ಮಂಗಳವಾರ, ಮಾರ್ಚ್ 24, 2020

ಅನವಶ್ಯಕವಾಗಿ ಮನೆಯಿಂದ ಹೊರಬಂದರೆ ಕ್ರಮ
-:ಜಿಲ್ಲಾಧಿಕಾರಿ ಎಂ.ಕೂರ್ಮಾ ರಾವ್
ಯಾದಗಿರಿ, ಮಾರ್ಚ್ ೨೪ (ಕರ್ನಾಟಕ ವಾರ್ತೆ): ನೋವೆಲ್ ಕೊರೊನಾ ವೈರಸ್ ಅನ್ನು ಪರಿಣಾಮಕಾರಿಯಾಗಿ ತಡೆಗಟ್ಟಲು ಸರ್ಕಾರದ ಆದೇಶದಂತೆ ಜಿಲ್ಲಾಡಳಿತದಿಂದ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು, ಸಾರ್ವಜನಿಕರು ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಅನವಶ್ಯಕವಾಗಿ ಮನೆಯಿಂದ ಹೊರಬಂದರೆ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದುಜಿಲ್ಲಾಧಿಕಾರಿಗಳಾದ ಎಂ.ಕೂರ್ಮಾ ರಾವ್ ಅವರು ಎಚ್ಚರಿಕೆ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊರೊನಾ ವೈರಸ್‌ನಿಂದ ತಪ್ಪಿಸಿಕೊಳ್ಳಲು ಅಂತರ ಕಾಯ್ದುಕೊಳ್ಳುವುದು ಮತ್ತು ಮನೆಯಲ್ಲಿರುವುದೊಂದೇ ಸದ್ಯದ ಪರಿಹಾರವಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಕೋವಿಡ್-೧೯ರ ಶುಶ್ರೂಷಾ ಉದ್ದೇಶಗಳನ್ನು ಮತ್ತು ಶಾಸನಬದ್ಧ ಹಾಗೂ ನಿಯಂತ್ರಣ ಪ್ರಕಾರ್ಯಗಳನ್ನು ಹೊರತುಪಡಿಸಿ ಐದು ವ್ಯಕ್ತಿಗಳಿಗಿಂತ ಹೆಚ್ಚಿನ ಜನ ಸೇರುವುದನ್ನು ನಿಷೇಧಿಸಲಾಗಿದೆ. ಅದೇ ರೀತಿ ಎಲ್ಲಾ ಧರ್ಮದವರು ಪ್ರಾರ್ಥನೆ ಅಥವಾ ಹಬ್ಬಗಳ ಹೆಸರಿನಲ್ಲಿ ಗುಂಪು ಸೇರುವಂತಿಲ್ಲ. ಸುರಕ್ಷತಾ ಕ್ರಮಗಳೊಂದಿಗೆ ಮನೆಯಲ್ಲಿಯೇ ಆಚರಣೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಜಿಲ್ಲೆಯಲ್ಲಿ ಇದುವರೆಗೆ ಯಾವುದೇ ಶಂಕಿತ ಅಥವಾ ಖಚಿತ ಕೊರೋನಾ ವೈರಸ್ ಪ್ರಕರಣ ಪತ್ತೆಯಾಗಿರುವುದಿಲ್ಲ. ಶಹಾಪುರ ಆಸ್ಪತ್ರೆಯಲ್ಲಿ ಒಬ್ಬರನ್ನು ಪ್ರತ್ಯೇಕವಾಗಿರಿಸಿ, ಐಸೊಲೇಷನ್ ವ್ಯವಸ್ಥೆ ಮಾಡಲಾಗಿದೆ. ಇವರ ರಕ್ತ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಯಾದಗಿರಿ ೧೫, ಶಹಾಪುರ ೨ ಹಾಗೂ ಸುರಪುರ ಸಾರ್ವಜನಿಕ ಆಸ್ಪತ್ರೆಯಲ್ಲಿ ೧೦ ಸೇರಿದಂತೆ ಒಟ್ಟು ೨೭ ಐಸೊಲೇಷನ್ ಬೆಡ್‌ಗಳ ವ್ಯವಸ್ಥೆ ಮಾಡಲಾಗಿದೆ. ಹೆಚ್ಚಿನ ಪ್ರಕರಣಗಳು ಕಂಡುಬAದರೆ ಹೊಸ ಜಿಲ್ಲಾಸ್ಪತ್ರೆಯಲ್ಲಿ ಬೆಡ್‌ಗಳ ವ್ಯವಸ್ಥೆ ಮಾಡಲಾಗುವುದು ಎಂದು ಅವರು ಮಾಹಿತಿ ನೀಡಿದರು.
