ಬಾಲಕಿಯರ ಬಾಲಮಂದಿರಕ್ಕೆ ಜಿ.ಪಂ ಸ್ಥಾಯಿ ಸಮಿತಿ ಭೇಟಿ
ಯಾದಗಿರಿ, ಜನವರಿ ೧೦ (ಕರ್ನಾಟಕ ವಾರ್ತೆ): ನಗರದ ಸರಕಾರಿ ಬಾಲಕಿಯರ ಬಾಲ ಮಂದಿರಕ್ಕೆ ಇತ್ತೀಚೆಗೆ ಜಿಲ್ಲಾ ಪಂಚಾಯತಿ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಸರಸ್ವತಿ ಸುಭಾಶ್ಚಂದ್ರ ಹಾಗೂ ಸಮಿತಿ ಸದಸ್ಯರಾದ ಬಸನಗೌಡ ಪಾಟೀಲ್ ಯಡಿಯಾಪೂರ, ವಿನೋದ ಪಾಟೀಲ್, ಅಶೋಕರೆಡ್ಡಿ, ಅನೀತಾಬಾಯಿ, ನಾಗಮ್ಮ ಬಸನಗೌಡ, ನಾರಾಯಣ ದೇವಲನಾಯ್ಕ ಅವರು ಭೇಟಿ ನೀಡಿ, ಪರಿಶೀಲಿಸಿದರು.
ಸರಕಾರಿ ಬಾಲಕಿಯರ ಬಾಲಮಂದಿರದಲ್ಲಿ ಹಾಜರಿದ್ದ ೩೦ ಮಕ್ಕಳ ಯೋಗಕ್ಷೇಮ, ಓದಿನ ಕುರಿತು ಸಮಿತಿಯ ಅಧ್ಯಕ್ಷರು ಹಾಗೂ ಸದಸ್ಯರು ವಿಚಾರಿಸಿದರು. ನಂತರ ಅಡುಗೆ ಮನೆ, ಆಹಾರ ದಾಸ್ತಾನು, ಮಕ್ಕಳು ವಾಸಿಸುವ ಕೋಣೆಗಳು, ಗಣಕಯಂತ್ರದ ಕೋಣೆ, ಗ್ರಂಥಾಲಯ ಹಾಗೂ ಶೌಚಾಲಯಗಳ ಸ್ವಚ್ಛತೆ ಕುರಿತು ಪರಿಶೀಲಿಸಿದರು. ತದನಂತರ ಮಕ್ಕಳಿಗೆ ಓದಿನ ಬಗ್ಗೆ ಹೆಚ್ಚಿನ ಗಮನ ಹರಿಸುವಂತೆ ಸಲಹೆ ನೀಡಿದರು.
ಸಮಿತಿಯ ಅಧ್ಯಕ್ಷರು ಮತ್ತು ಸದಸ್ಯರು ತಮ್ಮ ‘ಒಂದು ತಿಂಗಳ ಗೌರವಧನ’ದಲ್ಲಿ ಸರಕಾರಿ ಬಾಲಕಿಯರ ಬಾಲ ಮಂದಿರದ ಮಕ್ಕಳಿಗೆ ಬಟ್ಟೆ ವಿತರಿಸುವುದಾಗಿ ತಿಳಿಸಿದ್ದಾರೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರಾದ ಪ್ರಭಾಕರ, ಬಾಲಕಿಯರ ಬಾಲಮಂದಿರದ ಅಧೀಕ್ಷಕರಾದ ನಾಗಮ್ಮ ಹಿರೇಮಠ ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