ಗುರುವಾರ, ಜನವರಿ 30, 2020

ಜ.೩೦ರಿಂದ ಫೆ.೧೩ರವರೆಗೆ ಸ್ಪರ್ಶ್ ಕುಷ್ಠ ಅರಿವು ಆಂದೋಲನ
ಜಿಲ್ಲೆಯನ್ನು ಕುಷ್ಠರೋಗದಿಂದ ಮುಕ್ತಗೊಳಿಸಲು ಪಣ
-ಜಿಲ್ಲಾಧಿಕಾರಿ ಎಂ.ಕೂರ್ಮಾ ರಾವ್
ಯಾದಗಿರಿ, ಜನವರಿ ೩೦ (ಕರ್ನಾಟಕ ವಾರ್ತೆ): ಜಿಲ್ಲೆಯಾದ್ಯಂತ ಜನವರಿ ೩೦ರಿಂದ ಫೆಬ್ರುವರಿ ೧೩ರವರೆಗೆ ಸ್ಪರ್ಶ್ ಕುಷ್ಠ ಅರಿವು ಆಂದೋಲನ ಹಮ್ಮಿಕೊಳ್ಳಲಾಗಿದ್ದು, ಮಹಾತ್ಮ ಗಾಂಧೀಜಿಯವರ ಸ್ಮರಣೆಯಲ್ಲಿ ನಮ್ಮ ಜಿಲ್ಲೆಯನ್ನು ಕುಷ್ಠರೋಗದಿಂದ ಮುಕ್ತಗೊಳಿಸಲು ಪಣ ತೊಟ್ಟು ಕಾರ್ಯಪ್ರವೃತ್ತರಾಗಿದ್ದೇವೆ ಎಂದು ಜಿಲ್ಲಾಧಿಕಾರಿಗಳಾದ ಎಂ.ಕೂರ್ಮಾ ರಾವ್ ಅವರು ಹೇಳಿದರು. ಜಿಲ್ಲಾಡಳಿತ ಭವನದ ಆಡಿಟೋರಿಯಂನಲ್ಲಿ ಗುರುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ (ಕುಷ್ಠ ವಿಭಾಗ) ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿರುವ ಸ್ಪರ್ಶ್ ಕುಷ್ಠ ಅರಿವು ಆಂದೋಲನಕ್ಕೆ ಚಾಲನೆ ನೀಡಿದ ನಂತರ ಪ್ರತಿಜ್ಞಾವಿಧಿ ಬೋಧಿಸಿ, ಅವರು ಮಾತನಾಡಿದರು. ಕುಷ್ಠರೋಗಿಗಳಿಗೆ ಸಮಾಜದಲ್ಲಿ ಯಾವುದೇ ರೀತಿಯಾದ ತಾರತಮ್ಯಗಳಾಗದಂತೆ ಎಚ್ಚರವಹಿಸಬೇಕು. ಇತರರಿಂದಲೂ ಶೋಷಣೆಗಳಾಗದಂತೆ ನೋಡಿಕೊಳ್ಳುವುದು ನಮ್ಮ ಕರ್ತವ್ಯ. ಜಿಲ್ಲೆಯಲ್ಲಿರುವ ಎಲ್ಲಾ ಸಂಪನ್ಮೂಲಗಳನ್ನು ಬಳಸಿಕೊಂಡು “ಕುಷ್ಠರೋಗ ಮುಕ್ತ ಜಿಲ್ಲೆ” ಎಂಬ ಹೆಗ್ಗಳಿಕೆ ತರಲು ನಾವೆಲ್ಲರೂ ಬದ್ಧರಾಗಬೇಕು. ಸಾಮಾಜಿಕ ಕಳಂಕ-ಪಿಡುಗುಗಳನ್ನು ಒಗ್ಗಟ್ಟಿನಿಂದ ಹೋಗಲಾಡಿಸಿ, ದೌರ್ಜನ್ಯಕ್ಕೊಳಗಾದ ಕುಷ್ಠರೋಗಿಗಳನ್ನು ಮುಖ್ಯವಾಹಿನಿಗೆ ತರಬೇಕಿದೆ. ಕುಷ್ಠರೋಗವನ್ನು ಸುಲಭವಾಗಿ ಪತ್ತೆ ಹಚ್ಚಿ, ಸಂಪೂರ್ಣವಾಗಿ ಗುಣಪಡಿಸಬಹುದು. ಈ ನಿಟ್ಟಿನಲ್ಲಿ ಸರಿಯಾದ ಸಮಯಕ್ಕೆ ಚಿಕಿತ್ಸೆಗೊಳಪಡಿಸಿ ಬಾಪೂಜಿಯವರ ನಂಬಿಕೆ ಮತ್ತು ಸದುದ್ದೇಶಗಳನ್ನು ಸಾಕಾರಗೊಳಿಸಲು ಪ್ರತಿಯೊಬ್ಬರೂ ಪಣ ತೊಡಬೇಕು ಎಂದು ಅವರು ಕರೆ ನೀಡಿದರು.