ವಿದೇಶದಿಂದ ಜಿಲ್ಲೆಗೆ ಬಂದ ಒಟ್ಟು ೫೮ ಜನ ಹೋಮ್ ಐಸೊಲೇಷನ್‌ನಲ್ಲಿದ್ದಾರೆ. ಇವರ ಮನೆಗೆ ಸ್ಟಿಕ್ಕರ್ ಅಂಟಿಸಲಾಗುವುದು. ಮುಂಜಾಗ್ರತಾ ಕ್ರಮವಾಗಿ ಇವರನ್ನು ದಿನಕ್ಕೆ ೨ ಬಾರಿಯಂತೆ ೧೪ ದಿನಗಳ ಕಾಲ ವೈದ್ಯಕೀಯ ತಂಡ ಭೇಟಿ ನೀಡಿ ತಪಾಸಣೆ ನಡೆಸುತ್ತಿದೆ. ವಿದೇಶದಿಂದ ಜಿಲ್ಲೆಗೆ ಬಂದವರೆಲ್ಲರೂ ಅವರ ಮನೆಯಲ್ಲಿಯೆ ಏಕಾಂತವನ್ನು ಕಡ್ಡಾಯವಾಗಿ ಅನುಸರಿಸಬೇಕು. ಉಲ್ಲಂಘಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಹಾಗೂ ಸರಕಾರಿ ಏಕಾಂತವಾಸಕ್ಕೆ ಅವರನ್ನು ವರ್ಗಾಹಿಸಲಾಗುವುದು. ಈಗಾಗಲೇ ಒಂದು ಪ್ರಕರಣ ಕೂಡ ದಾಖಲಿಸಲಾಗಿದೆ. ನಿಯಮಗಳನ್ನು ಉಲ್ಲಂಘಿಸುವ ಯಾವುದೇ ವ್ಯಕ್ತಿ, ಸಂಸ್ಥೆ, ಸಂಘಟನೆಯ ವಿರುದ್ಧ ಸಾಂಕ್ರಾಮಿಕ ರೋಗಗಳ ಅಧಿನಿಯಮ, ವಿಕೋಪ ನಿರ್ವಹಣಾ ಅಧಿನಿಯಮ, ಭಾರತೀಯ ದಂಡ ಸಂಹಿತೆ ೧೮೮ನೇ ಪ್ರಕರಣ ಮತ್ತು ಇತರ ಸಂಬAಧಪಟ್ಟ ಸಂಹಿತೆಗಳು, ಅಧಿನಿಯಮಗಳ ಅಡಿಯಲ್ಲಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.
