಜಿಲ್ಲೆಗೆ ಹೊರದೇಶದಿಂದ ಆಗಮಿಸುವವರಿಗೆ ಸೋಂಕು ಅಥವಾ ರೋಗದ ಲಕ್ಷಣ ಇಲ್ಲದಿದ್ದರೂ ಸಹ ಮನೆಯಲ್ಲಿ 14 ದಿನಗಳ ಕಾಲ ಪ್ರತ್ಯೇಕವಾಗಿರಿಸಬೇಕು. ಸಾರ್ವಜನಿಕರು ಆಗಾಗ್ಗೆ ಸಾಬೂನು ಹಾಗೂ ನೀರಿನಿಂದ ಕೈತೊಳೆಯುವುದನ್ನು ಅಭ್ಯಾಸ ಮಾಡಿ ಅಥವಾ ಆಲ್ಕೊಹಾಲ್ ಆಧಾರಿತ ಹ್ಯಾಂಡ್ ರಬ್‍ಗಳನ್ನು ಬಳಸಿ. ನಿಮ್ಮ ಕೈಗಳು ಸ್ವಚ್ಛಗೊಂಡಂತೆ ಕಂಡರೂ ಸಹ ಆಗಿಂದಾಗ್ಗೆ ಸಾಬೂನು ಮತ್ತು ನೀರಿನಿಂದ ಕೈತೊಳೆದುಕೊಳ್ಳಬೇಕು.
ಕೆಮ್ಮುವಾಗ ಅಥವಾ ಸೀನುವಾಗ ಮೂಗು ಮತ್ತು ಬಾಯಿಯನ್ನು ಕರವಸ್ತ್ರ/ ಟಿಶ್ಯುನಿಂದ ಮುಚ್ಚಿಕೊಳ್ಳಿ. ಬಳಸಿದ ಟಿಶ್ಯು/ ಕರವಸ್ತ್ರವನ್ನು ತಕ್ಷಣವೇ ಮುಚ್ಚಿದ ತೊಟ್ಟಿಯಲ್ಲಿ ಎಸೆಯಿರಿ. ಜ್ವರ, ಉಸಿರಾಟದ ತೊಂದರೆ, ನೆಗಡಿ/ ಕೆಮ್ಮು ರೋಗಲಕ್ಷಣಗಳು ಕಂಡುಬಂದಲ್ಲಿ ಮೂಗು ಮತ್ತು ಬಾಯಿಯನ್ನು ಕರವಸ್ತ್ರ/ ಮಾಸ್ಕ್‍ನಿಂದ ಮುಚ್ಚಿಕೊಂಡು ತಕ್ಷಣ ವೈದ್ಯರನ್ನು ಭೇಟಿ ಮಾಡಬೇಕು. ಈ ರೋಗದ ಲಕ್ಷಣಗಳಿದ್ದರೆ 24*7 ಉಚಿತ ಆರೋಗ್ಯ ಸಹಾಯವಾಣಿ 104ಕ್ಕೆ ಕರೆ ಮಾಡಿ. ದೊಡ್ಡ ಸಭೆ -ಸಮಾರಂಭಗಳಿಗೆ ಭಾಗವಹಿಸುವುದನ್ನು ತಪ್ಪಿಸಿ. ಕೆಮ್ಮು ಮತ್ತು ಜ್ವರ ಕಂಡುಬಂದರೆ ಬೇರೆಯವರೊಡನೆ ನಿಕಟ ಸಂಪರ್ಕ ಹೊಂದಬಾರದು. ಕಣ್ಣು, ಮೂಗು ಮತ್ತು ಬಾಯಿಯನ್ನು ಆಗಿಂದಾಗ್ಗೆ ಸ್ಪರ್ಶ ಮಾಡಬಾರದು. ಸಾರ್ವಜನಿಕ ಸ್ಥಳಗಳಲ್ಲಿ ಉಗುಳಬಾರದು ಎಂದು ಅವರು ಸಲಹೆ ನೀಡಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

                                                             ವಾ.ವಿ.ಸ.45 ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಶರಣಬಸಪ್ಪ ದರ್ಶನಾಪೂರ ಅವರ ಜಿಲ್ಲಾ ಪ್ರವಾಸ ಯಾದಗ...