ಶುಕ್ರವಾರ, ಜನವರಿ 24, 2020

ಅಪರ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಪೂರ್ವಸಿದ್ಧತಾ ಸಭೆ
ಫೆ.೧೧ರಂದು ಸವಿತಾ ಮಹರ್ಷಿ ಜಯಂತ್ಯೋತ್ಸವ
ಯಾದಗಿರಿ, ಜನವರಿ ೨೪ (ಕರ್ನಾಟಕ ವಾರ್ತೆ): ಜಿಲ್ಲಾಡಳಿತ ವತಿಯಿಂದ ಸವಿತಾ ಮಹರ್ಷಿ ಜಯಂತ್ಯೋತ್ಸವ ಕಾರ್ಯಕ್ರಮವನ್ನು ಫೆಬ್ರುವರಿ ೧೧ರಂದು ಬೆಳಿಗ್ಗೆ ೧೧ ಗಂಟೆಗೆ ಯಾದಗಿರಿ ನಗರದ ಜಿಲ್ಲಾಡಳಿತ ಭವನದ ಆಡಿಟೋರಿಯಂನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಅಪರ ಜಿಲ್ಲಾಧಿಕಾರಿಗಳಾದ ಪ್ರಕಾಶ್ ಜಿ.ರಜಪೂತ ಅವರು ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಸವಿತಾ ಮಹರ್ಷಿ ಜಯಂತ್ಯೋತ್ಸವ ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ, ಅವರು ಮಾತನಾಡಿದರು.
ಸರಕಾರದ ನಿರ್ದೇಶನದಂತೆ ಫೆಬ್ರುವರಿ ೧ರಂದು ಆಚರಣೆ ಮಾಡಬೇಕಾಗಿದ್ದ ಸವಿತಾ ಮಹರ್ಷಿ ಜಯಂತ್ಯೋತ್ಸವ ಕಾರ್ಯಕ್ರಮವನ್ನು ಸಮಾಜದ ಮುಖಂಡರ ಮನವಿ ಮೇರೆಗೆ ಜಿಲ್ಲಾ ಮಟ್ಟದಲ್ಲಿ ಫೆಬ್ರುವರಿ ೧ರ ಬದಲು ಫೆಬ್ರುವರಿ ೧೧ರಂದು ಆಚರಣೆ ಮಾಡಲು ಅಪರ ಜಿಲ್ಲಾಧಿಕಾರಿಗಳು ಒಪ್ಪಿಗೆ ನೀಡಿದರು.
ಅಂದು ಬೆಳಿಗ್ಗೆ ೯ ಗಂಟೆಗೆ ಯಾದಗಿರಿ ನಗರದಿಂದ ಜಿಲ್ಲಾಡಳಿತ ಭವನದವರೆಗೆ ಭಾವಚಿತ್ರದ ಮೆರವಣಿಗೆ ನಡೆಸಲಾಗುವುದು ಎಂದು ಸವಿತಾ ಮಹರ್ಷಿ ಜಯಂತ್ಯೋತ್ಸವ ಸಂಘದವರು ಸಭೆಯಲ್ಲಿ ತಿಳಿಸಿದರು. ಇದಕ್ಕೆ ಸಮ್ಮತಿಸಿದ ಅಪರ ಜಿಲ್ಲಾಧಿಕಾರಿಗಳು, ಮೆರವಣಿಗಾಗಿ ಸಂಘಕ್ಕೆ ಒಂದು ದಿನ ಮುಂಚಿತವಾಗಿ ಟ್ರಾö್ಯಕ್ಟರ್ ನೀಡುವಂತೆ ಪ್ರಾದೇಶಿಕ ಸಾರಿಗೆ ಇಲಾಖೆಗೆ ಹಾಗೂ ಸ್ಥಳೀಯ ನುರಿತ ಕಲಾತಂಡವನ್ನು ಏರ್ಪಾಡು ಮಾಡುವಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿಗಳಿಗೆ ನಿರ್ದೇಶಿಸಿದರು.
ಜಿಲ್ಲಾಡಳಿತ ಕಾರ್ಯಕ್ರಮದಲ್ಲಿ ಭಾಗವಹಿಸುವ ಸಮಾಜದ ಮುಖಂಡರು, ವಿದ್ಯಾರ್ಥಿಗಳು, ಸಭಿಕರಿಗೆ ಟೀ, ಟಿಫಿನ್ ವ್ಯವಸ್ಥೆ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಮಾಡಲು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಮತ್ತು ಜಿಲ್ಲಾ ಅಂಕಿತ ಅಧಿಕಾರಿಗಳಿಗೆ ವಹಿಸಲಾಯಿತು. ಜಯಂತಿಯಲ್ಲಿ ಶಾಂತಿ, ಸುವ್ಯವಸ್ಥೆಯನ್ನು ಕಾಪಾಡಲು ಸೂಕ್ತ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡುವಂತೆ ಪೊಲೀಸ್ ಇಲಾಖೆಗೆ ತಿಳಿಸಲಾಯಿತು. ಕಾರ್ಯಕ್ರಮದ ನೋಡಲ್ ಅಧಿಕಾರಿಯಾಗಿ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿಗಳನ್ನು ನೇಮಕ ಮಾಡಲಾಯಿತು.
