ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಸಚಿವ ಪ್ರಭು ಬಿ.ಚವ್ಹಾಣ್ ಸೂಚನೆ
ಬಜೆಟ್‌ನಲ್ಲಿ ಸೇರ್ಪಡೆಗೆ ಜ.೧೦ರೊಳಗೆ ಅಗತ್ಯ ಪ್ರಸ್ತಾವನೆ ಸಲ್ಲಿಸಿ
ಯಾದಗಿರಿ, ಜನವರಿ ೦೩ (ಕರ್ನಾಟಕ ವಾರ್ತೆ): ೨೦೨೦-೨೧ನೇ ಸಾಲಿನ ಬಜೆಟ್‌ನಲ್ಲಿ ಸೇರಿಸಲು ಜಿಲ್ಲೆಯ ಅಭಿವೃದ್ಧಿಗೆ ಅಗತ್ಯವಿರುವ ಕಾಮಗಾರಿಗಳ ಅನುದಾನದ ಬೇಡಿಕೆಗಾಗಿ ಜನವರಿ ೧೦ರೊಳಗೆ ಪ್ರಸ್ತಾವನೆ ಸಲ್ಲಿಸುವಂತೆ ಪಶುಸಂಗೋಪನೆ, ಅಲ್ಪ ಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಸಚಿವರು ಹಾಗೂ ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಭು ಬಿ.ಚವ್ಹಾಣ್ ಅವರು ಸೂಚಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ನಡೆಸಿದ ಸಭೆಯಲ್ಲಿ ಮಾತನಾಡಿದ ಅವರು, ಅನುದಾನಕ್ಕಾಗಿ ಈಗಾಗಲೇ ಸರ್ಕಾರದ ಹಂತದಲ್ಲಿರುವ ಪ್ರಸ್ತಾವನೆ ಮತ್ತು ಬಜೆಟ್‌ನಲ್ಲಿ ಸೇರಿಸಲು ಹೊಸ ಪ್ರಸ್ತಾವನೆಗಳನ್ನು ಸಲ್ಲಿಸಬೇಕು. ಜಿಲ್ಲಾ ಮಟ್ಟದ ಅಧಿಕಾರಿಗಳು ಜಿಲ್ಲೆಗೆ ಅತ್ಯವಶ್ಯವಾದ ಅನುದಾನದ ಪ್ರಸ್ತಾವನೆಗಳನ್ನು ಆದ್ಯತೆಯ ಮೇರೆಗೆ ಸಲ್ಲಿಸಬೇಕು. ಹೊಸ ಪ್ರಸ್ತಾವನೆಗಳಿಗೆ ತಕ್ಕಂತೆ ಅಂದಾಜು ಪತ್ರಿಕೆ ಇರಲಿ. ಅಂದಾಜು ಪತ್ರಿಕೆ ಸರಿಯಾಗಿದ್ದಷ್ಟು ಬಜೆಟ್‌ನಲ್ಲಿ ಪರಿಗಣಿಸಲು ನೆರವಾಗುತ್ತದೆ ಎಂದು ಸಲಹೆ ನೀಡಿದರು.
ಜಿಲ್ಲೆಗೆ ಹೆಚ್ಚಿನ ಅನುದಾನ ತರಲು ಮುಖ್ಯಮಂತ್ರಿಗಳನ್ನು ಒತ್ತಾಯಿಸುವ ಬಗ್ಗೆ ತಿಳಿಸಿದ ಸಚಿವರು, ಜಿಲ್ಲಾ ಮಟ್ಟದ ಅಧಿಕಾರಿಗಳು ಕಡ್ಡಾಯವಾಗಿ ಕೇಂದ್ರ ಸ್ಥಾನದಲ್ಲಿದ್ದು, ಕಾರ್ಯನಿರ್ವಹಿಸಬೇಕು. ತಾಲ್ಲೂಕು ಕಚೇರಿಗಳಿಗೆ ಭೇಟಿ ನೀಡಿ, ಪ್ರಗತಿ ಕಾಮಗಾರಿಗಳನ್ನು ಪರಿಶೀಲಿಸಬೇಕು. ಯಾದಗಿರಿ ನಗರದಲ್ಲಿ ಸ್ವಚ್ಛತೆ ಕಾಪಾಡಲು ಕ್ರಮ ಕೈಗೊಳ್ಳಬೇಕು ಮತ್ತು ಒಳಚರಂಡಿ ಕಾಮಗಾರಿ ಸಮಸ್ಯೆಯನ್ನು ಪರಿಹರಿಸಬೇಕು. ಕಾರ್ಯ ನಿರ್ವಹಣೆಯಲ್ಲಿ ನಿರ್ಲಕ್ಷö್ಯ ವಹಿಸುವ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.
