ಸಾರ್ವಜನಿಕರ ಪ್ರಕರಣಗಳ ಇತ್ಯರ್ಥಕ್ಕೆ ಸುವರ್ಣಾವಕಾಶ
ಫೆ.8ರಂದು ರಾಷ್ಟ್ರೀಯ ಲೋಕ್ ಅದಾಲತ್
-ನ್ಯಾ. ಶ್ರೀ ಶಿವನ ಗೌಡ
ಯಾದಗಿರಿ, ಜನವರಿ 31 (ಕರ್ನಾಟಕ ವಾರ್ತೆ): ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಬೆಂಗಳೂರು ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸಂಯುಕ್ತಾಶ್ರಯದಲ್ಲಿ ರಾಷ್ಟ್ರೀಯ ಲೋಕ್ ಅದಾಲತ್ ಅನ್ನು ಫೆಬ್ರುವರಿ 8ರಂದು ಶನಿವಾರ ಬೆಳಿಗ್ಗೆ 10 ಗಂಟೆಗೆ ಜಿಲ್ಲೆಯ ಯಾದಗಿರಿ, ಸುರಪುರ ಮತ್ತು ಶಹಾಪುರ ನ್ಯಾಯಾಲಯಗಳ ಆವರಣದಲ್ಲಿ ಆಯೋಜಿಸಲಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಗೌರವಾನ್ವಿತ ಶ್ರೀ ಶಿವನ ಗೌಡ ಅವರು ತಿಳಿಸಿದರು. ನಗರದ ಜಿಲ್ಲಾ ನ್ಯಾಯಾಲಯದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ವರ್ಷದಲ್ಲಿ ಫೆಬ್ರುವರಿ 8, ಏಪ್ರಿಲ್ 11, ಜುಲೈ 11, ಸೆಪ್ಟೆಂಬರ್ 12 ಹಾಗೂ ಡಿಸೆಂಬರ್ 12ರಂದು ಸೇರಿದಂತೆ ಒಟ್ಟು 5 ರಾಷ್ಟ್ರೀಯ ಲೋಕ್ ಅದಾಲತ್‍ಗಳನ್ನು ಆಯೋಜಿಸಲಾಗಿದೆ ಎಂದು ಹೇಳಿದರು.ಸಾರ್ವಜನಿಕರು ತಮ್ಮ ವ್ಯಾಜ್ಯ ಪೂರ್ವ ಹಾಗೂ ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳನ್ನು ಲೋಕ್ ಅದಾಲತ್ ಮೂಲಕ ಅತಿ ಶೀಘ್ರದಲ್ಲಿ ಪರಿಹಾರ ಪಡೆದುಕೊಳ್ಳಲು ಇದೊಂದು ಸುವರ್ಣ ಅವಕಾಶವಾಗಿದೆ. ಫೆಬ್ರುವರಿ 8ರ ಲೋಕ್ ಅದಾಲತ್‍ನಲ್ಲಿ ಜಿಲ್ಲೆಯ 1,207 ಪ್ರಕರಣಗಳನ್ನು ರಾಜಿ ಮೂಲಕ ಪರಿಹರಿಸಲು ಗುರುತಿಸಲಾಗಿದೆ. ಫೆಬ್ರುವರಿ 8ರವರೆಗೆ ಪ್ರಕರಣಗಳನ್ನು ಗುರುತಿಸುವ ಕಾರ್ಯ ಚಾಲ್ತಿಯಲ್ಲಿರುತ್ತದೆ. ಸಾರ್ವಜನಿಕರು ಅದಾಲತ್‍ನ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು. ಲೋಕ್ ಅದಾಲತ್‍ನ ಪ್ರಯೋಜನಗಳು: ಸಾರ್ವಜನಿಕರ ಕೇಸನ್ನು ಜನತಾ ನ್ಯಾಯಾಲಯದ ಮೂಲಕ ಶೀಘ್ರವಾಗಿ ಇತ್ಯರ್ಥಗೊಳಿಸಿಕೊಳ್ಳಬಹುದು. ಲೋಕ್ ಅದಾಲತ್ ಜನತಾ ನ್ಯಾಯಾಲಯದಲ್ಲಿ ಜನರೇ ನೇರವಾಗಿ ಅಥವಾ ವಕೀಲರ ಮುಖಾಂತರ ಭಾಗವಹಿಸಬಹುದು. ನ್ಯಾಯಾಲಯಗಳಲ್ಲಿ ಉಭಯ ಪಕ್ಷಕಾರರು ರಾಜೀ ಮಾಡಿಕೊಳ್ಳಲು ಮಾರ್ಗದರ್ಶನ ಮಾಡಲಾಗುವುದು. ಇಬ್ಬರಿಗೂ ಒಪ್ಪಿಗೆಯಾಗುವಂತೆ ಪ್ರಕರಣವು ತೀರ್ಮಾನವಾಗುವುದರಿಂದ ಬಾಂಧವ್ಯವು ಉಳಿದು ವಿವಾದವು ತೀರ್ಮಾನವಾಗುತ್ತದೆ. ನ್ಯಾಯಾಲಯದಲ್ಲಿ ದಾಖಲಾಗದೆ ಇರುವ ಪ್ರಕರಣಗಳನ್ನು (ವ್ಯಾಜ್ಯಪೂರ್ವ ಪ್ರಕರಣಗಳು) ಸಹ ರಾಜೀ ಸಂಧಾನದ ಮೂಲಕ ಬಗೆಹರಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ವ್ಯಾಜ್ಯ ಪೂರ್ವ ಪ್ರಕರಣಗಳಲ್ಲಿ ನ್ಯಾಯಾಲಯ ಶುಲ್ಕ (ಕೋರ್ಟ್ ಫೀ) ಕೊಡಬೇಕಾಗಿಲ್ಲ. ರಾಜೀ ಸಂಧಾನದ ಮೂಲಕ ಪ್ರಕರಣವನ್ನು ಇತ್ಯರ್ಥಪಡಿಸಿಕೊಂಡಲ್ಲಿ ನ್ಯಾಯಾಲಯಕ್ಕೆ ಪಾವತಿಸಲಾದ ನ್ಯಾಯಾಲಯ ಶುಲ್ಕವನ್ನು ಪೂರ್ಣವಾಗಿ ಮರುಪಾವತಿಸಲಾಗುವುದು. ಸಂಧಾನಕಾರರು ಸೂಚಿಸುವ ಪರಿಹಾರ ಒಪ್ಪಿಗೆಯಾದಲ್ಲಿ ಮಾತ್ರ ರಾಜೀ ಮಾಡಿಕೊಳ್ಳಬಹುದು. ಕಡಿಮೆ ಖರ್ಚಿನಲ್ಲಿ ಶೀಘ್ರ ತೀರ್ಮಾನಕ್ಕಾಗಿ ಇದೊಂದು ವಿಶೇಷ ಅವಕಾಶ ಎಂದು ಅವರು ವಿವರಿಸಿದರು. ವ್ಯಾಜ್ಯಪೂರ್ವ ಪ್ರಕರಣ ಯಾವವು?: ಚೆಕ್ ಅಮಾನ್ಯ ಯು/ಎಸ್ 138, ಆರ್ಥಿಕ ವಸೂಲಾತಿ ಪ್ರಕರಣ, ಉದ್ಯೋಗದಲ್ಲಿ ಪುನರ್ ಸ್ಥಾಪಿಸಲ್ಪಡುವ ಪ್ರಕರಣಗಳು ಸೇರಿದಂತೆ ಕಾರ್ಮಿಕ ವಿವಾದಗಳು ಹಾಗೂ ಕೈಗಾರಿಕಾ ಕಾರ್ಮಿಕರ ವೇತನಕ್ಕೆ ಸಂಬಂಧಿಸಿದ ಕ್ಲೇಮುಗಳು, ವಿದ್ಯುತ್ ಹಾಗೂ ನೀರಿನ ಶುಲ್ಕಗಳು (non compoundable ಹೊರತುಪಡಿಸಿ), ಮೆಂಟೆನೆನ್ಸ್ ಪ್ರಕರಣಗಳು (maintenance cases), ಇತರ ಪ್ರಕರಣಗಳು (ರಾಜೀಯಾಗಬಲ್ಲ ಅಪರಾಧಿಕ ಪ್ರಕರಣಗಳು, ವೈವಾಹಿಕ) ಕುಟುಂಬ ನ್ಯಾಯಾಲಯ ಹಾಗೂ ಇತರೆ ಸಿವಿಲ್ ಪ್ರಕರಣಗಳು). ಬಾಕಿ ಇರುವ ಪ್ರಕರಣ ಯಾವವು?: ರಾಜೀಯಾಗಬಲ್ಲ ಅಪರಾಧಿಕ ಪ್ರಕರಣಗಳು, ಚೆಕ್ ಅಮಾನ್ಯದ ಪ್ರಕರಣಗಳು ಯು/ಎಸ್ 138, ಆರ್ಥಿಕ ವಸೂಲಾತಿ ಪ್ರಕರಣಗಳು, ಮೋಟಾರು