ಸೋಮವಾರ, ಮಾರ್ಚ್ 16, 2020

ಕೊರೋನಾ ವೈರಸ್ ಭಯ ಬೇಡ; ಮುನ್ನೆಚ್ಚರಿಕೆ ಇರಲಿ
 ಜಿಲ್ಲೆಯಲ್ಲಿ 27 ಐಸೊಲೇಷÀನ್ ಬೆಡ್ ವ್ಯವಸ್ಥೆ -ಜಿಲ್ಲಾಧಿಕಾರಿ ಎಂ.ಕೂರ್ಮಾ ರಾವ್


ಯಾದಗಿರಿ, ಮಾರ್ಚ್ 16 (ಕರ್ನಾಟಕ ವಾರ್ತೆ): ಜಿಲ್ಲೆಯಲ್ಲಿ ಇಲ್ಲಿಯವರೆಗೆ ಯಾವುದೇ ಶಂಕಿತ ಅಥವಾ ಖಚಿತ ಕೊರೋನಾ ವೈರಸ್ ಪ್ರಕರಣಗಳು ದಾಖಲಾಗಿರುವುದಿಲ್ಲ. ಮುಂಜಾಗ್ರತಾ ಕ್ರಮವಾಗಿ ಯಾದಗಿರಿ ಸಾರ್ವಜನಿಕ ಆಸ್ಪತ್ರೆಯಲ್ಲಿ 15, ಶಹಾಪುರ ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ 2 ಹಾಗೂ ಸುರಪುರ ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ 10 ಸೇರಿದಂತೆ ಒಟ್ಟು 27 ಐಸೊಲೇಷನ್ ಬೆಡ್‍ಗಳ ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿಗಳಾದ ಎಂ.ಕೂರ್ಮಾ ರಾವ್ ಅವರು ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರದ ಆದೇಶದಂತೆ ಜಿಲ್ಲೆಯಲ್ಲಿ ಕೊರೋನಾ ವೈರಸ್ ಸೋಂಕು ಹರಡದಂತೆ ಜಿಲ್ಲಾಡಳಿತವು ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದು, ಸಾರ್ವಜನಿಕರು ಆತಂಕ ಪಡಬಾರದು. ಜಿಲ್ಲೆಯ ಎಲ್ಲಾ ತಹಶೀಲ್ದಾರರು, ತಾಲ್ಲೂಕು ಆರೋಗ್ಯಾಧಿಕಾರಿಗಳು, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ನಗರಸಭೆ ಮತ್ತು ಪುರಸಭೆ ಅಧಿಕಾರಿಗಳೊಂದಿಗೆ ವೀಡಿಯೊ ಸಂವಾದ ನಡೆಸಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಸೂಚಿಸಲಾಗಿದೆ. ಅಲ್ಲದೇ, ಜಿಲ್ಲೆಯ ಗಡಿ ಭಾಗ ಮತ್ತು ರೈಲು ನಿಲ್ದಾಣದಲ್ಲಿ ನಿಗಾವಹಿಸಲಾಗುವುದು ಎಂದು ಹೇಳಿದರು.
ವಿದೇಶದಿಂದ ಬಂದವರಲ್ಲಿ ಸೋಂಕು ಇಲ್ಲ: ಜಿಲ್ಲೆಯ ಯಾದಗಿರಿ ತಾಲ್ಲೂಕಿನಲ್ಲಿ 7, ಶಹಾಪೂರ ತಾಲ್ಲೂಕಿನಲ್ಲಿ 7 ಹಾಗೂ ಸುರಪುರ ತಾಲ್ಲೂಕಿನಲ್ಲಿ 5 ಸೇರಿದಂತೆ ಒಟ್ಟು 19 ಜನ ದುಬೈ, ಕತಾರ, ಸೌದಿ, ಮದಿನಾ ಪ್ರವಾಸದಿಂದ ಜಿಲ್ಲೆಗೆ ಮರಳಿ ಬಂದಿರುವ ಹಿನ್ನೆಲೆಯಲ್ಲಿ ಇವರನ್ನು ವೈದ್ಯಕೀಯ ತಪಾಸಣೆಗೊಳಪಡಿಸಲಾಗಿದೆ. ಇವರಲ್ಲಿ ಯಾವುದೇ ರೋಗ ಲಕ್ಷಣಗಳು ಕಂಡುಬಂದಿಲ್ಲ ಎಂದು ಜಿಲ್ಲಾಧಿಕಾರಿಗಳು ಸ್ಪಷ್ಟಪಡಿಸಿದರು.
