ವಿಶ್ವ ಗ್ಲಾಕೋಮಾ ಸಪ್ತಾಹ ಕಾರ್ಯಕ್ರಮ
ಪ್ರತಿಯೊಬ್ಬರು ಕಣ್ಣಿನ ಕಾಳಜಿ ವಹಿಸುವುದು ಅತ್ಯಗತ್ಯ
-ಡಾ.ಭಗವಂತ ಅನವಾರ
ಯಾದಗಿರಿ, ಮಾರ್ಚ್ 11 (ಕರ್ನಾಟಕ ವಾರ್ತೆ): ಗ್ಲಾಕೋಮಾ ಒಂದು ಮನುಷ್ಯನ ದೃಷ್ಟಿಯನ್ನು ಕದಿಯುವ ಕಾಯಿಲೆಯಾಗಿದೆ. ದೃಷ್ಟಿದೋಷ ಬರುವ ಮೊದಲೇ ಎಚ್ಚರಿಕೆ ವಹಿಸಬೇಕು. ಪಂಚೇಂದ್ರೀಯಗಳಲ್ಲಿ ಕಣ್ಣು ಬಹು ಮುಖ್ಯ ಅಂಗವಾಗಿದೆ. ಕಾರಣ ಪ್ರತಿಯೊಬ್ಬರೂ ಕಣ್ಣಿನ ಪರೀಕ್ಷೆ ಮಾಡಿಸಿ, ಕಾಳಜಿ ವಹಿಸಬೇಕು ಎಂದು ಜಿಲ್ಲಾ ಅಂಧತ್ವ ನಿಯಂತ್ರಣ ಅಧಿಕಾರಿಗಳಾದ ಡಾ.ಭಗವಂತ ಅನವಾರ ಅವರು ತಿಳಿಸಿದರು. ನಗರದ ಸರಕಾರಿ ಮಹಿಳಾ ಪದವಿ ಮಹಾವಿದ್ಯಾಲಯದಲ್ಲಿ ಬುಧವಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಅಂಧತ್ವ ನಿಯಂತ್ರಣ ಅಧಿಕಾರಿಗಳ ಕಾರ್ಯಾಲಯ, ಇಂಡಿಯನ್ ಮೆಡಿಕಲ್ ಅಸೋಷಿಯೇಶನ್ ಹಾಗೂ ರೆಡ್ ಕ್ರಾಸ್ ಘಟಕದ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಗ್ಲಾಕೋಮಾ ಸಪ್ತಾಹ ಕಾರ್ಯಕ್ರಮವನ್ನು ಉದ್ಘಾಟಿಸಿ, ಅವರು ಮಾತನಾಡಿದರು. ದೃಷ್ಟಿದೋಷದಿಂದ ಜೀವನವನ್ನು ಕತ್ತಲಾಗಿಸಲು ಬಿಡಬಾರದು. ಯಾರೂ ಈ ಗ್ಲಾಕೋಮಾದಿಂದ ಬಳಲಬಾರದು. ಸರ್ಕಾರಿ ಆಸ್ಪತ್ರೆಗಳಲ್ಲಿ ಕಣ್ಣಿನ ಉಚಿತ ತಪಾಸಣೆ ಮತ್ತು ಚಿಕಿತ್ಸೆ ಸೌಲಭ್ಯವಿದ್ದು, ಇದರ ಸದುಪಯೋಗ ಪಡೆದುಕೊಳ್ಳಬೇಕು. ಗ್ಲಾಕೋಮಾ ರೋಗಿಗಳ ಜೊತೆ ಆರೋಗ್ಯ ಇಲಾಖೆ ಇದೆ. ಅವರು ಆರೋಗ್ಯದಿಂದ ಇರಲು ನಾವು ಶ್ರಮಿಸುತ್ತೇವೆ. ವಿದ್ಯಾರ್ಥಿಗಳು ಗ್ಲಾಕೋಮಾ ಬಗ್ಗೆ ಕುಟುಂಬದವರಿಗೆ ತಿಳಿಸಬೇಕು. ಜೊತೆಗೆ ಅಕ್ಕ-ಪಕ್ಕದ ಮನೆಯವರಿಗೆ ಹಾಗೂ ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದು ಸಲಹೆ ನೀಡಿದರು.
