ಶನಿವಾರ, ಮಾರ್ಚ್ 21, 2020

ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಸಹಾಯವಾಣಿ
ಯಾದಗಿರಿ, ಮಾರ್ಚ್ 21 (ಕರ್ನಾಟಕ ವಾರ್ತೆ): ಪ್ರಸ್ತುತ ವರ್ಷದ ಬೇಸಿಗೆ ಕಾಲದಲ್ಲಿ ಜಿಲ್ಲೆಯ ಗ್ರಾಮೀಣ ಭಾಗಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾದಲ್ಲಿ ಈ ಕೆಳಕಂಡ ಸಹಾಯವಾಣಿಗಳಿಗೆ ಕರೆ ಮಾಡಿ, ದೂರುಗಳನ್ನು ದಾಖಲಿಸುವುದರ ಮೂಲಕ ಸಾರ್ವಜನಿಕರು ಕುಡಿಯುವ ನೀರಿನ ಸಮಸ್ಯೆಯನ್ನು ಪರಿಹರಿಸಿಕೊಳ್ಳಬಹುದಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶಿಲ್ಪಾ ಶರ್ಮಾ ಅವರು ತಿಳಿಸಿದ್ದಾರೆ.
ಜಿಲ್ಲಾ ಪಂಚಾಯಿತಿ ಕಾರ್ಯಾಲಯ ದೂರವಾಣಿ ಸಂಖ್ಯೆ: 08473-253758, ಸುರಪೂರ ತಾಲ್ಲೂಕು ಪಂಚಾಯಿತಿ ದೂ:08443-256052, ಶಹಾಪೂರ ತಾಲ್ಲೂಕು ಪಂಚಾಯಿತಿ ಮೊಬೈಲ್ ಸಂಖ್ಯೆ:8971267195, ಯಾದಗಿರಿ ತಾಲ್ಲೂಕು ಪಂಚಾಯಿತಿ ದೂ:08473-250152, ಯಾದಗಿರಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ವಿಭಾಗ ಕಚೇರಿ ದೂ:08473-253805, ಸುರಪೂರ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಉಪವಿಭಾಗ ಕಚೇರಿ ದೂ:08443-257344, ಶಹಾಪೂರ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಉಪವಿಭಾಗ ಕಚೇರಿ ಮೊ:9945210079, ಯಾದಗಿರಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಉಪವಿಭಾಗ ಕಚೇರಿ ದೂ:08473-250271 ಸಂಪರ್ಕಿಸಲು ಪ್ರಕಟಣೆಯಲ್ಲಿ ಕೋರಿದ್ದಾರೆ.

