ಭಾನುವಾರ, ಜನವರಿ 19, 2020

ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಿಲ್ಲಾ ಸಮನ್ವಯ ಸಮಿತಿ ಸಭೆ
ಜ.೩೦ರಿಂದ ಸ್ಪರ್ಶ ಕುಷ್ಠ ಅರಿವು ಆಂದೋಲನ
-ಜಿಲ್ಲಾಧಿಕಾರಿ ಎಂ.ಕೂರ್ಮಾ ರಾವ್
ಯಾದಗಿರಿ, ಜನವರಿ ೧೭ (ಕರ್ನಾಟಕ ವಾರ್ತೆ): ಸ್ಪರ್ಶ ಕುಷ್ಠ ಅರಿವು ಆಂದೋಲನವನ್ನು ಜಿಲ್ಲೆಯಾದ್ಯಂತ ಜನವರಿ ೩೦ರಿಂದ ಫೆಬ್ರುವರಿ ೧೩ರವರೆಗೆ ನಡೆಯಲಿದೆ. ಆಂದೋಲನದಲ್ಲಿ ಕುಷ್ಠರೋಗಿಗಳನ್ನು ಪತ್ತೆ ಹಚ್ಚಿ ಚಿಕಿತ್ಸೆ ಕೊಡಿಸುವ ಮೂಲಕ ಕುಷ್ಠರೋಗ ಮುಕ್ತ ಜಿಲ್ಲೆಯನ್ನಾಗಿಸಬೇಕು ಎಂದು ಜಿಲ್ಲಾಧಿಕಾರಿಗಳಾದ ಎಂ.ಕೂರ್ಮಾ ರಾವ್ ಅವರು ಸೂಚಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಸ್ಪರ್ಶ ಕುಷ್ಠ ಅರಿವು ಆಂದೋಲನ-೨೦೨೦ ಜಿಲ್ಲಾ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ, ಅವರು ಮಾತನಾಡಿದರು.
ಆಂದೋಲನ ಅಂಗವಾಗಿ ಜಿಲ್ಲೆಯ ೧೨೩ ಗ್ರಾಮ ಪಂಚಾಯಿತಿಗಳಲ್ಲಿ ಗ್ರಾಮಸಭೆ ನಡೆಸಿ, ಸಭೆಯಲ್ಲಿ ಜಿಲ್ಲಾಡಳಿತದ ಸಂದೇಶ ಓದಬೇಕು. ಕುಷ್ಠ ರೋಗ ಮುಕ್ತ ಜಿಲ್ಲೆಗೆ ಪಣತೊಡಲು ಸಾರ್ವಜನಿಕರಿಗೆ ಪ್ರತಿಜ್ಞಾ ವಿಧಿ ಬೋಧಿಸಬೇಕು. ಗ್ರಾಮ ಪಂಚಾಯಿತಿ ಅಧ್ಯಕ್ಷರು ಕೂಡ ಕುಷ್ಠ ರೋಗದ ನಿರ್ಮೂಲನೆ ಕುರಿತು ತಮ್ಮ ಸಂದೇಶವನ್ನು ನೀಡಬಹುದಾಗಿದೆ. ಆಂದೋಲನ ಕುರಿತಂತೆ ಎಲ್ಲಾ ಗ್ರಾಮ ಪಂಚಾಯಿತಿಗಳಿಗೆ ಜಿಲ್ಲಾ ಪಂಚಾಯಿತಿ ಸಿಇಒ ಅವರಿಂದ ಸುತ್ತೋಲೆ ಹೊರಡಿಸಬೇಕು. ಜೊತೆಗೆ ಆರೋಗ್ಯ ಇಲಾಖೆಯಿಂದ ಕೂಡ ಪತ್ರ ಬರೆಯಲು ಅವರು ನಿರ್ದೇಶಿಸಿದರು.
ಕುಷ್ಠ ರೋಗವನ್ನು ಶೀಘ್ರ ಪತ್ತೆ ಹಚ್ಚಿ ಚಿಕಿತ್ಸೆ ನೀಡಿದಲ್ಲಿ ಬೇಗ ಗುಣಮುಖವಾಗಬಹುದು. ಸಮಾಜದಲ್ಲಿ ಪ್ರತಿಯೊಬ್ಬರಿಗೂ ಸಮಾನತೆಯಿಂದ ಬದುಕುವ ಹಕ್ಕು ಇದೆ. ಕುಷ್ಠರೋಗಿಗಳ ಬಗ್ಗೆ ಯಾರೂ ತಾರತಮ್ಯ ಮಾಡಬಾರದು ಎಂದು ಸಲಹೆ ನೀಡಿದರು.
