ಮಂಗಳವಾರ, ಜನವರಿ 7, 2020

ಜಿಲ್ಲಾಧಿಕಾರಿ ಎಂ.ಕೂರ್ಮಾ ರಾವ್ ಅಧ್ಯಕ್ಷತೆಯಲ್ಲಿ ಪೂರ್ವಸಿದ್ಧತಾ ಸಭೆ
ಜ.೨೬ಕ್ಕೆ ಗಣರಾಜ್ಯೋತ್ಸವ ಅದ್ಧೂರಿ ಆಚರಣೆಗೆ ನಿರ್ಧಾರ
ಯಾದಗಿರಿ, ಜನವರಿ ೦೭ (ಕರ್ನಾಟಕ ವಾರ್ತೆ): ಜಿಲ್ಲಾಡಳಿತದ ವತಿಯಿಂದ ಗಣರಾಜ್ಯೋತ್ಸವ ದಿನಾಚರಣೆಯನ್ನು ಜನವರಿ ೨೬ರಂದು ಬೆಳಿಗ್ಗೆ ೯ ಗಂಟೆಗೆ ಜಿಲ್ಲಾ ಕ್ರೀಡಾಂಗಣದಲ್ಲಿ ಅದ್ಧೂರಿ ಆಚರಣೆಗೆ ಸಿದ್ಧತೆ ಕೈಗೊಳ್ಳಬೇಕು. ಸಾಂಸ್ಕೃತಿಕ ಕಾರ್ಯಕ್ರಮವನ್ನು ಸಂಜೆ ೬ ಗಂಟೆಗೆ ಯಾದಗಿರಿ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಏರ್ಪಡಿಸುವಂತೆ ಜಿಲ್ಲಾಧಿಕಾರಿಗಳಾದ ಎಂ.ಕೂರ್ಮಾ ರಾವ್ ಅವರು ಸೂಚಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಗಣರಾಜ್ಯೋತ್ಸವ ದಿನಾಚರಣೆಯ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ, ಅವರು ಮಾತನಾಡಿದರು.
ಜ.೨೬ರಂದು ಬೆಳಿಗ್ಗೆ ೭ರಿಂದ ೮ ಗಂಟೆಯವರೆಗೆ ನೂತನ ತಾಲ್ಲೂಕುಗಳಾದ ಗುರುಮಠಕಲ್, ವಡಗೇರಾ, ಹುಣಸಗಿ ಹಾಗೂ ಸುರಪುರ, ಶಹಾಪುರ ತಾಲ್ಲೂಕು ಸೇರಿದಂತೆ ಜಿಲ್ಲೆಯಾದ್ಯಂತ ಗಣರಾಜ್ಯೋತ್ಸವವನ್ನು ವಿಜೃಂಭಣೆಯಿAದ ಆಚರಿಸಬೇಕು. ಅದೇ ರೀತಿ ಜಿಲ್ಲೆಯ ಎಲ್ಲಾ ಸರ್ಕಾರಿ ಕಚೇರಿ ಹಾಗೂ ಸರ್ಕಾರಿ, ಅನುದಾನಿತ ಶಾಲಾ-ಕಾಲೇಜುಗಳಲ್ಲಿ ಧ್ವಜಾರೋಹಣ ನೆರವೇರಿಸಬೇಕು. ಮಹಾತ್ಮ ಗಾಂಧೀಜಿಯವರ ಹಾಗೂ ಡಾ.ಬಿ.ಆರ್.ಅಂಬೇಡ್ಕರ್‌ರವರ ಭಾವಚಿತ್ರಗಳಿಗೆ ಪೂಜೆ ಸಲ್ಲಿಸಬೇಕು ಎಂದು ಅವರು ಕಟ್ಟುನಿಟ್ಟಾಗಿ ಸೂಚಿಸಿದರು.