ಕಾರ್ಮಿಕರಿಗೆ ವೇತನಸಹಿತ ರಜೆ: ಜಿಲ್ಲೆಯ ಎಲ್ಲಾ ಅಂಗಡಿಗಳು, ವಾಣಿಜ್ಯ ಸಂಸ್ಥೆಗಳು, ಕಚೇರಿಗಳು, ಕಾರ್ಯಾಗಾರಗಳು, ಉಗ್ರಾಣಗಳು, ಅವುಗಳ ವ್ಯವಹಾರವನ್ನು ಸ್ಥಗಿತಗೊಳಿಸಬೇಕು. ಅಗತ್ಯ ಸರಕು ಮತ್ತು ಸೇವೆಗಳೊಂದಿಗೆ ವ್ಯವಹರಿಸುವ, ಆಹಾರ, ವೈದ್ಯಕೀಯ ಉಪಕರಣ ಔಷಧಿಗಳು, ಇಂಧನ, ಕೃಷಿ ಉಪಕರಣಗಳು, ಇತ್ಯಾದಿ, ಅಂತಹುಗಳನ್ನು ಹೊರತುಪಡಿಸಿ ಎಲ್ಲಾ ಕೈಗಾರಿಕೆಗಳು ಮತ್ತು ಕಾರ್ಖಾನೆಗಳು ತಮ್ಮ ಕಾರ್ಯನಿರ್ವಹಣೆಗಳನ್ನು ಸ್ಥಗಿತಗೊಳಿಸತಕ್ಕದ್ದು. ಈ ಕಾರಣಕ್ಕಾಗಿ ಯಾವೊಬ್ಬ ಕೆಲಸಗಾರನನ್ನು ತೆಗೆದುಹಾಕುವಂತಿಲ್ಲ ಹಾಗೂ ಉಳಿದೆಲ್ಲಾ ಕೆಲಸಗಾರರಿಗೆ ಈ ದಿನಗಳಲ್ಲಿ ವೇತನಸಹಿತ ರಜೆಯನ್ನು ಮಂಜೂರು ಮಾಡುವಂತೆ ನಿರ್ದೇಶಿಸಲಾಗಿದೆ ಎಂದು ಹೇಳಿದರು.
ಮನೆಯಿಂದಲೇ ಕೆಲಸ ನಿರ್ವಹಿಸಿ: ಯಾವುದು ಕಾರ್ಯಸಾಧುವಲ್ಲವೋ ಹಾಗೂ ತುರ್ತು ಮತ್ತು ಅಗತ್ಯ ಸೇವೆಗಳೊಂದಿಗೆ ವ್ಯವಹರಿಸುವ ಘಟಕಗಳನ್ನು ಹೊರತುಪಡಿಸಿ ಎಲ್ಲಾ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಘಟಕಗಳಲ್ಲಿನ ಕೆಲಸ ಕಾರ್ಯಗಳನ್ನು ಆಯಾ ನೌಕರರ ಮನೆಯಿಂದಲೇ ಕೆಲಸ ನಿರ್ವಹಿಸುವುದನ್ನು (ವರ್ಕ್ ಫ್ರಮ್ ಹೋಮ್) ಖಚಿತಪಡಿಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.