ಅಪಘಾತ ಪರಿಹಾರ ನ್ಯಾಯಾಧೀಕರಣದ ಪ್ರಕರಣಗಳು, ಉದ್ಯೋಗದಲ್ಲಿ ಪುನರ್ ಸ್ಥಾಪಿಸಲ್ಪಡುವ ಪ್ರಕರಣಗಳು ಸೇರಿದಂತೆ ಕಾರ್ಮಿಕ ವಿವಾದಗಳು ಹಾಗೂ ಕೈಗಾರಿಕಾ ಕಾರ್ಮಿಕರ ವೇತನಕ್ಕೆ ಸಂಬಂಧಿಸಿದ ಕ್ಲೇಮುಗಳು, ವಿದ್ಯುತ್ ಹಾಗೂ ನೀರಿನ ಶುಲ್ಕಗಳು (non compoundable ಹೊರತುಪಡಿಸಿ), ವೈವಾಹಿಕ/ಕುಟುಂಬ ನ್ಯಾಯಾಲಯ ಪ್ರಕರಣಗಳು, ಭೂಸ್ವಾಧೀನ ಪ್ರಕರಣಗಳು, ವೇತನ ಮತ್ತು ಭತ್ಯೆಗಳಿಗೆ ಸಂಬಂಧಿಸಿದ ಸೇವಾ ಪ್ರಕರಣಗಳು ಹಾಗೂ ಪಿಂಚಣಿ ಪ್ರಕರಣಗಳು, ಕಂದಾಯ ಪ್ರಕರಣಗಳು (ಜಿಲ್ಲಾ ಹಾಗೂ ಉಚ್ಛ ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳು ಮಾತ್ರ), ಸಿವಿಲ್ ಪ್ರಕರಣ(ಬಾಡಿಗೆ, ಅನುಭೋಗದ ಹಕ್ಕುಗಳು ನಿರ್ಬಂಧಾಜ್ಞೆ ಮೊಕದ್ದಮೆ)ಗಳನ್ನು ಲೋಕ ಅದಾಲತ್‍ನಲ್ಲಿ ಪರಿಹರಿಸಿಕೊಳ್ಳಬಹುದು ಎಂದು ಅವರು ಮಾಹಿತಿ ನೀಡಿದರು. ಹೆಚ್ಚಿನ ಮಾಹಿತಿಗಾಗಿ ನ್ಯಾಯ ಸಂಯೋಗ, ಕಾನೂನು ನೆರವು ಘಟಕ ‘ನ್ಯಾಯ ದೇಗುಲ’ ಮೊದಲನೆ ಮಹಡಿ, ಹೆಚ್.ಸಿದ್ಧಯ್ಯ ರಸ್ತೆ, ಬೆಂಗಳೂರು-560027, ದೂರವಾಣಿ ಸಂಖ್ಯೆ:080-22111730 ಹಾಗೂ ವೆಬ್‍ಸೈಟ್ www.kslsa.kar.nic.in ಸಂಪರ್ಕಿಸಬಹುದು. ಅಥವಾ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಅಥವಾ ತಾಲ್ಲೂಕು ಕಾನೂನು ಸೇವಾ ಸಮಿತಿಯ ಶಹಾಪುರ/ ಸುರಪುರ ಸದಸ್ಯ ಕಾರ್ಯದರ್ಶಿಯವರನ್ನು ಸಂಪರ್ಕಿಸಬಹುದು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ದೂ:08473 252325 ಸಂಪರ್ಕಿಸಬಹುದು ಎಂದು ಅವರು ತಿಳಿಸಿದರು. ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಮುಖ್ಯ ನ್ಯಾಯಿಕ ದಂಡಾಧಿಕಾರಿಗಳಾದ ನಾಮದೇವ ಕೆ.ಸಾಲಮಂಟಪಿ, ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಪ್ರಕಾಶ ಅರ್ಜುನ ಬನಸೊಡೆ ಅವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