ಕುಷ್ಠರೋಗವು ದೇವರ ಶಾಪ ಅಥವಾ ಯಾವುದೋ ಪಾಪದ ಕರ್ಮದ ಫಲವಲ್ಲ. ಈ ಕಾಯಿಲೆಯು “ಮೈಕೊಬ್ಯಾಕ್ಟೀರಿಯಂ ಲೆಪ್ರೆ” ಎಂಬ ರೋಗಾಣುವಿನಿಂದ ಬರುತ್ತದೆ. ಚರ್ಮದ ಮೇಲಿನ ತಿಳಿ, ಬಿಳಿ, ತಾಮ್ರ ಬಣ್ಣದ ಮಚ್ಚೆಗಳಿದ್ದರೆ ಗುಪ್ತವಾಗಿರಿಸದೆ ವೈದ್ಯರಿಗೆ ತೋರಿಸಬೇಕು. ಈ ಮಚ್ಚೆಗಳ ಮೇಲೆ ಸ್ಪರ್ಶ ಜ್ಞಾನ ಇರುವುದಿಲ್ಲ. ರೋಗದ ಔಷಧಿ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ದೊರೆಯುತ್ತದೆ ಎಂದು ಹೇಳಿದರು. ಇತ್ತೀಚಿನ ದಿನಗಳಲ್ಲಿ ಸಾರ್ವಜನಿಕರಲ್ಲಿ ಜಾಗೃತಿ ಮನೋಭಾವದಿಂದ ಕುಷ್ಠರೋಗಿಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಆಶಾ ಕಾರ್ಯಕರ್ತೆಯರು, ಎಎನ್‌ಎಮ್ ಮತ್ತು ಆರೋಗ್ಯ ಸಿಬ್ಬಂದಿಗಳು ಮನೆ-ಮನೆಗೆ ಭೇಟಿ ನೀಡಿ ಜಿಲ್ಲೆಯಲ್ಲಿ ೧೭ ಪ್ರಕರಣಗಳನ್ನು ಪತ್ತೆ ಹಚ್ಚಿದ್ದಾರೆ. ಈ ೧೭ ಜನರಿಗೆ ಸೂಕ್ತ ರೀತಿಯ ಚಿಕಿತ್ಸೆ ನೀಡಿ, ಗುಣಪಡಿಸಲು ವೈದ್ಯರಿಗೆ ಸೂಚಿಸಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಿಲ್ಪಾ ಶರ್ಮಾ ಅವರು ಮಾತನಾಡಿ, ಕುಷ್ಠರೋಗದ ಬಗ್ಗೆ ಸಾರ್ವಜನಿಕರು ಭಯ ಪಡುವ ಅಗತ್ಯವಿಲ್ಲ. ಪ್ರತಿಶತ ಗುಣಪಡಿಸಬಹುದಾದ ರೋಗವಾಗಿದ್ದು, ರೋಗಿಗಳೊಂದಿಗೆ ಯಾರೂ ತಾರತಮ್ಯ ಮಾಡಬಾರದು. ವೈದ್ಯರ ಸಲಹೆ ಮೇರೆಗೆ ಸೂಕ್ತ ಚಿಕಿತ್ಸೆ ಕೊಡಿಸಬೇಕು ಎಂದು ಸಲಹೆ ನೀಡಿದರು. ಜಿಲ್ಲಾ ಪಂಚಾಯಿತಿ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷರಾದ ಶಿವಲಿಂಗಪ್ಪ ಪುಟಗಿ ಅವರು ಮಾತನಾಡಿ, ಕುಷ್ಠರೋಗ ನಿವಾರಣೆಗೆ ಸರ್ಕಾರದಿಂದ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಆರೋಗ್ಯ ಇಲಾಖೆಯಿಂದ ಮನೆಮನೆಗೆ ಭೇಟಿ ನೀಡಿ ಕೂಡ ಪತ್ತೆ ಹಚ್ಚಲಾಗುತ್ತಿದೆ. ಕುಷ್ಠರೋಗ ಮುಕ್ತ ಜಿಲ್ಲೆಯನ್ನಾಗಿಸಲು ಸಾರ್ವಜನಿಕರ ಸಹಭಾಗಿತ್ವ ಮುಖ್ಯವಾಗಿದೆ ಎಂದು ಹೇಳಿದರು.
