ಸೋಮವಾರ, ಜನವರಿ 6, 2020

ಬಿಪಿಎಲ್ ಕುಟುಂಬಗಳಿಗೆ ೫ ಲಕ್ಷ ರೂ.ವರೆಗೆ ಉಚಿತ ಚಿಕಿತ್ಸೆ
ಆಯುಷ್ಮಾನ್ ಕಾರ್ಡ್ ಹೆಚ್ಚಿನ ಸಂಖ್ಯೆಯಲ್ಲಿ ನೋಂದಾಯಿಸಿ
-ಜಿಲ್ಲಾಧಿಕಾರಿ ಎಂ.ಕೂರ್ಮಾ ರಾವ್
ಯಾದಗಿರಿ, ಜನವರಿ ೦೬ (ಕರ್ನಾಟಕ ವಾರ್ತೆ): ಆಯುಷ್ಮಾನ್ ಭಾರತ- ಆರೋಗ್ಯ ಕರ್ನಾಟಕ (ಎಬಿಎಆರ್‌ಕೆ) ಯೋಜನೆಯಡಿಯಲ್ಲಿ ಬಿಪಿಎಲ್ ಪಡಿತರ ಚೀಟಿ ಹೊಂದಿರುವ ಕುಟುಂಬದವರು ವರ್ಷದಲ್ಲಿ ೫ ಲಕ್ಷ ರೂ.ವರೆಗೆ ಉಚಿತವಾಗಿ ಚಿಕಿತ್ಸೆ ಪಡೆಯಬಹುದು. ಜಿಲ್ಲೆಯ ಪ್ರತಿಯೊಬ್ಬರೂ ಆಯುಷ್ಮಾನ್ ಕಾರ್ಡ್ ಮಾಡಿಸಿ, ಯೋಜನೆಯ ಲಾಭ ಪಡೆಯುವಂತಾಗಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳಾದ ಎಂ.ಕೂರ್ಮಾ ರಾವ್ ಅವರು ಸೂಚಿಸಿದರು.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಆಯುಷ್ಮಾನ್ ಭಾರತ- ಆರೋಗ್ಯ ಕರ್ನಾಟಕ ಯೋಜನೆ ಅನುಷ್ಠಾನ ಕುರಿತಂತೆ ಹಮ್ಮಿಕೊಂಡಿದ್ದ ಸಭೆಯ ಅಧ್ಯಕ್ಷತೆ ವಹಿಸಿ, ಅವರು ಮಾತನಾಡಿದರು.
ಎಪಿಎಲ್ ಪಡಿತರ ಚೀಟಿ ಹೊಂದಿರುವ ಕುಟುಂಬಗಳು ವರ್ಷದಲ್ಲಿ ೧.೫೦ ಲಕ್ಷ ರೂ.ವರೆಗೂ ಸಹಪಾವತಿ (ಶೆ.೭೦ರಷ್ಟು ಫಲಾನುಭವಿ ಭರಿಸತಕ್ಕದ್ದು, ಶೆ.೩೦ರಷ್ಟು ಸರ್ಕಾರ ಭರಿಸುತ್ತದೆ)ಯೊಂದಿಗೆ ಚಿಕಿತ್ಸೆಯನ್ನು ಪಡೆಯಬಹುದಾಗಿದೆ. ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕವು ರಾಜ್ಯದ ಎಲ್ಲಾ ನಿವಾಸಿಗಳಿಗೆ ಆರೋಗ್ಯ ಸೇವೆ ಒದಗಿಸುವ ಮಹತ್ವದ ಯೋಜನೆಯಾಗಿದೆ. ಯಾವುದೇ ಪಡಿತರ ಚೀಟಿ ಇಲ್ಲದಿರುವ ಕುಟುಂಬಗಳನ್ನು ಎಪಿಎಲ್ ಕುಟುಂಬಗಳೆAದು ಪರಿಗಣಿಸಲಾಗುವುದು. ಕಾರ್ಡ್ ಪಡೆಯುವಾಗ ಸ್ವಯಂ ಘೋಷಣಾ ಪತ್ರದೊಂದಿಗೆ ಆಧಾರ್ ಮತ್ತು ಪಡಿತರ ಚೀಟಿ ನಕಲು ಪ್ರತಿ ಹಾಜರುಪಡಿಸಬೇಕು ಎಂದು ಅವರು ಹೇಳಿದರು.