ಮುಂಜಾಗ್ರತಾ ಕ್ರಮವಾಗಿ ವಿದೇಶದಿಂದ ಬಂದ 19 ಜನರನ್ನು 14 ದಿನಗಳ ಕಾಲ ಅವರ ಮನೆಯಲ್ಲಿ ಪ್ರತ್ಯೇಕವಾಗಿರಲು ತಿಳಿಸಿದ್ದು, ದಿನಕ್ಕೆ 2 ಬಾರಿ ಇವರನ್ನು ವೈದ್ಯಕೀಯ ತಂಡ ಭೇಟಿ ನೀಡಿ ತಪಾಸಣೆ ನಡೆಸಲಿದೆ. ಅಲ್ಲದೇ, ಇವರ ಕುಟುಂಬದ ಸದಸ್ಯರ ಮೇಲೆಯೂ ಕೂಡಾ ನಿಗಾ ವಹಿಸಲಾಗಿದೆ ಎಂದು ಮಾಹಿತಿ ನೀಡಿದರು.
ಯಾದಗಿರಿ ಜಿಲ್ಲೆಗೆ ಹೊರದೇಶದಿಂದ ಆಗಮಿಸುವ ಸಾರ್ವಜನಿಕರಿಗೆ ಸೋಂಕು ಅಥವಾ ರೋಗದ ಲಕ್ಷಣ ಇಲ್ಲದಿದ್ದರೂ ಸಹ ಮನೆಯಲ್ಲಿ 14 ದಿನಗಳ ಕಾಲ ಪ್ರತ್ಯೇಕವಾಗಿರಿಸಬೇಕು. ಖಾಸಗಿ ವೈದ್ಯರು, ಖಾಸಗಿ ಆಸ್ಪತ್ರೆಗಳು ಹಾಗೂ ನರ್ಸಿಂಗ್ ಹೋಮ್‍ಗಳು ಕಳೆದ ಫೆಬ್ರುವರಿ 21ರ ನಂತರ ವಿದೇಶದಿಂದ ರೋಗ ಲಕ್ಷಣಗಳಿರುವ ರೋಗಿಗಳು ಇದ್ದಲ್ಲಿ ತಡಮಾಡದೇ ಸಹಾಯವಾಣಿ- 104 ಸಂಖ್ಯೆಯ ಮೂಲಕ ತಿಳಿಸಬೇಕು ಎಂದು ಸೂಚಿಸಿದರು.
