ಭಾನುವಾರ, ಮಾರ್ಚ್ 8, 2020

ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ; ಸ್ತ್ರೀಶಕ್ತಿ ಸಮಾವೇಶ
ಸಮಾಜದಲ್ಲಿನ ಎಲ್ಲಾ ಮಹಿಳೆಯರನ್ನು ತಾಯಿಯಂತೆ ಕಾಣಿ
-ಶಾಸಕ ವೆಂಕಟರೆಡ್ಡಿಗೌಡ ಮುದ್ನಾಳ

ಯಾದಗಿರಿ, ಮಾರ್ಚ್ 08 (ಕರ್ನಾಟಕ ವಾರ್ತೆ): ಮಹಿಳೆಯರಿಗೆ ಸಮಾಜದಲ್ಲಿ ಗೌರವದ ಸ್ಥಾನವಿದೆ. ಮನೆಯಲ್ಲಿ ನಮ್ಮ ತಾಯಿಗೆ ಕೊಡುವ ಗೌರವ ಸಮಾಜದಲ್ಲಿ ಎಲ್ಲಾ ಮಹಿಳೆಯರಿಗೂ ಕೊಡಬೇಕು. ಅಂದಾಗ ಮಾತ್ರ ಮಹಿಳೆಯರ ಮೇಲೆ ನಡೆಯುವ ಅನ್ಯಾಯ, ದೌರ್ಜನ್ಯ, ಅತ್ಯಾಚಾರದಂತಹ ಪ್ರಕರಣಗಳನ್ನು ತಡೆಗಟ್ಟಲು ಸಾಧ್ಯವಾಗುತ್ತದೆ ಎಂದು ಶಾಸಕರಾದ ವೆಂಕಟರೆಡ್ಡಿಗೌಡ ಮುದ್ನಾಳ ಅವರು ಹೇಳಿದರು. ನಗರದ ವಿದ್ಯಾಮಂಗಲ ಕಾರ್ಯಾಲಯದಲ್ಲಿ ಭಾನುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾ ಸ್ತ್ರೀಶಕ್ತಿ ಒಕ್ಕೂಟ ಸಂಯುಕ್ತಾಶ್ರಯದಲ್ಲಿ 2019-20ನೇ ಸಾಲಿನ ಜಿಲ್ಲಾ ಮಟ್ಟದ ಸ್ತ್ರೀಶಕ್ತಿ ಸಮಾವೇಶ ಮತ್ತು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ, ಸ್ತ್ರೀಶಕ್ತಿ ಸಂಘಗಳಿಂದ ಉತ್ಪಾದಿತ ವಸ್ತುಗಳ ಪ್ರದರ್ಶನ ಹಾಗೂ ಮಾರಾಟ ಮೇಳವನ್ನು ಉದ್ಘಾಟಿಸಿ, ಅವರು ಮಾತನಾಡಿದರು. ಸಮಾಜದಲ್ಲಿ ಗಂಡು-ಹೆಣ್ಣಿಗೆ ಸಮಾನ ಗೌರವ ಸಿಗಬೇಕು. ಮಹಿಳೆಯರನ್ನು ನೋಡುವ ದೃಷ್ಟಿ ಬದಲಾಗಬೇಕು. ಪ್ರತಿ ತಂದೆ-ತಾಯಂದಿರು ಮನೆಯಲ್ಲಿ ತಮ್ಮ ಮಕ್ಕಳಿಗೆ ಸಮಾಜದಲ್ಲಿ ಹೇಗೆ ಜೀವಿಸಬೇಕು ಎನ್ನುವ ಕುರಿತು ಸಂಸ್ಕಾರ ಕಲಿಸಬೇಕು ಎಂದು ಸಲಹೆ ನೀಡಿದರು.