ಬಾಪೂಜಿ ಸೇವಾ ಕೇಂದ್ರಗಳಲ್ಲಿ ವಿತರಣೆ: ಎಬಿಎಆರ್‌ಕೆ ಕಾರ್ಡ್ ಅನ್ನು ಗ್ರಾಮ ಪಂಚಾಯಿತಿಯ ಬಾಪೂಜಿ ಸೇವಾ ಕೇಂದ್ರಗಳಲ್ಲಿ ನೋಂದಾಯಿಸಲು ಈಗಾಗಲೇ ಶಹಾಪುರ ಮತ್ತು ಸುರಪುರ ತಾಲ್ಲೂಕಿನ ಪಿಡಿಒ ಮತ್ತು ಡಾಟಾ ಎಂಟ್ರಿ ಆಪರೇಟರ್‌ಗಳಿಗೆ ಈಗಾಗಲೇ ತರಬೇತಿ ನೀಡಲಾಗಿದೆ. ಯಾದಗಿರಿ ಹಾಗೂ ಗುರುಮಠಕಲ್ ತಾಲ್ಲೂಕಿನ ಎಲ್ಲಾ ಗ್ರಾಮ ಪಂಚಾಯಿತಿ ಡಾಟಾ ಎಂಟ್ರಿ ಆಪರೇಟರ್‌ಗಳಿಗೆ ಜನವರಿ ೮ರಂದು ಬೆಳಿಗ್ಗೆ ೧೧ ಗಂಟೆಗೆ ಯಾದಗಿರಿ ನಗರದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ತರಬೇತಿ ಆಯೋಜಿಸಬೇಕು. ಅಲ್ಲದೇ, ಅಂದು ಸಂಜೆ ಜಿಲ್ಲೆಯ ಎಲ್ಲಾ ಗ್ರಾಮಗಳಲ್ಲಿ ಡಂಗೂರ ಸಾರಬೇಕು. ಜ.೯ರಿಂದ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ನೋಂದಣಿ ಆರಂಭಿಸಿ, ಪ್ರತಿದಿನ ಕನಿಷ್ಠ ೨೦೦ ಕಾರ್ಡ್ಗಳನ್ನು ನೋಂದಣಿ ಮಾಡುವಂತೆ ಅವರು ನಿರ್ದೇಶಿಸಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಿಲ್ಪಾ ಶರ್ಮಾ ಅವರು ಮಾತನಾಡಿ, ಯಾದಗಿರಿ ಜಿಲ್ಲಾ ಆಸ್ಪತ್ರೆ, ಶಹಾಪೂರ ಮತ್ತು ಸುರಪೂರ ತಾಲ್ಲೂಕು ಆಸ್ಪತ್ರೆಗಳು, ವಡಿಗೇರಾ, ಸೈದಾಪೂರ, ಗುರುಮಠಕಲ್, ಅರಕೇರಾ ಬಿ., ಹುಣಸಗಿ, ದೋರನಹಳ್ಳಿ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಹಾಗೂ ಯಾದಗಿರಿ, ಶಹಾಪೂರ, ಸುರಪೂರ ನಗರ ಆರೋಗ್ಯ ಕೇಂದ್ರಗಳಲ್ಲಿ ೧೦ ರೂ. ಶುಲ್ಕ ಪಡೆದು ನೀಡಲಾಗುವುದು. ಅಲ್ಲದೆ, ಸೇವಾಸಿಂಧು ಕೇಂದ್ರಗಳಲ್ಲಿ ಕಾಗದದ ಕಾರ್ಡ್ಗೆ ೧೦ ರೂ. ಹಾಗೂ ಪ್ಲಾಸ್ಟಿಕ್ ಕಾರ್ಡ್ಗೆ ೩೫ ರೂ. ನೀಡಿ ಪಡೆದುಕೊಳ್ಳಬಹುದು. ಯಾದಗಿರಿ ತಹಸೀಲ್ ಕಚೇರಿ ಆವರಣದಲ್ಲಿರುವ ಕರ್ನಾಟಕ ಒನ್ ಕೇಂದ್ರದಲ್ಲಿ ಕೂಡ ಪಡೆಯಬಹುದು ಎಂದು ಮಾಹಿತಿ ನೀಡಿದರು.