ಜಿಲ್ಲಾಡಳಿತದ ಸೂಚನೆಗಳು: ಜಿಲ್ಲೆಯಲ್ಲಿ ಸಿನಿಮಾ ಮಂದಿರಗಳು, ಮಾಲ್‍ಗಳು, ನಾಟಕ-ರಂಗಮಂದಿರಗಳು, ಕ್ಲಬ್‍ಗಳು, ವಸ್ತು ಪ್ರದರ್ಶನಗಳು, ಸಂಗೀತ ಹಬ್ಬಗಳು, ವಿವಿಧ ರೀತಿಯ ಪಂದ್ಯಾವಳಿಗಳು ಮತ್ತು ಇತರೆ ಹಾಗೂ ಹೆಚ್ಚಾಗಿ ಜನ ಸೇರುವಂತಹ ಮದುವೆ ಮತ್ತು ಧಾರ್ಮಿಕ ಕಾರ್ಯಕ್ರಮಗಳಿಗೆ ಹಾಗೂ ಜಾತ್ರೆಗಳಿಗೆ ಹೆಚ್ಚಿನ ಜನ ಸೇರುವುದನ್ನು ನಿμÉೀಧಿಸಲಾಗಿದೆ. ಬೇಸಿಗೆ ಶಿಬಿರಗಳು, ಸರ್ಕಾರಿ ಸಭೆ- ಸಮಾರಂಭಗಳು, ಕ್ರೀಡಾಕೂಟಗಳು, ವಿಚಾರ ಸಂಕಿರಣ ಮತ್ತಿತರ ಕಾರ್ಯಕ್ರಮಗಳನ್ನು ಆಯೋಜಿಸಬಾರದು. ಹೆಚ್ಚು ಜನರು ಬಳಸುವ ಈಜುಕೊಳ, ಜಿಮ್ ಮುಂತಾದವುಗಳನ್ನು ಮುಚ್ಚಲು ಸೂಚಿಸಲಾಗಿದೆ ಎಂದು ತಿಳಿಸಿದರು.
ಶಾಲಾ-ಕಾಲೇಜು ಬಂದ್: ಕೊರೋನಾ ವೈರಸ್ ಸಾಂಕ್ರಾಮಿಕ ರೋಗವೆಂದು ಘೋಷಿಸಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಸರ್ಕಾರದ ಆದೇಶದಂತೆ ಜಿಲ್ಲೆಯ ಎಲ್ಲಾ ಸರ್ಕಾರಿ, ಖಾಸಗಿ, ಅನುದಾನಿತ ಶಾಲಾ- ಕಾಲೇಜುಗಳು, ಅಂಗನವಾಡಿ ಕೇಂದ್ರಗಳು, ಕೋಚಿಂಗ್ ಸೆಂಟರ್‍ಗಳನ್ನು ಮುಚ್ಚಲು ಸೂಚಿಸಲಾಗಿದೆ. ಆದರೆ, ನಿಗದಿಪಡಿಸಿದ ಪರೀಕ್ಷೆಗಳನ್ನು ಸೂಕ್ತ ಮುಂಜಾಗ್ರತಾ ಕ್ರಮದೊಂದಿಗೆ ನಡೆಸಲಾಗುವುದು ಎಂದು ತಿಳಿಸಿದರು.
ಕೊರೋನಾ ಭಯ ಬೇಡ: ಜಿಲ್ಲೆಯಲ್ಲಿ ಕೊರೋನಾ ವೈರಸ್ ಸೋಂಕು ಹರಡದಂತೆ ಹಾಗೂ ಸಾರ್ವಜನಿಕರು ತಮ್ಮ ಆರೋಗ್ಯ ಕಾಪಾಡಿಕೊಳ್ಳುವ ದೃಷ್ಟಿಯಿಂದ ಸುರಕ್ಷತೆಗಾಗಿ ಈ ಕೆಳಕಂಡ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಬೇಕು. ಕೋವಿಡ್-19 ಬಗ್ಗೆ ಭಯ ಬೇಡ. ಆದರೆ, ಅಗತ್ಯ ಮುನ್ನೆಚ್ಚರಿಕೆ ವಹಿಸುವಂತೆ ಅವರು ಮನವಿ ಮಾಡಿದರು.