ಜಿಲ್ಲಾ ಕುಷ್ಠರೋಗ ನಿರ್ಮೂಲನಾ ಅಧಿಕಾರಿ ಡಾ.ಭಗವಂತ ಅನವಾರ ಅವರು ಮಾತನಾಡಿ, ಕುಷ್ಠರೋಗವು ವಂಶಪಾರAಪರಿಕವಾಗಿ ಹರಡುವುದಿಲ್ಲ. ಬಡವ-ಶ್ರೀಮಂತ ಎಂಬ ಭೇದವಿಲ್ಲ. ಇಂಜಿನಿಯರ್‌ಗೂ ಈ ರೋಗ ಬಂದ ಉದಾಹರಣೆ ಇದೆ. ಚಿಕಿತ್ಸೆ ಹೊಂದದ ಕುಷ್ಠರೋಗಿ ಸೀನಿದಾಗ ಅಥವಾ ಕೆಮ್ಮಿದಾಗ ಹೊರಬರುವ ಬ್ಯಾಕ್ಟೀರಿಯಾದಿಂದ ಕುಟುಂಬದಲ್ಲಿ ಅಥವಾ ಯಾರಿಗೆ ಬೇಕಾದರೂ ಈ ರೋಗ ಹರಡಬಹುದು. ಕುಷ್ಠರೋಗ ಕಾಣಿಸಿಕೊಳ್ಳಲು ೩ ವರ್ಷದಿಂದ ೨೫ ವರ್ಷ ಬೇಕು ಎಂದು ತಿಳಿಸಿದರು.

ಕಾಯಿಲೆ ಹೊಂದಿದವರನ್ನು ಪ್ರಾರಂಭಿಕ ಹಂತದಲ್ಲಿಯೇ ಪತ್ತೆ ಹಚ್ಚಿ ಚಿಕಿತ್ಸೆ ನೀಡಿದರೆ ಶೇ.೧೦೦ರಷ್ಟು ಗುಣಮುಖವಾಗುತ್ತಾರೆ. ಮೈಕೊಬ್ಯಾಕ್ಟೀರಿಯಂ ಲೆಪ್ರೆ ರೋಗಾಣು ಹರಡಿದ ವ್ಯಕ್ತಿಯು ಪ್ರಾರಂಭಿಕ ಹಂತ (ಪಿಬಿ-ಪಾಸಿಬೆಸಿಲ್ಲರಿ ಹಂತ)ದಲ್ಲಿ ಚಿಕಿತ್ಸೆ ಪಡೆಯದಿದ್ದರೆ ೧೮ ತಿಂಗಳ ನಂತರ ಅದು ಕುಷ್ಠರೋಗ (ಎಂಬಿ-ಮಲ್ಟಿಬೆಸಿಲ್ಲರಿ)ವಾಗಿ ಪರಿವರ್ತನೆಗೊಳ್ಳುತ್ತದೆ. ತದನಂತರ ವ್ಯಕ್ತಿಯಲ್ಲಿ ೧೫ ದಿನದಿಂದ ೧ ತಿಂಗಳಲ್ಲಿ ಅಂಗವಿಕಲತೆ ಉಂಟಾಗಬಹುದು ಎಂದು ಅವರು ಮಾಹಿತಿ ನೀಡಿದರು. ಆಂದೋನದಲ್ಲಿ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಕುಷ್ಠರೋಗದ ಜಾಗೃತಿ ಬಗೆಗಿನ ಜಿಲ್ಲಾಡಳಿತದ ಸಂದೇಶ ಓದಲಾಗುವುದು. ಸುಮಾರು ೨೫ ಪ್ರಶ್ನಾವಳಿಗಳ ಜೊತೆಗೆ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಉತ್ತರಗಳನ್ನು ಹೇಳುವ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವರು ಎಂದು ಹೇಳಿದರು. ಖ್ಯಾತ ಹಾಸ್ಯ ಕಲಾವಿದರಾದ ಬಸವರಾಜ ಮಹಾಮನಿ ಅವರು ಹಾಸ್ಯದ ಮೂಲಕ ಕುಷ್ಠರೋಗದ ಕುರಿತು ಜಾಗೃತಿ ಮೂಡಿಸಿದರು. ಮಹಾತ್ಮ ಗಾಂಧೀಜಿಯವರ ಹುತಾತ್ಮ ದಿನಾಚರಣೆ ಅಂಗವಾಗಿ ಮೌನಾಚರಣೆ ಮಾಡಲಾಯಿತು. ಕುಷ್ಠರೋಗದಿಂದ ಗುಣಮುಖ ಹೊಂದಿದ ರಾಯಪ್ಪ ಅವರನ್ನು ಜಿಲ್ಲಾಡಳಿತದಿಂದ ಸನ್ಮಾನಿಸಲಾಯಿತು. ಆಂದೋಲನ ಅಂಗವಾಗಿ ಆಯೋಜಿಸಿದ್ದ ಪ್ರಬಂಧ ಹಾಗೂ ಭಾಷಣ ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ವಿತರಿಸಲಾಯಿತು. ಮಹಾತ್ಮ ಗಾಂಧೀಜಿಯವರು ಕುಷ್ಠ ರೋಗ ವಿರುದ್ಧದ ಕೊಡುಗೆಯ ಬಗ್ಗೆ ಯರಗೋಳದ ಭೀಮಜ್ಯೋತಿ ಕಲಾತಂಡ ಪ್ರದರ್ಶಿಸಿದ ನಾಟಕ ಗಮನ ಸೆಳೆಯಿತು. ಡಿವೈಎಸ್‌ಪಿ ಯು.ಶರಣಪ್ಪ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಂ.ಎಸ್.ಪಾಟೀಲ್, ಜಿಲ್ಲಾ ಶಸ್ತç ಚಿಕಿತ್ಸಕರಾದ ಡಾ.ನಾರಾಯಣಪ್ಪ ಹಾಗೂ ವಿದ್ಯಾರ್ಥಿಗಳು, ಆಶಾ ಕಾರ್ಯಕರ್ತೆರು, ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಪಾಲ್ಗೊಂಡಿದ್ದರು.
ಅನಿತಾ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ಹಿರಿಯ ಆರೋಗ್ಯ ಸಹಾಯಕರಾದ ಮಹಿಪಾಲರೆಡ್ಡಿ ಮಾಲಿಪಾಟೀಲ್ ಸ್ವಾಗತಿಸಿದರು. ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಬಿರಾದಾರ ಶಂಕರ ನಿರೂಪಿಸಿದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

                                                             ವಾ.ವಿ.ಸ.45 ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಶರಣಬಸಪ್ಪ ದರ್ಶನಾಪೂರ ಅವರ ಜಿಲ್ಲಾ ಪ್ರವಾಸ ಯಾದಗ...