ಗ್ಲಾಕೋಮಾದ ಲಕ್ಷಣಗಳು: ತಲೆನೋವು, ಕಣ್ಣು ಉಬ್ಬು ನೋವು, ಕಣ್ಣು ಕೆಂಪಾಗುವುದು, ದೃಷ್ಟಿ ಕಡೆಮೆಯಾಗುವಿಕೆ, ಬಣ್ಣ ಬದಲಾವಣೆ ಇವು ಗ್ಲಾಕೋಮಾದ ಲಕ್ಷಣಗಳಾಗಿವೆ ಎಂದು ಡಾ.ಭಗವಂತ ಅನವಾರ ಅವರು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಶ್ರೀನಿವಾಸ್‍ರಾವ್ ದೊಡ್ಮನಿ ಅವರು ಮಾತನಾಡಿ, ಯಾವುದೇ ರೋಗ ಬರುವ ಮುಂಚಿತವಾಗಿ ಅಗತ್ಯ ಕ್ರಮಗಳನ್ನು ಅನುಸರಿಸಬೇಕು. ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಗ್ಲಾಕೋಮಾದ ಬಗ್ಗೆ ವಿದ್ಯಾರ್ಥಿಗಳು ಇತರರಿಗೆ ತಿಳಿಹೇಳಬೇಕು. ಹೆಚ್ಚಾಗಿ ಮೊಬೈಲ್, ಟಿ.ವಿ ನೋಡುವುದರಿಂದಲೂ ಕಣ್ಣಿನ ಮೇಲೆ ದುಷ್ಪರಿಣಾಮ ಬೀರುತ್ತದೆ. ಹೀಗಾಗಿ ಕಣ್ಣಿನ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿದರೆ ಒಳಿತು ಎಂದು ಸಲಹೆ ನೀಡಿದರು. ವಿಜಯಲಕ್ಷ್ಮೀ ಆಸ್ಪತ್ರೆಯ ನೇತ್ರತಜ್ಞರಾದ ಡಾ.ಸಮೀನಾ ನೀಲಕಂಠ ಸೈದಾಪೂರ ಅವರು ಮಾತನಾಡಿ, ಗ್ಲಾಕೋಮಾ ರೋಗವು ತಿಳಿಯದ ರೀತಿಯಲ್ಲಿ ಬಂದು ಕಣ್ಣಿನ ನರಗಳನ್ನು ನಿಶ್ಯಕ್ತಗೊಳಿಸಿ ದೃಷ್ಟಿ ದೋಷ ಕಡಿಮೆ ಮಾಡುತ್ತದೆ. ಈ ದೃಷ್ಟಿದೋಷವು ಹುಟ್ಟಿನಿಂದ ವೃದ್ಧರವರೆಗೂ ಬರಬಹುದು. ಪ್ರತಿಯೊಬ್ಬರು ವರ್ಷಕ್ಕೊಮ್ಮೆ ಕಣ್ಣಿನ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ತಿಳಿಸಿದರು. ಈಗಾಗಲೇ ವಿಶ್ವದಲ್ಲೇ 1.2 ಮಿಲಿಯನ್ ಜನ ಗ್ಲಾಕೋಮಾದಿಂದ ಬಳಲುತ್ತಿದ್ದು, ತಲೆನೋವು, ಒಂದೇ ಬಣ್ಣ ವಿವಿಧ ಬಣ್ಣಗಳ ರೀತಿಯಲ್ಲಿ ಕಾಣುವುದು, ಪದೇ ಪದೇ ಕಣ್ಣಿನ ಗ್ಲಾಸ್ ಬದಲಾಯಿಸುವುದರಿಂದ ಗ್ಲಾಕೋಮಾ ಬರುತ್ತದೆ. ಹೀಗಾಗಿ ಪ್ರತಿಯೊಬ್ಬರೂ ಕಾಳಜಿ ವಹಿಸಬೇಕು ಎಂದರು. ಐ.ಎಂ.ಎ ಜಿಲ್ಲಾಧ್ಯಕ್ಷರಾದ ಡಾ.ಸಿ.ಎಂ.ಪಾಟೀಲ, ಜಿಲ್ಲಾ ಉಪ ಆರೋಗ್ಯ ಶಿಕ್ಷಣಾಧಿಕಾರಿ ನಂದಣ್ಣ ಪಾಟೀಲ್, ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕರು ಹಾಗೂ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು. ಕಿರಿಯ ಆರೋಗ್ಯ ಸಹಾಯಕ ಶರಣಬಸಪ್ಪ ಹೊಸಮನಿ ಅವರು ಸ್ವಾಗತಿಸಿದರು. ಹಿರಿಯ ಆರೋಗ್ಯ ಸಹಾಯಕ ಮಹಿಪಾಲರೆಡ್ಡಿ ಅವರು ನಿರೂಪಿಸಿದರು. ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಅರವಿಂದಕುಮಾರ ಅವರು ವಂದಿಸಿದರು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