ಭಾನುವಾರ, ಜನವರಿ 26, 2020

71ನೇ ಗಣರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಿದ ಜಿಲ್ಲಾಧಿಕಾರಿಗಳು
ನಿರೀಕ್ಷೆ ಮೀರಿ ಬೆಳೆಯುತ್ತಿರುವ ಜಿಲ್ಲೆಗೆ ದಶಕದ ಸಂಭ್ರಮ
-ಜಿಲ್ಲಾಧಿಕಾರಿ ಎಂ.ಕೂರ್ಮಾ ರಾವ್
ಯಾದಗಿರಿ, ಜನವರಿ 26 (ಕರ್ನಾಟಕ ವಾರ್ತೆ):. ಗಣರಾಜ್ಯವಾದ ತರುವಾಯ ಜಿಲ್ಲೆಯು ಅನೇಕ ಬೆಳವಣಿಗೆಯನ್ನು ಕಂಡಿದೆ. ನೂತನ ಜಿಲ್ಲೆಯಾದ ಯಾದಗಿರಿಗೆ ಈಗ ದಶಕದ ಸಂಭ್ರಮ. ನೀತಿ ಆಯೋಗದ ಮಹತ್ವಾಕಾಂಕ್ಷೆ ಜಿಲ್ಲೆಯಾದ ನಂತರ ನಿರೀಕ್ಷೆ ಮೀರಿ ಬೆಳೆಯುತ್ತಿದೆ ಎಂದು ಜಿಲ್ಲಾಧಿಕಾರಿಗಳಾದ ಎಂ.ಕೂರ್ಮಾ ರಾವ್ ಅವರು ಹರ್ಷ ವ್ಯಕ್ತಪಡಿಸಿದರು.
ಜಿಲ್ಲಾ ಕ್ರೀಡಾಂಗಣದಲ್ಲಿ ಭಾನುವಾರ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ನಗರಸಭೆ ಹಾಗೂ ಭಾವೈಕ್ಯತಾ ಸಮಿತಿ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ 71ನೇ ಗಣರಾಜ್ಯೋತ್ಸವ ದಿನಾಚರಣೆ ಕಾರ್ಯಕ್ರಮದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ, ಅವರು ಮಾತನಾಡಿದರು.
ವಸತಿ, ಶಾಲಾ ಕಟ್ಟಡ, ಆಸ್ಪತ್ರೆ, ರಸ್ತೆ, ಕುಡಿಯುವ ನೀರು, ಚರಂಡಿ, ವಿದ್ಯುದ್ದೀಪ ಹೀಗೆ ಮುಂತಾದ ಅಭಿವೃದ್ಧಿ ಕಾರ್ಯಗಳಿಂದ ಜಿಲ್ಲೆ ಪ್ರಗತಿ ಪಥದಲ್ಲಿ ಸಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು, ಜನಪ್ರತಿನಿಧಿಗಳ ಸಲಹೆ-ಸೂಚನೆಯಂತೆ ಪ್ರಮುಖವಾಗಿ ಶಿಕ್ಷಣ, ಆರೋಗ್ಯ, ಕೃಷಿ, ಮೂಲಭೂತ ಸೌಕರ್ಯ ಕಲ್ಪಿಸಲು ಒತ್ತು ನೀಡಲಾಗಿದೆ. ಕಳೆದ ನವೆಂಬರ್‍ನಲ್ಲಿ ಆರೋಗ್ಯ ಮತ್ತು ಪೌಷ್ಟಿಕಾಂಶದ ಡೆಲ್ಟಾ ಸ್ಕೋರ್‍ನಲ್ಲಿ ಜಿಲ್ಲೆಯು ದೇಶಕ್ಕೆ 3ನೇ ರ್ಯಾಂಕ್ ಪಡೆದಿದೆ ಎಂದು ತಿಳಿಸಿದರು. ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಶಿಕ್ಷಕರು, ಅಧಿಕಾರಿಗಳು, ವೈದ್ಯರು, ಸರ್ವರು ಬದ್ಧತೆಯಿಂದ ತನು, ಮನದಿಂದ ದುಡಿಯೋಣ. ಈ ಮೂಲಕ ಯಾದಗಿರಿ ಜಿಲ್ಲೆಯನ್ನು ಮಾದರಿ ಜಿಲ್ಲೆಯಾಗಿ ರೂಪಿಸೋಣ ಎಂದು ಕರೆ ನೀಡಿದರು.