ಜನರ ಸಾಗಣೆ ನಿಷೇಧ: ಅಂತರರಾಜ್ಯ, ಅಂತರ ಜಿಲ್ಲಾ ಮತ್ತು ಜಿಲ್ಲೆಯೊಳಗಿನ ಎಲ್ಲಾ ಪ್ರಯಾಣಿಕ ಸಾರಿಗೆ ಸೇವೆಗಳನ್ನು, ರಸ್ತೆ ಸಾರಿಗೆ ನಿಗಮಗಳ ಮತ್ತು ಖಾಸಗಿ ಸಾರಿಗೆ ಕಾರ್ಯಾಚರಣೆಗಳನ್ನು ನಿಲ್ಲಿಸಲಾಗಿದೆ. ಈ ಆದೇಶದಲ್ಲಿ ಅನುಮತಿಸಿದ ಅಗತ್ಯ ಸರಕುಗಳನ್ನು ಸಂಗ್ರಹಿಸುವುದಕ್ಕಾಗಿ ಹಾಗೂ ಈ ಆದೇಶದಲ್ಲಿ ಅನುಮತಿಸಿದ ವಿನಾಯಿತಿಗಳಲ್ಲಿನ ಖಾಸಗಿ ವಾಹನಗಳನ್ನು ಮಾತ್ರ ಚಲಾಯಿಸಬೇಕು. ಅಗತ್ಯ ಸರಕುಗಳನ್ನು ಸಂಗ್ರಹಿಸಲು ಮತ್ತು ವೈದ್ಯಕೀಯ ತುರ್ತುಗಳಿಗೆ ಹಾಜರಾಗುತ್ತಿರುವ ವಾಹನಗಳನ್ನು ಹೊರತುಪಡಿಸಿ, ಪ್ರಯಾಣಿಕರಿಗೆ ಎಲ್ಲಾ ಓಲಾ, ಉಬರ್, ಟ್ಯಾಕ್ಸಿಗಳು, ಆಟೊರಿಕ್ಷಾಗಳು ಮತ್ತು ಇತರ ಬಾಡಿಗೆ ಪ್ರಯಾಣ ಸೇವೆಗಳಿಗೆ ಅನುಮತಿ ಇಲ್ಲ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಸರ್ಕಾರವು ಅಧಿಸೂಚಿಸಿದ ಅಗತ್ಯೇತರ(non essential) ಸೇವೆಗಳನ್ನು ವ್ಯವಹರಿಸುವ ಎಲ್ಲಾ ಸರ್ಕಾರಿ ಕಚೇರಿಗಳನ್ನು ಸ್ಥಗಿತಗೊಳಿಸಲಾಗಿದೆ. ವೈದ್ಯಕೀಯ ತುರ್ತುಗಳು ಮತ್ತು ಅನಿವಾರ್ಯ ಸನ್ನಿವೇಶಗಳನ್ನು ಹೊರತುಪಡಿಸಿ, ಇತರ ನೆರೆ ರಾಜ್ಯಗಳೊಂದಿಗಿನ ರಾಜ್ಯದ ಗಡಿಗಳನ್ನು, ಪ್ರಯಾಣಿಕ ವಾಹನಗಳಲ್ಲಿ, ಪ್ರಯಾಣಿಕರ ಚಲನವಲನಕ್ಕಾಗಿ, ಭಾರಿ ಮತ್ತು ಲಘು ವಾಹನಗಳ ಸಂಚಾರವನ್ನು ಕೂಡ ನಿಲ್ಲಿಸಲಾಗುವುದು ಎಂದು ಅವರು ಮಾಹಿತಿ ನೀಡಿದರು.
ಅಗತ್ಯ ಸೇವೆಗಳಿಗೆ ವಿನಾಯಿತಿ: ಮೇಲಿನ ನಿರ್ಬಂಧಗಳ ಕಾರ್ಯಾಚರಣೆಯಿಂದ, ಈ ಮುಂದಿನ ಸರಕುಗಳು ಮತ್ತು ಸೇವೆಗಳನ್ನು ಒದಗಿಸುವ ಅಗತ್ಯ ಸೇವೆಗಳಿಗೆ ವಿನಾಯಿತಿ ನೀಡಲಾಗಿದೆ. ಆಹಾರ, ದಿನಸಿ ಅಂಗಡಿಗಳು, ಹಾಲು, ತರಕಾರಿಗಳು, ದಿನಬಳಕೆ ವಸ್ತುಗಳು, ಮಾಂಸ, ಮೀನು, ಹಣ್ಣು, ಸಗಟು