ಗುರುವಾರ, ಜನವರಿ 9, 2020

ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಕುರಿತು ಜನಪ್ರತಿನಿಧಿಗಳೊಂದಿಗೆ ಸಭೆ
ದೋಷರಹಿತ ಮತದಾರರ ಪಟ್ಟಿ ಸಿದ್ಧಪಡಿಸಲು ಸಹಕರಿಸಿ
- ಡಾ. ಜೆ.ರವಿಶಂಕರ್
ಯಾದಗಿರಿ, ಜನವರಿ ೦೯ (ಕರ್ನಾಟಕ ವಾರ್ತೆ): ಜಿಲ್ಲೆಯ ನಾಲ್ಕೂ ವಿಧಾನಸಭಾ ಕ್ಷೇತ್ರಗಳ ಕರಡು ಮತದಾರರ ಪಟ್ಟಿಯ ಬಗ್ಗೆ ಯಾವುದೇ ದೂರು, ಆಕ್ಷೇಪಣೆಗಳಿದ್ದಲ್ಲಿ ಜನವರಿ ೧೫ರ ವರೆಗೆ ಸಲ್ಲಿಸಲು ಅವಕಾಶ ಇದೆ. ಈ ಅವಧಿಯಲ್ಲಿ ರಾಜಕೀಯ ಪಕ್ಷಗಳ ಮುಖಂಡರು ಅರ್ಹ ಮತ್ತು ಅನರ್ಹ ಮತದಾರರ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡುವ ಮೂಲಕ ದೋಷರಹಿತ ಮತದಾರರ ಪಟ್ಟಿ ಸಿದ್ಧಪಡಿಸಲು ಸಹಕರಿಸಬೇಕು ಎಂದು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಜಿಲ್ಲಾ ಮತದಾರರ ಪಟ್ಟಿ ವೀಕ್ಷಕರಾದ ಡಾ. ಜೆ.ರವಿಶಂಕರ್ ಅವರು ತಿಳಿಸಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ಕುರಿತು ಜನಪ್ರತಿನಿಧಿಗಳು ಹಾಗೂ ಸಂಬAಧಪಟ್ಟ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಅವರು ಮಾತನಾಡಿದರು.
ಚುನಾವಣಾ ಆಯೋಗದ ನಿರ್ದೇಶನದ ಮೇರೆಗೆ ಜಿಲ್ಲೆಯ ಕರಡು ಮತದಾರರ ಪಟ್ಟಿಯನ್ನು ಅರ್ಹತಾ ದಿನಾಂಕ: ೦೧-೦೧-೨೦೨೦ರಂತೆ ಪ್ರಕಟಿಸಲಾಗಿದೆ. ಜನವರಿ ೧೫ರವರೆಗೆ ಸ್ವೀಕರಿಸಿದ ಹಕ್ಕು ಮತ್ತು ಆಕ್ಷೇಪಣೆಯ ಅರ್ಜಿಗಳನ್ನು ನಿಯಮಾನುಸಾರ ಪರಿಶೀಲಿಸಿ ಜನವರಿ ೨೭ರಂದು ಕಾಲೋಚಿತಗೊಳಿಸಲಾಗುವುದು. ನಂತರ ಹೆಚ್ಚುವರಿ ಪಟ್ಟಿಯನ್ನು ಫೆಬ್ರುವರಿ ೪ರಂದು ತಯಾರಿಸಿ, ಅಂತಿಮ ಮತದಾರರ ಪಟ್ಟಿಯನ್ನು ಫೆಬ್ರುವರಿ ೭ರಂದು ಪ್ರಕಟಿಸಲಾಗುವುದು ಎಂದು ತಿಳಿಸಿದರು.