ಶಾಸಕರಾದ ವೆಂಕಟರೆಡ್ಡಿಗೌಡ ಮುದ್ನಾಳ ಯಾದಗಿರಿ ನಗರದಲ್ಲಿ ಕುಡಿಯುವ ನೀರು ಸರಬರಾಜಿಗಾಗಿ ಜಾಕ್‌ವೆಲ್ ಸಮಸ್ಯೆ ಮತ್ತು ಒಳಚರಂಡಿ ಸಮಸ್ಯೆ ಇರುವ ಬಗ್ಗೆ ಸಚಿವರ ಗಮನ ಸೆಳೆದರು.
ಈ ಸಂದರ್ಭದಲ್ಲಿ ನಗರಸಭೆ ಪೌರಾಯುಕ್ತರಾದ ರಮೇಶ ಸುಣಗಾರ ಅವರು ಮಾತನಾಡಿ, ಯಾದಗಿರಿ ನಗರದ ಹೊಸ ಜಾಕ್‌ವೆಲ್ ಸ್ಥಳಾಂತರ ಮಾಡುವ ಕಾಮಗಾರಿಗೆ ೧೩ ಕೋಟಿ ರೂ. ಅನುದಾನ ಕೊರತೆಯಿದ್ದು, ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ನೂತನ ನಗರಸಭೆ ಕಾರ್ಯಾಲಯದ ಕಟ್ಟಡ ನಿರ್ಮಾಣಕ್ಕೆ ೭ ಕೋಟಿ ರೂ., ಒಳಚರಂಡಿ ಕಾಮಗಾರಿ ೮೭ ಕೋಟಿ ರೂ.ಗಳಿಗಾಗಿ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಮಾಹಿತಿ ನೀಡಿದರು.
ಜಿಲ್ಲಾಧಿಕಾರಿಗಳಾದ ಎಂ.ಕೂರ್ಮಾ ರಾವ್ ಅವರು ಮಾತನಾಡಿ, ೩೦೦ ಹಾಸಿಗೆಗಳ ಸುಸಜ್ಜಿತ ನೂತನ ಜಿಲ್ಲಾಸ್ಪತ್ರೆ ಕಟ್ಟಡ ಸಿದ್ಧವಾಗಿದೆ. ಜಿಲ್ಲಾಸ್ಪತ್ರೆಗೆ ಮಾನವ ಸಂಪನ್ಮೂಲ ವಾರ್ಷಿಕ ವೆಚ್ಚ ೪೯.೭೫ ಕೋಟಿ ರೂ. ಆಗಲಿದ್ದು, ಸರ್ಕಾರಕ್ಕೆ ಕಳೆದ ಸೆಪ್ಟೆಂಬರ್‌ನಲ್ಲಿ ಪ್ರಸ್ತಾವನೆ ಸಲ್ಲಿಸಲಾಗಿದೆ. ಯಂತ್ರೋಪಕರಣ ಮತ್ತು ಪೀಠೋಪಕರಣಗಳಿಗೆ ೩೦ ಕೋಟಿ ರೂ. ಅಗತ್ಯವಿದ್ದು, ಆಯುಕ್ತಾಲಯಕ್ಕೆ ಪ್ರಸ್ತಾವನೆ ಸಲ್ಲಿಸಿದೆ ಎಂದು ತಿಳಿಸಿದರು.
ಯಾದಗಿರಿ ನಗರದ ದೊಡ್ಡ ಕೆರೆ ಅಭಿವೃದ್ಧಿಗಾಗಿ ಯಾದಗಿರಿ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ೩ ಕೋಟಿ ರೂ. ಇದೆ. ಈ ಹಣ ಸಾಕಾಗುವುದಿಲ್ಲ. ಒಟ್ಟು ೧೫ ಕೋಟಿ ರೂ.ಗಳ ಅಗತ್ಯವಿದ್ದು, ಡಿಪಿಆರ್ ತಯಾರಿಸುವ ಕೆಲಸ ಪ್ರಗತಿಯಲ್ಲಿದೆ. ಕಾಮಗಾರಿ ಕುರಿತು ಇನ್ನೂ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿರುವುದಿಲ್ಲ. ಕಾಮಗಾರಿ ಪೂರ್ಣಗೊಂಡರೆ ನಗರದಲ್ಲಿ ಅಂತರ್ಜಲ ಮಟ್ಟ ಹೆಚ್ಚಳವಾಗಿ ಸುತ್ತಲಿನ ಜಲಸಂಪನ್ಮೂಲಗಳು ಮರುಜೀವ ಪಡೆದುಕೊಳ್ಳುತ್ತವೆ ಎಂದು ಸಚಿವರ ಗಮನಕ್ಕೆ ತಂದರು.