ಮತ್ತು ಚಿಲ್ಲರೆ ಮಾರುಕಟ್ಟೆಗಳು ಮತ್ತು ಅಂಗಡಿಗಳು. ಪೆಟ್ರೋಲ್ ಬಂಕುಗಳು, ಗ್ಯಾಸ್, ಎಲ್‌ಪಿಜಿ, ಶೈಲ ಏಜೆನ್ಸಿಗಳು ಮತ್ತು ಅದಕ್ಕೆ ಸಂಬAಧಿಸಿದ ಉಗ್ರಾಣಗಳು. ಎಲ್ಲಾ ಸರಕುಗಳ ಸಾಗಣೆ. ಆಸ್ಪತ್ರೆಗಳು, ಚಿಕಿತ್ಸಾಲಯಗಳು, ಔಷಧಾಲಯಗಳು, ಆಪ್ಟಿಕಲ್ ಅಂಗಡಿಗಳು, ರೋಗಪತ್ತೆ ಕೇಂದ್ರಗಳು ಮತ್ತು ಆರೋಗ್ಯ ಮತ್ತು ವೈದ್ಯಕೀಯಕ್ಕೆ ಸಂಬAಧಿಸಿದ ಇತರೆ ಅಂಗಡಿಗಳು, ಸ್ಥಾಪನೆಗಳು, ಕಾರ್ಖಾನೆಗಳು ತೆರೆದಿರುತ್ತವೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಪೊಲೀಸ್ ಮತ್ತು ಅಗ್ನಿಶಾಮಕ ಸೇವೆಗಳು. ನಗರ ಸ್ಥಳೀಯ ಸಂಸ್ಥೆಗಳು ಮತ್ತು ಪಂಚಾಯತ್ ರಾಜ್ ಸಂಸ್ಥೆಗಳ ಕಚೇರಿಗಳು, ಅಂಚೆ ಸೇವೆಗಳು. ಸರ್ಕಾರವು ಅಧಿಸೂಚಿಸಿದಂತೆ, ಅಗತ್ಯ ಸೇವೆಗಳೊಂದಿಗೆ ವ್ಯವಹರಿಸುವ ಸರ್ಕಾರಿ ಕಚೇರಿಗಳು. ವಿದ್ಯುಚ್ಛಕ್ತಿ, ನೀರು ಪೂರೈಕೆ ಮತ್ತು ಪೌರ ಸೇವೆಗಳು. ಬ್ಯಾಂಕ್ ಟೆಲ್ಲರ್ ಸೇವೆಗಳು, ಎಟಿಎಂಗಳು, ಟೆಲಿಕಾಂ, ಅಂತರ್ಜಾಲ ಮತ್ತು ಕೇಬಲ್ ಸೇವೆಗಳು. ಸರಕು ಮತ್ತು ಸೇವೆಗಳು ಇ-ಕಾಮರ್ಸ್, ಹೋಮ್ ಡೆಲಿವರಿ. ರೆಸ್ಟೋರೆಂಟ್‌ಗಳಿAದ ಕೊಂಡೊಯ್ಯುವ, ಹೋಮ್ ಡೆಲಿವೆರಿ. ಸರ್ಕಾರ ಮತ್ತು ಸ್ಥಳೀಯ ಸಂಸ್ಥೆಗಳು ಒದಗಿಸುವ ಕ್ಯಾಂಟೀನ್ ಸೇವೆಗಳು. ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮ. ಖಾಸಗಿ ಭದ್ರತಾ ಸೇವೆಗಳನ್ನು ಒಳಗೊಂಡ, ಭದ್ರತಾ ಸೇವೆಗಳು ಕಾರ್ಯನಿರ್ವಹಿಸಲಿವೆ ಎಂದು ಹೇಳಿದರು.
