ಬುಧವಾರ, ಮಾರ್ಚ್ 18, 2020

ಮೂಲಸೌಲಭ್ಯ ಅಭಿವೃದ್ಧಿ ಇಲಾಖೆ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳಿಂದ ವೀಡಿಯೊ ಸಂವಾದ           

ಕೊರೋನಾ ವೈರಸ್ ಹರಡದಂತೆ ಕಟ್ಟುನಿಟ್ಟಿನ ಕ್ರಮಕ್ಕೆ ಸೂಚನೆ

ಯಾದಗಿರಿ, ಮಾರ್ಚ್ 18 (ಕರ್ನಾಟಕ ವಾರ್ತೆ): ಕೊರೋನಾ ವೈರಸ್ (ಕೋವಿಡ್-19) ಹರಡುವಿಕೆಯನ್ನು ತಡೆಯಲು ಜಿಲ್ಲಾಡಳಿತ ಕಟ್ಟುನಿಟ್ಟಾಗಿ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಮೂಲಸೌಲಭ್ಯ ಅಭಿವೃದ್ಧಿ ಇಲಾಖೆ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳಾದ ಕಪಿಲ್ ಮೋಹನ್ ಅವರು ಸೂಚಿಸಿದರು.
ಇಲ್ಲಿನ ಜಿಲ್ಲಾಧಿಕಾರಿಗಳ ವೀಡಿಯೊ ಕಾನ್ಫ್‍ರೆನ್ಸ್ ಸಭಾಂಗಣದಲ್ಲಿ ಬುಧವಾರ ಕಲಬುರಗಿ ಜಿಲ್ಲಾಧಿಕಾರಿಗಳ ಕಚೇರಿಯಿಂದ ಬೀದರ್ ಹಾಗೂ ಯಾದಗಿರಿ ಜಿಲ್ಲಾಧಿಕಾರಿಗಳೊಂದಿಗೆ ಹಮ್ಮಿಕೊಂಡಿದ್ದ ವೀಡಿಯೊ ಸಂವಾದದಲ್ಲಿ ಅವರು ಮಾತನಾಡಿದರು.
ವೈರಸ್ ಹರಡುವಿಕೆ ತಡೆಯಲ್ಲಿ ಸಾರ್ವಜನಿಕರ ಸಹಕಾರ ಮುಖ್ಯವಾಗಿದೆ. ಹಾಗಾಗಿ, ಸರ್ಕಾರದ ಆದೇಶದಂತೆ ಸಾರ್ವಜನಿಕರಲ್ಲಿ ವೈರಸ್ ಹರಡುವಿಕೆ ವಿಧಾನ ಹಾಗೂ ಮುಂಜಾಗ್ರತಾ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸಬೇಕು. ಸಭೆ- ಸಮಾರಂಭಗಳಲ್ಲಿ ಹೆಚ್ಚಿನ ಜನರು ಸೇರದಿರುವಂತೆ ಮನವಿ ಮಾಡಿ. ಜನರಿಗೆ ನಿಖರ ಮಾಹಿತಿ ನೀಡುವ ಮೂಲಕ ವದಂತಿಗಳಿಗೆ ತೆರೆ ಎಳೆಯಬೇಕು. ಖಾಸಗಿ ಆಸ್ಪತ್ರೆಗಳ ಮಾಹಿತಿ ಸಂಗ್ರಹಿಸುವ ಜೊತೆಗೆ ರೋಗಲಕ್ಷಣಗಳಿರುವ ವ್ಯಕ್ತಿಗಳು ದಾಖಲಾದಲ್ಲಿ ಮಾಹಿತಿ ನೀಡಲು ಸೂಚಿಸಿ. ಚೆಕ್‍ಪೋಸ್ಟ್‍ಗಳಲ್ಲಿ ಸ್ಕ್ರೀನಿಂಗ್ ಮಾಡಲು ಅವರು ನಿರ್ದೇಶಿಸಿದರು.
