ಉಚಿತ ಚಿಕಿತ್ಸೆ ಪಡೆಯಲು ಆರೋಗ್ಯ ಕಾರ್ಡ್ ಮಾಡಿಸಿ
-:ಬಿರಾದಾರ ಶಂಕರ
ಯಾದಗಿರಿ, ಜನವರಿ ೦೮ (ಕರ್ನಾಟಕ ವಾರ್ತೆ): ಆಯುಷ್ಮಾನ್ ಭಾರತ- ಆರೋಗ್ಯ ಕರ್ನಾಟಕ (ಎಬಿಎಆರ್‌ಕೆ) ಯೋಜನೆಯಡಿಯಲ್ಲಿ ಬಿಪಿಎಲ್ ಪಡಿತರ ಚೀಟಿ ಹೊಂದಿರುವ ಕುಟುಂಬದವರು ವರ್ಷದಲ್ಲಿ ೫ ಲಕ್ಷ ರೂ.ವರೆಗೆ ಉಚಿತವಾಗಿ ಚಿಕಿತ್ಸೆ ಪಡೆಯಬಹುದಾಗಿದೆ. ಈ ಯೋಜನೆಯ ಲಾಭ ಪಡೆಯಲು ನಾಗರಿಕರು ಆರೋಗ್ಯ ಕಾರ್ಡ್ ಮಾಡಿಸಬೇಕು ಎಂದು ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಬಿರಾದಾರ ಶಂಕರ ಅವರು ಮನವಿ ಮಾಡಿದರು.
ಶಹಾಪುರ ತಾಲ್ಲೂಕಿನ ಶಿರವಾಳ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯ ಹುರಸಗುಂಡಗಿ ನವ ಗ್ರಾಮದಲ್ಲಿ ಮಂಗಳವಾರ ಆಯುಷ್ಮಾನ್ ಭಾರತ- ಆರೋಗ್ಯ ಕರ್ನಾಟಕ ಯೋಜನೆಯ ಕುರಿತು ಅವರು ಮಾಹಿತಿ ನೀಡಿದರು.
ಎಪಿಎಲ್ ಪಡಿತರ ಚೀಟಿ ಹೊಂದಿರುವ ಕುಟುಂಬಗಳು ವರ್ಷದಲ್ಲಿ ೧.೫೦ ಲಕ್ಷ ರೂ.ವರೆಗೂ ಸಹಪಾವತಿ (ಶೆ.೭೦ರಷ್ಟು ಫಲಾನುಭವಿ ಭರಿಸತಕ್ಕದ್ದು, ಶೆ.೩೦ರಷ್ಟು ಸರ್ಕಾರ ಭರಿಸುತ್ತದೆ)ಯೊಂದಿಗೆ ಚಿಕಿತ್ಸೆಯನ್ನು ಪಡೆಯಬಹುದಾಗಿದೆ. ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತಿಗಳಲ್ಲಿ ಕಾರ್ಡ್ ಮಾಡಿಕೊಡಲಾಗುತ್ತಿದೆ. ಕಾರ್ಡ್ ಪಡೆಯುವಾಗ ಸ್ವಯಂ ಘೋಷಣಾ ಪತ್ರದ ಜೊತೆಗೆ ಆಧಾರ್ ಮತ್ತು ಪಡಿತರ ಚೀಟಿ ನಕಲು ಪ್ರತಿ ನೀಡಬೇಕು ಎಂದು ಅವರು ತಿಳಿಸಿದರು.
ಈ ಯೋಜನೆಯಲ್ಲಿ ೧೬೫೦ ಚಿಕಿತ್ಸಾ ವಿಧಾನಗಳಿಗೆ ಚಿಕಿತ್ಸೆ ಲಭ್ಯವಿದೆ. ಯಾದಗಿರಿ ಜಿಲ್ಲಾ ಆಸ್ಪತ್ರೆ, ಶಹಾಪೂರ ಮತ್ತು ಸುರಪೂರ ತಾಲ್ಲೂಕು ಆಸ್ಪತ್ರೆಗಳು, ವಡಿಗೇರಾ, ಸೈದಾಪೂರ, ಗುರುಮಠಕಲ್, ಅರಕೇರಾ ಬಿ., ಹುಣಸಗಿ, ದೋರನಹಳ್ಳಿ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಹಾಗೂ ಯಾದಗಿರಿ, ಶಹಾಪೂರ, ಸುರಪೂರ ನಗರ ಆರೋಗ್ಯ ಕೇಂದ್ರಗಳಲ್ಲಿ ೧೦ ರೂ. ಶುಲ್ಕ ಪಡೆದು ನೀಡಲಾಗುವುದು. ಅಲ್ಲದೆ, ಸೇವಾಸಿಂಧು ಕೇಂದ್ರಗಳಲ್ಲಿ ಕಾಗದದ ಕಾರ್ಡ್ಗೆ ೧೦ ರೂ. ಹಾಗೂ ಪ್ಲಾಸ್ಟಿಕ್ ಕಾರ್ಡ್ಗೆ ೩೫ ರೂ. ನೀಡಿ ಪಡೆದುಕೊಳ್ಳಬಹುದು. ಯಾದಗಿರಿ ತಹಸೀಲ್ ಕಚೇರಿ ಆವರಣದಲ್ಲಿರುವ ಕರ್ನಾಟಕ ಒನ್ ಕೇಂದ್ರದಲ್ಲಿ ಕೂಡ ಪಡೆಯಬಹುದು. ಯೋಜನೆಯ ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಸರ್ಕಾರಿ ಆಸ್ಪತ್ರೆ, ಅಂಗನವಾಡಿ, ಆಶಾ ಕಾರ್ಯಕರ್ತೆಯರನ್ನು ಸಂಪರ್ಕಿಸಬಹುದು. ಅಲ್ಲದೇ, ಉಚಿತ ಸಹಾಯವಾಣಿ- ೧೦೪ ಸಂಖ್ಯೆಗೆ ಕರೆ ಮಾಡಬಹುದು ಎಂದು ಮಾಹಿತಿ ನೀಡಿದರು.
ಆರೋಗ್ಯ ಇಲಾಖೆಯ ಮೇಲ್ವಿಚಾರಕ ಸತ್ಯನಾರಾಯಣ, ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ನಂದಣ್ಣ ಪಾಟೀಲ್, ಹಿರಿಯ ಆರೋಗ್ಯ ಸಹಾಯಕ ಗಂಗಾಧರ, ಗಣಕಯಂತ್ರ ಸಹಾಯಕ ಆಕಾಶ ಅವರು ಉಪಸ್ಥಿತರಿದ್ದರು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