ಗುರುವಾರ, ಜನವರಿ 23, 2020

ಹಕ್ಕು ಮತ್ತು ಆಕ್ಷೇಪಣೆಗಳ ಪ್ರಗತಿ ಪರಿಶೀಲನಾ ಸಭೆ
ದೋಷರಹಿತ ಮತದಾರರ ಪಟ್ಟಿ ಸಿದ್ಧತೆಗೆ ಶ್ರಮಿಸಿ
-ಡಾ.ಜೆ.ರವಿಶಂಕರ್
ಯಾದಗಿರಿ, ಜನವರಿ 23 (ಕರ್ನಾಟಕ ವಾರ್ತೆ): ಜಿಲ್ಲೆಯ ನಾಲ್ಕೂ ವಿಧಾನಸಭಾ ಕ್ಷೇತ್ರಗಳ ಕರಡು ಮತದಾರರ ಪಟ್ಟಿಯ ಬಗ್ಗೆ ಸಲ್ಲಿಕೆಯಾದ ಆಕ್ಷೇಪಣೆಗಳನ್ನು ಸರಿಯಾಗಿ ಪರಿಶೀಲಿಸಿ, ದೋಷರಹಿತ ಮತದಾರರ ಪಟ್ಟಿ ಸಿದ್ಧತೆಗೆ ಅಧಿಕಾರಿಗಳು ಶ್ರಮಿಸಬೇಕು ಎಂದು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಜಿಲ್ಲಾ ಮತದಾರರ ಪಟ್ಟಿ ವೀಕ್ಷಕರಾದ ಡಾ. ಜೆ.ರವಿಶಂಕರ್ ಅವರು ಸೂಚಿಸಿದರು. ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ಸಂಜೆ ಮತದಾರರ ಪಟ್ಟಿ ಕುರಿತಂತೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ನಡೆಸಿದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು. ಕಳೆದ ಡಿಸೆಂಬರ್ 16ರಿಂದ ಜನವರಿ 15ರವರೆಗೆ ಬಂದಿರುವ ಹಕ್ಕು ಮತ್ತು ಆಕ್ಷೇಪಣೆಗಳ ಬಗ್ಗೆ ಮೊದಲು ವಿಧಾನಸಭಾ ಕ್ಷೇತ್ರವಾರು ವೀಕ್ಷಿಸಿದ ಡಾ. ಜೆ.ರವಿಶಂಕರ್ ಅವರು, ನಂತರ ರ್ಯಾಂಡಮ್ ಆಗಿ ಸುರಪುರ, ಶಹಾಪುರ, ಯಾದಗಿರಿ ಹಾಗೂ ಗುರಮಿಠಕಲ್ ಕ್ಷೇತ್ರಗಳ ಕೆಲ ಮತಗಟ್ಟೆಗಳ ಹಕ್ಕು ಮತ್ತು ಆಕ್ಷೇಪಣೆಗಳನ್ನು ಆಯ್ಕೆ ಮಾಡಿಕೊಂಡು ಪರಿಶೀಲಿಸಿದರು. ಅಲ್ಲದೇ, ನಮೂನೆ 6 (ಸೇರ್ಪಡೆ), 7(ಆಕ್ಷೇಪಣೆ), 8 (ತಿದ್ದುಪಡಿ), 8ಎ (ವರ್ಗಾವಣೆ) ಅರ್ಜಿಗಳನ್ನು ಆಯ್ಕೆ ಮಾಡಿಕೊಂಡು ಕ್ರಮಬದ್ಧವಾಗಿ ವಿಲೆವಾರಿಗೊಳಿಸಲಾಗಿದೆಯೇ ಎಂಬುದನ್ನು ಕೂಡ ಅವರು ಈ ಸಂದರ್ಭದಲ್ಲಿ ಪರಿಶೀಲನೆ ನಡೆಸಿದರು.
ಮತಗಟ್ಟೆಗಳ ಕೆಲವು ಆಯ್ದ ಅರ್ಜಿ ನಮೂನೆಗಳನ್ನು ಆಯ್ದುಕೊಂಡು ಮತದಾರರ ಮನೆಗಳಿಗೆ ಭೇಟಿ ನೀಡಿ, ಈಗಾಗಲೇ ಪರಿಶೀಲನೆ ನಡೆಸಲಾಗಿದೆ. ಇದಲ್ಲದೇ ರಾಜ್ಯ ಮತ್ತು ಭಾರತ ಚುನಾವಣಾ ಆಯೋಗದ ಅಧಿಕಾರಿಗಳು ಕೂಡ ಜಿಲ್ಲೆಗಳಿಗೆ ಭೇಟಿ ನೀಡಿ ಪರಿಶೀಲಿಸುವರು. ಈ ಹಿನ್ನೆಲೆಯಲ್ಲಿ ಮತದಾರರ ಪಟ್ಟಿ ಸಿದ್ಧತೆಗೆ ನೇಮಕವಾದ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ತಮ್ಮ ಜವಾಬ್ದಾರಿ ಅರಿತು ಕೆಲಸ ಮಾಡಬೇಕು ಎಂದು ಅವರು ಸಲಹೆ ನೀಡಿದರು.