ಜಿಲ್ಲಾಧಿಕಾರಿಗಳಾದ ಎಂ.ಕೂರ್ಮಾ ರಾವ್ ಅವರು ಮಾತನಾಡಿ, ಜಿಲ್ಲೆಯಲ್ಲಿ ಇಲ್ಲಿಯವರೆಗೆ ಯಾವುದೇ ಶಂಕಿತ ಅಥವಾ ಖಚಿತ ಕೊರೋನಾ ವೈರಸ್ ಪ್ರಕರಣಗಳು ದಾಖಲಾಗಿರುವುದಿಲ್ಲ. ಮುಂಜಾಗ್ರತಾ ಕ್ರಮವಾಗಿ ಯಾದಗಿರಿ ಸಾರ್ವಜನಿಕ ಆಸ್ಪತ್ರೆಯಲ್ಲಿ 15, ಶಹಾಪುರ ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ 2 ಹಾಗೂ ಸುರಪುರ ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ 10 ಸೇರಿದಂತೆ ಒಟ್ಟು 27 ಐಸೊಲೇಷನ್ ಬೆಡ್‍ಗಳ ವ್ಯವಸ್ಥೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ ಇದುವರೆಗೆ ಯಾದಗಿರಿ ತಾಲ್ಲೂಕಿನಲ್ಲಿ 9, ಶಹಾಪೂರ ತಾಲ್ಲೂಕಿನಲ್ಲಿ 13 ಹಾಗೂ ಸುರಪುರ ತಾಲ್ಲೂಕಿನಲ್ಲಿ 16 ಸೇರಿದಂತೆ ಒಟ್ಟು 38 ಜನ ದುಬೈ, ಕತಾರ, ಸೌದಿ, ಮದಿನಾ ಪ್ರವಾಸದಿಂದ ಜಿಲ್ಲೆಗೆ ಮರಳಿ ಬಂದಿರುವ ಹಿನ್ನೆಲೆಯಲ್ಲಿ ಇವರನ್ನು ವೈದ್ಯಕೀಯ ತಪಾಸಣೆಗೊಳಪಡಿಸಲಾಗಿದೆ. ಯಾವುದೇ ರೋಗಲಕ್ಷಣಗಳು ಕಂಡುಬಂದಿಲ್ಲ. ಮುಂಜಾಗ್ರತಾ ಕ್ರಮವಾಗಿ ಇವರನ್ನು 14 ದಿನಗಳ ಕಾಲ ಅವರ ಮನೆಯಲ್ಲಿ ಪ್ರತ್ಯೇಕವಾಗಿರಲು ತಿಳಿಸಿದ್ದು, ದಿನಕ್ಕೆ 2 ಬಾರಿ ವೈದ್ಯಕೀಯ ತಂಡ ಭೇಟಿ ನೀಡಿ ತಪಾಸಣೆ ನಡೆಸಲಿದೆ. ಅಲ್ಲದೇ, ಇವರ ಕುಟುಂಬದ ಸದಸ್ಯರ ಮೇಲೆಯೂ ಕೂಡಾ ನಿಗಾ ವಹಿಸಲಾಗಿದೆ ಎಂದು ತಿಳಿಸಿದರು.
ಚೆಕ್‍ಪೋಸ್ಟ್‍ಗಳ ಸ್ಥಾಪನೆ: ಯಾದಗಿರಿ ನಗರದ ರೈಲ್ವೆ ನಿಲ್ದಾಣ, ಜಿಲ್ಲಾ ನ್ಯಾಯಾಲಯ, ಹೊಸ ಬಸ್ ನಿಲ್ದಾಣ ಹಾಗೂ ಯರಗೋಳ, ಇಟಗಾಲ್ ಕ್ರಾಸ್, ಮುಡಬೂಳ ಗ್ರಾಮಗಳಲ್ಲಿ ಚೆಕ್‍ಪೋಸ್ಟ್‍ಗಳನ್ನು ಸ್ಥಾಪಿಸಿ, ಸ್ಕ್ರೀನಿಂಗ್ ಮಾಡಲು ಸಿಬ್ಬಂದಿಗಳನ್ನು ನೇಮಿಸಲಾಗಿದೆ. ಹೆಚ್ಚಿನ ಜನರು ಸೇರುವ ಸಭೆ-ಸಮಾರಂಭಗಳನ್ನು ನಿಷೇಧಿಸಲಾಗಿದೆ ಎಂದು ಸರ್ಕಾರದ ಪ್ರಧಾನ ಕಾರ್ಯದರ್ಶಿಗಳಿಗೆ ವಿವರಿಸಿದರು.