ಕಡೇಚೂರು ಕೈಗಾರಿಕಾ ಪ್ರದೇಶದಲ್ಲಿ ಫಾರ್ಮಾಸಿಟಿಕಲ್ ನಿರ್ಮಾಣ ಮಾಡುವ ಯೋಜನೆಗಾಗಿ ೧೦೦ ಕೋಟಿ ರೂ.ಗಳ ಪ್ರಸ್ತಾವನೆಯು ರಾಜ್ಯ ಸರ್ಕಾರದಿಂದ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿರುವ ಬಗ್ಗೆ ಮತ್ತು ಬಂದಳ್ಳಿಯ ಪರಿಶಿಷ್ಟ ವರ್ಗದ ಏಕಲವ್ಯ ಮಾದರಿ ವಸತಿ ಶಾಲೆಯನ್ನು ೨೦೨೦-೨೧ನೇ ಸಾಲಿನ ಶೈಕ್ಷಣಿಕ ವರ್ಷದಿಂದ ಪ್ರಾರಂಭಿಸಲು ಆವರ್ತಕ ವೆಚ್ಚ ೨ ಕೋಟಿ ರೂ. ಮತ್ತು ಅನಾವರ್ತಕ ವೆಚ್ಚ ೧.೫೦ ಕೋಟಿ ರೂ.ಗಳ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಹೇಳಿದರು.
ವೈದ್ಯಕೀಯ ಮಹಾವಿದ್ಯಾಲಯದ ವಿಶೇಷ ಅಧಿಕಾರಿ ಡಾ.ಶಂಕರಗೌಡ ಐರೆಡ್ಡಿ ಅವರು ಮಾತನಾಡಿ, ವೈದ್ಯಕೀಯ ಮಹಾವಿದ್ಯಾಲಯಕ್ಕೆ ೨೫ ಎಕರೆ ಸ್ಥಳ ಲಭ್ಯವಿದೆ. ಕಾಲೇಜು ಕಟ್ಟಡ, ವಸತಿಗೃಹಗಳು ಹಾಗೂ ವಿದ್ಯಾರ್ಥಿಗಳ ವಸತಿ ನಿಲಯಕ್ಕಾಗಿ ೩೨೫ ಕೋಟಿ ರೂ. ಮಂಜೂರಾಗಿದೆ. ಇದರಲ್ಲಿ ಕೇಂದ್ರದ ಪಾಲು ಶೇ.೬೦ರಷ್ಟು ಅಂದರೆ ೧೯೫ ಕೋಟಿ ರೂ. ಮತ್ತು ರಾಜ್ಯದ ಪಾಲು ಶೇ.೪೦ರಷ್ಟು ಅಂದರೆ ೧೩೦ ಕೋಟಿ ರೂ. ಇದೆ. ಕಟ್ಟಡದ ಕಾಮಗಾರಿಯ ಅಂದಾಜು ಪಟ್ಟಿ ತಯಾರಿಸಿ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ. ಅಲ್ಲದೆ, ವೈದ್ಯಕೀಯ ಮಹಾವಿದ್ಯಾಲಯಕ್ಕೆ ಬೇಕಾಗುವ ಮಾನವ ಸಂಪನ್ಮೂಲ ಮಂಜೂರಾತಿಗಾಗಿ ಕೂಡ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದು ವಿವರಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಂ.ಎಸ್.ಪಾಟೀಲ್ ಅವರು ಮಾತನಾಡಿ, ಮಹತ್ವಾಕಾಂಕ್ಷೆ ಯಾದಗಿರಿ ಜಿಲ್ಲೆಯಲ್ಲಿ ನೂತನವಾಗಿ ೧೦ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಸ್ಥಾಪಿಸಲು ಒಂದು ಕಟ್ಟಡ ಕಾಮಗಾರಿಗೆ ೧.೭೫ ಕೋಟಿ ರೂ.ನಂತೆ ಒಟ್ಟು ೧೭.