ಆಯುಷ್ಮಾನ್ ಭಾರತ- ಆರೋಗ್ಯ ಕರ್ನಾಟಕ ಜಿಲ್ಲಾ ನೋಡಲ್ ಅಧಿಕಾರಿ ಡಾ.ಭಗವಂತ ಅನವಾರ ಅವರು ಮಾತನಾಡಿ, ಈ ಯೋಜನೆಯಲ್ಲಿ ೧೬೫೦ ಚಿಕಿತ್ಸಾ ವಿಧಾನಗಳಿಗೆ ಚಿಕಿತ್ಸೆ ಲಭ್ಯ ಇವೆ. ಸಾಮಾನ್ಯ ದ್ವಿತೀಯ ಹಂತದ ೨೯೪ ಚಿಕಿತ್ಸೆಗಳನ್ನು ಸರ್ಕಾರಿ ಆಸ್ಪತ್ರೆಗಳಲ್ಲಿ ಮಾತ್ರ ನೀಡಲಾಗುತ್ತದೆ. ಕ್ಲಿಷ್ಟಕರ ದ್ವಿತೀಯ ಹಂತದ ೨೫೧ ಮತ್ತು ತೃತೀಯ ಹಂತದ ೯೩೫ ಚಿಕಿತ್ಸಾ ವಿಧಾನಗಳು ಹಾಗೂ ೧೭೦ ತುರ್ತು ಚಿಕಿತ್ಸೆಗಳನ್ನು ನೋಂದಾಯಿತ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಪಡೆಯಬಹುದು. ೧೭೦ ತುರ್ತು ಚಿಕಿತ್ಸೆಗಳಿಗೆ ಯಾವುದೇ ರೆಫರಲ್ ಇಲ್ಲ. ನೇರವಾಗಿ ನೋಂದಾಯಿತ ಆಸ್ಪತ್ರೆಗಳಿಗೆ ಹೋಗಿ ಚಿಕಿತ್ಸೆ ಪಡೆಯಬಹುದು ಎಂದು ಹೇಳಿದರು.
ಎಬಿಎಆರ್‌ಕೆ ಯೋಜನೆಯ ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಸರ್ಕಾರಿ ಆಸ್ಪತ್ರೆ, ಆಸ್ಪತ್ರೆಗಳಲ್ಲಿನ ಆರೋಗ್ಯ ಮಿತ್ರರು, ಉಚಿತ ಸಹಾಯವಾಣಿ ಸಂಖ್ಯೆ ೧೦೪, ೧೮೦೦೪೨೫೮೩೩೦, ೧೮೦೦೪೨೫೨೬೪೬ ಸಂಖ್ಯೆಗಳನ್ನು ಸಂಪರ್ಕಿಸಬಹುದು. ವೆಬ್‌ಸೈಟ್: www.sast.gov.in, www.arogy.karnataka.gov.inವೀಕ್ಷಿಸಬಹುದು ಎಂದು ಅವರು ತಿಳಿಸಿದರು.
ಅಪರ ಜಿಲ್ಲಾಧಿಕಾರಿಗಳಾದ ಪ್ರಕಾಶ್ ಜಿ.ರಜಪೂತ, ಸಹಾಯಕ ಆಯುಕ್ತರಾದ ಶಂಕರಗೌಡ ಎಸ್.ಸೋಮನಾಳ, ತಹಶೀಲ್ದಾರರಾದ ಚನ್ನಮಲ್ಲಪ್ಪ ಘಂಟಿ, ಸಂಗಮೇಶ ಜಿಡಗೆ ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಗ್ರಾಮ ಲೆಕ್ಕಾಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಶರಣಬಸಪ್ಪ ದರ್ಶನಾಪೂರ ಅವರ ಜಿಲ್ಲಾ ಪ್ರವಾಸ

                                                               ವಾ.ವಿ.ಸಂ.150 ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಶರಣಬಸಪ್ಪ ದರ್ಶನಾಪೂರ ಅವರ ಜಿಲ್ಲಾ ಪ್ರವಾಸ ...