ಮಾ.30ರವರೆಗೆ ಕಾಲುವೆಗೆ ನೀರು
ಯಾದಗಿರಿ, ಮಾರ್ಚ್ 21 (ಕರ್ನಾಟಕ ವಾರ್ತೆ): 2019-20ನೇ ಸಾಲಿನ ಹಿಂಗಾರು ಹಂಗಾಮಿಗಾಗಿ ನಾರಾಯಣಪುರ ಎಡದಂಡೆ ಕಾಲುವೆಯ ವಿತರಣಾ ಕಾಲುವೆ 1ರಿಂದ 25 ಹಾಗೂ ನಾರಾಯಣಪುರ ಬಲದಂಡೆ ಕಾಲುವೆಯ ವಿತರಣಾ ಕಾಲುವೆ 1ರಿಂದ 14ರ ವರೆಗೆ ಮತ್ತು ರಾಂಪೂರ ಏತ ನೀರಾವರಿ ಕಾಲುವೆಗಳಲ್ಲಿ ಮಾರ್ಚ್ 30ರವರೆಗೆ ನೀರು ಹರಿಸಲಾಗುವುದು ಎಂದು ಕೃಷ್ಣ ಭಾಗ್ಯ ಜಲನಿಗಮ ನಿಯಮಿತ ನಾರಾಯಣಪುರ ಅಧೀಕ್ಷಕ ಇಂಜಿನಿಯರ್ ಎಸ್.ರಂಗರಾಮ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆಲಮಟ್ಟಿಯಲ್ಲಿ 2019ರ ನವೆಂಬರ್ 17ರಂದು ಜರುಗಿದ ಹಿಂಗಾರು ಹಂಗಾಮಿನ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಚರ್ಚಿಸಿ ನಿರ್ಧರಿಸಿದಂತೆ, ನಾರಾಯಣಪುರ ಎಡದಂಡೆ ಕಾಲುವೆ ಕಿ.ಮೀ. 0.00 ರಿಂದ 77.00 ವರೆಗೆ, ವಿತರಣಾ ಕಾಲುವೆ ಸಂ. 1ರಿಂದ 25ರ ವರೆಗೆ, ನಾರಾಯಣಪುರ ಬಲದಂಡೆ ಕಾಲುವೆ ಕಿ.ಮೀ.0.00 ರಿಂದ 82.00 ವರೆಗೆ, ವಿತರಣಾ ಕಾಲುವೆ ಸಂಖ್ಯೆ: 1ರಿಂದ 14ರ ವರೆಗೆ ಮತ್ತು ರಾಂಪೂರ ಏತ ನೀರಾವರಿ ಯೋಜನೆಯ ಕಾಲುವೆಗಳಿಗೆ ಮಾರ್ಚ್ 20ರವರೆಗೆ ಚಾಲು-ಬಂದ್ ಪದ್ಧತಿಯಂತೆ ನೀರನ್ನು ಹರಿಸಲಾಗಿರುತ್ತದೆ.
ಮುಂದುವರೆದು ಕೃಷ್ಣಾ ಮೇಲ್ದಂಡೆ ಯೋಜನೆಯ ಅಚ್ಚುಕಟ್ಟು ಪ್ರದೇಶದ ರೈತರು, ಶಾಸಕರು, ಲೋಕಸಭೆ ಸದಸ್ಯರು ಹಾಗೂ ಜನಪ್ರತಿನಿಧಿಗಳ ಕೋರಿಕೆ ಮೇರೆಗೆ ಅಚ್ಚುಕಟ್ಟು ಪ್ರದೇಶದ ಹಾಗೂ ಹಾಲಿ ಬೆಳೆದು ನಿಂತ ಬೆಳೆಗಳಿಗೆ ಮಾರ್ಚ್ 19ರಂದು ನಡೆದ ಸಭೆಯಲ್ಲಿ ತೀರ್ಮಾನಿಸಿದಂತೆ ಆಲಮಟ್ಟಿ ಹಾಗೂ ನಾರಾಯಣಪೂರ ಜಲಾಶಯಗಳಲ್ಲಿ ನೀರಿನ ಲಭ್ಯತೆಗನುಗುಣವಾಗಿ ಮಾರ್ಚ್ 21ರಿಂದ 30ರವರೆಗೆ ಮೇಲಿನ ಕಾಲುವೆ ಜಾಲದಲ್ಲಿ ನೀರಾವರಿಗಾಗಿ ನೀರು ಹರಿಸಲು ಸೂಚಿಸಲಾಗಿರುತ್ತದೆ. ಅದರಂತೆ ನೀರನ್ನು ಹರಿಸಲಾಗುವುದು ಎಂದು ಅವರು ಮಾಹಿತಿ ನೀಡಿದ್ದಾರೆ.

ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ ಸ್ಥಗಿತ
ಯಾದಗಿರಿ, ಮಾರ್ಚ್ 21 (ಕರ್ನಾಟಕ ವಾರ್ತೆ): ಕೊರೊನಾ ವೈರಸ್ (ಕೋವಿಡ್-19)ನ್ನು ಸರ್ಕಾರವು ಸಾಂಕ್ರಾಮಿಕ ರೋಗವೆಂದು ಘೋಷಿಸಿರುವ ಹಿನ್ನಲೆಯಲ್ಲಿ ಕೊರೊನಾ ವೈರಾಣುವಿನಿಂದ ಸಂಭವಿಸಬಹುದಾದ ಅನಾಹುತಗಳನ್ನು ತಡೆಗಟ್ಟಲು ಮುಂಜಾಗ್ರತಾ ಕ್ರಮವಾಗಿ ಹೆಚ್ಚಿನ ಜನ ಒಟ್ಟಿಗೆ ಸೇರುವುದನ್ನು ನಿಷೇಧಿಸಿ ಜಿಲ್ಲಾಧಿಕಾರಿಗಳು ಆದೇಶಿಸಿರುವುದರಿಂದ ಮಾರ್ಚ್ 31ರವರೆಗೆ ಯಾದಗಿರಿ ಮುಖ್ಯ ಮಾರುಕಟ್ಟೆ, ಗುರುಮಠಕಲ್ ಉಪ ಮಾರುಕಟ್ಟೆ ಮತ್ತು ಸೈದಾಪೂರ ಉಪ ಮಾರುಕಟ್ಟೆ ಪ್ರಾಂಗಣಗಳಲ್ಲಿ ವ್ಯಾಪಾರ ವಹಿವಾಟು ರದ್ದುಪಡಿಸಲಾಗಿದೆ.
ಅದೇ ರೀತಿ ಗುರುಮಠಕಲ್ ಉಪ ಮಾರುಕಟ್ಟೆಯಲ್ಲಿ ಜರುಗುವ ಜಾನುವಾರು ಸಂತೆ ಮತ್ತು ಯಾದಗಿರಿ ಮುಖ್ಯ ಮಾರುಕಟ್ಟೆಯಲ್ಲಿ ಜರುಗುವ ಜಾನುವಾರು ಸಂತೆಗಳನ್ನು ಕೂಡ ರದ್ದುಗೊಳಿಸಿ ಆದೇಶಿಸಲಾಗಿದೆ. ಪ್ರಯುಕ್ತ ಸಾರ್ವಜನಿಕರು, ಪೇಟೆ ಕಾರ್ಯಕರ್ತರು ಮತ್ತು ರೈತ ಬಾಂಧವರು ಸಹಕರಿಸಬೇಕೆಂದು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ಕೋರಿದ್ದಾರೆ.

ಪೂರ್ವಸಿದ್ಧತಾ ಸಭೆ ಮುಂದೂಡಿಕೆ
ಯಾದಗಿರಿ, ಮಾರ್ಚ್ 21 (ಕರ್ನಾಟಕ ವಾರ್ತೆ): ಸರ್ಕಾರವು ನೊವೆಲ್ ಕೊರೊನಾ ವೈರಸ್ ಅನ್ನು ಸಾಂಕ್ರಾಮಿಕ ರೋಗವೆಂದು ಘೋಷಿಸಿರುವ ಹಿನ್ನಲೆಯಲ್ಲಿ ಸಾರ್ವಜನಿಕರ ಹಿತದೃಷ್ಟಿಯಿಂದ ಮಾರ್ಚ್ 31ರವರೆಗೆ ಯಾವುದೇ ಸಭೆ-ಸಮಾರಂಭಗಳನ್ನು ಏರ್ಪಡಿಸಬಾರದೆಂಬ ನಿರ್ದೇಶನ ಇರುವ ಪ್ರಯುಕ್ತ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಮಾರ್ಚ್ 26ರಂದು ನಿಗದಿಪಡಿಸಿದ್ದ 2020-21ನೇ ಸಾಲಿನ ಡಾ.ಬಾಬು ಜಗಜೀವನರಾಂ ರವರ 113ನೇ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ರವರ 129ನೇ ಜನ್ಮ ದಿನಾಚರಣೆಯ ಪೂರ್ವಸಿದ್ಧತಾ ಸಭೆಯನ್ನು ಮುಂದೂಡಲಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರಾದ ಎಸ್.ಎಸ್.ಚನ್ನಬಸಪ್ಪ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

                                                             ವಾ.ವಿ.ಸ.45 ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಶರಣಬಸಪ್ಪ ದರ್ಶನಾಪೂರ ಅವರ ಜಿಲ್ಲಾ ಪ್ರವಾಸ ಯಾದಗ...