ಇಂದು ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲಿ ಬೆಳೆಯುತ್ತಿದ್ದಾರೆ. ಆದರೆ ಅವರ ಸ್ಥಾನಮಾನಕ್ಕೆ ಅಗೌರವ ತರುವಂತಹ ಸ್ಥಿತಿ ಕೆಲವು ಸಂದರ್ಭಗಳಲ್ಲಿ ಎದುರಾಗುತ್ತವೆ. ಅವುಗಳಿಗೆ ಹೆದರದೆ ಮುಂದೆ ಸಾಗಬೇಕು. ಮಹಿಳೆಯರು ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಪ್ರಗತಿ ಹೊಂದಿದಾಗ ಮಾತ್ರ ದೇಶ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ತಿಳಿಸಿದರು. ಜಿಲ್ಲಾಧಿಕಾರಿಗಳಾದ ಎಂ.ಕೂರ್ಮಾರಾವ್ಅವರು ಮಾತನಾಡಿ, ಮಹಿಳೆಯರು ಆರ್ಥಿಕ, ಶೈಕ್ಷಣಿಕ, ಸಾಮಾಜಿಕ, ರಾಜಕೀಯ ಎಲ್ಲ ರಂಗಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಯಾವುದೇ ರೀತಿಯ ಲಿಂಗ ತಾರತಮ್ಯ ಮಾಡದೆ ಸಮಾನ ಅವಕಾಶ ನೀಡಿದರೆ ಇನ್ನೂ ಹೆಚ್ಚಿನ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ. ಮಹಿಳೆಯರು ಸ್ವಾವಲಂಬಿಗಳಾಗಿರುವ ದೇಶಗಳು ಅಭಿವೃದ್ಧಿ ಹೊಂದುತ್ತಿವೆ ಎಂದು ಹೇಳಿದರು. ಗಂಡು ಮಗುವಿನ ಮೇಲಿರುವಷ್ಟು ಕಾಳಜಿ ಹೆಣ್ಣು ಮಗುವಿಗೂ ತೋರಬೇಕು. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಉತ್ಪಾದಿಸುವಂತ ಮಾಸ್ಕ್‍ಗಳನ್ನು ಸ್ತ್ರೀಶಕ್ತಿ ಒಕ್ಕೂಟಗಳು ಉತ್ಪಾದಿಸುತ್ತಿವೆ. ನಮ್ಮ ಮನೆಯಿಂದಲೆ ಹೆಣ್ಣು ಮಕ್ಕಳಿಗೆ ಸಮಾನ ಅವಕಾಶ ನೀಡಬೇಕು. ಸಾಮಾಜಿಕ, ಆರ್ಥಿಕ, ರಕ್ಷಣೆ, ಆರೋಗ್ಯ, ರಾಜಕೀಯ ಹಾಗೂ ಶೈಕ್ಷಣಿಕವಾಗಿ ಸಮಾನ ಅವಕಾಶ ನೀಡಿದರೆ ಅಭಿವೃದ್ಧಿ ಸಾಧ್ಯ ಎಂದು ಅವರು ಹೇಳಿದರು. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶಿಲ್ಪಾ ಶರ್ಮಾ ಅವರು ಮಾತನಾಡಿ, ವಿಶ್ವದಲ್ಲೆ ಭಾರತವು ಮದರ್ ಥೇರೆಸಾ, ಇಂದಿರಾ ಗಾಂಧಿ, ಇಂದಿರಾ ನ್ಹೂಯಿ, ಕಲ್ಪನಾ ಚಾವ್ಲಾ ಸೇರಿದಂತೆ ಅನೇಕ ಮಹಿಳೆಯರಿಗೆ ಮೊದಲ ಬಾರಿಗೆ ಉನ್ನತ ಸ್ಥಾನಮಾನಗಳನ್ನು ನೀಡಿದೆ. ಮಹಿಳೆಯರಿಗೆ ಹೆಚ್ಚಿನ ಪ್ರಾಧಾನ್ಯತೆ ಇರುವುದು ನಮ್ಮ ದೇಶದಲ್ಲೆ ಎಂದ ಅವರು  ಜಿಲ್ಲೆಯಲ್ಲಿಯೂ ಸಹ ಅನೇಕ ಮಹಿಳಾ ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು.