ಯುವಕರು, ಯುವತಿಯರು ಅಥವಾ ಸಾರ್ವಜನಿಕರು ಹೊಸದಾಗಿ ಹೆಸರು ಸೇರ್ಪಡೆಗಾಗಿ ನಮೂನೆ-೬ರಲ್ಲಿ ಅರ್ಜಿ ಸಲ್ಲಿಸಬೇಕು. ಮತದಾರರ ಪಟ್ಟಿಯಲ್ಲಿ ಹೆಸರಿದ್ದು ಅವರು ಸ್ಥಳಾಂತರ ಹೊಂದಿದಲ್ಲಿ, ಮೃತ ಹೊಂದಿದಲ್ಲಿ, ಹೆಸರು ಪುನರಾವರ್ತನೆಯಾಗಿದ್ದಲ್ಲಿ ಹೆಸರನ್ನು ತೆಗೆದು ಹಾಕಲು ನಮೂನೆ-೭ರಲ್ಲಿ, ಹೆಸರು ಇತ್ಯಾದಿ ತಿದ್ದುಪಡಿ ಬಯಸಿದಲ್ಲಿ ನಮೂನೆ-೮ರಲ್ಲಿ ಮತ್ತು ಹೆಸರು ವರ್ಗಾವಣೆ ಮಾಡಬೇಕಾದಲ್ಲಿ ನಮೂನೆ-೮ಎ ರಲ್ಲಿ ಸೂಕ್ತ ದಾಖಲೆಯೊಂದಿಗೆ ಅರ್ಜಿಗಳನ್ನು ಸಂಬAಧಪಟ್ಟ ಮತಗಟ್ಟೆ ಮಟ್ಟ ಅಧಿಕಾರಿ (ಬಿ.ಎಲ್.ಒ)ಗಳಿಗೆ ಜನವರಿ ೧೫ರವರೆಗೆ ಸಲ್ಲಿಸಬಹುದು ಎಂದು ಹೇಳಿದರು.
ಬಿಎಲ್‌ಎ ನೇಮಿಸಲು ಮನವಿ: ಜಿಲ್ಲೆಯಲ್ಲಿ ೧,೧೩೫ ಮತಗಟ್ಟೆಗಳಿವೆ. ಅದರಂತೆ ಎಲ್ಲಾ ರಾಜಕೀಯ ಪಕ್ಷದವರು ಬೂತ್ ಲೆವೆಲ್ ಏಜೆಂಟ್ (ಬಿಎಲ್‌ಎ)ರನ್ನು ನೇಮಕ ಮಾಡಬೇಕು. ಬಿಜೆಪಿ ೭೫೦, ಕಾಂಗ್ರೆಸ್ ೮೨೬, ಜೆಡಿಎಸ್ ೩೬೮ ಬಿಎಲ್‌ಎಗಳನ್ನು ನೇಮಕ ಮಾಡಿದ್ದಾರೆ. ಉಳಿದ ಬೂತ್‌ಗಳಲ್ಲಿಯೂ ಕೂಡ ನೇಮಕ ಮಾಡುವಂತೆ ಡಾ. ಜೆ.ರವಿಶಂಕರ್ ಅವರು ಕೋರಿದರು.
ಮಿಂಚಿನ ನೋಂದಣಿಯಲ್ಲಿ ೫,೫೯೦ ಮತದಾರರು ಸೇರ್ಪಡೆ: 
ಜಿಲ್ಲಾಧಿಕಾರಿಗಳಾದ ಎಂ.ಕೂರ್ಮಾ ರಾವ್ ಅವರು ಮಾತನಾಡಿ, ಜಿಲ್ಲೆಯ ಎಲ್ಲಾ ಮತಗಟ್ಟೆ ಕೇಂದ್ರಗಳಲ್ಲಿ ಜನವರಿ ೬, ೭ ಮತ್ತು ೮ರಂದು ಹಮ್ಮಿಕೊಂಡಿದ್ದ ಮಿಂಚಿನ ನೋಂದಣಿ ಕಾರ್ಯಕ್ರಮದಲ್ಲಿ ಒಟ್ಟು ೫,೫೯೦ ಮತದಾರರು ನೋಂದಣಿ ಮಾಡಿಕೊಂಡಿದ್ದಾರೆ. ೧೮ ವರ್ಷ ಪೂರೈಸಿದ ೩,೭೯೮ ಹೊಸ ಮತದಾರರು, ೧೯ ವರ್ಷ ವಯೋಮಿತಿಯ ೯೪೦ ಮತದಾರರು ಹಾಗೂ ೨೦ ವರ್ಷಕ್ಕಿಂತ ಮೇಲ್ಪಟ್ಟ ೮೫೨ ಮತದಾರರು ಹೆಸರು ಸೇರ್ಪಡೆ ಮಾಡಿಕೊಂಡಿದ್ದಾರೆ. ಅರ್ಹ ಮತದಾರರ ನೋಂದಣಿಗೆ ಅನುಕೂಲವಾಗಲು ಮಿಂಚಿನ ನೋಂದಣಿ ಅವಧಿಯನ್ನು ಚುನಾವಣಾ ಆಯೋಗವು ಜನವರಿ ೧೦ರವರೆಗೆ ವಿಸ್ತರಿಸಿದೆ ಎಂದು ಸಭೆಯ ಗಮನಕ್ಕೆ ತಂದರು.
