ಭಾನುವಾರ, ಜನವರಿ 19, 2020

ಜಿಲ್ಲಾಡಳಿತದಿಂದ ಮಹಾಯೋಗಿ ವೇಮನ ಜಯಂತಿ ಆಚರಣೆ
ಏಕತೆಯು ರೆಡ್ಡಿ ಸಮಾಜದ ಧ್ಯೇಯವಾಗಲಿ
-ವೆಂಕಟರೆಡ್ಡಿಗೌಡ ಮುದ್ನಾಳ
 ಯಾದಗಿರಿ, ಜನವರಿ ೧೯ (ಕರ್ನಾಟಕ ವಾರ್ತೆ): ರೆಡ್ಡಿ ಸಮಾಜದವರು ಎಲ್ಲಾ ಸಮುದಾಯಗಳೊಂದಿಗೆ ಬೆರೆಯುವ ಮತ್ತು ತಾವು ಕಷ್ಟದಲ್ಲಿದ್ದರೂ ಇತರರ ಕಷ್ಟಗಳಿಗೆ ನೆರವಾಗುವ ಶಕ್ತಿಯನ್ನು ಹೊಂದಿದ್ದಾರೆ. ಸದಾ ಸಮಾಜದ ಒಳಿತಿಗೆ ಚಿಂತಿಸುವ ರೆಡ್ಡಿ ಸಮಾಜದವರು ಒಂದಾಗಬೇಕು. ಏಕತೆ ಧ್ಯೇಯವಾಗಬೇಕು ಎಂದು ಶಾಸಕರಾದ ವೆಂಕಟರೆಡ್ಡಿಗೌಡ ಮುದ್ನಾಳ ಅವರು ಹೇಳಿದರು.
ನಗರದ ಜಿಲ್ಲಾಡಳಿತ ಭವನದ ಆಡಿಟೋರಿಯಂನಲ್ಲಿ ಭಾನುವಾರ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ನಗರಸಭೆ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಶ್ರೀ ಮಹಾಯೋಗಿ ವೇಮನ ಜಯಂತ್ಯೋತ್ಸವ ಸಮಿತಿ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಶ್ರೀ ಮಹಾಯೋಗಿ ವೇಮನರವರ ಜಯಂತ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ, ಅವರು ಮಾತನಾಡಿದರು.
ಮಹಾನ್ ಸಾಧ್ವಿ ಹೇಮರಡ್ಡಿ ಮಲ್ಲಮ್ಮ ಅವರ ಉಪದೇಶದಿಂದ ಜೀವನ ಕ್ರಮವನ್ನು ಬದಲಾಯಿಸಿಕೊಂಡ ಮಹಾಯೋಗಿ ವೇಮನರವರು ಸಮಾಜದ ಒಳಿತಿಗಾಗಿ ಕಾಯಕ ಮಾಡಲು ಮುಂದಾದರು. ಸಮಾಜದಲ್ಲಿರುವ ಅನಿಷ್ಠ ಪದ್ಧತಿಗಳನ್ನು ತೊಲಗಿಸಲು ತಮ್ಮ ಜೀವನವನ್ನು ಮುಡುಪಾಗಿಟ್ಟರು. ಅವರ ವಚನಗಳಲ್ಲಿನ ಸಂದೇಶಗಳನ್ನು ಅರಿತುಕೊಂಡು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.
ಜಿಲ್ಲಾಧಿಕಾರಿಗಳಾದ ಎಂ.ಕೂರ್ಮಾ ರಾವ್ ಅವರು ಮಾತನಾಡಿ, ಕನ್ನಡದ ಕವಿ ಸರ್ವಜ್ಞ, ತಮಿಳು ಕವಿ ತಿರುವಳ್ಳುವರ ಅವರಂತೆ ತೆಲುಗಿನ ಆಡುಭಾಷೆಯಲ್ಲಿ ಮಹಾಯೋಗಿ ವೇಮನ ಅವರು ಸರಳವಾಗಿ ವಚನಗಳನ್ನು ರಚಿಸಿ ಜನಸಾಮಾನ್ಯರನ್ನು ತಲುಪಿದ್ದಾರೆ. ಮನುಷ್ಯನ ಉನ್ನತಿಗೆ ವೇಮನರವರ ಸಂದೇಶಗಳು ಪ್ರೇರಣೆಯಾಗಿವೆ ಎಂದು ಬಣ್ಣಿಸಿದರು.