ಜನವರಿ ೩೦ ಮಹಾತ್ಮ ಗಾಂಧೀಜಿಯವರು ಹುತಾತ್ಮರಾದ ದಿನವಾಗಿದೆ. ಕಾರ್ಯಕ್ರಮದಲ್ಲಿ ಮಹಾತ್ಮ ಗಾಂಧೀಜಿಯವರು ಕುಷ್ಠ ರೋಗ ವಿರುದ್ಧದ ಕೊಡುಗೆಗಳ ಬಗ್ಗೆ ವಿದ್ಯಾರ್ಥಿಗಳು, ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಅಥವಾ ಸಾರ್ವಜನಿಕರಿಂದ ಪಾತ್ರಾಭಿನಯ ಮಾಡಿಸಬಹುದು. ಜೊತೆಗೆ ಭಾಷಣ, ನಿಬಂಧ, ರಂಗೋಲಿ ಸ್ಪರ್ಧೆಗಳನ್ನು ಏರ್ಪಡಿಸಿ. ಕಾರ್ಯಕ್ರಮದಲ್ಲಿ ಕುಷ್ಠರೋಗಿ ಮತ್ತು ಉತ್ತಮ ಕಾರ್ಯನಿರ್ವಹಿಸಿದ ಸಿಬ್ಬಂದಿಗಳಿಗೆ ಸನ್ಮಾನ ಮಾಡಬೇಕು. “ನುಕ್ಕಡ” ನಾಟಕ ಪ್ರದರ್ಶನ ಮತ್ತು “ಸಪ್ನಾ” ಪಾತ್ರಾಭಿನಯದ ಮೂಲಕ ಕುಷ್ಠರೋಗದ ಬಗ್ಗೆ ಅರಿವು ಮೂಡಿಸುವಂತೆಯೂ ಅವರು ನಿರ್ದೇಶಿಸಿದರು.
ಆರೋಗ್ಯ ಇಲಾಖೆಯಿಂದ ಕುಷ್ಠರೋಗದ ಬಗ್ಗೆ ಸುಮಾರು ೨೫ ಪ್ರಶ್ನಾವಳಿಗಳನ್ನು ಸಿದ್ಧಪಡಿಸುವ ಜೊತೆಗೆ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ತಾವೇ ಉತ್ತರಗಳನ್ನು ಹೇಳುವ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು. ನಗರಸಭೆ ಮತ್ತು ಪುರಸಭೆಗಳಲ್ಲಿ ಕೂಡ ಕಾರ್ಯಕ್ರಮ ಜರುಗಿಸಿ, ಈ ಕಾರ್ಯಕ್ರಮದ ಜವಾಬ್ದಾರಿಯನ್ನು ನಗರ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳು ವಹಿಸಿಕೊಳ್ಳುವಂತೆ ಸೂಚಿಸಿದರು.
ಜಿಲ್ಲಾ ಕುಷ್ಠರೋಗ ನಿರ್ಮೂಲನಾ ಅಧಿಕಾರಿಗಳಾದ ಡಾ.ಭಗವಂತ ಅನವಾರ ಅವರು ೨೦೧೯ರ ಅನುಪಾಲನ ವರದಿಯನ್ನು ಓದಿ ಮಾತನಾಡಿ, ಕುಷ್ಠರೋಗಿಯು ಸೀನುವುದು ಮತ್ತು ಕೆಮ್ಮುವುದರಿಂದ ಗಾಳಿಯ ಮೂಲಕ “ಮೈಕೊಬ್ಯಾಕ್ಟೇರಿಯಂ ಲೆಪ್ರೆ” ಎಂಬ ರೋಗಾಣುವಿನಿಂದ ಕುಷ್ಠರೋಗ ಹರಡುತ್ತದೆ. ಯಾವುದೇ ಪಾಪ ಅಥವಾ ಶಾಪದಿಂದ ಬರುವುದಿಲ್ಲ. ಚರ್ಮ ಮತ್ತು ನರಗಳಿಗೆ ಹಾನಿ ಉಂಟು ಮಾಡುತ್ತದೆ. ಚರ್ಮದಲ್ಲಿ ಸ್ಪರ್ಶ ಜ್ಞಾನವಿಲ್ಲದ ಮಚ್ಚೆ, ಚರ್ಮ ದಪ್ಪ ಆಗುವುದು, ಗಂಟುಗಳಾಗುವುದು, ಎಣ್ಣೆ ಹಚ್ಚಿದಂತೆ ಕಂಡುಬರುವುದು ರೋಗದ ಲಕ್ಷಣಗಳಾಗಿವೆ ಎಂದು ತಿಳಿಸಿದರು.