 ಕರಡು ಮತದಾರರ ಪಟ್ಟಿಯಲ್ಲಿ ಜಿಲ್ಲೆಯಲ್ಲಿ ಒಟ್ಟು ೯,೮೫,೨೭೧ ಮತದಾರರಿದ್ದು, ಈ ಪೈಕಿ ೪,೯೨,೪೦೧ ಪುರುಷ ಮತದಾರರು ಮತ್ತು ೪,೯೨,೮೭೦ ಮಹಿಳಾ ಮತದಾರರಿದ್ದಾರೆ. ಸುರಪುರ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು ೨,೭೦,೫೫೫, ಶಹಾಪುರ ೨,೩೦,೨೮೨, ಯಾದಗಿರಿ ೨,೩೯,೩೯೫ ಮತದಾರರಿದ್ದು, ಈ ಪಟ್ಟಿಯು ಶೇ.೧೦೦ರಷ್ಟು ಮತದಾರರ ಭಾವಚಿತ್ರ ಒಳಗೊಂಡಿದೆ. ಗುರುಮಠಕಲ್ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು ೨,೪೫,೦೩೯ ಮತದಾರರಿದ್ದು, ಈ ಪಟ್ಟಿಯಲ್ಲಿ ಭಾವಚಿತ್ರವಿಲ್ಲದ ೧೩ ಜನ ಮತದಾರರಿದ್ದಾರೆ. ಜಿಲ್ಲೆಯಲ್ಲಿ ಒಟ್ಟು ೧೦೩ ಜನ ಸೇವಾ ಮತದಾರರಿದ್ದಾರೆ. ಹೊಸದಾಗಿ ನೋಂದಣಿಯಾದ ಯುವ ಮತದಾರರಿಗೆ ಜನವರಿ ೨೫ರಂದು ನಡೆಯುವ ರಾಷ್ಟಿçÃಯ ಮತದಾರರ ದಿನಾಚರಣೆಯಂದು ಚುನಾವಣಾ ಗುರುತಿನ ಚೀಟಿ ವಿತರಿಸಲಾಗುವುದು ಎಂದು ಅವರು ಮಾಹಿತಿ ನೀಡಿದರು.
ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾದ ರಾಜಶೇಖರಗೌಡ ಪಾಟೀಲ್ ವಜ್ಜಲ್ ಅವರು ಮಾತನಾಡಿ, ಬೂತ್ ಮಟ್ಟದ ಅಧಿಕಾರಿಗಳಾಗಿ ಕಾರ್ಯ ನಿರ್ವಹಿಸುತ್ತಿರುವ ಕೆಲ ಅಂಗನವಾಡಿ ಕಾರ್ಯಕರ್ತರು ರಾಜಕೀಯ ಪಕ್ಷಗಳಿಗೆ ಹೊಂದಿಕೊAಡಿರುತ್ತಾರೆ. ಇವರ ಬದಲಿಗೆ ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸುವ ಸಿಬ್ಬಂದಿಗಳನ್ನು ನೇಮಕ ಮಾಡುವಂತೆ ಸಲಹೆ ನೀಡಿದರು.
ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಮರಿಗೌಡ ಪಾಟೀಲ್ ಹುಲಕಲ್ ಅವರು ಮಾತನಾಡಿ, ಕುಟುಂಬದ ಸದಸ್ಯರ ಹೆಸರುಗಳು ಒಂದೇ ಕಡೆ ಕ್ರಮಬದ್ಧವಾಗಿ ಬರುವಂತೆ ಹಾಗೂ ಮತದಾರರ ನಿವಾಸದ ಹತ್ತಿರವಿರುವ ಮತಗಟ್ಟೆಗಳಲ್ಲಿ ಅವರ ಹೆಸರು ಇರುವಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.
ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಚಂದ್ರಶೇಖರಗೌಡ ಮಾಗನೂರ ಅವರು ಮಾತನಾಡಿ, ಮತದಾರರ ಪಟ್ಟಿಯನ್ನು ಯಾವುದೇ ದೋಷ ಇಲ್ಲದಂತೆ ಸಿದ್ಧಪಡಿಸುವಲ್ಲಿ ಕೆಳಮಟ್ಟದ ಸಿಬ್ಬಂದಿಗಳ ಪಾತ್ರ ಮಹತ್ವದ್ದಾಗಿದೆ. ಹಾಗಾಗಿ, ಅವರಿಗೆ ಅರ್ಹ ಮತದಾರರನ್ನು ಗುರುತಿಸುವುದು, ಅನರ್ಹ ಮತದಾರರನ್ನು ತೆಗೆದುಹಾಕಲು ಕಟ್ಟುನಿಟ್ಟಾಗಿ ಆದೇಶ ಹೊರಡಿಸಲು ಕೋರಿದರು.
ಜೆಡಿಎಸ್ ಜಿಲ್ಲಾ ಪರಿಶಿಷ್ಟ ಜಾತಿ ಘಟಕದ ಅಧ್ಯಕ್ಷರಾದ ಶಾಂತಪ್ಪ ಡಿ.ಜಾಧವ್ ಅವರು ಮಾತನಾಡಿ, ಹೆಚ್ಚಿನ ಮತದಾರರು ಇರುವ ತಾಂಡಾಗಳಲ್ಲಿ ಮತಗಟ್ಟೆ ಕೇಂದ್ರಗಳನ್ನು ಸ್ಥಾಪಿಸಲು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಿಲ್ಪಾ ಶರ್ಮಾ, ಅಪರ ಜಿಲ್ಲಾಧಿಕಾರಿ ಪ್ರಕಾಶ್ ಜಿ.ರಜಪೂತ, ಸಹಾಯಕ ಆಯುಕ್ತರಾದ ಶಂಕರಗೌಡ ಎಸ್.ಸೋಮನಾಳ, ತಹಶೀಲ್ದಾರರಾದ ಚನ್ನಮಲ್ಲಪ್ಪ ಘಂಟಿ, ಸಂಗಮೇಶ ಜಿಡಗೆ, ಸುರೇಶ ಅಂಕಲಗಿ, ಜಗನ್ನಾಥರೆಡ್ಡಿ, ನಿಂಗಣ್ಣ ಎಸ್.ಬಿರಾದಾರ, ವಿನಯಕುಮಾರ, ಡಿಡಿಪಿಯು ಚಂದ್ರಕಾAತ, ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಅಧಿಕಾರಿ ಶರಣಪ್ಪ ಪಾಟೀಲ್, ಚುನಾವಣೆ ಶಾಖೆಯ ಶಿರಸ್ತೇದಾರ್ ಪರಶುರಾಮ, ಖಲೀಲ್‌ಸಾಬ್ ಅವರು ಸಭೆಯಲ್ಲಿ ಉಪಸ್ಥಿತರಿದ್ದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಶರಣಬಸಪ್ಪ ದರ್ಶನಾಪೂರ ಅವರ ಜಿಲ್ಲಾ ಪ್ರವಾಸ

                                                               ವಾ.ವಿ.ಸಂ.150 ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಶರಣಬಸಪ್ಪ ದರ್ಶನಾಪೂರ ಅವರ ಜಿಲ್ಲಾ ಪ್ರವಾಸ ...