ಗಣರಾಜ್ಯೋತ್ಸವ ಸಾರ್ವಭೌಮತ್ವದ ಸಂಕೇತ: 1947ರ ಆಗಸ್ಟ್ 15ರಂದು ಸ್ವಾತಂತ್ರ್ಯ ಪಡೆಯುವುದರೊಂದಿಗೆ ಮುನ್ನೂರು ವರ್ಷಗಳ ದಾಸ್ಯದ ಸರಪಳಿ ಕಳಚಿಕೊಂಡ ಭಾರತ, 1950ರ ಜನವರಿ 26 ರಂದು ಸಂವಿಧಾನವನ್ನು ಅಧಿಕೃತವಾಗಿ ಜಾರಿಗೊಳಿಸಿ, ವಿಶ್ವದಲ್ಲಿ ತಾನೂ ಒಂದು ಸಾರ್ವಭೌಮ ರಾಷ್ಟ್ರವೆಂದು ಸಾರಿದ ದಿನವೇ ಗಣರಾಜ್ಯೋತ್ಸವ. ದಾಸ್ಯದಿಂದ ಬಿಡುಗಡೆಗೊಂಡ ಸಂದರ್ಭವನ್ನು ಸ್ವಾತಂತ್ರ್ಯೋತ್ಸವವೆಂದು ಆಚರಿಸಿದರೆ, ರಾಷ್ಟ್ರದ ಸಾರ್ವಭೌಮತ್ವದ ಸಂಕೇತವಾಗಿ ಗಣರಾಜ್ಯೋತ್ಸವವನ್ನು ಆಚರಿಸಲಾಗುತ್ತಿದೆ. ರಾಷ್ಟ್ರಪಿತ ಮಹಾತ್ಮ ಗಾಂಧಿ, ನೆಹರೂ, ಸರ್ದಾರ್ ವಲ್ಲಭಬಾಯಿ ಪಟೇಲ್ ಹಾಗೂ ನೇತಾಜಿ ಸುಭಾಸ್‍ಚಂದ್ರ ಬೋಸ್‍ರಂಥ ನಾಯಕರ ಹೋರಾಟ, ತ್ಯಾಗ ಮತ್ತು ಬಲಿದಾನದ ಫಲವಾಗಿ ಪಡೆದ ಸ್ವಾತಂತ್ರ್ಯ, ಸತ್ಯ-ಶಾಂತಿ ಹಾಗೂ ಅಹಿಂಸೆಯಿಂದ ಪ್ರೇರಿತಗೊಂಡಿದ್ದಾಗಿದೆ ಎಂದು ವಿವರಿಸಿದರು. ಗಣರಾಜ್ಯದ ಇಂದಿನ ಅಸ್ತಿತ್ವಕ್ಕೆ ಸಂವಿಧಾನವೇ ತಳಹದಿ. ಸಂವಿಧಾನ ಕರಡು ಸಮಿತಿಯಲ್ಲಿ ಮತ್ತು ರಚನಾ ಸಭೆಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಪಾತ್ರ ವಿಶೇಷವಾಗಿತ್ತು. ತಮ್ಮ ಪಾತ್ರವನ್ನು ಸಂಪೂರ್ಣವಾಗಿ ನಿರ್ವಹಿಸುವಲ್ಲಿ ಡಾ.ಅಂಬೇಡ್ಕರ್ ಅವರಿಗೆ ಹಲವಾರು ದೇಶಗಳ ಸಂವಿಧಾನಗಳನ್ನು ಆಳವಾಗಿ ಅಧ್ಯಯನ ಮಾಡಿದ ಅನುಭವ ನೆರವಾಯಿತು. ಇವರ ಸೇವೆಗೆ ಮನ್ನಣೆ ದೊರೆತು ಇವರನ್ನು ‘ಸಂವಿಧಾನದ ಪಿತಾಮಹ’ ಎಂದು ನಾವು ಸ್ಮರಿಸುವಂತಾಗಿದೆ ಎಂದು ತಿಳಿಸಿದರು. 1.12 ಲಕ್ಷ ರೈತರ ಖಾತೆಗೆ ಹಣ: ಪ್ರಧಾನಮಂತ್ರಿ ಕೃಷಿ ಸಮ್ಮಾನ ನಿಧಿ ಯೋಜನೆಯಡಿ ಭೂ ಸಾಗುವಳಿ ಮಾಡುವ ಜಿಲ್ಲೆಯ ಎಲ್ಲಾ ರೈತರಿಗೆ ಭಾರತ ಸರ್ಕಾರದಿಂದ 6000 ರೂ. ಹಾಗೂ ರಾಜ್ಯ ಸರ್ಕಾರದಿಂದ 4000 ರೂ.