ಶುಕ್ರವಾರ, ಮಾರ್ಚ್ 20, 2020

ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ತುರ್ತು ಸಭೆ
ಜಿಲ್ಲೆಯಾದ್ಯಂತ ಸಂತೆ, ಜಾತ್ರೆ ಸಂಪೂರ್ಣ ನಿಷೇಧಿಸಿ
                                                                  *******
                                       -ಜಿಲ್ಲಾಧಿಕಾರಿ ಎಂ.ಕೂರ್ಮಾ ರಾವ್
ಯಾದಗಿರಿ, ಮಾರ್ಚ್ 20 (ಕರ್ನಾಟಕ ವಾರ್ತೆ): ಸಂತೆ ಹಾಗೂ ಜಾತ್ರೆಗಳಲ್ಲಿ ಹೆಚ್ಚಿನ ಜನ ಸೇರುತ್ತಾರೆ. ಕೊರೊನಾ ವೈರಸ್ ಹರಡುವುದನ್ನು ಪರಿಣಾಮಕಾರಿಯಾಗಿ ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲೆಯಾದ್ಯಂತ ನಡೆಯುವ ಸಂತೆ, ಜಾತ್ರೆ ಹಾಗೂ ಉರುಸ್‍ಗಳನ್ನು ಪಟ್ಟಿ ಮಾಡಿ ಸಂಪೂರ್ಣವಾಗಿ ನಿಷೇಧಿಸಬೇಕು ಎಂದು ಜಿಲ್ಲಾಧಿಕಾರಿಗಳಾದ ಎಂ.ಕೂರ್ಮಾ ರಾವ್ ಅವರು ಅಧಿಕಾರಿಗಳಿಗೆ ಕಟ್ಟುನಿಟ್ಟಾಗಿ ಸೂಚಿಸಿದರು.ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಕೊರೊನಾ COVID-19 ವೈರಸ್ ಮುಂಜಾಗ್ರತಾ ಕ್ರಮಗಳ ಕುರಿತು ಅಧಿಕಾರಿಗಳೊಂದಿಗೆ ಹಮ್ಮಿಕೊಂಡಿದ್ದ ತುರ್ತು ಸಭೆಯಲ್ಲಿ ಅವರು ಮಾತನಾಡಿದರು.ಭಾರತೀಯ ದಂಡ ಪ್ರಕ್ರಿಯೆ ಸಂಹಿತೆ 1973ರ ಕಲಂ 133, 144 (3)ರ ಪ್ರಕಾರ ಹಾಗೂThe Karnataka Epidemic Disease, COVID-19 Regulations, 2020 ರ ನಿಯಮ 12ರ ಮೇರೆಗೆ ಜಿಲ್ಲೆಯಾದ್ಯಂತ ಕೊರೊನಾ ವೈರಸ್ ಸೋಂಕಿನಿಂದಾಗಿ ಸಂಭವಿಸಬಹುದಾದ ಅನಾಹುತಗಳನ್ನು ಪರಿಣಾಮಕಾರಿಯಾಗಿ ತಡೆಗಟ್ಟಲು ಮತ್ತು ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಮಾರ್ಚ್ 14ರಿಂದ ಮಾರ್ಚ್ 31ರವರೆಗೆ ಸಾರ್ವಜನಿಕರು ಅನುಸರಣ ಕ್ರಮಗಳನ್ನು ಕೈಗೊಳ್ಳಲು ಈಗಾಗಲೇ ಆದೇಶ ಹೊರಡಿಸಲಾಗಿದೆ. ತಹಶೀಲ್ದಾರರು, ನಗರಸಭೆ ಆಯುಕ್ತರು, ಪುರಸಭೆ ಮುಖ್ಯಾಧಿಕಾರಿಗಳು, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಪೊಲೀಸ್ ಇಲಾಖೆಯೊಂದಿಗೆ ಈ ನಿಯಮವನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಬೇಕು. ಜಿಲ್ಲಾಡಳಿತದ ಮನವಿಗೆ ಸ್ಪಂದಿಸದವರ ವಿರುದ್ಧ ಪ್ರಕರಣ ದಾಖಲಿಸುವಂತೆ ಅವರು ಸೂಚಿಸಿದರು.