ಗುರುವಾರ, ಮಾರ್ಚ್ 12, 2020


ಪಿಯುಸಿ, ಎಸ್‍ಎಸ್‍ಎಲ್‍ಸಿ ಪರೀಕ್ಷೆ: ಉಚಿತ ಬಸ್ ಸೌಲಭ್ಯ
ಯಾದಗಿರಿ, ಮಾರ್ಚ್ 12 (ಕರ್ನಾಟಕ ವಾರ್ತೆ): ಜಿಲ್ಲೆಯಲ್ಲಿ ಮಾರ್ಚ್ 4ರಿಂದ 23ರವರೆಗೆ ನಡೆಯುವ ದ್ವಿತೀಯ ಪಿಯುಸಿ ಪರೀಕ್ಷೆಗಳು ಹಾಗೂ ಮಾಚ್ 27ರಿಂದ ಏಪ್ರಿಲ್ 9ರ ವರೆಗೆ ನಡೆಯುವ ಎಸ್‍ಎಸ್‍ಎಲ್‍ಸಿ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವತಿಯಿಂದ ಬಸ್‍ನಲ್ಲಿ ಉಚಿತ ಪ್ರಯಾಣ ಸೌಲಭ್ಯ ಕಲ್ಪಿಸಲಾಗಿದೆ.
ವಿದ್ಯಾರ್ಥಿಗಳು ತಮ್ಮ ವಾಸಸ್ಥಳದಿಂದ ಪರೀಕ್ಷಾ ಕೇಂದ್ರದವರೆಗೆ ಮತ್ತು ಹಿಂದಿರುಗುವಾಗ ತಮ್ಮ ಪರೀಕ್ಷಾ ಪ್ರವೇಶ ಪತ್ರವನ್ನು ತೋರಿಸಿ ಸಂಸ್ಥೆಯ ನಗರ, ಹೊರವಲಯ, ಸಾಮಾನ್ಯ ಹಾಗೂ ವೇಗದೂತ ಬಸ್‍ಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ. ಈ ಕುರಿತಂತೆ ಎಲ್ಲಾ ಘಟಕ ವ್ಯವಸ್ಥಾಪಕರಿಗೆ ಸೂಚನೆಯನ್ನು ನೀಡಲಾಗಿರುತ್ತದೆ. ವಿದ್ಯಾರ್ಥಿಗಳಿಗೆ ಅನಾನುಕೂಲವಾದಲ್ಲಿ ಮಾಹಿತಿಗಾಗಿ ಯಾದಗಿರಿ ಘಟಕ ದೂ:7760992463, ಶಹಾಪೂರ ಘಟಕ ದೂ:7760992464, ಸುರಪುರ ದೂ:7760992467, ಗುರುಮಠಕಲ್ ದೂ:7760992465, ಸಹಾಯಕ ಸಂಚಾರ ವ್ಯವಸ್ಥಾಪಕರ ದೂ:7760992458, ವಿಭಾಗೀಯ ಸಂಚಲನಾಧಿಕಾರಿ ದೂ:7760992452, ವಿಭಾಗೀಯ ಕಚೇರಿ ದೂ:7760992449 ಸಂಪರ್ಕಿಸಿ ಎಂದು ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಯುಗಾದಿ: 22ರಿಂದ 26ರ ವರೆಗೆ ಶ್ರೀಶೈಲದಲ್ಲಿ ವಿಶೇಷ ಪೂಜೆ
ಯಾದಗಿರಿ, ಮಾರ್ಚ್ 12 (ಕರ್ನಾಟಕ ವಾರ್ತೆ): ಶ್ರೀಶೈಲ ದೇವಸ್ಥಾನದಲ್ಲಿ ಯುಗಾದಿಯ ಮಹೋತ್ಸವಗಳು ಮಾ.22 ರಿಂದ 26 ವರೆಗೆ ಐದು ದಿನಗಳ ಕಾಲ ಅತ್ಯಂತ ವೈಭವವಾಗಿ ನಡೆಯಲಿದೆ. ಈ ಮಹೋತ್ಸವಗಳಿಗೆ ಕರ್ನಾಟಕ ಮತ್ತು ಮಹಾರಾಷ್ಟ್ರ ಪ್ರಾಂತಗಳಿಂದ 8 ಲಕ್ಷಕ್ಕೂ ಅಧಿಕ ಭಕ್ತರು ಶ್ರೀಶೈಲಕ್ಕೆ ಬಂದು ಯುಗಾದಿ ಉತ್ಸವಗಳಲ್ಲಿ ಭಾಗವಹಿಸುತ್ತಾರೆ.