ಗಳ ಸಹಾಯಧನ ಒಟ್ಟು 10,000 ರೂ. ಗಳನ್ನು ರೈತರ ಖಾತೆಗೆ ಜಮಾ ಆಗುತ್ತದೆ. ಯೋಜನೆಯಡಿ 1,25,182 ರೈತರು ನೋಂದಾಯಿಸಿದ್ದು, 1,12,130 ರೈತರು ಲಾಭ ಪಡೆಯುತ್ತಿದ್ದಾರೆ. 2019-20ನೇ ಸಾಲಿನಲ್ಲಿ ತೋಟಗಾರಿಕೆ ಬೆಳೆಗಳ ಒಟ್ಟು 454 ಹೆಕ್ಟರ್ ಪ್ರದೇಶ ವಿಸ್ತೀರ್ಣ ಹೊಂದಿದ್ದು ಮತ್ತು 421 ಹೆಕ್ಟರ್ ಪ್ರದೇಶದಲ್ಲಿ ತೋಟಗಾರಿಕೆ ಬೇಳೆಗಳಿಗೆ ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿಯಲ್ಲಿ ಹನಿ ನೀರಾವರಿ ಅಳವಡಿಸಲಾಗಿದೆ ಎಂದು ತಿಳಿಸಿದರು.
ಜಿಲ್ಲೆಯ ಜನ ಗುಳೆ ಹೋಗುವುದನ್ನು ತಪ್ಪಿಸಲು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ನೆರವಾಗುತ್ತಿದೆ. ಈ ಯೋಜನೆಯಡಿ 2019-20ನೇ ಸಾಲಿನಲ್ಲಿ 26.61 ಲಕ್ಷ ಮಾನವ ದಿನಗಳ ಗುರಿಯನ್ನು ನಿಗದಿಪಡಿಸಲಾಗಿದೆ. ಈಗಾಗಲೇ 19.27 ಲಕ್ಷ ಮಾನವ ದಿನಗಳ ಗುರಿಯನ್ನು ತಲುಪಿದ್ದು, ಶೇ.72.41 ರಷ್ಟು ಸಾಧಿಸಲಾಗಿದೆ ಎಂದರು.
ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ವತಿಯಿಂದ 2013-14ರಿಂದ 2019-20ನೇ ಸಾಲಿನವರೆಗೆ ಒಟ್ಟು 2,506 ಕಾಮಗಾರಿಗಳನ್ನು ಕೈಗೊಂಡಿದ್ದು, ಇವುಗಳಲ್ಲಿ 1696 ಕಾಮಗಾರಿಗಳು ಪೂರ್ಣಗೊಂಡಿವೆ. 578 ಕಾಮಗಾರಿಗಳು ವಿವಿಧ ಹಂತದಲ್ಲಿ ಪ್ರಗತಿಯಲ್ಲಿವೆ. ಸಕಾಲ ಅರ್ಜಿಗಳ ವಿಲೆವಾರಿಯಲ್ಲಿ ನವೆಂಬರ್- 2019ರ ಮಾಹೆಯಲ್ಲಿ ಯಾದಗಿರಿ ಜಿಲ್ಲೆಯು ರಾಜ್ಯಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದಿರುವುದಕ್ಕಾಗಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ, ಸಕಾಲ ಹಾಗೂ ಕಾರ್ಮಿಕ ಸಚಿವರಾದ ಎಸ್.