ಸಾರ್ವಜನಿಕರು ಆಗಾಗ್ಗೆ ಸಾಬೂನು ಹಾಗೂ ನೀರಿನಿಂದ ಕೈತೊಳೆಯುವುದನ್ನು ಅಭ್ಯಾಸ ಮಾಡಿ ಅಥವಾ ಆಲ್ಕೊಹಾಲ್ ಆಧಾರಿತ ಹ್ಯಾಂಡ್ ರಬ್‍ಗಳನ್ನು ಬಳಸಿ. ನಿಮ್ಮ ಕೈಗಳು ಸ್ವಚ್ಛಗೊಂಡಂತೆ ಕಂಡರೂ ಸಹ ಆಗಿಂದಾಗ್ಗೆ ಸಾಬೂನು ಮತ್ತು ನೀರಿನಿಂದ ಕೈತೊಳೆದುಕೊಳ್ಳಬೇಕು.
ಕೆಮ್ಮುವಾಗ ಅಥವಾ ಸೀನುವಾಗ ಮೂಗು ಮತ್ತು ಬಾಯಿಯನ್ನು ಕರವಸ್ತ್ರ/ ಟಿಶ್ಯುನಿಂದ ಮುಚ್ಚಿಕೊಳ್ಳಿ. ಬಳಸಿದ ಟಿಶ್ಯು/ ಕರವಸ್ತ್ರವನ್ನು ತಕ್ಷಣವೇ ಮುಚ್ಚಿದ ತೊಟ್ಟಿಯಲ್ಲಿ ಎಸೆಯಿರಿ. ಜ್ವರ, ಉಸಿರಾಟದ ತೊಂದರೆ, ನೆಗಡಿ/ ಕೆಮ್ಮು ರೋಗಲಕ್ಷಣಗಳು ಕಂಡುಬಂದಲ್ಲಿ ಮೂಗು ಮತ್ತು ಬಾಯಿಯನ್ನು ಕರವಸ್ತ್ರ/ ಮಾಸ್ಕ್‍ನಿಂದ ಮುಚ್ಚಿಕೊಂಡು ತಕ್ಷಣ ವೈದ್ಯರನ್ನು ಭೇಟಿ ಮಾಡಬೇಕು. ಈ ರೋಗದ ಲಕ್ಷಣಗಳಿದ್ದರೆ 24*7 ಉಚಿತ ಆರೋಗ್ಯ ಸಹಾಯವಾಣಿ 104ಕ್ಕೆ ಕರೆ ಮಾಡಿ. ದೊಡ್ಡ ಸಭೆ- ಸಮಾರಂಭಗಳಿಗೆ ಭಾಗವಹಿಸುವುದನ್ನು ತಪ್ಪಿಸಿ.
ಕೆಮ್ಮು ಮತ್ತು ಜ್ವರ ಕಂಡುಬಂದರೆ ಬೇರೆಯವರೊಡನೆ ನಿಕಟ ಸಂಪರ್ಕ ಹೊಂದಬಾ
ರದು. ಕಣ್ಣು, ಮೂಗು ಮತ್ತು ಬಾಯಿಯನ್ನು ಮೇಲಿಂದಮೇಲೆ ಸ್ಪರ್ಶ ಮಾಡಬಾರದು. ಸಾರ್ವಜನಿಕ ಸ್ಥಳಗಳಲ್ಲಿ ಉಗುಳಬಾರದು ಎಂದು ಅವರು ಸಲಹೆ ನೀಡಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶಿಲ್ಪಾ ಶರ್ಮಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಋಷಿಕೇಶ ಭಗವಾನ್ ಸೋನವಣೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಂ.ಎಸ್.ಪಾಟೀಲ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ವಿವೇಕಾನಂದ ಟೆಂಗೆ ಅವರು ಉಪಸ್ಥಿತರಿದ್ದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಶರಣಬಸಪ್ಪ ದರ್ಶನಾಪೂರ ಅವರ ಜಿಲ್ಲಾ ಪ್ರವಾಸ

                                                               ವಾ.ವಿ.ಸಂ.150 ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಶರಣಬಸಪ್ಪ ದರ್ಶನಾಪೂರ ಅವರ ಜಿಲ್ಲಾ ಪ್ರವಾಸ ...