ಶಿಷ್ಟಾಚಾರದಂತೆ ಫೆ.೧ರಂದು ಪೂಜೆ: ಜಯಂತ್ಯೋತ್ಸವ ಅಂಗವಾಗಿ ಜಿಲ್ಲಾಧಿಕಾರಿಗಳ ಕಾರ್ಯಾಲಯದಲ್ಲಿ ಶಿಷ್ಟಾಚಾರದಂತೆ ಫೆಬ್ರುವರಿ ೧ರಂದು ಬೆಳಿಗ್ಗೆ ಸವಿತಾ ಮಹರ್ಷಿಗಳ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಗುವುದು. ಅದರಂತೆ ಜಿಲ್ಲೆಯ ಎಲ್ಲಾ ಸರ್ಕಾರಿ ಕಚೇರಿ ಹಾಗೂ ಸರ್ಕಾರಿ, ಅನುದಾನಿತ ಶಾಲಾ-ಕಾಲೇಜುಗಳಲ್ಲಿಯೂ ಸಹ ಶ್ರದ್ಧಾ, ಭಕ್ತಿಯೊಂದಿಗೆ ಸವಿತಾ ಮಹರ್ಷಿ ಜಯಂತಿಯನ್ನು ಕಡ್ಡಾಯವಾಗಿ ಆಚರಿಸಬೇಕು. ತಾಲ್ಲೂಕು ಮಟ್ಟದಲ್ಲಿ ಕೂಡ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಣೆಗೆ ಆಯಾ ತಹಶೀಲ್ದಾರರು ಕ್ರಮ ವಹಿಸಬೇಕು ಎಂದು ಅವರು ಸೂಚಿಸಿದರು.
ಜಿಲ್ಲಾ ಬಾಲಕಾರ್ಮಿಕ ಯೋಜನಾ ನಿರ್ದೇಶಕರಾದ ರಘುವೀರಸಿಂಗ್ ಠಾಕೂರ್ ಅವರು ಸಭೆಯ ನಡಾವಳಿ ಓದಿದರು. ಆಹಾರ ನಾಗರಿಕ ಸರಬರಾಜು ಇಲಾಖೆಯ ಉಪ ನಿರ್ದೇಶಕರಾದ ದತ್ತಪ್ಪ ಕಲ್ಲೂರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ದತ್ತಪ್ಪ ಸಾಗನೂರ ಅವರು ಉಪಸ್ಥಿತರಿದ್ದರು.
ಸವಿತಾ ಸಮಾಜದ ಜಿಲ್ಲಾ ಅಧ್ಯಕ್ಷರಾದ ಅಪ್ಪಣ್ಣ ಚಿನ್ನಾಕರ, ಜಿಲ್ಲಾ ಪ್ರತಿನಿಧಿ ನಾಗಪ್ಪ ವಡಿಗೇರಿ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಶ್ರೀನಿವಾಸ ಗೌನಳ್ಳಿ, ತಾಲ್ಲೂಕು ಘಟಕದ ಅಧ್ಯಕ್ಷರಾದ ನಾಗಪ್ಪ ಹತ್ತಿಕುಣಿ, ಮುಖಂಡರಾದ ಬನ್ನಪ್ಪ ಯಲ್ಲಪ್ಪ ಕಿಲ್ಲನಕೇರಾ, ಶಂಕರ ಹಣಮಂತ ಕಲ್ಮನಿ, ಗೋಪಾಲ ಕಿಲ್ಲನಕೇರಾ, ಮಾರುತಿ ಕಟ್ಟಿಮನಿ, ಬಸವರಾಜ ಮೈಲಾಪುರ ಅಗಸಿ, ವಿಶ್ವನಾಥ ಮೈಲಾಪುರ ಅಗಸಿ, ಶ್ರೀನಿವಾಸ ಮೈಲಾಪುರ ಅಗಸಿ ಅವರು ಸಭೆಯಲ್ಲಿ ಪಾಲ್ಗೊಂಡಿದ್ದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಶರಣಬಸಪ್ಪ ದರ್ಶನಾಪೂರ ಅವರ ಜಿಲ್ಲಾ ಪ್ರವಾಸ

                                                               ವಾ.ವಿ.ಸಂ.150 ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಶರಣಬಸಪ್ಪ ದರ್ಶನಾಪೂರ ಅವರ ಜಿಲ್ಲಾ ಪ್ರವಾಸ ...