ನಂತರ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಜಿಲ್ಲಾಧಿಕಾರಿಗಳು, ಜಿಲ್ಲೆಯ ಎಲ್ಲಾ ಗ್ರಾಮಗಳಲ್ಲಿ ಕೊರೋನಾ ವೈರಸ್ ಬಗ್ಗೆ ಡಂಗೂರ ಸಾರಬೇಕು. “ದೊಡ್ಡ ಸಭೆ- ಸಮಾರಂಭಗಳಿಗೆ ಭಾಗವಹಿಸಬಾರದು. ಜ್ವರ, ಉಸಿರಾಟದ ತೊಂದರೆ, ನೆಗಡಿ, ಕೆಮ್ಮು ರೋಗಲಕ್ಷಣಗಳು ಕಂಡುಬಂದಲ್ಲಿ 24*7 ಉಚಿತ ಆರೋಗ್ಯ ಸಹಾಯವಾಣಿ 104 ಅಥವಾ ಜಿಲ್ಲಾಡಳಿತದ ಸಹಾಯವಾಣಿ ಸಂಖ್ಯೆ 08473-253950 ಕರೆ ಮಾಡಿ. ವೈಯಕ್ತಿಕವಾಗಿ ಅಂತರ ಕಾಯ್ದುಕೊಳ್ಳಬೇಕು. ಸಾರ್ವಜನಿಕರು ಆಗಾಗ್ಗೆ ಕೈತೊಳೆದುಕೊಳ್ಳಬೇಕು” ಎಂಬ ಅಂಶಗಳ ಡಂಗೂರ ಸಾರುವಂತೆ ಸೂಚಿಸಿದರು.
ಜಿಲ್ಲೆಯ ಖಾಸಗಿ ಆಸ್ಪತ್ರೆಗಳ ಸಂಖ್ಯೆ, ಅವುಗಳಲ್ಲಿನ ಸೌಕರ್ಯ ಮತ್ತು ವೈದ್ಯಕೀಯ ಸಲಕರಣೆಗಳ ಮಾಹಿತಿ, ವೈದ್ಯರು ಹಾಗೂ ಶುಶ್ರೂಷಕರ ವಿವರವಾದ ಮಾಹಿತಿ ಪಡೆಯುವಂತೆ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ವಿವೇಕಾನಂದ ಟೆಂಗೆ ಹಾಗೂ ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್.ಬಿ.ಪಾಟೀಲ್ ಅವರಿಗೆ ತಿಳಿಸಿದರು. ಹೆಚ್ಚುವರಿ ಬೆಡ್, ಕಾಟ್‍ಗಳು, ವೆಂಟಿಲೇಟರ್ ಹಾಗೂ ವೈಯಕ್ತಿಕ ಸಂರಕ್ಷಣೆ ಸಲಕರಣೆಗಳನ್ನು ಖರೀದಿಸುವಂತೆ ಜಿಲ್ಲಾ ಶಸ್ತ್ರಚಿಕಿತ್ಸಕರಾದ ಡಾ.ನಾರಾಯಣಪ್ಪ ಅವರಿಗೆ ನಿರ್ದೇಶಿಸಿದರು.