ವಿಶ್ವದ ಬೇರೆ ಬೇರೆ ದೇಶಗಳಲ್ಲಿ ಕೆಲವು ಅರ್ಹತೆಗಳ ಆಧಾರದ ಮೇಲೆ ಮತದಾನದ ಹಕ್ಕು ನೀಡಿವೆ. ಆದರೆ ನಮ್ಮ ದೇಶದಲ್ಲಿ ಎಲ್ಲ ಮಹಿಳೆಯರಿಗೆ ಮೊದಲ ಬಾರಿಗೆ ಮತದಾನದ ಹಕ್ಕು ನೀಡಿದೆ. ಅಪೌಷ್ಟಿಕತೆಯಿಂದ ಇರುವ ಮಹಿಳೆಯರ ಆರೋಗ್ಯದ ದೃಷ್ಟಿಯಿಂದ ಸರಕಾರವು ಹಲವಾರ ಯೋಜನೆಗಳನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೂಲಕ ಜಾರಿಗೆ ತಂದಿದ್ದು, ಅಂತಹ ಯೋಜನೆಗಳ ಸದುಪಯೋಗ ಮಾಡಿಕೊಳ್ಳಬೇಕು. ಗರ್ಬಿüಣಿಯರು ಪ್ರಧಾನ ಮಂತ್ರಿ ಮಾತೃವಂದನಾ, ಮುಖ್ಯಮಂತ್ರಿ ಮಾತೃಶ್ರೀ ಯೋಜನೆಯಡಿ ನಿಮ್ಮ ಹತ್ತಿರದ ಅಂಗನವಾಡಿ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಿ ಯೋಜನೆಯ ಪ್ರಯೋಜನ ಪಡೆಯಿರಿ ಎಂದು ಅವರು ಸಲಹೆ ನೀಡಿದರು. ಮಹಿಳೆಗೆ 18 ವರ್ಷ, ಪುರುಷಗೆ 21 ವರ್ಷ ಮುಂಚಿತವಾಗಿ ವಿವಾಹ ಮಾಡಬಾರದು. ಕಾನೂನು ಪ್ರಕಾರ ಅಪರಾಧವಾಗುತ್ತದೆ. ಬಾಲ್ಯವಿವಾಹ ಮಾಡಿಕೊಳ್ಳುವುದರಿಂದ ಮಹಿಳೆಯರ ಶಾರೀರಿಕ, ಮಾನಸಿಕ ಸಮಸ್ಯೆಗಳು ಉಂಟಾಗುತ್ತವೆ. ಪ್ರತಿ ಮನೆಯಲ್ಲೂ ಶೌಚಾಲಯ ಬಳಸಬೇಕು. ಶೌಚಾಲಯ ಇಲ್ಲದವರು ಇದೆ ಮಾರ್ಚ್ 18ರೊಳಗೆ ಗ್ರಾಮ ಪಂಚಾಯತಿಗೆ  ಅರ್ಜಿ ಸಲ್ಲಿಸಿ ಶೌಚಾಲಯ ನಿರ್ಮಿಸಿಕೊಂಡು ಬಳಸಬೇಕು ಎಂದು ಅವರು ಮನವಿ ಮಾಡಿದರು. ಸಂಪನ್ಮೂಲ ವ್ಯಕ್ತಿಯಾಗಿದ್ದ ಲಿಂಗೇರಿ ಕೋನಪ್ಪ ಶಿಕ್ಷಣ ಸಂಸ್ಥೆಯ ಉಪನ್ಯಾಸಕರಾದ ಡಾ.ಜ್ಯೋತಿಲತಾ ತಡಿಬಿಡಿ ಮಠ ಅವರು ಮಾತನಾಡಿ, ಹೆಣ್ಣು ಪ್ರಕೃತಿಯ ಅದ್ಭುತ ಕೊಡುಗೆ. ಹೆಣ್ಣಿಲ್ಲದ ಮನೆ ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ. ಸಮಾಜದಲ್ಲಿ ಪ್ರತಿಯೊಬ್ಬರ ಸಹಕಾರ, ಪ್ರೀತಿ ಇದ್ದರೆ ಹೆಣ್ಣು ಎಂತಹ ಕಠಿಣ ಪರಿಸ್ಥಿತಿಯನ್ನೂ ಎದುರಿಸಬಲ್ಲಳು. ಕುಟುಂಬಲ್ಲಿ ಎಲ್ಲರ ಆರೋಗ್ಯ ಸರಿಯಾಗಿರಬೇಕು ಎಂದು ಬಯಸುವ ಮಹಿಳೆಯರು ತಮ್ಮ ಆರೋಗ್ಯದ ಕುರಿತಾಗಿಯೂ ಕಾಳಜಿ ವಹಿಸಬೇಕು ಎಂದು ಹೇಳಿದರು. ವಕೀಲರಾದ ನಿರ್ಮಲಾದೇವಿ ಎಸ್.ಹೂಗಾರ ಅವರು “ಮಹಿಳೆಯರಿಗೆ ಇರುವ ಕಾನೂನುಗಳು” ಹಾಗೂ ವಕೀಲರಾದ ಸಾವಿತ್ರಿದೇವಿ ಪಾಟೀಲ್ ಅವರು “ಮಹಿಳೆಯರ ಮೇಲೆ ಕೌಟುಂಬಿಕ ದೌರ್ಜನ್ಯ” ಕುರಿತು ಉಪನ್ಯಾಸ ನೀಡಿದರು. ಮಹಿಳಾ ಸಮಖ್ಯಾ ಪ್ರಭಾರ ಜಿಲ್ಲಾ ಸಂಯೋಜಕರಾದ ವಿಮಲಾಕ್ಷಿ ಆರ್.ಹಿರೇಮಠ ಅವರು “ತಾಲ್ಲೂಕು ಒಕ್ಕೂಟಗಳ ಬಲವರ್ಧನೆ ಮತ್ತು ಇಲಾಖೆ/ ಇತರೆ ಇಲಾಖೆಗಳಲ್ಲಿ ಮಹಿಳೆಯರಿಗಾಗಿ ಇರುವ ಯೋಜನೆಗಳು, ಕಾರ್ಯಕ್ರಮಗಳ ಗ್ರಾಮಸಭೆ ಕುರಿತು ಉಪನ್ಯಾಸ ನೀಡಿದರು. ಎಸ್.ಬಿ.ಐ ಆರ್.ಎಸ.ಇ.ಟಿ.ಐ ನ ಉಪನ್ಯಾಸಕರಾದ ಲಕ್ಷ್ಮಣರೆಡ್ಡಿ ಅವರು “ಸ್ತ್ರೀಶಕ್ತಿ ಉತ್ಪನ್ನಗಳ ಗುಣಮಟ್ಟ ನಿರ್ವಹಣೆ ಹಾಗೂ ಮಾರುಕಟ್ಟೆ ಸಹಾಯ ಸ್ಥಳೀಯವಾಗಿ ಅವಶ್ಯಕತೆ” ಕುರಿತು ಉಪನ್ಯಾಸ ನೀಡಿದರು. ಸನ್ಮಾನ: ಬಸ್ಸಮ್ಮ, ದೇವಿಂದ್ರಮ್ಮ ಹಾಗೂ ನರಸಿಂಗಮ್ಮ ಅವರನ್ನು ಜಿಲ್ಲೆಯಲ್ಲಿ ವಿಶೇಷ ಸಾಧನೆಗೈದ ಮಹಿಳೆಯರು ಎಂದು ಸನ್ಮಾನಿಸಲಾಯಿತು. ಶಹಾಪುರ ತಾಲ್ಲೂಕಿನ ಖಾನಾಪುರದ ಅನ್ನಪೂರ್ಣೇಶ್ವರಿ ಸ್ತ್ರೀಶಕ್ತಿ ಸಂಘ, ಹುಣಸಗಿ ತಾಲ್ಲೂಕಿನ  ವೈಷ್ಣವಿ ದೇವಿ ಸ್ತ್ರೀಶಕ್ತಿ ಸಂಘ, ಯಾದಗಿರಿ ತಾಲ್ಲೂಕಿನ ಮೈಲಾಪುರದ ಸಂಗೀತ ಸ್ತ್ರೀಶಕ್ತಿ ಸಂಘ ಹಾಗೂ ಗುರುಮಠಕಲ್ ತಾಲ್ಲೂಕಿನ ಯಂಪಾಡ್ ಕಿತ್ತೂರು ರಾಣಿ ಚನ್ನಮ್ಮ ಸ್ತ್ರೀಶಕ್ತಿ ಸಂಘಗಳನ್ನು ಅತ್ಯುತ್ತಮ ಸ್ತ್ರೀಶಕ್ತಿ ಗುಂಪುಗಳೆಂದು ಸನ್ಮಾನ ಮಾಡಲಾಯಿತು.