ಬಾಗಲಕೋಟೆ ಜಿಲ್ಲೆಯ ಶಿಕ್ಷಕರಾದ ಸುರೇಶ ಅವರು ವಿಶೇಷ ಉಪನ್ಯಾಸ ನೀಡಿ, ಆಂಧ್ರಪ್ರದೇಶದ ಕಾಟರುಪಲ್ಲಿಯಲ್ಲಿ ೧೪೧೨ರ ಜನವರಿ ೧೯ರಂದು ಜನಿಸಿದ ವೇಮನರವರು ಹುಟ್ಟು ಶ್ರೀಮಂತರಾಗಿದ್ದರು. ವೇಶ್ಯೆಯ ದಾಸನಾಗಿದ್ದ ವೇಮನ, ಅವಳಿಗಾಗಿ ತನ್ನ ಅತ್ತಿಗೆಯಾದ ಹೇಮರಡ್ಡಿ ಮಲ್ಲಮ್ಮಳ ಮೂಗುತಿಯನ್ನು ಕೇಳುತ್ತಾನೆ. ವೇಶ್ಯೆಯು ವಿವಸ್ತçಳಾಗಿ ನಿನ್ನ ಮುಂದೆ ನಾಟ್ಯ ಮಾಡುವಂತೆ ಷರತ್ತು ವಿಧಿಸಿ, ವೇಮನಿಗೆ ಮೂಗುತಿ ಕೊಡುತ್ತಾಳೆ. ಅದರಂತೆ ವೇಶ್ಯೆಯು ನಗ್ನಳಾಗಿ ಮೂಗುತಿ ಧರಿಸಿದಾಗ ರಕ್ತ, ಮಾಂಸದಿAದ ಕೂಡಿದ ದೇಹಕ್ಕಾಗಿ ಇಲ್ಲಿಯವರೆಗೂ ಬದುಕಿರುವೆನೇ ಎಂದು ಪಶ್ಚಾತಾಪ ಪಡುತ್ತಾನೆ. ಅಂದಿನಿAದ ಮೋಹವನ್ನು ತ್ಯಜಿಸಿ ಲೋಕದ ಡೊಂಕುಗಳನ್ನು ತಿದ್ದಲು ಮುಂದಾಗುತ್ತಾರೆ ಎಂದು ಹೇಳಿದರು. ಇಂಗ್ಲಿಷ್ ಭಾಷೆಗೆ ಮೊಟ್ಟ ಮೊದಲು ತರ್ಜುಮೆಯಾದ ವಚನಗಳೆಂದರೆ ವೇಮನರವರ ವಚನಗಳು. ಅವರು ೧೮ ಸಾವಿರ ವಚನಗಳನ್ನು ರಚಿಸಿದ್ದಾರೆ. ಸಾಮಾನ್ಯ ಜನರಿಗೆ ಸರಳವಾಗಿ ಅರ್ಥವಾಗುವ ರೀತಿಯಲ್ಲಿ ವಚನಗಳನ್ನು ರಚಿಸಿರುವುದು ವಿಶೇಷ. ಅವರ ಸಂದೇಶಗಳು ಇಂದಿಗೂ ಪ್ರಸ್ತುತವಾಗಿವೆ ಎಂದು ತಿಳಿಸಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಿಲ್ಪಾ ಶರ್ಮಾ, ಅಪರ ಜಿಲ್ಲಾಧಿಕಾರಿಗಳಾದ ಪ್ರಕಾಶ್ ಜಿ.ರಜಪೂತ, ಜಿಲ್ಲಾ ಪಂಚಾಯಿತಿ ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷರಾದ ಭೀಮರೆಡ್ಡಿ ಗೌಡ, ರೆಡ್ಡಿ ಸಮಾಜದ ಜಿಲ್ಲಾಧ್ಯಕ್ಷರಾದ ರಾಮರಡ್ಡಿಗೌಡ ತಂಗಡಗಿ, ಸಮಾಜದ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಚಣಗೌಡ ಮುದ್ನಾಳ ಉಪಸ್ಥಿತರಿದ್ದರು. ಸಮಾಜದ ಮುಖಂಡರಾದ ಶಿವನಗೌಡ ಗುಳಬಾಳ, ಶ್ರೀನಿವಾಸರೆಡ್ಡಿ ಚನ್ನೂರ, ಮಲ್ಲಣಗೌಡ ಹಳಿಮನಿ ಕೌಳೂರ, ರಘುನಾಥರೆಡ್ಡಿ ಪಾಟೀಲ್, ವಿಶ್ವನಾಥರೆಡ್ಡಿ ಜೋಳದಡಗಿ, ಬಸವರಾಜ ಪಾಟೀಲ್ ಬಿಳ್ಹಾರ, ಜಿಲ್ಲಾ ಸರಕಾರಿ ನೌಕರರ ಸಂಘದ ಉಪಾಧ್ಯಕ್ಷರಾದ ಬಸವರಾಜ ಕೆರೂಟಗಿ ಸೇರಿದಂತೆ ಇತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಲಿAಗೇರಿ ಸ್ಟೇಷನ್ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಸಂಗೀತ ಶಿಕ್ಷಕರಾದ ಚಂದ್ರಶೇಖರ ಗೋಗಿ ಮತ್ತು ತಂಡದವರು ನಾಡಗೀತೆ ಹಾಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ದತ್ತಪ್ಪ ಸಾಗನೂರ ಸ್ವಾಗತಿಸಿದರು. ಸುಬಮ ಪದವಿ ಪೂರ್ವ ಕಾಲೇಜಿನ ಉಪನ್ಯಾಸÀಕರಾದ ಗುರುಪ್ರಸಾದ ವೈದ್ಯ ನಿರೂಪಿಸಿದರು. ರೆಡ್ಡಿ ಸಮಾಜದ ಪ್ರಧಾನ ಕಾರ್ಯದರ್ಶಿ ಸಿದ್ಧರಾಜರೆಡ್ಡಿ ವಂದಿಸಿದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಶರಣಬಸಪ್ಪ ದರ್ಶನಾಪೂರ ಅವರ ಜಿಲ್ಲಾ ಪ್ರವಾಸ

                                                               ವಾ.ವಿ.ಸಂ.150 ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಶರಣಬಸಪ್ಪ ದರ್ಶನಾಪೂರ ಅವರ ಜಿಲ್ಲಾ ಪ್ರವಾಸ ...