ವ್ಯಾಪಕವಾಗಿ ಮತ್ತು ಕಂಟೈನರುಗಳಲ್ಲಿ ಕುಡಿಯುವ ನೀರಿನ ತಯಾರಿಕೆ, ಸರಬರಾಜು ಮತ್ತು ವಿತರಣೆ. ಬಸ್ ನಿಲ್ದಾಣಗಳು, ರೈಲ್ವೆ ನಿಲ್ದಾಣಗಳು, ವಿಮಾನ ನಿಲ್ದಾಣಗಳು ಮತ್ತು ಸಂಬAಧಿತ ಸೇವೆಗಳು. ಪ್ರಯಾಣಿಕರನ್ನು ಆಸ್ಪತ್ರೆಯಿಂದ ಮನೆಗೆ ಮತ್ತು ಮನೆಯಿಂದ ಆಸತ್ರೆಗೆ ಸಂಚರಿಸಲು ರೈಲ್ವೆ ನಿಲ್ದಾಣಗಳು, ಬಸ್ ನಿಲ್ದಾಣಗಳು, ವಿಮಾನ ನಿಲ್ದಾಣಗಳು. ಔಷಧಿಗಳು, ಮುಖಗವಸುಗಳು, ಪಿ.ಪಿ.ಇ ಗಳು ಇತ್ಯಾದಿಗಳ ಉತ್ಪಾದನೆಯನ್ನು ಒಳಗೊಂಡು, ಕೊವಿಡ್-೧೯ರ ಶುಶ್ರೂಷೆಗೆ ಅಗತ್ಯ ಪ್ರಯತ್ನ ಪಡುತ್ತಿರುವ ಖಾಸಗಿ ವ್ಯವಸ್ಥಾಪನೆಗಳು. ಸತತ ಪ್ರಕ್ರಿಯೆ ವಿಧಾನದಲ್ಲಿನ ಉತ್ಪಾದನಾ ಮತ್ತು ತಯಾರಿಕಾ ಘಟಕಗಳು ತೆರೆದಿರುತ್ತವೆ ಎಂದು ಅವರು ತಿಳಿಸಿದರು.
ಹೆಚ್ಚಿನ ದರಕ್ಕೆ ಮಾರಿದರೆ ಕೇಸ್: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಋಷಿಕೇಶ ಭಗವಾನ್ ಸೋನವಣೆ ಅವರು ಮಾತನಾಡಿ, ಜಿಲ್ಲೆಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದ್ದು, ಐದು ಅಥವಾ ಅದಕ್ಕಿಂತ ಹೆಚ್ಚಿನ ಜನರು ಗುಂಪಾಗಿ ಕಂಡುಬ0ದರೆ ಪ್ರಕರಣ ದಾಖಲಿಸಲಾಗುವುದು. ಜಿಲ್ಲೆಯ ಎಲ್ಲಾ ಚೆಕ್‌ಪೋಸ್ಟ್ಗಳಲ್ಲಿ ಪೊಲೀಸ್ ಸಿಬ್ಬಂದಿಗಳು ಕಾರ್ಯನಿರ್ವಹಿಸುತ್ತಿದ್ದು, ಜಿಲ್ಲೆಯಿಂದ ಯಾರು ಹೊರಹೋಗುವಂತಿಲ್ಲ ಮತ್ತು ಹೊರ ಜಿಲ್ಲೆಗಳಿಂದ ಯಾರು ಒಳಗೆ ಬರುವಂತಿಲ್ಲ. ಇನ್ನು ಅಗತ್ಯ ವಸ್ತುಗಳನ್ನು ನಿಗದಿತ ಬೆಲೆಗಿಂತ ಹೆಚ್ಚಿನ ದರಕ್ಕೆ ಮಾರಾಟ ಮಾಡುವುದು ಕಂಡುಬAದರೆ ಪ್ರಕರಣ ದಾಖಲಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶಿಲ್ಪಾ ಶರ್ಮಾ, ಸಹಾಯಕ ಆಯುಕ್ತರಾದ ಶಂಕರಗೌಡ ಎಸ್.ಸೋಮನಾಳ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಂ.ಎಸ್.ಪಾಟೀಲ್, ಜಿಲ್ಲಾ ಶಸ್ತçಚಿಕಿತ್ಸಕರಾದ ಡಾ.ನಾರಾಯಣಪ್ಪ ಅವರು ಉಪಸ್ಥಿತರಿದ್ದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಶರಣಬಸಪ್ಪ ದರ್ಶನಾಪೂರ ಅವರ ಜಿಲ್ಲಾ ಪ್ರವಾಸ

                                                               ವಾ.ವಿ.ಸಂ.150 ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಶರಣಬಸಪ್ಪ ದರ್ಶನಾಪೂರ ಅವರ ಜಿಲ್ಲಾ ಪ್ರವಾಸ ...