ವಸ್ತು ಪ್ರದರ್ಶನ: ಸ್ತ್ರೀಶಕ್ತಿ ಸಂಘಗಳಿಂದ ಉತ್ಪಾದಿತ ವಸ್ತುಗಳ ಪ್ರದರ್ಶನ ಹಾಗೂ ಮಾರಾಟ ಮೇಳದಲ್ಲಿ ಮಹಿಳೆಯರ ಸೌಂದರ್ಯ ವರ್ಧಕಗಳು, ಸೀರೆ, ಸಜ್ಜಿ ರೊಟ್ಟಿ, ಚಕ್ಕುಲಿ, ಗೃಹೋಪಯೋಗಿ ವಸ್ತುಗಳು, ಮಕ್ಕಳ ಆಟಿಕೆ ಸಾಮಾನುಗಳು ಸೇರಿದಂತೆ ಮಕ್ಕಳ ಸಹಾಯವಾಣಿ ಕೇಂದ್ರವನ್ನು ತೆರೆಯಲಾಗಿತ್ತು. ಇದೇ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಶೈಕ್ಷಣಿಕ, ಸಾಂಸ್ಕತಿಕವಾಗಿ ಸಾಧನೆ ಮಾಡಿದ ಹತ್ತು ವಿದ್ಯಾರ್ಥಿಗಳಿಗೆ ಪ್ರಶಸ್ತಿ ಮತ್ತು ಪ್ರಮಾಣ ಪತ್ರ ವಿತರಿಸಲಾಯಿತು. ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಯಾದಗಿರಿ ಶಿಶು ಅಭಿವೃದ್ಧಿ ಯೋಜನಾಧಿಕಾರಿ ರಾಧಾ ಜಿ. ಮಣ್ಣೂರ ಅವರು ಬೇಟಿ ಬಚಾವೂ, ಬೇಟಿ ಪಡಾವೂ ಕುರಿತು  ಪ್ರತಿಜ್ಞಾ ವಿಧಿ ಬೋಧಿಸಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರಾದ ಪ್ರಭಾಕರ ಅವರು ಪ್ರಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತಿ ಸದಸ್ಯರಾದ ಅನಿತಾ ಎಸ್. ರಾಠೋಡ, ಶಶಿಕಲಾ ಬಿ. ಕ್ಯಾತ್ನಾಳ, ತಾಲ್ಲೂಕು ಪಂಚಾಯತಿ ಅಧ್ಯಕ್ಷರಾದ ಭೀಮವ್ವ ಮಲ್ಲೇಶಪ್ಪ ಅಚ್ಚೋಲ, ನ್ಯಾಯವಾದಿಗಳಾದ ಶೋಭಾ ಸಾಲಮಂಟಪಿ, ಸುμÁ್ಮ ಜಾಧವ್ ಅವರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ತಾಲ್ಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ತಾಲ್ಲೂಕು ಸ್ತ್ರೀಶಕ್ತಿ ಗುಂಪುಗಳ ಸದಸ್ಯರು, ಅಂಗನವಾಡಿ ಮೇಲ್ವಿಚಾರಕಿಯರು, ಸಹಾಯಕೀಯರು ಸಾರ್ವಜನಿಕರು ಭಾಗವಹಿಸಿದ್ದರು. ಕಾರ್ಯಕ್ರಮವನ್ನು ಲಿಂಗೇರಿ ಸ್ಟೇಷನ್ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಸಂಗೀತ ಶಿಕ್ಷಕರಾದ ಚಂದ್ರಶೇಖರ ಗೋಗಿ ಹಾಗೂ ತಂಡದವರು ನಾಡಗೀತೆ ಹಾಡಿದರು. ಮಾತೃ ವಂದನಾ ಯೋಜನೆಯ ಜಿಲ್ಲಾ ನೋಡಲ್ ಅಧಿಕಾರಿ ಯಲ್ಲಪ್ಪ ಕೆ. ಅವರು ನಿರೂಪಿಸಿದರು. ಸುರಪುರ ತಾಲ್ಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ  ಲಾಲಸಾಬ್ ಅವರು ವಂದಿಸಿದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

                                                             ವಾ.ವಿ.ಸ.45 ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಶರಣಬಸಪ್ಪ ದರ್ಶನಾಪೂರ ಅವರ ಜಿಲ್ಲಾ ಪ್ರವಾಸ ಯಾದಗ...