ಅಂದು ಬೆಳಿಗ್ಗೆ ೯ ಗಂಟೆಗೆ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಧ್ವಜಾರೋಹಣ ನೆರವೇರಿಸುವರು. ಆದ್ದರಿಂದ ಜಿಲ್ಲಾ ಮಟ್ಟದ ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ೮.೩೦ ಗಂಟೆವರೆಗೆ ಕಡ್ಡಾಯವಾಗಿ ಹಾಜರಿರಬೇಕು. ಇದಕ್ಕೂ ಮುನ್ನ ಬೆಳಿಗ್ಗೆ ೮ ಗಂಟೆಗೆ ಜಿಲ್ಲಾಡಳಿತ ಭವನದ ಎದುರು ಧ್ವಜಾರೋಹಣವನ್ನು ನೆರವೇರಿಸಲಾಗುವುದು. ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿರುವಂತೆ ಅವರು ನಿರ್ದೇಶಿಸಿದರು. ನಾಡಗೀತೆ, ಭಕ್ತಿಗೀತೆ, ರಾಷ್ಟಗೀತೆಗಳನ್ನು ಹಾಡಲು ನುರಿತ ವಿದ್ಯಾರ್ಥಿಗಳನ್ನು ಕರೆದುಕೊಂಡು ಬರಬೇಕು. ನಂತರ ಶಾಲಾ- ಕಾಲೇಜು ಮಕ್ಕಳಿಂದ ದೇಶಭಕ್ತಿ ಮತ್ತು ಭಾವೈಕ್ಯತೆಯಿಂದ ಕೂಡಿರುವ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲು ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಪದವಿಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಿಗೆ ಅವರು ತಿಳಿಸಿದರು.
೧೬ ಪಥಸಂಚಲನ ತಂಡ: ಆಕರ್ಷಕ ಪಥಸಂಚಲನಕ್ಕಾಗಿ ಜಿಲ್ಲಾ ಪೊಲೀಸ್ ಇಲಾಖೆಯ ೩ ತಂಡಗಳನ್ನೊಳಗೊAಡು ಒಟ್ಟು ೧೬ ತಂಡಗಳನ್ನು ರಚಿಸಲು ಸಭೆಯಲ್ಲಿ ನಿರ್ಣಯಿಸಲಾಯಿತು. ಒಂದು ತಂಡದಲ್ಲಿ ೨೧ ಜನರಿರಬೇಕು. ಎನ್‌ಸಿಸಿ ಬಾಲಕರು ಮತ್ತು ಬಾಲಕಿಯರ ತಂಡ-೨, ಅರಣ್ಯ ಮತ್ತು ಅಬಕಾರಿ ಇಲಾಖೆ-೧, ಭಾರತೀಯ ಸೇವಾ ದಳ-೨, ಗೃಹ ರಕ್ಷಕ ದಳ-೧, ಡಾನ್ ಬೋಸ್ಕೊ ಪ್ರೌಢಶಾಲೆ-೧, ಆದರ್ಶ ವಿದ್ಯಾಲಯ ಪ್ರೌಢಶಾಲೆ-೧, ಎನ್‌ಎಸ್‌ಎಸ್-೧, ಸ್ಕೌಟ್ಸ್ ಹುಡುಗರ ತಂಡ-೧, ಗೈಡ್ಸ್ ಹುಡುಗಿಯರ ತಂಡ-೧, ಹೋತಪೇಟ ನವೋದಯ ವಿದ್ಯಾಲಯ ಶಾಲೆ-೨.
ಸಾಧಕರ ಸನ್ಮಾನ: ವಿವಿಧ ಇಲಾಖೆಗಳಲ್ಲಿ ಸೇವಾ, ಕಲಾ, ಸಾಹಿತ್ಯ, ಸಂಗೀತ, ನೃತ್ಯ ಇತ್ಯಾದಿ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಮತ್ತು ಸಕಾಲದಲ್ಲಿ ಅತಿ ಹೆಚ್ಚು ಕಾಲಾವಕಾಶ ತೆಗೆದುಕೊಳ್ಳದೇ ಶೀಘ್ರದಲ್ಲಿ ಕಡತಗಳನ್ನು ವಿಲೇವಾರಿ ಮಾಡಿರುವ ಅಧಿಕಾರಿ/ಸಿಬ್ಬಂದಿಯವರಿಗೆ ಹಾಗೂ ಸರ್ಕಾರಿ ಕರ್ತವ್ಯದಲ್ಲಿ ಉತ್ತಮ ಸೇವೆ ಸಲ್ಲಿಸಿರುವ ಅಧಿಕಾರಿ/ಸಿಬ್ಬಂದಿಯವರಿಗೆ ೨೦೧೯-೨೦ನೇ ಸಾಲಿನ ಸರ್ವೋತ್ತಮ ಸೇವಾ ಪ್ರಶಸ್ತಿಗಾಗಿ ಹೆಸರುಗಳನ್ನು ಮೇಲಾಧಿಕಾರಿಗಳಿಂದ ಶಿಫಾರಸು ಮಾಡಿ ಆಯ್ಕೆ ಸಮಿತಿಗೆ ನೀಡಬೇಕು ಎಂದು ಜಿಲ್ಲಾಧಿಕಾರಿಗಳು ನಿರ್ದೇಶಿಸಿದರು.