ಸುರೇಶ್‍ಕುಮಾರ್ ಅವರು ಜಿಲ್ಲೆಯ ಭೂಮಿ ಅಧಿಕಾರಿ/ ಸಿಬ್ಬಂದಿಗಳ ಕಾರ್ಯವನ್ನು ಅಭಿನಂದಿಸಿದ್ದಾರೆ. ಜಿಲ್ಲಾಸ್ಪತ್ರೆ ಶೀಘ್ರ ಉದ್ಘಾಟನೆ: ಜಿಲ್ಲೆಯಲ್ಲಿ 300 ಹಾಸಿಗೆಗಳ ಸುಸಜ್ಜಿತ ನೂತನ ಜಿಲ್ಲಾಸ್ಪತ್ರೆ ಕಟ್ಟಡ ಸಿದ್ಧವಾಗಿದ್ದು, ಜಿಲ್ಲೆಯ ಜನರಿಗೆ ಉತ್ತಮ ಆರೋಗ್ಯ ಕಲ್ಪಿಸಲು ಶೀಘ್ರ ಉದ್ಘಾಟನೆಗೆ ಕ್ರಮ ಕೈಗೊಳ್ಳಲಾಗುವುದು. ಜಿಲ್ಲಾಸ್ಪತ್ರೆಗೆ ಮಾನವ ಸಂಪನ್ಮೂಲ ವಾರ್ಷಿಕ ವೆಚ್ಚ 50 ಕೋಟಿ ರೂಪಾಯಿ ಆಗಲಿದ್ದು, ವೈದ್ಯರು ಮತ್ತು ಸಿಬ್ಬಂದಿ ನೇಮಕಾತಿಗಾಗಿ ಸರ್ಕಾರಕ್ಕೆ ಪ್ರಸ್ತಾವನೆ ಕೂಡ ಸಲ್ಲಿಸಲಾಗಿದೆ ಎಂದು ತಿಳಿಸಿದರು.
ಮೆಡಿಕಲ್ ಕಾಲೇಜಿಗೆ ಸಚಿವ ಸಂಪುಟದ ಅಸ್ತು: ಸರ್ಕಾರವು ಜಿಲ್ಲೆಗೆ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯನ್ನು ಮಂಜೂರು ಮಾಡಿರುವುದು ಹೆಮ್ಮೆಯ ಸಂಗತಿಯಾಗಿದೆ. ಈ ಮೆಡಿಕಲ್ ಕಾಲೇಜು ಕಟ್ಟಡ, ವಸತಿಗೃಹಗಳು ಹಾಗೂ ವಿದ್ಯಾರ್ಥಿಗಳ ವಸತಿ ನಿಲಯಕ್ಕಾಗಿ 325 ಕೋಟಿ ರೂ. ಮಂಜೂರಾಗಿದೆ. ಇದರಲ್ಲಿ ಕೇಂದ್ರದ ಪಾಲು ಶೇ.60ರಷ್ಟು ಮತ್ತು ರಾಜ್ಯದ ಪಾಲು ಶೇ.40ರಷ್ಟು ಇರುತ್ತದೆ. ಕಟ್ಟಡದ ಕಾಮಗಾರಿಗೆ ಸಚಿವ ಸಂಪುಟದ ಅನುಮೋದನೆ ದೊರಕಿದ್ದು, ಶೀಘ್ರ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿ ಕಟ್ಟಡ ಕಾಮಗಾರಿ ಆರಂಭಿಸಲಾಗುವುದು. ಜೊತೆಗೆ ಮಾನವ ಸಂಪನ್ಮೂಲ ಮಂಜೂರಾತಿಗೆ ಸಲ್ಲಿಸಿದ ಪ್ರಸ್ತಾವನೆಗೂ ಸರ್ಕಾರ ಒಪ್ಪಿಗೆ ನೀಡಿದ್ದು, ವೈದ್ಯರು ಮತ್ತು ಸಿಬ್ಬಂದಿಗಳ ನೇಮಕಾತಿಯನ್ನು ಜೂನ್‍ನಲ್ಲಿ ಆರಂಭಿಸಲಾಗುವುದು. ತದನಂತರ ಭಾರತೀಯ ವೈದ್ಯಕೀಯ ಸಂಸ್ಥೆಯ ತಂಡ ಪರಿವೀಕ್ಷಣೆಗೆ ಆಗಮಿಸಲಿದ್ದು, 2021ರಲ್ಲಿ ವಿದ್ಯಾರ್ಥಿಗಳ ಪ್ರವೇಶ ಆರಂಭವಾಗುವ ನಿರೀಕ್ಷೆ ಹೊಂದಲಾಗಿದೆ ಎಂದು ಆಶಯ ವ್ಯಕ್ತಪಡಿಸಿದರು.