ಕಲ್ಯಾಣ ಮಂಟಪ ಪಟ್ಟಿ ಮಾಡಿ: ಮದುವೆಯಂತಹ ವೈಯಕ್ತಿಕ ಸಭೆ-ಸಮಾರಂಭಗಳಲ್ಲಿ 50ಕ್ಕಿಂತ ಹೆಚ್ಚಿನ ಜನ ಸೇರಬಾರದು. ಮದುವೆ ಸಮಾರಂಭಗಳನ್ನು ಆದಷ್ಟು ಮಟ್ಟಿಗೆ ಮುಂದೂಡಿದರೆ ಒಳ್ಳೆಯದು. ಕಲ್ಯಾಣ ಮಂಟಪಗಳನ್ನು ಪಟ್ಟಿ ಮಾಡಿ, ಅವುಗಳ ಮಾಲೀಕರಿಗೆ ಸೂಚನೆ ಕೊಡಬೇಕು. ಇನ್ನು ನಾಟಕಗಳು, ಉತ್ಸವಗಳು, ವಸ್ತು ಪ್ರದರ್ಶನಗಳು, ಸಂಗೀತ ಹಬ್ಬಗಳು, ವಿವಿಧ ರೀತಿಯ ಪಂದ್ಯಾವಳಿಗಳನ್ನು ಕೂಡ ನಿಷೇಧಿಸಲಾಗಿದೆ ಎಂದು ತಿಳಿಸಿದರು.ದಿನನಿತ್ಯದ ವಸ್ತುಗಳಿಗೆ ತೊಂದರೆ ಇಲ್ಲ: ದಿನನಿತ್ಯ ಸಾರ್ವಜನಿಕ ಜೀವನಕ್ಕೆ ಬೇಕಾಗುವ ಅವಶ್ಯಕ ಸಾಮಗ್ರಿಗಳ ವಹಿವಾಟಿಗೆ ಯಾವುದೇ ನಿರ್ಬಂಧ ಇಲ್ಲ. ರೇಷನ್, ಹಾಲು, ತರಕಾರಿ, ಹಣ್ಣಿನ ಅಂಗಡಿ ಹಾಗೂ ಔಷಧ ಅಂಗಡಿಗಳು ತೆರೆದಿರುತ್ತವೆ. ಆದರೆ, ಹೆಚ್ಚು ಜನ ಸೇರುವಂತಹ ಸಿನಿಮಾ ಮಂದಿರಗಳು, ಶಾಪಿಂಗ್ ಮಾಲ್ ಬಂದ್ ಮಾಡಬೇಕು. ಕ್ಲಬ್, ಬಾರ್ ಮತ್ತು ರೆಸ್ಟೋರೆಂಟ್ (ಸಿಎಲ್-7 ಮತ್ತು ಸಿಎಲ್-9) ಮದ್ಯದಂಗಡಿಗಳಲ್ಲಿ ಮದ್ಯ ಮಾರಾಟವನ್ನು ನಿಷೇಧಿಸುವಂತೆ ಅವರು ಸೂಚಿಸಿದರು.ಮುಂಜಾಗ್ರತಾ ಕ್ರಮವಾಗಿ ಎಪಿಎಂಸಿ ವಹಿವಾಟು ಸ್ಥಗಿತಗೊಳಿಸಲಾಗಿದೆ. ಅದರಂತೆ ಆಯುಷ್ಮಾನ್ ಭಾರತ- ಆರೋಗ್ಯ ಕರ್ನಾಟಕ ನೋಂದಣಿ ಕೂಡ ರದ್ದುಪಡಿಸಲಾಗಿದೆ. ಆಧಾರ್ ನೋಂದಣಿ ಕೇಂದ್ರಗಳು ಮತ್ತು ಸಬ್ ರಿಜಿಸ್ಟರ್ ಕಚೇರಿಯಲ್ಲಿ ನೋಂದಣಿ ಪ್ರಕ್ರಿಯೆಯನ್ನು ರದ್ದುಗೊಳಿಸುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶಿಲ್ಪಾ ಶರ್ಮಾ, ಅಪರ ಜಿಲ್ಲಾಧಿಕಾರಿಗಳಾದ ಪ್ರಕಾಶ್ ಜಿ.ರಜಪೂತ, ಸಹಾಯಕ ಆಯುಕ್ತರಾದ ಶಂಕರಗೌಡ ಎಸ್.ಸೋಮನಾಳ, ಡಿವೈಎಸ್‍ಪಿ ಯು.ಶರಣಪ್ಪ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

                                                             ವಾ.ವಿ.ಸ.45 ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಶರಣಬಸಪ್ಪ ದರ್ಶನಾಪೂರ ಅವರ ಜಿಲ್ಲಾ ಪ್ರವಾಸ ಯಾದಗ...