ವಸ್ತು ಪ್ರದರ್ಶನ: ಕೈಮಗ್ಗ ಮತ್ತು ಜವಳಿ ಇಲಾಖೆ, ಕಾರ್ಮಿಕ ಇಲಾಖೆ, ಬಾಲಕಾರ್ಮಿಕ ಇಲಾಖೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗಳು ತಮ್ಮ ಮಹತ್ವದ ಯೋಜನೆಗಳ ಅರಿವು ಮೂಡಿಸಲು ವಸ್ತುಪ್ರದರ್ಶನ ಏರ್ಪಡಿಸಬೇಕು. ಜಿಲ್ಲಾ ಪಂಚಾಯಿತಿಯು ಸ್ವಚ್ಛ ಭಾರತ ಯೋಜನೆಯ ಕುರಿತು ಜಾಗೃತಿ ಮೂಡಿಸಬೇಕು. ವಸ್ತು ಪ್ರದರ್ಶನದಲ್ಲಿ ಆಯುಷ್ಮಾನ್ ಭಾರತ- ಆರೋಗ್ಯ ಕರ್ನಾಟಕ ಹಾಗೂ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಗಳ ಜಾಗೃತಿಗೆ ಆದ್ಯತೆ ನೀಡಿ ಎಂದು ಅವರು ಸೂಚನೆ ನೀಡಿದರು.
ಜಿಲ್ಲಾಡಳಿತ ಕಾರ್ಯಕ್ರಮದಲ್ಲಿ ಭಾಗವಹಿಸುವ ಗಣ್ಯ ವ್ಯಕ್ತಿಗಳಿಗೆ ಟೀ, ಟಿಫಿನ್ ವ್ಯವಸ್ಥೆ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಮತ್ತು ಸಭಿಕರು, ವಿದ್ಯಾರ್ಥಿಗಳಿಗೆ ವ್ಯವಸ್ಥಿತವಾಗಿ ಕುಡಿಯುವ ನೀರಿನ ವ್ಯವಸ್ಥೆ ಮಾಡಲು ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ವಹಿಸಲಾಯಿತು. ವೇದಿಕೆಗೆ ಟೆಂಟ್, ಆಸನ, ಮೈಕ್, ದೀಪಾಲಂಕಾರ, ಜನರೇಟರ್ ವ್ಯವಸ್ಥೆ ಮಾಡಬೇಕು ಹಾಗೂ ಎಲ್ಲಾ ಸರಕಾರಿ ಕಚೇರಿ, ಜಿಲ್ಲಾಡಳಿತ ಕಾರ್ಯಾಲಯ, ನಗರದ ವೃತ್ತಗಳಲ್ಲಿ ವಿದ್ಯುತ್ ದೀಪಾಲಂಕಾರದ ವ್ಯವಸ್ಥೆಯನ್ನು ಮಾಡುವಂತೆ ಸಂಬ0ಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲಾಡಳಿತದ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಬೇಕು. ಆಂಬುಲೆನ್ಸ್ ಮತ್ತು ಅಗ್ನಿಶಾಮಕ ದಳದ ವಾಹನ ಮುಂಜಾಗ್ರತಾ ಕ್ರಮವಾಗಿ ಸ್ಥಳದಲ್ಲಿರುವಂತೆ ಸಭೆಯಲ್ಲಿ ಸೂಚಿಸಲಾಯಿತು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಿಲ್ಪಾ ಶರ್ಮಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ್ ಭಗವಾನ್ ಸೋನವಣೆ, ಅಪರ ಜಿಲ್ಲಾಧಿಕಾರಿ ಪ್ರಕಾಶ್ ಜಿ.ರಜಪೂತ, ಸಹಾಯಕ ಆಯುಕ್ತರಾದ ಶಂಕರಗೌಡ ಎಸ್.ಸೋಮನಾಳ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿಗಳಾದ ಮುಕ್ಕಣ್ಣ ಕರಿಗಾರ, ತಹಶೀಲ್ದಾರ್ ಚನ್ನಮಲ್ಲಪ್ಪ ಘಂಟಿ, ಜಿಲ್ಲಾ ಭಾವೈಕ್ಯತಾ ಸಮಿತಿ ಅಧ್ಯಕ್ಷ ಬಾಬು ದೋಖಾ, ಶರಣಗೌಡ ಬಾಡಿಯಾಳ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

                                                             ವಾ.ವಿ.ಸ.45 ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಶರಣಬಸಪ್ಪ ದರ್ಶನಾಪೂರ ಅವರ ಜಿಲ್ಲಾ ಪ್ರವಾಸ ಯಾದಗ...