ಆಯುಷ್ಮಾನ್ ಭಾರತ- ಆರೋಗ್ಯ ಕರ್ನಾಟಕ ಯೋಜನೆಯಡಿಯಲ್ಲಿ ಬಿಪಿಎಲ್ ಪಡಿತರ ಚೀಟಿ ಹೊಂದಿರುವ ಕುಟುಂಬದವರು ವರ್ಷದಲ್ಲಿ 5 ಲಕ್ಷ ರೂ.ವರೆಗೆ ಮತ್ತು ಉಚಿತವಾಗಿ ಚಿಕಿತ್ಸೆ ಮತ್ತು ಎಪಿಎಲ್ ಪಡಿತರ ಚೀಟಿ ಹೊಂದಿರುವ ಕುಟುಂಬಗಳು 1.50 ಲಕ್ಷ ರೂ.ವರೆಗೂ ಸಹಪಾವತಿಯೊಂದಿಗೆ ಚಿಕಿತ್ಸೆಯನ್ನು ಪಡೆಯಬಹುದಾಗಿದೆ. ಜಿಲ್ಲೆಯ ಪ್ರತಿಯೊಬ್ಬ ನಾಗರಿಕರು ಯೋಜನೆಯಡಿ ಹೆಸರು ನೋಂದಾಯಿಸಿಕೊಂಡು ಸದುಪಯೋಗ ಪಡೆದುಕೊಳ್ಳಬೇಕೆಂದು ಕೋರಿದರು. ಆಹಾರ ಇಲಾಖೆಯ ಮೂಲಕ ಅನರ್ಹ ಪಡಿತರ ಚೀಟಿಗಳನ್ನು ರದ್ದುಪಡಿಸಲು ಕ್ರಮ ಕೈಗೊಳ್ಳಲಾಗಿದ್ದು, ಜಿಲ್ಲೆಯಾದ್ಯಂತ ಪಡಿತರ ಚೀಟಿಗಳನ್ನು ಹೊಂದಿರುವ ಕುಟುಂಬಗಳ ಎಲ್ಲಾ ಸದಸ್ಯರು ತಮ್ಮ ನ್ಯಾಯಬೆಲೆ ಅಂಗಡಿಗಳಿಗೆ ಹಾಜರಾಗಿ ಕಡ್ಡಾಯವಾಗಿ ಇ-ಕೆವೈಸಿ ಮಾಡಿಸಲು ಮಾರ್ಚ್ 31ರವರೆಗೆ ಅವಕಾಶ ನೀಡಲಾಗಿದೆ ಎಂದು ಹೇಳಿದರು.
ಸಮಾಜ ಕಲ್ಯಾಣ, ಪರಿಶಿಷ್ಟ ವರ್ಗಗಳ ಕಲ್ಯಾಣ, ಅಲ್ಪಸಂಖ್ಯಾತ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ನಿಗಮಗಳ ಮೂಲಕ ಅರ್ಹ ಫಲಾನುಭವಿಗಳಿಗೆ ವಿವಿಧ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ. ವಿದ್ಯಾರ್ಥಿಗಳು ಸೇರಿದಂತೆ ಎಲ್ಲಾ ಸಮುದಾಯಗಳ ಅಭಿವೃದ್ಧಿಗಾಗಿ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ ಎಂದರು.