ಈ ಉತ್ಸವಕ್ಕಾಗಿ ಬಂದ ಅನೇಕ ಭಕ್ತರಿಗೆ ಶ್ರೀ ಮಲ್ಲಿಕಾರ್ಜುನ ಸ್ವಾಮಿಯವರ ಸ್ಪರ್ಶ ದರ್ಶನಕ್ಕಾಗಿ (ದೇವಸ್ಥಾನದ ಗರ್ಭಗುಡಿಯಲ್ಲಿರುವ ಮೂಲ ವಿರಾಟ್ ಶ್ರೀ ಮಲ್ಲಿಕಾರ್ಜುನ ಸ್ವಾಮಿಯವರ ಜ್ಯೋತಿರ್ಲಿಂಗಕ್ಕೆ ತಲೆಬಾಗಿ ನಮಸ್ಕರಿಸುವುದು-ಶಿರಸ್ಸನ್ನು ಶಿವಲಿಂಗಕ್ಕೆ ತಾಕಿಸುವುದು) ಉತ್ಸವಗಳ ಮುಂದಿನ 5 ದಿನಗಳು ಅಂದರೆ ಮಾ. 18ರಿಂದ 22ರವರೆಗೆ ಅವಕಾಶ ಕೊಡಲಾಗಿದೆ. ನಂತರ ಮೂರು ದಿನಗಳ ಕಾಲ 23 ರಿಂದ 25ರವರೆಗೆ ಯುಗಾದಿಯ ಎರಡು ದಿನ ಮುಂಚಿತವಾಗಿ ಹಾಗೂ ಯುಗಾದಿಯ ದಿನದಂದು ಸ್ವಾಮಿಯವರ ಅಲಂಕಾರ ದರ್ಶನ (ನಾಗಾಭರಣಯುತ, ಪುಷ್ಪಾಲಂಕೃತ ಶಿವಲಿಂಗ)ವನ್ನು ಹೊಂದಬಹುದಾಗಿದೆ. ಯುಗಾದಿ ಉತ್ಸವ ದಿನಗಳಲ್ಲಿ ದರ್ಶನಕ್ಕೆ 18ರಿಂದ 20 ಗಂಟೆಗಳ ಕಾಲ ಕಾಯಬೇಕಾಗಿದ್ದು, ಇದು ಭಕ್ತರಿಗೆ ತೊಂದರೆಯನ್ನುಂಟು ಮಾಡುತ್ತಿದೆ. ವಿಜಯಪುರದಲ್ಲಿ ನಡೆದ ಸ್ವಯಂಸೇವಕರು ಮತ್ತು ಪಾದಯಾತ್ರೆ ವೃಂದಗಳ ಸಮಾವೇಶದಲ್ಲಿ ಅನೇಕ ದೀರ್ಘ ಚರ್ಚೆಗಳು ನಡೆದು ಯುಗಾದಿ ಉತ್ಸವದ ಮೂರು ದಿನಗಳಲ್ಲಿ ಭಕ್ತ ಸೌಲಭ್ಯಕ್ಕಾಗಿ ಅಲಂಕಾರ ದರ್ಶನ ಮಾತ್ರ ಒದಗಿಸಬೇಕೆಂದು ಏಕೀಕೃತ ನಿರ್ಣಯವನ್ನು ದೇವಸ್ಥಾನ ಕಾರ್ಯವರ್ಗ ಕೈಗೊಂಡಿದೆ.