೦೫ ಕೋಟಿ ರೂ. ಬೇಕಿದೆ. ಸ್ಥಳಕ್ಕಾಗಿ ಸಂಬAಧಪಟ್ಟ ತಹಶೀಲ್ದಾರರಿಗೆ ಪತ್ರ ಬರೆಯಲಾಗಿದ್ದು, ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಆವರ್ತಕ ವೆಚ್ಚ ೬.೪೧ ಕೋಟಿ ರೂ. ಹಾಗೂ ಅನಾವರ್ತಕ ವೆಚ್ಚ ೧.೭೫ ಕೋಟಿ ರೂ.ಗಳ ಅಗತ್ಯವಿದೆ. ಪ್ರತಿ ೨೦ ಸಾವಿರ ಜನಸಂಖ್ಯೆಗೊAದು ಪ್ರಾಥಮಿಕ ಆರೋಗ್ಯ ಕೇಂದ್ರ ಇರಬೇಕು. ಸದ್ಯ ಜಿಲ್ಲೆಯಲ್ಲಿ ೪೧ ಕೇಂದ್ರಗಳಿವೆ. ಇನ್ನು ಜಿಲ್ಲಾ ಪಂಚಾಯಿತಿ ವಲಯದ ಲೆಕ್ಕ ಶೀರ್ಷಿಕೆ ಅಡಿಯಲ್ಲಿ ೫.೪೦ ಕೋಟಿ ರೂ. ಹೆಚ್ಚುವರಿ ಅನುದಾನ ಬಿಡುಗಡೆಗೆ ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿರುವ ಬಗ್ಗೆ ತಿಳಿಸಿದರು.
ಪ್ರಾದೇಶಿಕ ಉಪ ಅರಣ್ಯ ಸಂರಕ್ಷಣಾಧಿಕಾರಿ ರವಿಶಂಕರ ಎಸ್.ಎಸ್. ಅವರು ಮಾತನಾಡಿ, ಜಿಲ್ಲೆಯಲ್ಲಿ ಸುರಪುರ ತಾಲ್ಲೂಕಿನ ಬೋನಾಳ ಕೆರೆಯನ್ನು ೨೦೧೯-೨೦ನೇ ಸಾಲಿಗೆ ಇಸ್ಟರ್ನ್ ಪ್ಲೇನ್ಸ್ ವಿಶೇಷ ಅಭಿವೃದ್ಧಿ ಅಡಿ ಅಭಿವೃದ್ಧಿ ಕಾಮಗಾರಿಗಳಿಗೆ ಯಾದಗಿರಿ ಪ್ರಾದೇಶಿಕ ವಿಭಾಗದ ಬೋನಾಳ ಕೆರೆ, ಚಿಂತನಪಲ್ಲಿ ಮೀಸಲು ಅರಣ್ಯ ಪ್ರದೇಶ ಮತ್ತು ಹತ್ತಿಕುಣಿ ಮೀಸಲು ಅರಣ್ಯ ಪ್ರದೇಶಗಳ ಅಭಿವೃದ್ಧಿಗೆ ೧.೮೦ ಕೋಟಿ ರೂ.ಗಳ ಪ್ರಸ್ತಾವನೆ ಸಲ್ಲಿಸಲಾಗಿದೆ. ಬೋನ್ಹಾಳ ಪಕ್ಷಿಧಾಮವನ್ನು ರಾಜ್ಯದ ದೊಡ್ಡ ಪಕ್ಷಿಧಾಮವೆಂದು ಘೋಷಿಸಲಾಗಿದೆ. ಇಲ್ಲಿ ಪಕ್ಷಿಗಳ ಸರ್ವೇ ಮಾಡಬೇಕಿದೆ. ಪ್ರವಾಸೋದ್ಯಮ ತಾಣ ಅಭಿವೃದ್ಧಿಯಾದಲ್ಲಿ ಸ್ಥಳೀಯರಿಗೆ ಉದ್ಯೋಗ ದೊರಕಲಿದೆ ಎಂದು ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಋಷಿಕೇಶ್ ಭಗವಾನ್ ಸೋನವಣೆ, ಅಪರ ಜಿಲ್ಲಾಧಿಕಾರಿಗಳಾದ ಪ್ರಕಾಶ್ ಜಿ.ರಜಪೂತ, ಸಹಾಯಕ ಆಯುಕ್ತರಾದ ಶಂಕರಗೌಡ ಎಸ್.ಸೋಮನಾಳ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿಗಳಾದ ಮುಕ್ಕಣ್ಣ ಕರಿಗಾರ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