ನರಗಳ ಹಾನಿಯಿಂದಾಗಿ ಸ್ಪರ್ಶ ಜ್ಞಾನ ಕಳೆದುಕೊಳ್ಳುತ್ತದೆ. ಕೈಕಾಲುಗಳಲ್ಲಿ ಪಾರ್ಶ್ವವಾಯು ಉಂಟಾಗುತ್ತದೆ. ಈ ಕಾಯಿಲೆಯನ್ನು ಬೇಗ ಪತ್ತೆ ಹಚ್ಚಿ ನಿಯಮಿತವಾಗಿ ಚಿಕಿತ್ಸೆ ನೀಡಿದರೆ ಅಂಗವಿಕಲತೆ ತಡೆಯಬಹುದು. ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಔಷಧ ಲಭ್ಯವಿದೆ. ಕಾಯಿಲೆ ಇದ್ದವರನ್ನು ಪ್ರಾರಂಭಿಕ ಹಂತದಲ್ಲಿಯೇ ಪತ್ತೆ ಹಚ್ಚಿ ಚಿಕಿತ್ಸೆ ನೀಡಿದರೆ ಶೇ.೧೦೦ರಷ್ಟು ಗುಣಮುಖವಾಗುತ್ತಾರೆ. ಆದರೆ, ಮೈಕೊಬ್ಯಾಕ್ಟೀರಿಯಂ ಲೆಪ್ರೆ ರೋಗಾಣು ಹರಡಿದ ವ್ಯಕ್ತಿಯು ಪ್ರಾರಂಭಿಕ ಹಂತ (ಪಿಬಿ-ಪಾಸಿಬೆಸಿಲ್ಲರಿ ಹಂತ)ದಲ್ಲಿ ಚಿಕಿತ್ಸೆ ಪಡೆಯದಿದ್ದರೆ ೧೮ ತಿಂಗಳ ನಂತರ ಅದು ಕುಷ್ಠರೋಗ (ಎಂಬಿ-ಮಲ್ಟಿಬೆಸಿಲ್ಲರಿ)ವಾಗಿ ಪರಿವರ್ತನೆಗೊಳ್ಳುತ್ತದೆ. ತದನಂತರ ವ್ಯಕ್ತಿಯಲ್ಲಿ ೧೫ ದಿನದಿಂದ ೧ ತಿಂಗಳಲ್ಲಿ ಅಂಗವಿಕಲತೆ ಉಂಟಾಗಬಹುದು. ಜಿಲ್ಲೆಯಲ್ಲಿ ೨೬ ಪಿಬಿ, ೪೦ ಎಂಬಿ ಪ್ರಕರಣಗಳಿವೆ ಎಂದು ಅವರು ಮಾಹಿತಿ ನೀಡಿದರು.
ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಹಣಮಂತರೆಡ್ಡಿ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಬಿರಾದಾರ ಶಂಕರ, ತಾಲ್ಲೂಕು ಶಿಕ್ಷಣಾಧಿಕಾರಿ ತುಳಸಿರಾಮ ಚವ್ಹಾಣ, ಹಿರಿಯ ಆರೋಗ್ಯ ಸಹಾಯಕರಾದ ಮಹಿಪಾಲರೆಡ್ಡಿ ಮಾಲಿಪಾಟೀಲ್, ಕಿರಿಯ ಆರೋಗ್ಯ ಸಹಾಯಕರಾದ ಶರಣಯ್ಯ ಸ್ವಾಮಿ, ಶರಣಬಸವ ಅವರು ಸಭೆಯಲ್ಲಿ ಉಪಸ್ಥಿತರಿದ್ದರು.


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಶರಣಬಸಪ್ಪ ದರ್ಶನಾಪೂರ ಅವರ ಜಿಲ್ಲಾ ಪ್ರವಾಸ

                                                               ವಾ.ವಿ.ಸಂ.150 ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಶರಣಬಸಪ್ಪ ದರ್ಶನಾಪೂರ ಅವರ ಜಿಲ್ಲಾ ಪ್ರವಾಸ ...