ಯುಗಾದಿ ಉತ್ಸವ ಸಂದರ್ಭದಲ್ಲಿ ಸ್ವಾಮಿಗೆ ಕೈಗೊಳ್ಳುವ ಅಲಂಕಾರ ಮಾಹಿತಿ ಇಂತಿದೆ: 
ಮಾ.22 ರಂದು ಭೃಂಗಿವಾಹನಸೇವೆ, ಅಮ್ಮನವರಿಗೆ ಮಹಾಲಕ್ಷ್ಮೀ ಅಲಂಕಾರ, 23ರಂದು ಕೈಲಾಸ ವಾಹನ ಸೇವೆ, ಅಮ್ಮನವರಿಗೆ ಮಹಾದುರ್ಗೆ ಅಲಂಕಾರ, 24ರಂದು ಪ್ರಭೋತ್ಸವ, ನಂದಿವಾಹನ ಸೇವೆ, ಅಮ್ಮನವರಿಗೆ ಮಹಾಸರಸ್ವತಿ ಅಲಂಕಾರ, ರಾತ್ರಿ 10 ಗಂಟೆಯಿಂದ ವೀರಾಚಾರ ವಿನ್ಯಾಸಗಳು, ಅಗ್ನಿ ಕುಂಡ ಪ್ರವೇಶ, 25ರಂದು ಯುಗಾದಿ ಬೆಳಿಗ್ಗೆ 9 ಗಂಟೆಯಿಂದ ದೇವಸ್ಥಾನದ ಆಸ್ಥಾನ ಸಿದ್ಧಾಂತಿ ಪಂಡಿತ ಶ್ರೀ ಬುಟ್ಟೇ ವೀರಭದ್ರ ದೈವಜ್ಞಗಳಿಂದ ಪಂಚಾಗ ಶ್ರವಣ, ಸಂಜೆ 4.30 ಗಂಟೆಯಿಂದ ಅಮ್ಮನವರಿಗೆ ಮಾವಾಣಿ ಸೇವಿತ ರಾಜರಾಜೇಶ್ವರಿ ಅಲಂಕಾರ ಮತ್ತು 26ರಂದು ಬೆಳಿಗ್ಗೆ 9.45 ಗಂಟೆಯಿಂದ ಪೂರ್ಣಾಹುತಿ, ಸಂಜೆ 7 ಗಂಟೆಯಿಂದ ಅಮ್ಮನವರಿಗೆ ಶ್ರೀ ಭ್ರಮರಂಭಾದೇವಿಯ ನಿಜಾಲಂಕರಣೆ, ಅಶ್ವವಾಹನ ಸೇವೆಗಳನ್ನು ಆಯೋಜಿಸಲಾಗಿದೆ. ಯುಗಾದಿಯ ಮೂರು ದಿನಗಳಲ್ಲಿ ಈ ಅಲಂಕಾರ ದರ್ಶನದಿಂದ ಅನೇಕ ಭಕ್ತರು ಶ್ರೀ ಮಲ್ಲಿಕಾರ್ಜುನ ಸ್ವಾಮಿಯನ್ನು ದರ್ಶಿಸಬಹುದು. ಅಲ್ಲದೇ ವೃದ್ಧರು, ಗರ್ಭಿಣಿ ಸ್ತ್ರೀಯರು, ಚಿಕ್ಕ ಮಕ್ಕಳು ಮುಂತಾದವರಿಗೆ ಕೂಡ ಸಾಲುಗಳಲ್ಲಿ ದೀರ್ಘಕಾಲ ಕಾಯುವ ಅವಸರವಿಲ್ಲದೆ ಸಹಕರಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಶ್ರೀಶೈಲ ದೇವಸ್ಥಾನ ಕಾರ್ಯನಿರ್ವಹಣಾಧಿಕಾರಿ ದೂರವಾಣಿ: 08524-288885, 288887ಗೆ ಸಂಪರ್ಕಿಸಬಹುದು ಎಂದು ಸ್ಪೆಷಲ್ ಡೆಪ್ಯೂಟಿ ಕಲೆಕ್ಟರ್ ಮತ್ತು ಕಾರ್ಯನಿರ್ವಹಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

                                                             ವಾ.ವಿ.ಸ.45 ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಶರಣಬಸಪ್ಪ ದರ್ಶನಾಪೂರ ಅವರ ಜಿಲ್ಲಾ ಪ್ರವಾಸ ಯಾದಗ...