ಕೊರೋನಾ ವೈರಸ್ ಕುರಿತಂತೆ ಸಾರ್ವಜನಿಕರಲ್ಲಿ ಹೆಚ್ಚಿನ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಭಾರತೀಯ ವೈದ್ಯಕೀಯ ಸಂಸ್ಥೆ ಹಾಗೂ ಸಮುದಾಯಗಳ ಮುಖಂಡರು ಮತ್ತು ಮಾಧ್ಯಮದವರಿಗೆ ಕಾರ್ಯಾಗಾರ ಆಯೋಜಿಸುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಂ.ಎಸ್.ಪಾಟೀಲ್ ಅವರಿಗೆ ಸೂಚಿಸಿದರು. ಇನ್ನು ಜಿಲ್ಲಾಡಳಿತದ ಕಂಟ್ರೋಲ್ ರೂಮ್ ನಿರ್ವಹಣೆ ಹಾಗೂ ಅದಕ್ಕೆ ಬರುವ ಕರೆಗಳ ಮಾಹಿತಿ ಸಂಗ್ರಹಿಸುವ ಜವಾಬ್ದಾರಿಯನ್ನು ಜಿಲ್ಲಾ ವಿಪತ್ತು ನಿರ್ವಹಣಾ ಕೋಶದ ವಿಪತ್ತು ನಿರ್ವಹಣಾ ಪರಿಣಿತರಾದ ಶೃತಿ ದೇಸಾಯಿ ಅವರಿಗೆ ಜಿಲ್ಲಾಧಿಕಾರಿಗಳು ವಹಿಸಿದರು.
ವೀಡಿಯೊ ಸಂವಾದದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶಿಲ್ಪಾ ಶರ್ಮಾ, ಅಪರ ಜಿಲ್ಲಾಧಿಕಾರಿಗಳಾದ ಪ್ರಕಾಶ್ ಜಿ.ರಜಪೂತ, ಸಹಾಯಕ ಆಯುಕ್ತರಾದ ಶಂಕರಗೌಡ ಎಸ್.ಸೋಮನಾಳ ಅವರು ಉಪಸ್ಥಿತರಿದ್ದರು.
ನ್ಯಾಯಾಲಯ ಪ್ರಕರಣಗಳ ವಿಚಾರಣೆ ಮುಂದೂಡಿಕೆ
ಯಾದಗಿರಿ, ಮಾರ್ಚ್ 18 (ಕರ್ನಾಟಕ ವಾರ್ತೆ): ರಾಜ್ಯದಲ್ಲಿ ಕೊರೋನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ಜಿಲ್ಲಾ ವಕೀಲರ ಸಂಘವು ನ್ಯಾಯಾಲಯ ಪ್ರಕರಣಗಳ ವಿಚಾರಣೆಗಳನ್ನು ಮುಂದೂಡಲು ಕೋರಿದೆ. ಜಿಲ್ಲೆಯಲ್ಲಿ ಈಗಾಗಲೇ ಕೊರೋನಾ ವೈರಸ್ ಹರಡದಂತೆ ಮುನ್ನೆಚ್ಚರಿಕೆ ಕ್ರಮವಾಗಿ ದಂಡ ಪ್ರಕ್ರಿಯಾ ಸಂಹಿತೆ 1973 ಕಲಂ 133 ಜಾರಿ ಮಾಡಿ ಹೆಚ್ಚಿನ ಜನ ಸೇರದಂತೆ ನಿರ್ಬಂಧಿಸಲಾಗಿರುತ್ತದೆ. ಕಾರಣ ಜಿಲ್ಲೆಯ ಸಾರ್ವಜನಿಕರ ಹಿತದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ ನ್ಯಾಯಾಲಯ ಪ್ರಕರಣಗಳ ವಿಚಾರಣೆಗಳನ್ನು ಮುಂದಿನ ಆದೇಶದವರೆಗೆ ಮುಂದೂಡಲಾಗಿದೆ ಎಂದು ಜಿಲ್ಲಾಧಿಕಾರಿಗಳಾದ ಎಂ.ಕೂರ್ಮಾ ರಾವ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

                                                             ವಾ.ವಿ.ಸ.45 ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಶರಣಬಸಪ್ಪ ದರ್ಶನಾಪೂರ ಅವರ ಜಿಲ್ಲಾ ಪ್ರವಾಸ ಯಾದಗ...