ಗುರುವಾರ, ಜನವರಿ 23, 2020


ವೃತ್ತಿ ಬುನಾದಿ ತರಬೇತಿ ಶಿಬಿರದಲ್ಲಿ ಉಪನ್ಯಾಸ
ಮಕ್ಕಳನ್ನು ದುಡಿಸಿಕೊಳ್ಳುವುದು ಶಿಕ್ಷಾರ್ಹ ಅಪರಾಧ
- ರಘುವೀರ ಸಿಂಗ್ ಠಾಕೂರ್

ಯಾದಗಿರಿ, ಜನವರಿ 23 (ಕರ್ನಾಟಕ ವಾರ್ತೆ): ಬಾಲಕಾರ್ಮಿಕ ಪದ್ಧತಿ (ನಿಷೇಧ ಮತ್ತು ನಿಯಂತ್ರಣ) 1986ರ ಕಾಯ್ದೆಯಡಿಯಲ್ಲಿ 6ರಿಂದ 18 ವರ್ಷದೊಳಗಿನ ಮಕ್ಕಳನ್ನು ಯಾವುದೇ ಅಪಾಯಕಾರಿ ಉದ್ದಿಮೆಗಳಲ್ಲಿ ಮತ್ತು ಇತರೆ ಉದ್ದಿಮೆಗಳಲ್ಲಿ ದುಡಿಸಿಕೊಳ್ಳುವುದು ಶಿಕ್ಷಾರ್ಹ ಅಪರಾಧ ಎಂದು ಜಿಲ್ಲಾ ಬಾಲ ಕಾರ್ಮಿಕ ಇಲಾಖೆಯ ಯೋಜನಾ ನಿರ್ದೇಶಕರಾದ ರಘುವೀರ ಸಿಂಗ್ ಠಾಕೂರ್ ಅವರು ಹೇಳಿದರು. ನಗರದ ತಹಸೀಲ್ ಕಾರ್ಯಾಲಯದಲ್ಲಿ ಬುಧವಾರ ಜಿಲ್ಲಾ ತರಬೇತಿ ಸಂಸ್ಥೆ ವತಿಯಿಂದ 2ನೇ ತಂಡದ ಲಿಪಿಕ ಸಿಬ್ಬಂದಿಗಳಿಗೆ ಹಮ್ಮಿಕೊಂಡಿದ್ದ ವೃತ್ತಿ ಬುನಾದಿ ತರಬೇತಿ ಶಿಬಿರದಲ್ಲಿ “ಬಾಲಕಾರ್ಮಿಕ ಪದ್ಧತಿ” ಕುರಿತು ಅವರು ಮಾತನಾಡಿದರು. ಜಿಲ್ಲೆ ಮತ್ತು ತಾಲ್ಲೂಕಿನಾದ್ಯಂತ 1986ರ ಬಾಲ ಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆಯ ಕಲಂ 17 ರಡಿ ನಿರೀಕ್ಷಕರುಗಳಾಗಿ ನೇಮಕಗೊಂಡಿರುವ ಮತ್ತು 1961ರ ಕರ್ನಾಟಕ ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳ ಕಾಯ್ದೆಯ ಕಲಂ 26 (2)ರಡಿ ಹೆಚ್ಚುವರಿ ನಿರೀಕ್ಷಕರಾಗಿ ನೇಮಕಗೊಂಡಿರುವ ಅಧಿಕಾರಿಗಳೊಂದಿಗೆ ತನಿಖಾ ತಂಡಗಳನ್ನು ರಚಿಸಿಕೊಂಡು ಬಾಲಕಾರ್ಮಿಕರ ಪತ್ತೆಗೆ ದಾಳಿ ನಡೆಸಲಾಗುತ್ತಿದೆ. 6 ರಿಂದ 18 ವರ್ಷದೊಳಗೆ ಬರುವ ಮಕ್ಕಳನ್ನು ಸರಕು ಸಾಗಾಣೆ ವಾಹನಗಳಲ್ಲಿ ಹೊಲಗದ್ದೆ, ಕೂಲಿ, ಕೃಷಿ ಆಧಾರಿತ, ಅಂಗಡಿ, ಹೋಟೆಲ್, ರೆಸ್ಟೋರೆಂಟ್, ಗ್ಯಾರೇಜ್, ಬಾರ್ ಅಂಗಡಿ ಹಾಗೂ ಇನ್ನಿತರ ಉದ್ದಿಮೆಗಳಲ್ಲಿ ಕೆಲಸ ಮಾಡುತ್ತಿರುವ ಅಪಾಯಕಾರಿ, ಅಪಾಯಕಾರಿ ಅಲ್ಲದ ಬಾಲಕಾರ್ಮಿಕ ಮಕ್ಕಳು ಮತ್ತು ಶಾಲೆಬಿಟ್ಟ ಮಕ್ಕಳನ್ನು ರಕ್ಷಿಸಿ ಹತ್ತಿರದ ಸರ್ಕಾರಿ, ಖಾಸಗಿ ಶಾಲೆಗಳಿಗೆ ದಾಖಲಿಸಬೇಕು ಎಂದು ತಿಳಿಸಿದರು.

ಜಿಲ್ಲಾ ಮಕ್ಕಳ ರಕ್ಷಣಾ ಘಟಕವು ಕೇಂದ್ರ ಪುರಸ್ಕøತ ಸಮಗ್ರ ಮಕ್ಕಳ ರಕ್ಷಣಾ ಯೋಜನೆಯಡಿ ಕಾರ್ಯನಿರ್ವಹಿಸುತ್ತಿದೆ. ಮಕ್ಕಳಿಗೆ ಗುಣಮಟ್ಟದ ವ್ಯವಸ್ಥಿತ ಸೇವೆಗಳ ಮೂಲಕ ಜಿಲ್ಲಾ ವ್ಯಾಪ್ತಿಯಲ್ಲಿ ಸುರಕ್ಷಿತ ಜಾಲ ನಿರ್ಮಾಣ ಮಾಡುವುದು ಈ ಯೋಜನೆಯ ಮುಖ್ಯಗುರಿ. ಕೇಂದ್ರ ಸರ್ಕಾರವು ಈ ಯೋಜನೆಯನ್ನು 26ನೇ ಫೆಬ್ರುವರಿ 2009ರಂದು ಭಾರತದಾದ್ಯಂತ ಜಾರಿಗೆ ತಂದಿದೆ. ಇದನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಜಿಲ್ಲಾ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಮಕ್ಕಳಿಗೂ ರಕ್ಷಣಾ ವಾತಾವರಣ ಕಲ್ಪಿಸಲು ಮೂಲಕ ಬಾಲನ್ಯಾಯ (ಮಕ್ಕಳ ಪಾಲನೆ ಮತ್ತು ರಕ್ಷಣೆ) ಕಾಯ್ದೆ 2000ರ ಅಡಿಯಲ್ಲಿ ಮಕ್ಕಳ ಹಕ್ಕುಗಳನ್ನು ಖಾತ್ರಿಪಡಿಸುವುದರ ಮುಖಾಂತರ ಮಕ್ಕಳ ಸರ್ವತೋಮುಖ ಅಭಿವೃದ್ಧಿಯಾಗುವಂತೆ ನೋಡಿಕೊಳ್ಳಬೇಕು ಎಂದು ಅವರು ಮಾಹಿತಿ ನೀಡಿದರು. ತಂಬಾಕು ನಿಯಂತ್ರಣ ಘಟಕದ ಜಿಲ್ಲಾ ಸಲಹೆಗಾರರಾದ ಮಹಾಲಕ್ಷ್ಮೀ ಸಜ್ಜನ್ ಅವರು ಮಾತನಾಡಿ, ಕೋಟ್ಪಾ-2003 ಕಾಯ್ದೆಯಡಿ ಸೆಕ್ಷನ್-4, 5, 6ಎ, 6ಬಿ ಮತ್ತು ಸೆಕ್ಷನ್-7ರ ಪ್ರಕಾರ ಸಂಬಂಧಿಸಿದ ಕಾಯ್ದೆಗಳನುಸಾರ ಹೋಟೆಲ್, ರೆಸ್ಟೊರೆಂಟ್, ಬಾರ್, ಪಾನ್‍ಶಾಪ್, ಧಾಬಾ ಹಾಗೂ ಶಾಲಾ- ಕಾಲೇಜು ಪ್ರದೇಶದ 100 ಮೀಟರ್ ಅಂತರದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕಿಗೆ ಸಂಬಂಧಿಸಿದ ಉತ್ಪನ್ನಗಳನ್ನು ಬಹಿರಂಗವಾಗಿ ಮಕ್ಕಳಿಂದ ಮಾರುವುದಕ್ಕೆ ಪ್ರಚೋದಿಸುವುದು, ದುಡಿಸಿಕೊಳ್ಳುವುದು ಮತ್ತು ಸೇದುವುದು ಕಾನೂನಿನ ಪ್ರಕಾರ ನಿಷೇಧವಿದೆ. ನಿಯಮಗಳನ್ನು ಉಲ್ಲಂಘಿಸಿದಲ್ಲಿ ದಂಡ ವಿಧಿಸುವುದರ ಜೊತೆಗೆ ಶಿಕ್ಷೆಗೆ ಒಳಪಡಬೇಕಾಗುತ್ತದೆ ಎಂದು ತಿಳಿಸಿದರು. ಎಲ್‍ಪಿಒ ಅಧಿಕಾರಿ ರಾಜೇಂದ್ರ ಯಾದವ್, ಸಂಸ್ಥೆಯ ಸಿಬ್ಬಂದಿ ರಾಧಾಮಣಿ ಅವರು ಉಪಸ್ಥಿತರಿದ್ದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಶರಣಬಸಪ್ಪ ದರ್ಶನಾಪೂರ ಅವರ ಜಿಲ್ಲಾ ಪ್ರವಾಸ

                                                               ವಾ.ವಿ.ಸಂ.150 ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಶರಣಬಸಪ್ಪ ದರ್ಶನಾಪೂರ ಅವರ ಜಿಲ್ಲಾ ಪ್ರವಾಸ ...