ಪ್ರವಾಸಿ ತಾಣಗಳ ಅಭಿವೃದ್ಧಿಗೆ ಕ್ರಮ: ಜಿಲ್ಲೆಯು ಐತಿಹಾಸಿಕ ಮತ್ತು ಪ್ರವಾಸಿ ತಾಣಗಳ ಬೀಡಾಗಿದೆ. ಪ್ರವಾಸಿ ತಾಣಗಳ ಸಂರಕ್ಷಣೆ ಮತ್ತು ಅಭಿವೃದ್ಧಿಗಾಗಿ ಕ್ರಮ ಕೈಗೊಳ್ಳಲಾಗಿದೆ. ಈ ನಿಟ್ಟಿನಲ್ಲಿ ಶಹಾಪುರ ತಾಲ್ಲೂಕಿನ ಬುದ್ಧ ಮಲಗಿದ ಬೆಟ್ಟ ಮತ್ತು ಅಲ್ಲಿನ ಮಾವಿನಕೆರೆ ಅಭಿವೃದ್ಧಿಯ ಅಂದಾಜು ವೆಚ್ಚ 4 ಕೋಟಿ ರೂ.ಗಳ ಪೈಕಿ 1.64 ಕೋಟಿ ರೂ. ಅನುದಾನ ಬಿಡುಗಡೆಯಾಗಿರುತ್ತದೆ. ಇದರಲ್ಲಿ ಉದ್ಯಾನವನ ನಿರ್ಮಾಣ, ಸೌಂದರ್ಯೀಕರಣ, ಸುರಕ್ಷತೆ ತಂತಿಬೇಲಿ ಅಳವಡಿಕೆ ಕಾಮಗಾರಿಗಳು ವಾರದಲ್ಲಿ ಆರಂಭವಾಗಲಿವೆ. ಇನ್ನು ಗುರುಮಠಕಲ್ ತಾಲ್ಲೂಕಿನ ನಜರಾಪುರ ಗ್ರಾಮದ ಧಬಧಬ್ ಜಲಪಾತದ ಅಭಿವೃದ್ಧಿಗೆ 147 ಲಕ್ಷ ರೂ.ಗಳ ಅನುದಾನ ಬಿಡುಗಡೆಯಾಗಿದ್ದು, ಅರಣ್ಯ ಇಲಾಖೆಯಿಂದ ತೂಗುಸೇತುವೆ ನಿರ್ಮಾಣ, ವೀಕ್ಷಣಾ ಗ್ಯಾಲರಿ, ವಾಕಿಂಗ್ ಟ್ರ್ಯಾಕ್, ಸುರಕ್ಷಿತ ತಂತಿಬೇಲಿ ಅಳವಡಿಕೆಯ ಕಾಮಗಾರಿಗಳನ್ನು ಶೀಘ್ರ ಆರಂಭಿಸಲಾಗುವುದು ಎಂದು ತಿಳಿಸಿದರು.
ಯಾದಗಿರಿ ನಗರದ ದೊಡ್ಡ ಕೆರೆ ಅಭಿವೃದ್ಧಿಪಡಿಸುವ ಸಲುವಾಗಿ ಯಾದಗಿರಿ ನಗರಾಭಿವೃದ್ಧಿ ಪ್ರಾಧಿಕಾರದಿಂದ ಯೋಜನಾ ವರದಿ ತಯಾರಿಗೆ ಟೆಂಡರ್ ಕರೆಯಲಾಗಿದೆ. ಕಾಮಗಾರಿ ಪೂರ್ಣಗೊಂಡರೆ ನಗರದ ಸೌಂದರ್ಯೀಕರಣದ ಜೊತೆಗೆ ಅಂತರ್ಜಲ ಮಟ್ಟ ಹೆಚ್ಚಳವಾಗಿ ಸುತ್ತಲಿನ ಜಲಸಂಪನ್ಮೂಲಗಳು ಮರುಜೀವ ಪಡೆದುಕೊಳ್ಳುತ್ತವೆ.