ಜಿಲ್ಲಾಧಿಕಾರಿಗಳಾದ ಎಂ.ಕೂರ್ಮಾ ರಾವ್ ಅವರು ಮಾತನಾಡಿ, ಹಕ್ಕು ಮತ್ತು ಆಕ್ಷೇಪಣೆಗಳನ್ನು ಸಲ್ಲಿಕೆಗೆ ನಿಗದಿಪಡಿಸಿದ ವಧಿಯಲ್ಲಿ ಅರ್ಜಿ ನಮೂನೆ 6ರಲ್ಲಿ 8389, ಅರ್ಜಿ ನಮೂನೆ 7ರಲ್ಲಿ 2793, ಅರ್ಜಿ ನಮೂನೆ 8ರಲ್ಲಿ 1727 ಹಾಗೂ ಅರ್ಜಿ ನಮೂನೆ 8ಎರಲ್ಲಿ 834 ಅರ್ಜಿಗಳು ಬಂದಿವೆ. ಈ ಪೈಕಿ ಬಿಎಲ್‍ಒಗಳ ಮೂಲಕ ಬಂದ ಅರ್ಜಿಗಳು ಸರಿಯಾಗಿ ಪರಿಶೀಲನೆ ಆಗಿರುತ್ತವೆ. ಆನ್‍ಲೈನ್ ಮೂಲಕ ಬಂದಿರುವ ಅರ್ಜಿಗಳ ದಾಖಲೆಗಳನ್ನು ಕೂಲಂಕಷವಾಗಿ ಪರಿಶೀಲಿಸಬೇಕಿದೆ ಎಂದು ಹೇಳಿದರು. ಜನವರಿ 25ರಂದು 10ನೇ ರಾಷ್ಟ್ರೀಯ ಮತದಾರರ ದಿನಾಚರಣೆ ಅಂಗವಾಗಿ ಕಾರ್ಯಕ್ರಮ ಆಯೋಜಿಸಲಾಗುತ್ತಿದ್ದು, ಪ್ರತಿಜ್ಞಾ ವಿಧಿ ಬೋಧನೆ ಮಾಡಲಾಗುವುದು. ಯುವ ಮತದಾರರಿಗೆ ಚುನಾವಣಾ ಗುರುತಿನ ಚೀಟಿ ವಿತರಣೆಗೆ ಕ್ರಮ ವಹಿಸಲಾಗುತ್ತಿದೆ ಎಂದು ಈ ಸಂದರ್ಭದಲ್ಲಿ ತಿಳಿಸಿದರು. ಅಪರ ಜಿಲ್ಲಾಧಿಕಾರಿಗಳಾದ ಪ್ರಕಾಶ್ ಜಿ.ರಜಪೂತ, ಸಹಾಯಕ ಆಯುಕ್ತರಾದ ಶಂಕರಗೌಡ ಎಸ್.ಸೋಮನಾಳ, ತಹಶೀಲ್ದಾರರಾದ ಚನ್ನಮಲ್ಲಪ್ಪ ಘಂಟಿ, ಸಂಗಮೇಶ ಜಿಡಗೆ, ಸುರೇಶ ಅಂಕಲಗಿ, ಜಗನ್ನಾಥರೆಡ್ಡಿ, ನಿಂಗಣ್ಣ ಎಸ್.ಬಿರಾದಾರ, ವಿನಯಕುಮಾರ, ಚುನಾವಣೆ ಶಾಖೆಯ ಶಿರಸ್ತೇದಾರ್ ಪರಶುರಾಮ, ಖಲೀಲ್‍ಸಾಬ್, ಶಿಲ್ಪಾ ಪಾಟೀಲ್ ಅವರು ಸಭೆಯಲ್ಲಿ ಉಪಸ್ಥಿತರಿದ್ದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

                                                             ವಾ.ವಿ.ಸ.45 ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಶರಣಬಸಪ್ಪ ದರ್ಶನಾಪೂರ ಅವರ ಜಿಲ್ಲಾ ಪ್ರವಾಸ ಯಾದಗ...