ಆರ್ಥಿಕ ಗಣತಿಗೆ ಮಾಹಿತಿ ನೀಡಿ: ಜಿಲ್ಲೆಯಾದ್ಯಂತ 7ನೇ ಆರ್ಥಿಕ ಗಣತಿ ನಡೆಯುತ್ತಿದ್ದು, ಸಿ.ಎಸ್.ಸಿ ಮತ್ತು ಎನ್.ಎಸ್.ಎಸ್.ಒ ಅವರಿಗೆ ಗಣತಿ ಜವಾಬ್ದಾರಿ ನೀಡಲಾಗಿದೆ. ಮನೆಯಲ್ಲಿ ನಡೆಸುತ್ತಿರುವ ಆರ್ಥಿಕ ಚಟುವಟಿಕೆಗಳ ಬಗ್ಗೆ ಗಣತಿದಾರರು ಸಂಗ್ರಹಿಸುವ ಮಾಹಿತಿಯು ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ವಿವಿಧ ಅಭಿವೃದ್ಧಿ ಯೋಜನೆ ಮತ್ತು ಕಾರ್ಯಕ್ರಮಗಳನ್ನು ರೂಪಿಸುವಲ್ಲಿ ಮಹತ್ವದ್ದಾಗಿರುತ್ತದೆ. ಟೈಲರಿಂಗ್, ಬೀಡಿ ಕಟ್ಟುವುದು, ಹೈನುಗಾರಿಕೆ, ರಸ್ತೆಬದಿ ವಹಿವಾಟು, ಸೊಪ್ಪು, ತರಕಾರಿ ವ್ಯಾಪಾರ, ಹೈನುಗಾರಿಕೆ, ಮನೆಪಾಠ, ತಳ್ಳುಗಾಡಿಯ ವ್ಯಾಪಾರ, ಇತ್ಯಾದಿಯಾಗಿ ಪ್ರತಿ ವಹಿವಾಟಿನ ಸಮಗ್ರ ವರದಿಯನ್ನು ಭೇಟಿ ನೀಡಲಿರುವ ಗಣತಿದಾರರಿಗೆ ನೀಡಲು ಈ ಸಂದರ್ಭದಲ್ಲಿ ಕೋರಿದರು. ಕಾರ್ಯಕ್ರಮದಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹಾಗೂ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ರವರ ಭಾವಚಿತ್ರಗಳಿಗೆ ಪೂಜೆ ಸಲ್ಲಿಸಿ, ಪುಷ್ಪಾರ್ಚನೆ ಮಾಡಲಾಯಿತು. ಶಾಸಕರಾದ ವೆಂಕಟರಡ್ಡಿಗೌಡ ಮುದ್ನಾಳ ಅವರು ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾದ ರಾಜಶೇಖರಗೌಡ ಪಾಟೀಲ್ ವಜ್ಜಲ್, ಲೋಕಸಭಾ ಸದಸ್ಯರಾದ ರಾಜಾ ಅಮರೇಶ್ವರ ನಾಯಕ, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷರಾದ ಗಿರಿಜಮ್ಮ ಸದಾಶಿವಪ್ಪ ರೊಟ್ನಡಗಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷರಾದ ಭೀಮವ್ವ ಮಲ್ಲೇಶಪ್ಪ ಅಚ್ಚೋಲಾ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಿಲ್ಪಾ ಶರ್ಮಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ್ ಭಗವಾನ್ ಸೋನವಣೆ, ಅಪರ ಜಿಲ್ಲಾಧಿಕಾರಿಗಳಾದ ಪ್ರಕಾಶ್ ಜಿ.ರಜಪೂತ ಅವರು ಉಪಸ್ಥಿತರಿದ್ದರು. ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಮುಕ್ಕಣ್ಣ ಕರಿಗಾರ, ನಗರಸಭೆ ಪೌರಾಯುಕ್ತ ರಮೇಶ ಸುಣಗಾರ, ತಹಶೀಲ್ದಾರ್ ಚನ್ನಮಲ್ಲಪ್ಪ ಘಂಟಿ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು, ಶಿಕ್ಷಕರು, ವಿವಿಧ ಶಾಲೆಗಳ ಮಕ್ಕಳು, ಸಾರ್ವಜನಿಕರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಲಿಂಗೇರಿ ಸ್ಟೇಷನ್ ಮೊರಾರ್ಜಿ ದೇಸಾಯಿ ಶಾಲೆಯ ಸಂಗೀತ ಶಿಕ್ಷಕರಾದ ಚಂದ್ರಶೇಖರ ಗೋಗಿ ಮತ್ತು ವಿದ್ಯಾರ್ಥಿಗಳು ನಾಡಗೀತೆ ಹಾಡಿದರು. ಸರಕಾರಿ ಪದವಿ ಮಹಾವಿದ್ಯಾಲಯದ ಅತಿಥಿ ಉಪನ್ಯಾಸಕಿ ಡಾ.ಜ್ಯೋತಿಲತಾ ತಡಿಬಿಡಿಮಠ ನಿರೂಪಿಸಿದರು. ಸಹಾಯಕ ಆಯುಕ್ತರಾದ ಶಂಕರಗೌಡ ಎಸ್.ಸೋಮನಾಳ ಅವರು ವಂದಿಸಿದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

                                                             ವಾ.ವಿ.ಸ.45 ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಶರಣಬಸಪ್ಪ ದರ್ಶನಾಪೂರ ಅವರ ಜಿಲ್ಲಾ ಪ್ರವಾಸ ಯಾದಗ...